ಪ್ರಸಂಗಿ 5 : 1 (ERVKN)
ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ ದೇವರನ್ನು ಆರಾಧಿಸಲು ಹೋಗುವಾಗ ಎಚ್ಚರಿಕೆಯಿಂದಿರಿ. ಮೂಢರಂತೆ ಯಜ್ಞಗಳನ್ನು ಅರ್ಪಿಸುವುದಕ್ಕಿಂತ ದೇವರಿಗೆ ಕಿವಿಗೊಡುವುದೇ ಉತ್ತಮ. ಮೂಢರು ದುಷ್ಕೃತ್ಯಗಳನ್ನು ಮಾಡುತ್ತಲೇ ಇರುವರು; ಆದರೆ ಅವರಿಗೆ ಅದು ಗೊತ್ತೇ ಇಲ್ಲ.
ಪ್ರಸಂಗಿ 5 : 2 (ERVKN)
ದೇವರಿಗೆ ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ. ನೀವು ದೇವರೊಂದಿಗೆ ಮಾತಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮನೋದ್ವೇಗಗಳು ನಿಮ್ಮನ್ನು ಮಾತಿನಲ್ಲಿ ದುಡುಕಿಸದಂತೆ ನೋಡಿಕೊಳ್ಳಿ. ದೇವರು ಪರಲೋಕದಲ್ಲಿರುವುದರಿಂದ ಮತ್ತು ನೀವು ಈ ಲೋಕದಲ್ಲಿರುವುದರಿಂದ ನಿಮ್ಮ ಮಾತುಗಳು ಮಿತವಾಗಿರಲಿ. ಈ ನುಡಿ ಸತ್ಯವಾದದ್ದೇ:
ಪ್ರಸಂಗಿ 5 : 3 (ERVKN)
“ಅನೇಕ ಚಿಂತೆಗಳಿಂದ ದುಸ್ವಪ್ನಗಳಾಗುವಂತೆ ಮೂಢನು ಅನೇಕ ಮಾತುಗಳನ್ನಾಡುವನು.”
ಪ್ರಸಂಗಿ 5 : 4 (ERVKN)
ನೀವು ಹರಕೆ ಮಾಡಿಕೊಂಡರೆ ತಡಮಾಡದೆ ಅದನ್ನು ನೆರವೇರಿಸಿ. ಮೂಢರ ವಿಷಯದಲ್ಲಿ ದೇವರಿಗೆ ಸಂತೋಷವಿಲ್ಲ. ನೀವು ದೇವರಿಗೆ ಹರಕೆ ಮಾಡಿಕೊಂಡದ್ದನ್ನು ಸಲ್ಲಿಸಿರಿ.
ಪ್ರಸಂಗಿ 5 : 5 (ERVKN)
ಹರಕೆ ಮಾಡಿ ಸಲ್ಲಿಸದಿರುವುದಕ್ಕಿಂತ ಹರಕೆ ಮಾಡದಿರುವುದೇ ಉತ್ತಮ.
ಪ್ರಸಂಗಿ 5 : 6 (ERVKN)
ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು.
ಪ್ರಸಂಗಿ 5 : 7 (ERVKN)
ಉಪಯೋಗವಿಲ್ಲದ ನಿಮ್ಮ ಕನಸುಗಳಾಗಲಿ ಜಂಬದ ಮಾತುಗಳಾಗಲಿ ನಿಮ್ಮನ್ನು ಕೇಡಿಗೆ ನಡೆಸದಂತೆ ನೋಡಿಕೊಳ್ಳಿರಿ; ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
ಪ್ರಸಂಗಿ 5 : 8 (ERVKN)
ಯಾವನೂ ಸರ್ವಾಧಿಪತಿಯಲ್ಲ ದೇಶದಲ್ಲಿ ಬಡವರಿಂದ ಬಲವಂತ ಸೇವೆಮಾಡಿಸುವುದನ್ನು ಕಂಡು ಅವರಿಗೆ ಅನ್ಯಾಯವಾಗಿದೆಯೆಂದೂ ಹಕ್ಕಿಗೆ ಚ್ಯುತಿಯಾಗಿದೆಯೆಂದೂ ಆಶ್ಚರ್ಯಪಡಬೇಡಿ. ಅವರಿಂದ ಬಲವಂತವಾಗಿ ದುಡಿಸುವ ಅಧಿಪತಿಗೆ ಬಲವಂತದಿಂದ ದುಡಿಸುವ ಮತ್ತೊಬ್ಬ ಅಧಿಪತಿಯಿರುವನು. ಈ ಇಬ್ಬರು ಅಧಿಪತಿಗಳಿಗೂ ಮತ್ತೊಬ್ಬ ಅಧಿಪತಿಯಿರುವನು.
