ಎಸ್ತೇರಳು 9 : 1 (ERVKN)
ಯೆಹೂದ್ಯರಿಗೆ ಜಯ ಹನ್ನೆರಡನೆಯ ತಿಂಗಳಾದ ಆದಾರ್ ಮಾಸದ ಹದಿಮೂರನೇ ದಿವಸದಲ್ಲಿ ಯೆಹೂದ್ಯರ ವೈರಿಗಳು ರಾಜಾಜ್ಞೆಗನುಸಾರವಾಗಿ ಯೆಹೂದ್ಯರನ್ನು ನಿರ್ನಾಮ ಮಾಡಬೇಕಾಗಿತ್ತು. ಅವರು ಆ ದಿವಸಕ್ಕಾಗಿ ಕಾಯುತ್ತಿರುವಾಗ ಪರಿಸ್ಥಿತಿಯು ಬದಲಾಯಿತು. ಯೆಹೂದ್ಯರು ಅವರ ಶತ್ರುಗಳಿಗಿಂತ ಬಲಾಢ್ಯರಾದರು.
ಎಸ್ತೇರಳು 9 : 2 (ERVKN)
ರಾಜನಾದ ಅಹಷ್ವೇರೋಷನ ಸಾಮ್ರಾಜ್ಯದ ಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಮ್ಮನ್ನು ಕೊಲ್ಲಲು ಬರುವ ವೈರಿಗಳನ್ನು ಎದುರಿಸಲು ಒಟ್ಟಾಗಿ ಸೇರಿದರು. ಇವರಿಗೆ ವಿರುದ್ಧವಾಗಿ ಬಿದ್ದು ಹೊಡೆದಾಡಲು ಯಾರಿಗೂ ಧೈರ್ಯಸಾಲಲಿಲ್ಲ. ಯೆಹೂದ್ಯರ ಮೇಲೆ ಜನರಿಗೆ ಭೀತಿ ಉಂಟಾಯಿತು.
ಎಸ್ತೇರಳು 9 : 3 (ERVKN)
ಅಲ್ಲದೆ ಸಂಸ್ಥಾನಗಳಲ್ಲಿದ್ದ ಅಧಿಕಾರಿಗಳು, ರಾಜ್ಯಪಾಲರು, ಆಡಳಿತಾಧಿಕಾರಿಗಳು ಯೆಹೂದ್ಯರಿಗೆ ನೆರವಾದರು. ಯಾಕೆಂದರೆ ಅವರು ಮೊರ್ದೆಕೈಗೆ ಹೆದರುತ್ತಿದ್ದರು.
ಎಸ್ತೇರಳು 9 : 4 (ERVKN)
ಮೊರ್ದೆಕೈ ಅರಮನೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದನು. ಸಂಸ್ಥಾನಗಳಲ್ಲಿರುವವರೆಲ್ಲರೂ ಅವನ ಪ್ರಖ್ಯಾತಿಯ ಬಗ್ಗೆ ಕೇಳಿದ್ದರು. ದಿನೇದಿನೇ ಮೊರ್ದೆಕೈ ಬಲಶಾಲಿಯಾಗುತ್ತಾ ಬಂದನು.
ಎಸ್ತೇರಳು 9 : 5 (ERVKN)
ತಮ್ಮ ಶತ್ರುಗಳನ್ನೆಲ್ಲಾ ಯೆಹೂದ್ಯರು ಸೋಲಿಸಿ ತಮ್ಮ ಖಡ್ಗಗಳಿಂದ ನಾಶಮಾಡಿದರು; ತಮ್ಮನ್ನು ದ್ವೇಷಿಸುತ್ತಿದ್ದವರನ್ನು ತಮಗಿಷ್ಟ ಬಂದಂತೆ ಮಾಡಿದರು.
