ದಾನಿಯೇಲನು 8 : 1 (ERVKN)
ದಾನಿಯೇಲನು ಕನಸಿನಲ್ಲಿ ಕಂಡ ಟಗರು ಮತ್ತು ಹೋತ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆನು. ಇದು ಮೊದಲಿನ ದರ್ಶನದ ತರುವಾಯ ಕಂಡದ್ದು.
ದಾನಿಯೇಲನು 8 : 2 (ERVKN)
ಈ ದರ್ಶನದಲ್ಲಿ ನಾನು ಶೂಷನ್ ನಗರದಲ್ಲಿದ್ದೆನು. ಶೂಷನ್ ನಗರವು ಏಲಾಮ್ ಸಂಸ್ಥಾನದ ರಾಜಧಾನಿಯಾಗಿತ್ತು. ನಾನು ಊಲಾ ನದಿಯ ದಡದ ಮೇಲೆ ನಿಂತುಕೊಂಡಿದ್ದೆನು.
ದಾನಿಯೇಲನು 8 : 3 (ERVKN)
ನಾನು ಕಣ್ಣೆತ್ತಿ ನೋಡಲಾಗಿ ಊಲಾ ನದಿಯ ಪಕ್ಕದಲ್ಲಿ ನಿಂತುಕೊಂಡಿದ್ದ ಟಗರೊಂದು ನನ್ನ ಕಣ್ಣಿಗೆ ಬಿತ್ತು. ಟಗರಿಗೆ ಎರಡು ಉದ್ದವಾದ ಕೊಂಬುಗಳಿದ್ದವು. ಆ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದು ಕೊಂಬು ಇನ್ನೊಂದು ಕೊಂಬಿಗಿಂತ ಉದ್ದವಾಗಿತ್ತು. ಉದ್ದವಾದ ಕೊಂಬು ಇನ್ನೊಂದು ಕೊಂಬಿಗಿಂತ ಹಿಂದಕ್ಕೆ ಇತ್ತು.
ದಾನಿಯೇಲನು 8 : 4 (ERVKN)
ಆ ಟಗರು ತನ್ನ ಕೊಂಬುಗಳಿಂದ ಎಲ್ಲ ಕಡೆಗೂ ಹಾಯುತ್ತಿತ್ತು. ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಜಿಗಿದಾಡುತ್ತಿತ್ತು. ಯಾವ ಪ್ರಾಣಿಗೂ ಆ ಟಗರನ್ನು ತಡೆಯಲಾಗಲಿಲ್ಲ. ಮಿಕ್ಕ ಪ್ರಾಣಿಗಳನ್ನು ರಕ್ಷಿಸುವುದು ಯಾರಿಂದಲೂ ಆಗಲಿಲ್ಲ. ಆ ಟಗರು ತನ್ನ ಮನಸ್ಸಿಗೆ ಬಂದಂತೆ ಮಾಡಲು ಸಾಧ್ಯವಾಯಿತು. ಆ ಟಗರು ಬಹಳ ಪ್ರಬಲವಾಯಿತು.
ದಾನಿಯೇಲನು 8 : 5 (ERVKN)
ನಾನು ಈ ಟಗರಿನ ಬಗ್ಗೆ ಯೋಚಿಸಿದೆ. ನಾನು ಯೋಚನೆ ಮಾಡುತ್ತಿರುವಾಗಲೇ ಪಶ್ಚಿಮ ದಿಕ್ಕಿನಿಂದ ಒಂದು ಹೋತವು ಬರುವುದನ್ನು ಕಂಡೆ. ಈ ಹೋತವು ಇಡೀ ಭೂಮಂಡಲದ ಮೇಲೆಲ್ಲಾ ಓಡಾಡಿತು. ಅದು ತನ್ನ ಕಾಲುಗಳು ನೆಲಕ್ಕೆ ಸೋಕದಂತೆ ಓಡುತ್ತಿತ್ತು. ಈ ಹೋತಕ್ಕೆ ಎದ್ದುಕಾಣುವ ಒಂದು ದೊಡ್ಡ ಕೊಂಬು ಇತ್ತು. ಆ ಕೊಂಬು ಸರಿಯಾಗಿ ಆ ಹೋತದ ಎರಡು ಕಣ್ಣುಗಳ ಮಧ್ಯದಲ್ಲಿತ್ತು.
