ವಿಮೋಚನಕಾಂಡ 10 : 1 (ERVKN)
ಮಿಡತೆಗಳಿಂದ ಬಾಧೆ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗು. ನಾನು ಅದ್ಭುತಕಾರ್ಯಗಳನ್ನು ತೋರಿಸಲು ಅವಕಾಶವಾಗಲೆಂದು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ.
ವಿಮೋಚನಕಾಂಡ 10 : 2 (ERVKN)
ನಾನು ಈಜಿಪ್ಟಿನಲ್ಲಿ ಮಾಡಿದ ಸೂಚಕಕಾರ್ಯಗಳನ್ನೂ ಇತರ ಅದ್ಭುತಕಾರ್ಯಗಳನ್ನೂ ನೀವು ನಿಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ವಿವರಿಸಿ, ‘ಯೆಹೋವನು ಈಜಿಪ್ಟಿನವರನ್ನು ತನಗೆ ಇಷ್ಟ ಬಂದಂತೆ ಶಿಕ್ಷಿಸಿದನು’ ಎಂಬುದಾಗಿ ತಿಳಿಸಬೇಕೆಂದು ನಾನು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳ ಮೂಲಕ ನಾನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದು ಹೇಳಿದನು.
ವಿಮೋಚನಕಾಂಡ 10 : 3 (ERVKN)
ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋಗಿ, “ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಎಲ್ಲಿಯವರೆಗೆ ನನಗೆ ವಿಧೇಯನಾಗುವುದಿಲ್ಲ? ನನ್ನನ್ನು ಆರಾಧಿಸಲು ನನ್ನ ಜನರನ್ನು ಕಳುಹಿಸಿಕೊಡು!
ವಿಮೋಚನಕಾಂಡ 10 : 4 (ERVKN)
ನೀನು ನನ್ನ ಜನರನ್ನು ಕಳುಹಿಸಿಕೊಡದಿದ್ದರೆ, ನಾಳೆಯೇ ನಿನ್ನ ದೇಶದೊಳಗೆ ಮಿಡತೆಗಳನ್ನು ತರುವೆನು.
ವಿಮೋಚನಕಾಂಡ 10 : 5 (ERVKN)
ಮಿಡತೆಗಳು ಬಂದು ಭೂಮಿಯನ್ನು ಮುಚ್ಚಿಕೊಳ್ಳುವವು; ನೆಲವೇ ಕಾಣಿಸದೆ ಹೋಗುವುದು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವುದನ್ನು ಮಿಡತೆಗಳು ತಿಂದುಬಿಡುತ್ತವೆ; ಹೊಲದಲ್ಲಿರುವ ಎಲ್ಲಾ ಮರಗಳ ಎಲೆಗಳನ್ನು ತಿಂದುಬಿಡುತ್ತವೆ.
ವಿಮೋಚನಕಾಂಡ 10 : 6 (ERVKN)
ಅವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಜಿಪ್ಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿರುತ್ತವೆ. ನಿನ್ನ ತಂದೆತಾತಂದಿರೂ ನೋಡಿಲ್ಲದಷ್ಟು ಮಿಡತೆಗಳಿರುತ್ತವೆ’ ” ಎಂದು ಹೇಳಿದರು. ಬಳಿಕ ಅವರು ಫರೋಹನ ಬಳಿಯಿಂದ ಹೊರಟುಹೋದರು.
ವಿಮೋಚನಕಾಂಡ 10 : 7 (ERVKN)
ಅಧಿಕಾರಿಗಳು ಫರೋಹನಿಗೆ, “ಈ ಜನರಿಂದ ಇನ್ನೆಷ್ಟು ಕಾಲ ನಾವು ಬಳಲಬೇಕು? ಇವರು ಹೋಗಿ ತಮ್ಮ ದೇವರಾದ ಯೆಹೋವನನ್ನು ಆರಾಧಿಸಲಿ. ಈಜಿಪ್ಟ್ ನಾಶವಾಗುತ್ತಿದೆ ಎಂಬುದು ನಿನಗಿನ್ನೂ ಮನವರಿಕೆಯಾಗಿಲ್ಲವೇ?” ಅಂದರು.