ಎಸ್ತೇರಳು 9 : 6 (ERVKN)
ರಾಜಧಾನಿಯಾದ ಶೂಷನ್‌ನಲ್ಲಿಯೇ ಯೆಹೂದ್ಯರು ಐನೂರು ಮಂದಿ ಶತ್ರುಗಳನ್ನು ಹತಿಸಿದರು.
ಎಸ್ತೇರಳು 9 : 7 (ERVKN)
ಅವರು ಹತಿಸಿದವರಾರೆಂದರೆ: ಪರ್ಷಂದಾತ, ದಲ್ಫೋನ್, ಅಸ್ಪಾತ,
ಎಸ್ತೇರಳು 9 : 8 (ERVKN)
ಪೋರಾತ, ಅದಲ್ಯ, ಅರೀದಾತ,
ಎಸ್ತೇರಳು 9 : 9 (ERVKN)
ಪರ್ಮಷ್ಟ, ಅರೀಸೈ, ಅರಿದೈ ಮತ್ತು ವೈಜಾತ.
ಎಸ್ತೇರಳು 9 : 10 (ERVKN)
ಇವರು ಹಾಮಾನನ ಹತ್ತು ಗಂಡುಮಕ್ಕಳಾಗಿದ್ದರು. ಹಾಮಾನನು ಹಮ್ಮೆದಾತನ ಮಗನೂ ಯೆಹೂದ್ಯರ ಶತ್ರುವೂ ಆಗಿದ್ದನು. ಯೆಹೂದ್ಯರು ಅವರನ್ನು ಹತಿಸಿದ್ದು ಮಾತ್ರವೇ, ಹೊರತು ಅವರ ಸೊತ್ತುಗಳನ್ನು ಅಪಹರಿಸಲಿಲ್ಲ.
ಎಸ್ತೇರಳು 9 : 11 (ERVKN)
ಶೂಷನ್ ನಗರದಲ್ಲಿ ಆ ದಿವಸ ಎಷ್ಟು ಮಂದಿ ಸತ್ತರು ಎಂದು ಅರಸನು ಕೇಳಿ ತಿಳಿದುಕೊಂಡನು.
ಎಸ್ತೇರಳು 9 : 12 (ERVKN)
ಮತ್ತು ರಾಣಿಯಾದ ಎಸ್ತೇರಳಿಗೆ, “ಶೂಷನ್‌ನಲ್ಲಿ ಯೆಹೂದ್ಯರು ಹಾಮಾನನ ಹತ್ತು ಗಂಡುಮಕ್ಕಳೂ ಸೇರಿಸಿ ಐನೂರು ಮಂದಿಯನ್ನು ಕೊಂದಿದ್ದಾರೆ. ಇನ್ನು ಬೇರೆ ಸಂಸ್ಥಾನಗಳಲ್ಲಿ ನಿನಗೇನಾಗಬೇಕು? ನನಗೆ ಹೇಳು. ನಾನು ಹಾಗೆಯೇ ಮಾಡಿಸುತ್ತೇನೆ” ಎಂದು ಹೇಳಿದನು.
ಎಸ್ತೇರಳು 9 : 13 (ERVKN)
ಅದಕ್ಕೆ ಎಸ್ತೇರಳು, “ಅರಸನು ಇಷ್ಟಪಟ್ಟಲ್ಲಿ ನಾಳೆಯೂ ಶೂಷನ್‌ನಲ್ಲಿರುವ ಯೆಹೂದ್ಯರು ಹೀಗೆಯೇ ಮಾಡಲಿ ಮತ್ತು ಹಾಮಾನನ ಆ ಹತ್ತು ಮಂದಿ ಗಂಡುಮಕ್ಕಳನ್ನು ಗಲ್ಲುಕಂಬದಲ್ಲಿ ನೇತಾಡಿಸಲಿ” ಅಂದಳು.