ಪ್ರಸಂಗಿ 5 : 9 (ERVKN)
ರಾಜನು ಸಹ ಸೇವಕನಾಗಿದ್ದಾನೆ; ಅವನ ದೇಶವು ಅವನನ್ನು ಗಳಿಸಿಕೊಂಡಿದೆ.
ಪ್ರಸಂಗಿ 5 : 10 (ERVKN)
ಐಶ್ವರ್ಯವು ಸಂತೋಷವನ್ನು ಖರೀದಿ ಮಾಡಲಾರದು ಹಣದಾಸೆಯುಳ್ಳವನು ತನ್ನಲ್ಲಿ ಎಷ್ಟೇ ಹಣವಿದ್ದರೂ ತೃಪ್ತನಾಗಲಾರನು. ಐಶ್ವರ್ಯದಾಸೆಯುಳ್ಳವನು ಎಷ್ಟೇ ಸಂಪಾದಿಸಿದರೂ ತೃಪ್ತನಾಗುವುದಿಲ್ಲ. ಇದು ಸಹ ವ್ಯರ್ಥ.
ಪ್ರಸಂಗಿ 5 : 11 (ERVKN)
ಐಶ್ವರ್ಯ ಹೆಚ್ಚಿದಂತೆಲ್ಲಾ “ಅನುಭವಿಸುವವರ” ಸಂಖ್ಯೆಯೂ ಹೆಚ್ಚುವುದು. ಐಶ್ವರ್ಯವಂತನು ಅದನ್ನು ಕಣ್ಣಿಂದ ನೋಡಬಹುದಷ್ಟೇ ಹೊರತು ಬೇರೆ ಯಾವ ಲಾಭವೂ ಅವನಿಗಿಲ್ಲ.
ಪ್ರಸಂಗಿ 5 : 12 (ERVKN)
ದಿನವೆಲ್ಲಾ ಪ್ರಯಾಸಪಟ್ಟು ದುಡಿಯುವವನು ಸಮಾಧಾನದಿಂದ ಮಲಗಿಕೊಳ್ಳುವನು. ಅವನಿಗೆ ತಿನ್ನಲು ಸ್ವಲ್ಪವೇ ಇರಲಿ ಅಥವಾ ಹೆಚ್ಚೇ ಇರಲಿ, ಅದು ಮುಖ್ಯವಲ್ಲ. ಐಶ್ವರ್ಯವಂತನಿಗಾದರೋ ತನ್ನ ಸಂಪತ್ತಿನ ಕುರಿತು ಚಿಂತಿಸುತ್ತಾ ನಿದ್ರಿಸಲಾರನು.
ಪ್ರಸಂಗಿ 5 : 13 (ERVKN)
ಈ ಲೋಕದಲ್ಲಿ ದುರ್ಗತಿಯೊಂದನ್ನು ನೋಡಿದ್ದೇನೆ. ಒಬ್ಬನು ತನ್ನ ಭವಿಷ್ಯತ್ತಿಗಾಗಿ ಹಣವನ್ನು ಕೂಡಿಡುತ್ತಾನೆ.
ಪ್ರಸಂಗಿ 5 : 14 (ERVKN)
ಬಳಿಕ ಅವನು ಯಾವುದೋ ಕೇಡಿಗೆ ಗುರಿಯಾಗಿ ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು; ಕೊನೆಯಲ್ಲಿ ತನ್ನ ಮಗನಿಗೆ ಕೊಡಲು ಅವನಲ್ಲಿ ಏನೂ ಉಳಿದಿರುವುದಿಲ್ಲ.
