ಪ್ರಸಂಗಿ 3 : 1 (ERVKN)
ಪ್ರತಿಯೊಂದಕ್ಕೂ ಸೂಕ್ತ ಸಮಯವಿದೆ ಪ್ರತಿಯೊಂದಕ್ಕೂ ಸೂಕ್ತವಾದ ಸಮಯವಿದೆ. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವಿದೆ.
ಪ್ರಸಂಗಿ 3 : 2 (ERVKN)
ಹುಟ್ಟುವ ಸಮಯ, ಸಾಯುವ ಸಮಯ.
ನೆಡುವ ಸಮಯ, ಸಸಿಗಳನ್ನು ಕೀಳುವ ಸಮಯ.
ಪ್ರಸಂಗಿ 3 : 3 (ERVKN)
ಕೊಲ್ಲುವ ಸಮಯ, ವಾಸಿಮಾಡುವ ಸಮಯ.
ನಾಶಮಾಡುವ ಸಮಯ, ಕಟ್ಟುವ ಸಮಯ.
ಪ್ರಸಂಗಿ 3 : 4 (ERVKN)
ಅಳುವ ಸಮಯ, ನಗುವ ಸಮಯ.
ಗೋಳಾಡುವ ಸಮಯ, ಕುಣಿದಾಡುವ ಸಮಯ.
ಪ್ರಸಂಗಿ 3 : 5 (ERVKN)
ಆಯುಧಗಳನ್ನು ಬಿಸಾಡುವ ಸಮಯ, ಆಯುಧಗಳನ್ನು ಎತ್ತಿಕೊಳ್ಳುವ ಸಮಯ.
ಅಪ್ಪಿಕೊಳ್ಳುವ ಸಮಯ, ಅಪ್ಪಿಕೊಳ್ಳದಿರುವ ಸಮಯ.
ಪ್ರಸಂಗಿ 3 : 6 (ERVKN)
ಹುಡುಕುವ ಸಮಯ, ಹುಡುಕದಿರುವ ಸಮಯ.
ವಸ್ತುಗಳನ್ನು ಇಟ್ಟುಕೊಳ್ಳುವ ಸಮಯ, ವಸ್ತುಗಳನ್ನು ಬಿಸಾಡುವ ಸಮಯ.
ಪ್ರಸಂಗಿ 3 : 7 (ERVKN)
ಬಟ್ಟೆಯನ್ನು ಹರಿಯುವ ಸಮಯ, ಬಟ್ಟೆಯನ್ನು ಹೊಲಿಯುವ ಸಮಯ.
ಮೌನವಾಗಿರುವ ಸಮಯ, ಮಾತಾಡುವ ಸಮಯ.
ಪ್ರಸಂಗಿ 3 : 8 (ERVKN)
ಪ್ರೀತಿ ಮಾಡುವ ಸಮಯ, ದ್ವೇಷಿಸುವ ಸಮಯ.
ಯುದ್ಧಮಾಡುವ ಸಮಯ, ಶಾಂತಿಯಿಂದಿರುವ ಸಮಯ.
ಪ್ರಸಂಗಿ 3 : 9 (ERVKN)
ಲೋಕವು ದೇವರ ಹತೋಟಿಯಲ್ಲಿದೆ ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು?
ಪ್ರಸಂಗಿ 3 : 10 (ERVKN)
ದೇವರು ಮನುಷ್ಯರಿಗೆ ಕೊಟ್ಟಿರುವ ಪ್ರಯಾಸದ ಕೆಲಸವನ್ನೆಲ್ಲಾ ನೋಡಿದ್ದೇನೆ.
ಪ್ರಸಂಗಿ 3 : 11 (ERVKN)
ಈ ಲೋಕವನ್ನು ಕುರಿತು ಆಲೋಚಿಸುವುದಕ್ಕೆ ದೇವರು ನನಗೆ ಜ್ಞಾನವನ್ನು ಕೊಟ್ಟಿದ್ದರೂ ದೇವರ ಕಾರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ. ದೇವರು ಪ್ರತಿಯೊಂದನ್ನೂ ತಕ್ಕ ಸಮಯದಲ್ಲಿ ಮಾಡುವನು.