ಎಸ್ತೇರಳು 9 : 14 (ERVKN)
ಅದೇ ರೀತಿ ಅರಸನು ಆಜ್ಞಾಪಿಸಿದನು. ರಾಜಾಜ್ಞೆಯು ಇನ್ನೊಂದು ದಿವಸ ಮುಂದುವರಿಯಿತು ಮತ್ತು ಹಾಮಾನನ ಹತ್ತು ಮಂದಿ ಗಂಡುಮಕ್ಕಳನ್ನು ಗಲ್ಲಿಗೆ ಹಾಕಿದರು.
ಎಸ್ತೇರಳು 9 : 15 (ERVKN)
ಶೂಷನ್ ನಗರದಲ್ಲಿದ್ದ ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆಯ ದಿನದಂದು ಒಟ್ಟಾಗಿ ಸೇರಿ ಆ ದಿವಸ ಮುನ್ನೂರು ಮಂದಿಯನ್ನು ಹತಿಸಿದರೆ ಹೊರತು, ಅವರ ಆಸ್ತಿಪಾಸ್ತಿಯನ್ನು ಮುಟ್ಟಲಿಲ್ಲ.
ಎಸ್ತೇರಳು 9 : 16 (ERVKN)
ಅದೇ ಸಮಯದಲ್ಲಿ ಇತರ ಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಾವು ಬಲಹೊಂದುವಂತೆ ಒಟ್ಟಾಗಿ ಸೇರಿ ಒಗ್ಗಟ್ಟಿನಲ್ಲಿದ್ದು ತಮ್ಮ ವೈರಿಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದರು. ಹೀಗೆ ಒಟ್ಟು ಎಪ್ಪತ್ತೈದು ಸಾವಿರ ಜನರು ಹತಿಸಲ್ಪಟ್ಟರು. ಆದರೆ ಅವರ ಆಸ್ತಿಯನ್ನು ಸೂರೆ ಮಾಡಲಿಲ್ಲ.
ಎಸ್ತೇರಳು 9 : 17 (ERVKN)
ಆದಾರ್ ಮಾಸದ ಹದಿಮೂರನೇ ದಿವಸದಲ್ಲಿ ಈ ಕಾರ್ಯವು ನಡೆಯಿತು. ಹದಿನಾಲ್ಕನೆಯ ದಿವಸದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡರು. ಆ ದಿವಸವನ್ನು ಯೆಹೂದ್ಯರು ತಮ್ಮ ಸಂತಸದ ದಿನವಾಗಿ ಆಚರಿಸಿದರು.
ಎಸ್ತೇರಳು 9 : 18 (ERVKN)
ಪೂರಿಮ್ ಹಬ್ಬ ಆದಾರ್ ತಿಂಗಳಿನ ಹದಿಮೂರನೇ ಮತ್ತು ಹದಿನಾಲ್ಕನೇ ದಿವಸಗಳಲ್ಲಿ ಶೂಷನ್ ನಗರದ ಯೆಹೂದ್ಯರು ಒಟ್ಟಾಗಿ ಸೇರಿಬಂದು ಹದಿನೈದನೆಯ ದಿವಸದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡರು. ಹದಿನೈದನೆಯ ದಿವಸವನ್ನು ಅವರು ಸಂತಸದ ಹಬ್ಬವನ್ನಾಗಿ ಮಾಡಿದರು.
ಎಸ್ತೇರಳು 9 : 19 (ERVKN)
ದೇಶದ ಎಲ್ಲಾ ಹಳ್ಳಿಗಳಲ್ಲಿದ್ದ ಯೆಹೂದ್ಯರು ಆದಾರ್ ತಿಂಗಳಿನ ಹದಿನಾಲ್ಕನೆಯ ದಿವಸವನ್ನು ಪೂರಿಮ್ ದಿವಸವನ್ನಾಗಿ ಆಚರಿಸಿದರು. ಹದಿನಾಲ್ಕನೆಯ ದಿವಸವು ಅವರಿಗೆ ಸಂತಸದ ಹಬ್ಬ. ಆ ದಿವಸ ಅವರು ಔತಣಮಾಡಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟು ಕಳುಹಿಸಿದರು.