ದಾನಿಯೇಲನು 8 : 6 (ERVKN)
ಆ ಹೋತವು ಟಗರಿನ ಹತ್ತಿರಕ್ಕೆ ಬಂದಿತು. ನಾನು ಊಲಾ ನದಿಯ ದಡದ ಮೇಲೆ ನೋಡಿದ ಟಗರೇ ಇದಾಗಿತ್ತು. ಆ ಹೋತಕ್ಕೆ ಬಹಳ ಕೋಪ ಬಂದಿತ್ತು; ಅದು ವೇಗದಿಂದ ಟಗರಿನ ಕಡೆಗೆ ಓಡಿತು.
ದಾನಿಯೇಲನು 8 : 7 (ERVKN)
ಹೋತವು ಟಗರಿನ ಕಡೆಗೆ ಓಡುವದನ್ನು ನಾನು ನೋಡುತ್ತಿದ್ದೆ. ಅದು ಅತಿ ಕೋಪದಿಂದ ಟಗರಿನ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಟಗರಿಗೆ ಆ ಹೋತವನ್ನು ತಡೆದು ನಿಲ್ಲಿಸಲಾಗಲಿಲ್ಲ. ಆ ಹೋತವು ಟಗರನ್ನು ನೆಲಕ್ಕೆ ಉರುಳಿಸಿ ತುಳಿದುಹಾಕಿತು. ಟಗರನ್ನು ಹೋತದಿಂದ ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.
ದಾನಿಯೇಲನು 8 : 8 (ERVKN)
ಹೋತವು ಬಹಳ ಪ್ರಬಲವಾಯಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದುಹೋಯಿತು. ಆ ಒಂದು ದೊಡ್ಡ ಕೊಂಬು ಇದ್ದ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ಕೊಂಬುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಆ ನಾಲ್ಕು ಕೊಂಬುಗಳು ನಾಲ್ಕು ಬೇರೆಬೇರೆ ದಿಕ್ಕುಗಳಲ್ಲಿ ಚಾಚಿಕೊಂಡವು.
ದಾನಿಯೇಲನು 8 : 9 (ERVKN)
ಆಗ ಅವುಗಳಿಂದ ಒಂದು ಚಿಕ್ಕ ಕೊಂಬು ಮೊಳೆಯಿತು. ಆ ಚಿಕ್ಕ ಕೊಂಬು ಬೆಳೆದು ಬಹಳ ದೊಡ್ಡದಾಯಿತು. ಅದು ಆಗ್ನೇಯಕ್ಕೆ ಬೆಳೆಯಿತು. ಅದು ದಕ್ಷಿಣಕ್ಕೆ, ಪೂರ್ವಕ್ಕೆ ಮತ್ತು ಸುಂದರವಾದ ನಾಡಿಗೆ ಬೆಳೆಯಿತು.
ದಾನಿಯೇಲನು 8 : 10 (ERVKN)
ಆ ಚಿಕ್ಕ ಕೊಂಬು ಬಹಳ ದೊಡ್ಡದಾಯಿತು. ಅದು ಆಕಾಶಕ್ಕೆ ಮುಟ್ಟುವಂತೆ ಬೆಳೆಯಿತು. ಆ ಚಿಕ್ಕ ಕೊಂಬು ಆಕಾಶದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಬೀಳಿಸಿತು ಮತ್ತು ಎಲ್ಲ ನಕ್ಷತ್ರಗಳ ಮೇಲೆ ಹತ್ತಿತ್ತು.
