ಎಫೆಸದವರಿಗೆ 4 : 1 (ERVKN)
ದೇಹದ ಐಕ್ಯತೆ ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ಎಫೆಸದವರಿಗೆ 4 : 2 (ERVKN)
ಯಾವಾಗಲೂ ದೀನತೆಯಿಂದ, ಸಾತ್ವಿಕತೆಯಿಂದ ಮತ್ತು ತಾಳ್ಮೆಯಿಂದ ಕೂಡಿದವರಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ.
ಎಫೆಸದವರಿಗೆ 4 : 3 (ERVKN)
ನೀವು ಆತ್ಮನ ಮೂಲಕವಾಗಿ ಸಮಾಧಾನವೆಂಬ ಬಂಧನದಿಂದ ಒಂದಾಗಿದ್ದೀರಿ. ಈ ರೀತಿ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ಸಮಾಧಾನವು ನಿಮ್ಮೆಲ್ಲರನ್ನು ಒಂದಾಗಿಸಲಿ.
ಎಫೆಸದವರಿಗೆ 4 : 4 (ERVKN)
ದೇಹವು ಒಂದೇ ಮತ್ತು ಆತ್ಮನು ಒಬ್ಬನೇ. ನೀವೆಲ್ಲರೂ ಒಂದೇ ನಿರೀಕ್ಷೆಯನ್ನು ಹೊಂದಿರಬೇಕೆಂದು ದೇವರು ನಿಮ್ಮನ್ನು ಕರೆದನು.
ಎಫೆಸದವರಿಗೆ 4 : 5 (ERVKN)
ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ.
ಎಫೆಸದವರಿಗೆ 4 : 6 (ERVKN)
ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಸಮಸ್ತವನ್ನೂ ಆಳುತ್ತಾನೆ. ಆತನು ಸರ್ವವ್ಯಾಪಿಯಾಗಿದ್ದಾನೆ ಮತ್ತು ಎಲ್ಲರಲ್ಲಿ ವಾಸಿಸುವವನಾಗಿದ್ದಾನೆ.
ಎಫೆಸದವರಿಗೆ 4 : 7 (ERVKN)
ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ.
ಎಫೆಸದವರಿಗೆ 4 : 8 (ERVKN)
ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ: “ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ, ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.” ಕೀರ್ತನೆ. 68:18]
ಎಫೆಸದವರಿಗೆ 4 : 9 (ERVKN)
“ಆತನು ಉನ್ನತಸ್ಥಾನಕ್ಕೆ ಏರಿಹೋದನು” ಎಂದರೆ ಆತನು ಭೂಲೋಕಕ್ಕೆ ಇಳಿದುಬಂದು,
ಎಫೆಸದವರಿಗೆ 4 : 10 (ERVKN)
ಭೂಮಿಯ ಅಧೋಭಾಗಕ್ಕೆ ಇಳಿದುಹೋಗಿ, ಅಲ್ಲಿಂದ ಆಕಾಶದ ಅತ್ಯುನ್ನತಸ್ಥಾನಕ್ಕೆ ಏರಿಹೋದನು ಎಂದರ್ಥ. ಸಮಸ್ತದಲ್ಲಿ ತಾನೇ ತುಂಬಿರಬೇಕೆಂದು ಕ್ರಿಸ್ತನು ಹಾಗೆ ಮಾಡಿದನು.
ಎಫೆಸದವರಿಗೆ 4 : 11 (ERVKN)
ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಉಪದೇಶಕರನ್ನಾಗಿಯೂ ನೇಮಿಸಿದನು.
ಎಫೆಸದವರಿಗೆ 4 : 12 (ERVKN)
ಸಭೆಯ ಸೇವೆಗೋಸ್ಕರ ದೇವರ ಪರಿಶುದ್ಧ ಜನರನ್ನು ಸಿದ್ಧಪಡಿಸುವುದಕ್ಕಾಗಿ ಆತನು ಅವರನ್ನು ನೇಮಿಸಿದನು.
ಎಫೆಸದವರಿಗೆ 4 : 13 (ERVKN)
ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.