ಎಸ್ತೇರಳು 9 : 20 (ERVKN)
ನಡೆದ ಸಂಗತಿಗಳನ್ನೆಲ್ಲಾ ಮೊರ್ದೆಕೈ ಬರೆದಿಟ್ಟು ಅಹಷ್ವೇರೋಷನ ಸಾಮ್ರಾಜ್ಯದಲ್ಲಿ ವಾಸಿಸಿದ್ದ ಎಲ್ಲಾ ಯೆಹೂದ್ಯರಿಗೆ, ದೂರ ಮತ್ತು ಹತ್ತಿರದಲ್ಲಿರುವ ಯೆಹೂದ್ಯರಿಗೂ ಪತ್ರ ಬರೆಯಿಸಿದನು.
ಎಸ್ತೇರಳು 9 : 21 (ERVKN)
ಅದರಲ್ಲಿ ಅವನು ಯೆಹೂದ್ಯರೆಲ್ಲರೂ ಪ್ರತೀ ವರ್ಷ ಆದಾರ್ ತಿಂಗಳಿನ ಹದಿನಾಲ್ಕನೇ ಮತ್ತು ಹದಿನೈದನೇ ದಿವಸಗಳನ್ನು ಪೂರಿಮ್ ದಿವಸಗಳನ್ನಾಗಿ ಆಚರಿಸಬೇಕು ಎಂಬದಾಗಿ ಆದೇಶ ನೀಡಿದನು.
ಎಸ್ತೇರಳು 9 : 22 (ERVKN)
ಯಾಕೆಂದರೆ ಆ ದಿವಸದಲ್ಲಿ ಯೆಹೂದ್ಯರು ತಮ್ಮ ಶತ್ರುಗಳನ್ನು ಸದೆಬಡಿದರು. ಆ ದಿವಸದಲ್ಲಿ ಅವರಿಗೆ ಶೋಕದ ಬದಲಾಗಿ ಸಂತಸವು ಒದಗಿಬಂತು. ಮತ್ತು ಆ ದಿವಸದಲ್ಲಿ ಅವರ ರೋಧನವು ಹರ್ಷಧ್ವನಿಯಾಗಿ ಮಾರ್ಪಟ್ಟಿತು. ಮೊರ್ದೆಕೈಯು ಎಲ್ಲಾ ಯೆಹೂದ್ಯರಿಗೆ ಪತ್ರ ಬರೆಯಿಸಿದನು. ಆ ದಿವಸದಲ್ಲಿ ಹಬ್ಬವನ್ನು ಆಚರಿಸಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಡಬೇಕು ಎಂಬುದಾಗಿ ಬರೆಯಿಸಿದನು.
ಎಸ್ತೇರಳು 9 : 23 (ERVKN)
ಮೊರ್ದೆಕೈ ಪತ್ರದಲ್ಲಿ ಬರೆದದ್ದನ್ನು ಯೆಹೂದ್ಯರು ಒಪ್ಪಿಕೊಂಡು ಆ ವರ್ಷದಲ್ಲಿ ನಡೆದ ಉತ್ಸವವು ತಮ್ಮಲ್ಲಿ ವಾರ್ಷಿಕೋತ್ಸವವಾಗಬೇಕೆಂದು ನಿರ್ಧರಿಸಿದರು.