ದಾನಿಯೇಲನು 8 : 11 (ERVKN)
ಆ ಚಿಕ್ಕ ಕೊಂಬು ಅತಿ ಪ್ರಬಲವಾಯಿತು ಮತ್ತು ನಕ್ಷತ್ರಾಧಿಪತಿಯನ್ನು (ದೇವರನ್ನು) ವಿರೋಧಿಸತೊಡಗಿತು. ಆ ಚಿಕ್ಕ ಕೊಂಬು ನಕ್ಷತ್ರಾಧಿಪತಿಗೆ ನಿತ್ಯಹೋಮಗಳು ಸಲ್ಲದಂತೆ ಮಾಡಿತು. ಜನರು ನಕ್ಷತ್ರಾಧಿಪತಿಯನ್ನು ಪೂಜಿಸುವ ಸ್ಥಳವನ್ನು ಕೆಡವಿಬಿಟ್ಟಿತು.
ದಾನಿಯೇಲನು 8 : 12 (ERVKN)
ಆ ಚಿಕ್ಕ ಕೊಂಬು ನಿತ್ಯಹೋಮಗಳನ್ನು ತಡೆಯುವ ಪಾಪವನ್ನು ಮಾಡಿತು. ಅದು ಒಳ್ಳೆಯತನವನ್ನು (ಸತ್ಯ, ಧರ್ಮವನ್ನು) ನೆಲಕ್ಕೆ ತಳ್ಳಿತು. ಇದೆಲ್ಲವನ್ನು ಮಾಡಿ ಆ ಚಿಕ್ಕ ಕೊಂಬು ತನ್ನ ಇಷ್ಟಾರ್ಥವನ್ನು ಸಾಧಿಸುವದರಲ್ಲಿ ಜಯ ಪಡೆಯಿತು.
ದಾನಿಯೇಲನು 8 : 13 (ERVKN)
ಆಗ ಒಬ್ಬ ಪವಿತ್ರನು *ಪವಿತ್ರನು ದೇವದೂತ. ಮಾತನಾಡುವದನ್ನು ಕೇಳಿದೆ. ಮತ್ತೊಬ್ಬ ಪವಿತ್ರನು ಮೊದಲನೆಯ ಪವಿತ್ರನಿಗೆ ಉತ್ತರಿಸುವದನ್ನೂ ಕೇಳಿದೆ. ಮೊದಲನೆಯ ಪವಿತ್ರನು, “ಈ ದರ್ಶನ ನಿತ್ಯಹೋಮಗಳಿಗೆ ಏನಾಗುವದೆಂಬುದನ್ನು ತೋರಿಸುವದು. ಇದು ಆ ಭಯಾನಕ ಪಾಪದ ಕುರಿತಾಗಿದೆ. ಅಧಿಪತಿಯು ಆರಾಧಿಸಲ್ಪಡುವ ಪವಿತ್ರಾಲಯವನ್ನು ಜನರು ಹಾಳುಮಾಡಿದರೆ, ಜನರು ಆ ಸ್ಥಳವನ್ನು ತುಳಿದಾಡಿದರೆ, ಆ ನಕ್ಷತ್ರಗಳ ಮೇಲೆ ಜನರು ನಡೆದಾಡಿದರೆ ಏನಾಗುವದೆಂಬುದನ್ನು ಇದು ತೋರಿಸಿಕೊಡುತ್ತದೆ. ಆದರೆ ಇದೆಲ್ಲ ಎಷ್ಟು ದಿನ ನಡೆಯುವದು?” ಎಂದನು.
ದಾನಿಯೇಲನು 8 : 14 (ERVKN)
ಇನ್ನೊಬ್ಬ ಪವಿತ್ರನು, “ಇದೆಲ್ಲಾ ಎರಡು ಸಾವಿರದ ಮುನ್ನೂರು ದಿನಗಳವರೆಗೆ ನಡೆಯುವುದು. ಆಮೇಲೆ ಪವಿತ್ರಾಲಯಕ್ಕೆ ಪುನಃ ನ್ಯಾಯ ಸಿಕ್ಕುವುದು” ಎಂದು ಉತ್ತರಿಸಿದನು.