ಎಫೆಸದವರಿಗೆ 4 : 14 (ERVKN)
ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ.
ಎಫೆಸದವರಿಗೆ 4 : 15 (ERVKN)
ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ಕ್ರಿಸ್ತನು ಶಿರಸ್ಸಾಗಿದ್ದಾನೆ ಮತ್ತು ನಾವು ದೇಹವಾಗಿದ್ದೇವೆ.
ಎಫೆಸದವರಿಗೆ 4 : 16 (ERVKN)
ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.
ಎಫೆಸದವರಿಗೆ 4 : 17 (ERVKN)
ನೀವು ಜೀವಿಸಬೇಕಾದ ರೀತಿ ಪ್ರಭುವಿಗೋಸ್ಕರ ನಾನು ನಿಮಗೆ ಇದನ್ನು ಹೇಳುತ್ತೇನೆ ಮತ್ತು ಎಚ್ಚರಿಸುತ್ತೇನೆ. ಅವಿಶ್ವಾಸಿಗಳಂತೆ ಇನ್ನು ಮೇಲೆ ಜೀವಿಸದಿರಿ. ಅವರ ಆಲೋಚನೆಗಳು ನಿಷ್ಪ್ರಯೋಜಕವಾಗಿವೆ.
ಎಫೆಸದವರಿಗೆ 4 : 18 (ERVKN)
ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಕಿವಿಗೊಡದ ಕಾರಣ ಅವರಿಗೆ ಏನೂ ಗೊತ್ತಿಲ್ಲ. ಆದ್ದರಿಂದ ದೇವರು ಕೊಡುವ ಜೀವಿತವನ್ನು ಹೊಂದಿಕೊಳ್ಳಲು ಅವರಿಗೆ ಸಾಧ್ಯವಿಲ್ಲ.
ಎಫೆಸದವರಿಗೆ 4 : 19 (ERVKN)
ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ.
ಎಫೆಸದವರಿಗೆ 4 : 20 (ERVKN)
ಆದರೆ ಕ್ರಿಸ್ತನಿಂದ ನೀವು ಕಲಿತುಕೊಂಡದ್ದು ಅವುಗಳನ್ನಲ್ಲ.
ಎಫೆಸದವರಿಗೆ 4 : 21 (ERVKN)
ನೀವು ಆತನ ವಿಷಯವಾಗಿ ಕೇಳಿದ್ದೀರೆಂಬುದು ನನಗೆ ಗೊತ್ತಿದೆ. ನೀವು ಆತನಲ್ಲಿರುವುದರಿಂದ ಸತ್ಯವನ್ನು ಕಲಿತುಕೊಂಡಿರಿ. ಹೌದು, ಸತ್ಯವು ಯೇಸುವಿನಲ್ಲಿದೆ.
ಎಫೆಸದವರಿಗೆ 4 : 22 (ERVKN)
ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ.
ಎಫೆಸದವರಿಗೆ 4 : 23 (ERVKN)
ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ.
ಎಫೆಸದವರಿಗೆ 4 : 24 (ERVKN)
ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯವಾದ ನೀತಿಯುಳ್ಳದಾಗಿಯೂ ಪರಿಶುದ್ಧವಾಗಿಯೂ ನಿರ್ಮಿಸಲ್ಪಟ್ಟಿದೆ.
ಎಫೆಸದವರಿಗೆ 4 : 25 (ERVKN)
ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ.
ಎಫೆಸದವರಿಗೆ 4 : 26 (ERVKN)
ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ. ✡ಉಲ್ಲೇಖನ: ಕೀರ್ತನೆ. 4:4.
ಎಫೆಸದವರಿಗೆ 4 : 27 (ERVKN)
ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ.
ಎಫೆಸದವರಿಗೆ 4 : 28 (ERVKN)
ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.
ಎಫೆಸದವರಿಗೆ 4 : 29 (ERVKN)
ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.
ಎಫೆಸದವರಿಗೆ 4 : 30 (ERVKN)
ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು.
ಎಫೆಸದವರಿಗೆ 4 : 31 (ERVKN)
ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.
ಎಫೆಸದವರಿಗೆ 4 : 32 (ERVKN)
ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32