ಪ್ರಸಂಗಿ 9 : 1 (ERVKN)
ನಾನು ಇವೆಲ್ಲವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಆಲೋಚಿಸಿದೆ. ಒಳ್ಳೆಯವರಿಗೂ ಜ್ಞಾನಿಗಳಿಗೂ ಅವರ ಕಾರ್ಯಗಳಿಗೂ ಸಂಭವಿಸುವುದೆಲ್ಲಾ ದೇವರ ಹತೋಟಿಯಲ್ಲಿದೆ. ತಾವು ಪ್ರೀತಿಗೆ ಗುರಿಯಾಗುವರೋ ದ್ವೇಷಕ್ಕೆ ಗುರಿಯಾಗುವರೋ ಅವರಿಗೆ ಗೊತ್ತಿಲ್ಲ. ಮುಂದೆ ಸಂಭವಿಸುವುದೂ ಅವರಿಗೆ ಗೊತ್ತಿಲ್ಲ.
ಪ್ರಸಂಗಿ 9 : 2 (ERVKN)
ಆದರೆ ಎಲ್ಲರಿಗೂ ಸಂಭವಿಸುವುದು ಒಂದೇ. ಅದೇ ಮರಣ. ಒಳ್ಳೆಯವರಿಗೂ ಕೆಟ್ಟವರಿಗೂ ಶುದ್ಧರಿಗೂ ಅಶುದ್ಧರಿಗೂ ಯಜ್ಞಗಳನ್ನು ಅರ್ಪಿಸುವವರಿಗೂ ಅರ್ಪಿಸದವರಿಗೂ ಮರಣವಾಗುತ್ತದೆ. ಒಳ್ಳೆಯವನು ಸಹ ಕೇವಲ ಪಾಪಿಯಂತೆ ಸಾಯುವನು. ದೇವರಿಗೆ ವಿಶೇಷವಾದ ಹರಕೆಗಳನ್ನು ಮಾಡುವವನು ಸಹ ಆ ಹರಕೆಗಳನ್ನು ಮಾಡಲು ಭಯಪಡುವ ವ್ಯಕ್ತಿಯಂತೆ ಸಾಯುವನು.
ಪ್ರಸಂಗಿ 9 : 3 (ERVKN)
ಈ ಲೋಕದ ಎಲ್ಲಾ ಕಾರ್ಯಗಳಲ್ಲಿ ಎಲ್ಲಕ್ಕಿಂತಲೂ ದುಃಖಕರವಾದದ್ದೇನೆಂದರೆ, ಎಲ್ಲರೂ ಒಂದೇ ರೀತಿಯಲ್ಲಿ ಅಂತ್ಯವಾಗುವರು. ಆದರೆ ಜನರು ದುಷ್ಟತನವನ್ನೂ ಮೂರ್ಖತನವನ್ನೂ ಆಲೋಚಿಸುತ್ತಲೇ ಇರುವುದು ಅಪಾಯಕರ. ಆಲೋಚನೆಗಳು ಅವರನ್ನು ಮರಣಕ್ಕೆ ನಡೆಸುತ್ತವೆ.
ಪ್ರಸಂಗಿ 9 : 4 (ERVKN)
ಇನ್ನೂ ಜೀವದಿಂದಿರುವ ಪ್ರತಿಯೊಬ್ಬರಿಗೂ ನಿರೀಕ್ಷೆಯಿದೆ. ಜೀವಂತವಾಗಿರುವ ನಾಯಿ ಸತ್ತ ಸಿಂಹಕ್ಕಿಂತಲೂ ಉತ್ತಮ ಎಂಬ ನುಡಿ ಎಷ್ಟೋ ಸತ್ಯ.
ಪ್ರಸಂಗಿ 9 : 5 (ERVKN)
ಜೀವಿತರಿಗೆ ಸಾಯುತ್ತೇವೆಂಬ ತಿಳಿವಳಿಕೆಯಿದೆ. ಆದರೆ ಸತ್ತವರಿಗೆ ಯಾವ ತಿಳಿವಳಿಕೆಯೂ ಇಲ್ಲ. ಸತ್ತವರಿಗೆ ಯಾವ ಪ್ರತಿಫಲವೂ ಇಲ್ಲ. ಜನರು ಅವರನ್ನು ಬೇಗನೆ ಮರೆತುಬಿಡುವರು.
ಪ್ರಸಂಗಿ 9 : 6 (ERVKN)
ಅವರು ಸತ್ತಾಗಲೇ, ಅವರ ಪ್ರೀತಿ, ದ್ವೇಷ ಮತ್ತು ಹೊಟ್ಟೆಕಿಚ್ಚು ಅಳಿದುಹೋದವು; ಸತ್ತವರು ಭೂಲೋಕದ ಕಾರ್ಯಗಳಲ್ಲಿ ಇನ್ನೆಂದಿಗೂ ಪಾಲುಗಾರರಾಗುವುದಿಲ್ಲ.
ಪ್ರಸಂಗಿ 9 : 7 (ERVKN)
ಜೀವನದಲ್ಲಿ ಆನಂದಿಸಿ ಆದ್ದರಿಂದ ಹೋಗು, ಊಟಮಾಡಿ ಸಂತೋಷಪಡು; ದ್ರಾಕ್ಷಾರಸವನ್ನು ಕುಡಿದು ಉಲ್ಲಾಸಿಸು; ನಿನ್ನ ಈ ನಡತೆಯು ದೇವರಿಗೆ ಮೆಚ್ಚಿಕೆಯಾಗಿದೆ.