ವಿಮೋಚನಕಾಂಡ 10 : 8 (ERVKN)
ಆದ್ದರಿಂದ ಫರೋಹನು ಮೋಶೆ ಆರೋನರನ್ನು ತನ್ನ ಬಳಿಗೆ ಕರೆಯಿಸಿ, “ಹೋಗಿ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ. ಆದರೆ ಹೋಗುವವರು ಯಾರೆಂಬುದನ್ನು ನನಗೆ ತಿಳಿಸಿ” ಅಂದನು.
ವಿಮೋಚನಕಾಂಡ 10 : 9 (ERVKN)
ಮೋಶೆಯು, “ಯೌವನಸ್ಥರು, ಮುದುಕರು, ಎಲ್ಲರೂ ಹೋಗುತ್ತೇವೆ. ನಮ್ಮ ಗಂಡು ಹೆಣ್ಣುಮಕ್ಕಳನ್ನೂ ನಮ್ಮ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ. ಯಾಕೆಂದರೆ ಇದು ಯೆಹೋವನ ಜಾತ್ರೆ” ಎಂದು ಉತ್ತರಕೊಟ್ಟನು.
ವಿಮೋಚನಕಾಂಡ 10 : 10 (ERVKN)
ಫರೋಹನು ಅವರಿಗೆ, “ಯೆಹೋವನಾಣೆ, ನೀವು ನಿಮ್ಮ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಹೋಗಲು ನಾನು ಅನುಮತಿ ಕೊಡುವುದೇ ಇಲ್ಲ.
ವಿಮೋಚನಕಾಂಡ 10 : 11 (ERVKN)
ನೀವು ನನಗೆ ವಿರೋಧವಾಗಿ ಸಂಚುಮಾಡುತ್ತಿರುವುದು ಈಗ ಸ್ಪಷ್ಟವಾಯಿತು” ಎಂದು ಹೇಳಿದನು. ಬಳಿಕ ಫರೋಹನು ಮೋಶೆ ಆರೋನರನ್ನು ಕಳುಹಿಸಿಬಿಟ್ಟನು.
ವಿಮೋಚನಕಾಂಡ 10 : 12 (ERVKN)
ಯೆಹೋವನು ಮೋಶೆಗೆ, “ಈಜಿಪ್ಟ್ ದೇಶದ ಮೇಲೆ ನಿನ್ನ ಕೈಯನ್ನೆತ್ತು. ಆಗ ಮಿಡತೆಗಳು ಬರುವವು! ಮಿಡತೆಗಳು ಈಜಿಪ್ಟ್ ದೇಶದಲ್ಲೆಲ್ಲಾ ಹರಡಿಕೊಳ್ಳುವವು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದುಕೊಂಡ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡುವವು” ಎಂದು ಹೇಳಿದನು.
ವಿಮೋಚನಕಾಂಡ 10 : 13 (ERVKN)
ಅಂತೆಯೇ ಮೋಶೆ ಈಜಿಪ್ಟ್ ದೇಶದ ಮೇಲೆ ಕೈ ಚಾಚಿದನು. ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು. ಗಾಳಿಯು ಹಗಲಿರುಳು ಬೀಸಿತು. ಮುಂಜಾನೆಯಾದಾಗ ಆ ಗಾಳಿಯಿಂದ ಈಜಿಪ್ಟ್ ದೇಶಕ್ಕೆ ಮಿಡತೆಗಳು ಬಂದವು.
ವಿಮೋಚನಕಾಂಡ 10 : 14 (ERVKN)
ಮಿಡತೆಗಳು ಈಜಿಪ್ಟ್ ದೇಶದೊಳಗೆ ಹಾರಿಬಂದು ನೆಲದ ಮೇಲೆ ಇಳಿದವು. ಈಜಿಪ್ಟಿನಲ್ಲಿ ಹಿಂದೆಂದೂ ಇಷ್ಟು ಮಿಡತೆಗಳು ಇರಲಿಲ್ಲ; ಇನ್ನು ಮುಂದೆಯೂ ಇರುವುದಿಲ್ಲ.