ಎಸ್ತೇರಳು 9 : 24 (ERVKN)
ಅಗಾನನ ವಂಶದವನಾದ ಹಮ್ಮೆದಾತನ ಮಗನಾದ ಹಾಮಾನನು ಸಮಸ್ತ ಯೆಹೂದ್ಯರ ಶತ್ರುವಾಗಿದ್ದನು. ಯೆಹೂದ್ಯರನ್ನೆಲ್ಲಾ ಸಂಹರಿಸಲು ಆತನು ಒಂದು ದುಷ್ಟ ಹಂಚಿಕೆಯನ್ನು ಹೂಡಿದನು; ಮತ್ತು ಆ ನಿರ್ಧಿಷ್ಟ ದಿನಕ್ಕಾಗಿ ಅವನು ಚೀಟು ಹಾಕಿದನು. ಆ ದಿವಸಗಳಲ್ಲಿ ಚೀಟು ಹಾಕುವುದಕ್ಕೆ “ಪೂರ್” ಎಂದು ಹೇಳುತ್ತಿದ್ದರು. ಹಾಗೆ ಆ ಹಬ್ಬವು “ಪೂರಿಮ್” ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು.
ಎಸ್ತೇರಳು 9 : 25 (ERVKN)
ಹಾಮಾನನ ಕುತಂತ್ರವನ್ನು ಎಸ್ತೇರ್ ರಾಣಿಯು ರಾಜನ ಸಂಗಡ ಮಾತಾಡುವುದರ ಮೂಲಕ ನಿರರ್ಥಕಗೊಳಿಸಿ ಅವನಿಗೂ ಅವನ ಕುಟುಂಬಕ್ಕೂ ಮರಣವಾಗುವಂತೆ ಮಾಡಿದಳು. ಹಾಮಾನನೂ ಅವನ ಗಂಡುಮಕ್ಕಳೂ ಗಲ್ಲಿಗೇರಿಸಲ್ಪಟ್ಟರು.
ಎಸ್ತೇರಳು 9 : 26 (ERVKN)
(26-27) ಚೀಟು ಹಾಕುವುದಕ್ಕೆ, “ಪೂರಿಮ್” ಎಂದು ಕರೆಯುತ್ತಿದ್ದುದರಿಂದ ಈ ಹಬ್ಬಕ್ಕೆ “ಪೂರಿಮ್” ಎಂದು ಹೆಸರಿಟ್ಟರು. ಮೊರ್ದೆಕೈ ಈ ಹಬ್ಬವನ್ನು ಆಚರಿಸಲು ಯೆಹೂದ್ಯರೆಲ್ಲರಿಗೆ ಪತ್ರದ ಮೂಲಕ ತಿಳಿಸಿದನು. ಅಂದಿನಿಂದ ಪ್ರತಿ ವರ್ಷ ಈ ಎರಡು ದಿನಗಳಲ್ಲಿ ಹಬ್ಬವನ್ನು ಆಚರಿಸುವ ಕ್ರಮವನ್ನು ಇಟ್ಟುಕೊಂಡರು.
ಎಸ್ತೇರಳು 9 : 27 (ERVKN)
ಎಸ್ತೇರಳು 9 : 28 (ERVKN)
ತಮ್ಮ ವೈರಿಗಳಿಗಾಗುವ ದಂಡನೆಯನ್ನು ಅವರು ಈ ಹಬ್ಬದ ಸಮಯದಲ್ಲಿ ಜ್ಞಾಪಕ ಮಾಡಿಕೊಳ್ಳುವರು. ಯೆಹೂದ್ಯರ ಎಲ್ಲಾ ಗೋತ್ರಗಳವರು ಮತ್ತು ಅವರ ಪ್ರಾಂತ್ಯಗಳಲ್ಲಿರುವವರು ಈ ದಿನಗಳನ್ನು ಪ್ರತಿ ವರ್ಷ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಈ ಹಬ್ಬವನ್ನು ಪ್ರತಿಯೊಂದು ಪ್ರಾಂತ್ಯಗಳಲ್ಲಿಯೂ ಪ್ರತಿಯೊಂದು ಊರುಗಳಲ್ಲಿಯೂ ನೆನಪುಮಾಡಿಕೊಳ್ಳುವರು. ಇಂದಿಗೂ ಯೆಹೂದ್ಯರು ಈ ದಿನಗಳನ್ನು ನೆನಪುಮಾಡಿಕೊಂಡು ಪೂರಿಮ್ ಹಬ್ಬವನ್ನು ಆಚರಿಸುತ್ತಾರೆ.