ಪ್ರಸಂಗಿ 9 : 8 (ERVKN)
ಒಳ್ಳೆಯ ಉಡುಪುಗಳನ್ನು ಧರಿಸಿಕೊಂಡು ನಿನ್ನನ್ನು ಅಲಂಕರಿಸಿಕೊ.
ಪ್ರಸಂಗಿ 9 : 9 (ERVKN)
ನೀನು ಪ್ರಿಯ ಪತ್ನಿಯೊಡನೆ ಸುಖಪಡು. ನಿನ್ನ ಅಲ್ಪಕಾಲ ಜೀವಿತದ ದಿನಗಳಲ್ಲೆಲ್ಲಾ ಸುಖಪಡು. ಈ ಜೀವಿತವನ್ನು ನಿನಗೆ ಅನುಗ್ರಹಿಸಿರುವಾತನು ದೇವರೇ, ಇದೇ ನಿನ್ನ ಪಾಲು. ನಿನ್ನ ಈ ಜೀವಿತದ ಕೆಲಸಕಾರ್ಯಗಳನ್ನು ಸಂತೋಷದಿಂದ ಮಾಡು.
ಪ್ರಸಂಗಿ 9 : 10 (ERVKN)
ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಆ ಸ್ಥಳಕ್ಕೆ ಹೋಗುತ್ತಿದ್ದೇವೆ. ಅದೃಷ್ಟವೇ? ನತಾದೃಷ್ಟವೇ?
ಪ್ರಸಂಗಿ 9 : 11 (ERVKN)
ಇದಲ್ಲದೆ ಲೋಕದಲ್ಲಿ ಇನ್ನೂ ಕೆಲವು ಅನ್ಯಾಯಗಳನ್ನು ಗಮನಿಸಿದ್ದೇನೆ. ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು; ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು; ಜ್ಞಾನಿಗೆ ಯಾವಾಗಲೂ ಆಹಾರ ದೊರಕದು; ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು; ಪ್ರವೀಣರಿಗೆ ಯಾವಾಗಲೂ ಹೊಗಳಿಕೆಬಾರದು; ಸಮಯ ಬಂದಾಗ, ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ.
ಪ್ರಸಂಗಿ 9 : 12 (ERVKN)
ಮನುಷ್ಯನಿಗೆ ಮುಂದೆ ಏನಾಗುವುದೋ ತಿಳಿಯದು. ಬಲೆಯಲ್ಲಿ ಸಿಕ್ಕಿಕೊಂಡಿರುವ ಮೀನಿನಂತೆಯೂ ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯಂತೆಯೂ ಮನುಷ್ಯನು ತನಗೆ ಸಂಭವಿಸುವ ಕೇಡುಗಳಿಗೆ ಗುರಿಯಾಗುವನು.
ಪ್ರಸಂಗಿ 9 : 13 (ERVKN)
ಜ್ಞಾನದ ಶಕ್ತಿ ಇದಲ್ಲದೆ ಲೋಕದಲ್ಲಿ ಜ್ಞಾನದ ಕಾರ್ಯವನ್ನು ಮಾಡುವ ಒಬ್ಬನನ್ನು ನಾನು ಕಂಡೆನು. ಅದು ತುಂಬ ಮುಖ್ಯವಾದದ್ದೆಂದು ನನಗೆ ತೋರಿತು.
ಪ್ರಸಂಗಿ 9 : 14 (ERVKN)
ಕೆಲವು ಜನರಿದ್ದ ಒಂದು ಚಿಕ್ಕ ನಗರವಿತ್ತು. ಒಬ್ಬ ದೊಡ್ಡ ರಾಜನು ಆ ನಗರದ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದನು.
ಪ್ರಸಂಗಿ 9 : 15 (ERVKN)
ಆ ನಗರದಲ್ಲಿ ಒಬ್ಬ ಜ್ಞಾನಿ ಇದ್ದನು. ಆದರೆ ಅವನು ಬಡವನಾಗಿದ್ದನು, ಅವನು ತನ್ನ ಜ್ಞಾನದಿಂದ ಆ ನಗರವನ್ನು ಕಾಪಾಡಿದನು; ಆದರೆ ಜನರು ಅವನನ್ನು ಮರೆತೇಬಿಟ್ಟರು.
ಪ್ರಸಂಗಿ 9 : 16 (ERVKN)
ನಾನು ಹೇಳುವುದೇನೆಂದರೆ, ಜ್ಞಾನವು ಶಕ್ತಿಗಿಂತಲೂ ಉತ್ತಮ. ಅವರು ಆ ಬಡವನ ಜ್ಞಾನವನ್ನು ಮರೆತುಬಿಟ್ಟರೂ ಅವನ ಮಾತುಗಳನ್ನು ಕೇಳದಿದ್ದರೂ ಜ್ಞಾನವು ಉತ್ತಮವಾದದ್ದೇ.
ಪ್ರಸಂಗಿ 9 : 17 (ERVKN)
ಜ್ಞಾನಿಯ ಮೆಲ್ಲನೆಯ ಮಾತುಗಳು ಮೂಢನಾದ ಅಧಿಪತಿಯು ಕೂಗಿಹೇಳಿದ ಮಾತುಗಳಿಗಿಂತಲೂ ಎಷ್ಟೋ ಉತ್ತಮ.
ಪ್ರಸಂಗಿ 9 : 18 (ERVKN)
ಜ್ಞಾನವು ಯುದ್ಧಾಯುಧಗಳಿಗಿಂತಲೂ ಉತ್ತಮ, ಆದರೆ ಮೂಢನು ಒಳ್ಳೆಯದನ್ನು ಹಾಳು ಮಾಡುವನು.

1 2 3 4 5 6 7 8 9 10 11 12 13 14 15 16 17 18