ಪ್ರಸಂಗಿ 5 : 15 (ERVKN)
ಮನುಷ್ಯನು ತಾಯಿಯ ಗರ್ಭದಿಂದ ಬರಿದಾಗಿ ಈ ಲೋಕಕ್ಕೆ ಬರುವನು; ಸಾಯುವಾಗ ಅದೇ ರೀತಿ ಬರಿದಾಗಿ ಹೋಗುವನು; ತಾನು ಪ್ರಯಾಸಪಟ್ಟು ಸಂಪಾದಿಸಿದವುಗಳಲ್ಲಿ ಒಂದನ್ನೂ ಅವನು ತನ್ನೊಡನೆ ತೆಗೆದುಕೊಂಡು ಹೋಗಲಾರನು.
ಪ್ರಸಂಗಿ 5 : 16 (ERVKN)
ಅದು ಸಹ ತುಂಬ ದುಃಖಕರ. ಅವನು ಬಂದ ರೀತಿಯಲ್ಲಿಯೇ ಈ ಲೋಕವನ್ನು ಬಿಟ್ಟುಹೋಗುವನು. “ಗಾಳಿಯನ್ನು ಹಿಂದಟ್ಟುವುದರಿಂದ” ಅವನಿಗಾಗುವ ಪ್ರಯೋಜನವೇನು?
ಪ್ರಸಂಗಿ 5 : 17 (ERVKN)
ಅವನ ಜೀವಮಾನವೆಲ್ಲಾ ವ್ಯಸನದಿಂದಲೂ ದುಃಖದಿಂದಲೂ ಕೂಡಿದೆ. ನಿರಾಶೆಯೂ ಕಾಯಿಲೆಯೂ ಕೋಪವೂ ಅವನನ್ನು ಕಾಡುತ್ತಲೇ ಇರುತ್ತವೆ.
ಪ್ರಸಂಗಿ 5 : 18 (ERVKN)
ನಿನ್ನ ಜೀವನದ ಕೆಲಸದಲ್ಲಿ ಆನಂದಿಸು ನಾನು ಕಂಡುಕೊಂಡದ್ದೇನೆಂದರೆ, ಒಬ್ಬನು ತನ್ನ ಅಲ್ಪಕಾಲದ ಜೀವಮಾನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವುದೇ ಅವನಿಗೆ ಮೇಲು. ಇದೇ ಅವನ ಪಾಲು.
ಪ್ರಸಂಗಿ 5 : 19 (ERVKN)
ದೇವರು ಒಬ್ಬನಿಗೆ ಐಶ್ವರ್ಯವನ್ನೂ ಆಸ್ತಿಯನ್ನೂ ಮತ್ತು ಅವುಗಳನ್ನು ಅನುಭವಿಸುವ ಭಾಗ್ಯವನ್ನೂ ಕೊಟ್ಟಿದ್ದರೆ ಅವನು ಅವುಗಳನ್ನು ಅನುಭವಿಸಲಿ. ಅವನು ತನಗಿರುವಂಥವುಗಳನ್ನು ಹೊಂದಿಕೊಂಡು ತನ್ನ ದುಡಿಮೆಯಲ್ಲಿ ಸಂತೋಷಿಸಲಿ. ಅದು ದೇವರ ಅನುಗ್ರಹವಷ್ಟೇ.
ಪ್ರಸಂಗಿ 5 : 20 (ERVKN)
ತನ್ನ ಜೀವಿತವು ಅಲ್ಪಕಾಲದ್ದೆಂದು ಅವನು ನೆನಪುಮಾಡಿಕೊಳ್ಳಬೇಕು. ಯಾಕೆಂದರೆ ಅವನನ್ನು ಅವನಿಗೆ ಇಷ್ಟವಾದ ಕೆಲಸದಲ್ಲಿ ನಿರತನನ್ನಾಗಿ ಮಾಡಿರುವಾತನು ದೇವರೇ.

1 2 3 4 5 6 7 8 9 10 11 12 13 14 15 16 17 18 19 20