ವಿಮೋಚನಕಾಂಡ 10 : 15 (ERVKN)
ಮಿಡತೆಗಳು ನೆಲವನ್ನು ಮುಚ್ಚಿಕೊಂಡವು; ಇದರಿಂದಾಗಿ ನೆಲವು ಕಾಣದಂತಾಯಿತು. ಆಲಿಕಲ್ಲಿನ ಮಳೆಗೆ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ ಮರಗಳಲ್ಲಿದ್ದ ಕಾಯಿಗಳನ್ನೂ ಅವು ತಿಂದುಬಿಟ್ಟವು. ಈಜಿಪ್ಟಿನಲ್ಲೆಲ್ಲಾ ಮರಗಳಲ್ಲಾಗಲಿ ಗಿಡಗಳಲ್ಲಾಗಲಿ ಹಸುರಾಗಿದ್ದ ಒಂದಾದರೂ ಉಳಿಯಲಿಲ್ಲ.
ವಿಮೋಚನಕಾಂಡ 10 : 16 (ERVKN)
ಫರೋಹನು ಕೂಡಲೇ ಮೋಶೆ ಆರೋನರನ್ನು ಕರೆಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ.
ವಿಮೋಚನಕಾಂಡ 10 : 17 (ERVKN)
ಇದೊಂದು ಸಲ ನನ್ನ ಪಾಪಗಳನ್ನು ಕ್ಷಮಿಸಿ ಈ ‘ವಿಪತ್ತನ್ನು’ ನನ್ನಿಂದ ತೊಲಗಿಸಬೇಕೆಂದು ಯೆಹೋವನಿಗೆ ಪ್ರಾರ್ಥಿಸಿರಿ” ಎಂದು ಹೇಳಿದನು.
ವಿಮೋಚನಕಾಂಡ 10 : 18 (ERVKN)
ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು.
ವಿಮೋಚನಕಾಂಡ 10 : 19 (ERVKN)
ಆದ್ದರಿಂದ ಯೆಹೋವನು ಗಾಳಿಯ ದಿಕ್ಕನ್ನು ಬದಲಾಯಿಸಿ, ಪಶ್ಚಿಮದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು; ಅದು ಮಿಡತೆಗಳನ್ನು ಕೆಂಪು ಸಮುದ್ರಕ್ಕೆ ಹಾರಿಸಿತು. ಈಜಿಪ್ಟಿನಲ್ಲಿ ಒಂದು ಮಿಡತೆಯೂ ಉಳಿಯಲಿಲ್ಲ.
ವಿಮೋಚನಕಾಂಡ 10 : 20 (ERVKN)
ಆದರೆ ಫರೋಹನು ಮತ್ತೆ ಹೃದಯವನ್ನು ಕಠಿಣಪಡಿಸಿಕೊಂಡು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ.
ವಿಮೋಚನಕಾಂಡ 10 : 21 (ERVKN)
ಮೂರು ದಿನ ಕಾರ್ಗತ್ತಲೆ ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು. ಆಗ ಕಾರ್ಗತ್ತಲೆಯು ಈಜಿಪ್ಟನ್ನು ಆವರಿಸುವುದು. ಆ ಕಾರ್ಗತ್ತಲೆಯಿಂದ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.
ವಿಮೋಚನಕಾಂಡ 10 : 22 (ERVKN)
ಮೋಶೆ ತನ್ನ ಕೈಯನ್ನು ಆಕಾಶದ ಕಡೆಗೆ ಚಾಚಿದಾಗ ಕಾರ್ಗತ್ತಲು ಈಜಿಪ್ಟನ್ನು ಆವರಿಸಿತು. ಕಾರ್ಗತ್ತಲು ಈಜಿಪ್ಟಿನಲ್ಲಿ ಮೂರು ದಿನಗಳವರೆಗೆ ಇತ್ತು.