ಪ್ರಸಂಗಿ 3 : 12 (ERVKN)
ಬದುಕಿರುವಷ್ಟು ಕಾಲ ಸಂತೋಷವಾಗಿದ್ದು ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯರಿಗೆ ಇಲ್ಲವೆಂದು ಕಲಿತುಕೊಂಡೆನು.
ಪ್ರಸಂಗಿ 3 : 13 (ERVKN)
ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಕೆಲಸವನ್ನು ಸಂತೋಷದಿಂದ ಮಾಡುವುದು ದೇವರಿಗೆ ಇಷ್ಟವಾಗಿದೆ. ಅವು ದೇವರ ವರವಾಗಿವೆ.
ಪ್ರಸಂಗಿ 3 : 14 (ERVKN)
ದೇವರ ಕಾರ್ಯಗಳೆಲ್ಲಾ ಶಾಶ್ವತವಾದದ್ದು. ಆತನ ಕಾರ್ಯಗಳಿಗೆ ಮನುಷ್ಯರು ಏನನ್ನೂ ಸೇರಿಸಲಾರರು; ಅವುಗಳಿಂದ ಏನನ್ನೂ ತೆಗೆಯಲಾರರು. ಮನುಷ್ಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕೆಂಬುದೇ ಇದಕ್ಕೆ ಕಾರಣ.
ಪ್ರಸಂಗಿ 3 : 15 (ERVKN)
ಈಗ ಸಂಭವಿಸುವಂಥವುಗಳೂ ಮುಂದೆ ಸಂಭವಿಸುವಂಥವುಗಳೂ ಹಿಂದಿನ ಕಾಲದಲ್ಲಿ ಸಂಭವಿಸಲ್ಪಟ್ಟಿವೆ. ದೇವರು ಅದೇ ಕಾರ್ಯಗಳನ್ನು ಮತ್ತೆಮತ್ತೆ ಬರಮಾಡುವನು.
ಪ್ರಸಂಗಿ 3 : 16 (ERVKN)
ನಾನು ಈ ಲೋಕವನ್ನು ದೃಷ್ಟಿಸಿ ನೋಡಿದಾಗ, ನ್ಯಾಯಾಲಯಗಳಲ್ಲಿ ನೀತಿನ್ಯಾಯಗಳ ಬದಲಾಗಿ ದುಷ್ಟತನ ತುಂಬಿರುವುದನ್ನು ಕಂಡುಕೊಂಡೆನು.
ಪ್ರಸಂಗಿ 3 : 17 (ERVKN)
ಆಗ ನಾನು ಮನಸ್ಸಿನಲ್ಲಿ, “ದೇವರು ಪ್ರತಿಯೊಂದಕ್ಕೂ ಸಮಯವನ್ನು ಗೊತ್ತುಪಡಿಸಿದ್ದಾನೆ. ಜನರು ಮಾಡುವ ಪ್ರತಿಯೊಂದಕ್ಕೂ ನ್ಯಾಯತೀರಿಸಲು ಆತನು ಸಮಯವನ್ನು ಗೊತ್ತುಪಡಿಸಿದ್ದಾನೆ. ದೇವರು ನೀತಿವಂತರಿಗೂ ದುಷ್ಟರಿಗೂ ನ್ಯಾಯತೀರಿಸುವನು” ಎಂದುಕೊಂಡೆನು. ಮನುಷ್ಯರು ಪ್ರಾಣಿಗಳಂತಿರುವರೇ?