ಎಸ್ತೇರಳು 9 : 29 (ERVKN)
ಹಾಗೆ, ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಮತ್ತು ಯೆಹೂದಿಯಾದ ಮೊರ್ದೆಕೈಯು ಈ ಪೂರಿಮ್ ಹಬ್ಬದ ಬಗ್ಗೆ ಒಂದು ಅಧಿಕೃತ ಪತ್ರವನ್ನು ಬರೆಯಿಸಿದರು. ಜನರು ಅವರ ಎರಡನೆಯ ಪತ್ರವನ್ನು ಸತ್ಯವೆಂದು ನಂಬುವ ಹಾಗೆ ರಾಜಮುದ್ರೆಯೊಂದಿಗೆ ಕಳುಹಿಸಿದರು.
ಎಸ್ತೇರಳು 9 : 30 (ERVKN)
ಅರಸನ ನೂರಿಪ್ಪತ್ತೇಳು ಸಂಸ್ಥಾನಗಳಲ್ಲಿರುವ ಯೆಹೂದ್ಯರಿಗೆಲ್ಲಾ ಪತ್ರವನ್ನು ಕಳುಹಿಸಿದನು. ಅದರಲ್ಲಿ ಆ ಹಬ್ಬವು ಜನರು ಮಧ್ಯದಲ್ಲಿ ಸಮಾಧಾನ ಹುಟ್ಟಿಸಿ ಒಬ್ಬರಮೇಲೊಬ್ಬರ ಮೇಲೆ ನಂಬಿಕೆ ಬೆಳೆಸುವುದು ಎಂದು ಬರೆದಿದ್ದನು.
ಎಸ್ತೇರಳು 9 : 31 (ERVKN)
ಮತ್ತು ಪತ್ರದಲ್ಲಿ ಪೂರಿಮ್ ಹಬ್ಬವನ್ನು ಆಚರಿಸಲು ಪ್ರಾರಂಭಿಸಿರಿ ಎಂದೂ ಬರೆದಿದ್ದನು. ಈ ಹಬ್ಬವನ್ನು ಯಾವ ದಿನ ಆಚರಿಸಬೇಕು ಎಂಬುದನ್ನೂ ನಮೂದಿಸಿದನು. ಈ ಎರಡು ವಿಶ್ರಾಂತಿ ದಿನಗಳನ್ನು ತಮಗೂ ತಮ್ಮ ಸಂತಾನಗಳವರಿಗೂ ಖಾಯಂಗೊಳಿಸಲು ಯೆಹೂದಿಯಾದ ಮೊರ್ದೆಕೈಯೂ ರಾಣಿ ಎಸ್ತೇರಳೂ ಯೆಹೂದ್ಯರಿಗೆ ಒಂದು ಆಜ್ಞೆಯನ್ನು ಹೊರಡಿಸಿದರು. ತಮಗೆ ಸಂಬಂಧಿಸಿದ ಕೆಟ್ಟಸಂಗತಿಗಳನ್ನು ನೆನಪಿಗೆ ತಂದುಕೊಂಡು ಬೇರೆ ವಿಶ್ರಾಂತಿ ದಿನಗಳಲ್ಲಿ ಉಪವಾಸವಿದ್ದು ಗೋಳಾಡುವಂತೆ ಈ ಹಬ್ಬದ ದಿನಗಳಲ್ಲಿಯೂ ಅವರು ಮಾಡುವರು.
ಎಸ್ತೇರಳು 9 : 32 (ERVKN)
ಎಸ್ತೇರಳ ಈ ಆಜ್ಞೆಯು ಅಧಿಕೃತವಾಗಿದ್ದು ಪುಸ್ತಕದಲ್ಲಿ ಬರೆಯಲ್ಪಟ್ಟಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32