ವಿಮೋಚನಕಾಂಡ 10 : 23 (ERVKN)
ಈ ಮೂರು ದಿನಗಳಲ್ಲಿ ಯಾರೂ ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾವ ಸ್ಥಳಕ್ಕೂ ಹೋಗಲಿಲ್ಲ. ಆದರೆ ಇಸ್ರೇಲರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಬೆಳಕಿತ್ತು.
ವಿಮೋಚನಕಾಂಡ 10 : 24 (ERVKN)
ಫರೋಹನು ಮತ್ತೆ ಮೋಶೆಯನ್ನು ಕರೆಸಿ, “ಹೋಗಿ, ಯೆಹೋವನನ್ನು ಆರಾಧಿಸಿರಿ! ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆದರೆ ನೀವು ನಿಮ್ಮ ಕುರಿಗಳನ್ನು ದನಕರುಗಳನ್ನು ಇಲ್ಲಿಯೇ ಬಿಟ್ಟುಹೋಗಬೇಕು” ಎಂದು ಹೇಳಿದನು.
ವಿಮೋಚನಕಾಂಡ 10 : 25 (ERVKN)
ಮೋಶೆಯು, “ನಾವು ನಮ್ಮ ಕುರಿಗಳನ್ನೂ ದನಕರುಗಳನ್ನೂ ಕಾಣಿಕೆಗಳಿಗಾಗಿ ಮತ್ತು ಯಜ್ಞಗಳಿಗಾಗಿ ತೆಗೆದುಕೊಂಡು ಹೋಗಬೇಕು; ಮಾತ್ರವಲ್ಲದೆ
ವಿಮೋಚನಕಾಂಡ 10 : 26 (ERVKN)
ನಮ್ಮ ಪ್ರಾಣಿಗಳನ್ನೆಲ್ಲಾ ತೆಗೆದುಕೊಂಡು ಹೋಗುವೆವು. ಒಂದನ್ನಾದರೂ ಬಿಟ್ಟುಹೋಗುವುದಿಲ್ಲ; ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ಅಲ್ಲಿಗೆ ಹೋದಾಗಲೇ ನಮಗೆ ತಿಳಿಯುವುದು. ಆದ್ದರಿಂದ, ನಾವು ಇವುಗಳನ್ನೆಲ್ಲಾ ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಹೇಳಿದನು.
ವಿಮೋಚನಕಾಂಡ 10 : 27 (ERVKN)
ಯೆಹೋವನು ಫರೋಹನ ಹೃದಯವನ್ನು ಮತ್ತೆ ಕಠಿಣಗೊಳಿಸಿದನು. ಆದ್ದರಿಂದ ಫರೋಹನು ಅವರನ್ನು ಕಳುಹಿಸಿಕೊಡಲಿಲ್ಲ.
ವಿಮೋಚನಕಾಂಡ 10 : 28 (ERVKN)
ಫರೋಹನು ಮೋಶೆಗೆ, “ಇಲ್ಲಿಂದ ತೊಲಗಿ ಹೋಗು! ನೀನು ನನ್ನ ಸನ್ನಿಧಿಗೆ ಇನ್ನು ಮೇಲೆ ಬರಕೂಡದು. ನೀನು ಮತ್ತೆ ಬಂದರೆ ನಿನಗೆ ಮರಣದಂಡನೆ ವಿಧಿಸುವೆನು” ಎಂದನು.
ವಿಮೋಚನಕಾಂಡ 10 : 29 (ERVKN)
ಅದಕ್ಕೆ ಮೋಶೆಯು ಫರೋಹನಿಗೆ, “ಸರಿ, ಇನ್ನು ಮೇಲೆ ನಾನು ನಿನ್ನ ಸನ್ನಿಧಿಗೆ ಬರುವುದೇ ಇಲ್ಲ” ಎಂದು ಹೇಳಿದನು.
❮
❯