ಪ್ರಸಂಗಿ 3 : 18 (ERVKN)
ಅಲ್ಲದೆ ಮನಸ್ಸಿನಲ್ಲಿ ಹೀಗೆಂದುಕೊಂಡೆನು: “ಮನುಷ್ಯರು ಪ್ರಾಣಿಗಳಿಗಿಂತ ಮೇಲಾದವರಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕೆಂಬುದು ದೇವರ ಇಷ್ಟವಾಗಿದೆ.
ಪ್ರಸಂಗಿ 3 : 19 (ERVKN)
ಮನುಷ್ಯನು ಪ್ರಾಣಿಗಿಂತಲೂ ಉತ್ತಮನಾಗಿರುವನೇ? ಇಲ್ಲ! ಏಕೆಂದರೆ ಪ್ರತಿಯೊಂದು ಉಪಯೋಗವಿಲ್ಲದ್ದು. ಪ್ರಾಣಿಗಳಿಗೂ ಮನುಷ್ಯರಿಗೂ ಒಂದೇ ಗತಿಯಾಗುವುದು; ಪ್ರಾಣಿಗಳೂ ಸಾಯುವವು, ಮನುಷ್ಯರೂ ಸಾಯುವರು. ಮನುಷ್ಯರಿಗೂ ಪ್ರಾಣಿಗಳಿಗೂ ಇರುವುದು ಒಂದೇ ‘ಉಸಿರು.’ ಸತ್ತ ಪ್ರಾಣಿಗೂ ಸತ್ತ ಮನುಷ್ಯನಿಗೂ ವ್ಯತ್ಯಾಸವಿಲ್ಲ.
ಪ್ರಸಂಗಿ 3 : 20 (ERVKN)
ಮನುಷ್ಯರ ಮತ್ತು ಪ್ರಾಣಿಗಳ ದೇಹಗಳೆಲ್ಲ ಒಂದೇ ಸ್ಥಳಕ್ಕೆ ಹೋಗುತ್ತವೆ. ಮನುಷ್ಯರು ಮಣ್ಣಿನಿಂದ ಬಂದರು. ಕೊನೆಗೆ ಅವರು ಮಣ್ಣಿಗೇ ಹೋಗುವರು. ಪ್ರಾಣಿಗಳು ಮಣ್ಣಿನಿಂದ ಬಂದವು; ಕೊನೆಗೆ ಅವು ಮಣ್ಣಿಗೆ ಹೋಗುತ್ತವೆ.
ಪ್ರಸಂಗಿ 3 : 21 (ERVKN)
ಮನುಷ್ಯನ ಆತ್ಮಕ್ಕೆ ಏನು ಸಂಭವಿಸುವುದೋ ಯಾರಿಗೆ ಗೊತ್ತು? ಮನುಷ್ಯನ ಆತ್ಮವು ದೇವರ ಬಳಿಗೆ ಮೇಲಕ್ಕೆ ಹೋಗುವುದೋ ಪ್ರಾಣಿಯ ಆತ್ಮವು ಭೂಮಿಯೊಳಗೆ ಇಳಿಯುವುದೋ ಯಾರಿಗೆ ಗೊತ್ತು?”
ಪ್ರಸಂಗಿ 3 : 22 (ERVKN)
ಆದ್ದರಿಂದ ಮನುಷ್ಯನಿಗೆ ತನ್ನ ಕಾರ್ಯದಲ್ಲಿ ಸಂತೋಷಪಡುವುದಕ್ಕಿಂತ ಬೇರೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಅಲ್ಲದೆ ಮುಂದಿನ ಕಾಲವನ್ನು ಕುರಿತು ಮನುಷ್ಯನು ಚಿಂತಿಸಬಾರದು. ಯಾಕೆಂದರೆ ಅವನ ಜೀವಮಾನದ ನಂತರ ಸಂಭವಿಸುವಂಥವುಗಳನ್ನು ನೋಡಲು ಈ ಲೋಕಕ್ಕೆ ಅವನನ್ನು ಯಾರು ಬರಮಾಡುವರು?

1 2 3 4 5 6 7 8 9 10 11 12 13 14 15 16 17 18 19 20 21 22