ದಾನಿಯೇಲನು 8 : 15 (ERVKN)
ದಾನಿಯೇಲನಿಗೆ ದರ್ಶನದ ಅರ್ಥವನ್ನು ವಿವರಿಸಲಾಯಿತು ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆ ಮತ್ತು ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಈ ದರ್ಶನದ ಬಗ್ಗೆ ವಿಚಾರ ಮಾಡುತ್ತಿದ್ದಾಗ ಮನುಷ್ಯನಂತಿದ್ದವನೊಬ್ಬನು ನನ್ನ ಎದುರಿಗೆ ನಿಂತಿದ್ದನು.
ದಾನಿಯೇಲನು 8 : 16 (ERVKN)
ಆಗ ನಾನು ಮನುಷ್ಯನ ಧ್ವನಿಯನ್ನು ಕೇಳಿದೆ. ಈ ಧ್ವನಿಯು ಊಲಾ ನದಿಯ ಮೇಲಿಂದ ಬಂದಿತು. ಆ ಧ್ವನಿಯು, “ಗಬ್ರಿಯೇಲನೇ, ಕನಸಿನ ಅರ್ಥವನ್ನು ಈ ಮನುಷ್ಯನಿಗೆ ತಿಳಿಸು” ಎಂದು ಆದೇಶ ಕೊಟ್ಟಿತು.
ದಾನಿಯೇಲನು 8 : 17 (ERVKN)
ಆಗ ಮನುಷ್ಯನಂತಿದ್ದ ಗಬ್ರಿಯೇಲನು ನಾನು ನಿಂತಲ್ಲಿಗೆ ಬಂದನು. ಅವನು ತೀರ ನನ್ನ ಹತ್ತಿರಕ್ಕೆ ಬಂದಾಗ ನನಗೆ ಬಹಳ ಭಯವಾಯಿತು. ನಾನು ನೆಲಕ್ಕೆ ಬಿದ್ದೆ. ಆದರೆ ಗಬ್ರಿಯೇಲನು ನನಗೆ, “ಮನುಷ್ಯನೇ, ಈ ದರ್ಶನ ಅಂತ್ಯಕಾಲದ ಕುರಿತಾಗಿದೆ ಎಂಬುದು ನಿನಗೆ ತಿಳಿದಿರಲಿ” ಎಂದು ಹೇಳಿದನು.
ದಾನಿಯೇಲನು 8 : 18 (ERVKN)
ಗಬ್ರಿಯೇಲನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನಿದ್ರಾವಶನಾದೆನು. ಅದು ಬಹಳ ಗಾಢವಾದ ನಿದ್ರೆಯಾಗಿತ್ತು. ನನ್ನ ಮುಖವು ನೆಲದ ಮೇಲೆ ಇತ್ತು. ಆಗ ಗಬ್ರಿಯೇಲನು ನನ್ನನ್ನು ಮುಟ್ಟಿ ಎಬ್ಬಿಸಿ,
ದಾನಿಯೇಲನು 8 : 19 (ERVKN)
“ನಾನು ನಿನಗೆ ಈಗ ದರ್ಶನದ ಅರ್ಥವನ್ನು ವಿವರಿಸುತ್ತೇನೆ. ಭವಿಷ್ಯದಲ್ಲಿ ನಡೆಯಲಿರುವುದನ್ನು ನಾನು ನಿನಗೆ ಹೇಳುತ್ತೇನೆ. ನಿನ್ನ ದರ್ಶನವು ಅಂತ್ಯಕಾಲದ ಕುರಿತಾದದ್ದು.
ದಾನಿಯೇಲನು 8 : 20 (ERVKN)
“ನೀನು ಎರಡು ಕೊಂಬುಗಳುಳ್ಳ ಒಂದು ಟಗರನ್ನು ನೋಡಿದೆ. ಆ ಕೊಂಬುಗಳು ಮೇದ್ಯಯ ಮತ್ತು ಪಾರಸಿಯ ರಾಜ್ಯಗಳು.
ದಾನಿಯೇಲನು 8 : 21 (ERVKN)
ಆ ಹೋತವು ಗ್ರೀಕ್ ರಾಜ್ಯ. ಅದರ ಎರಡು ಕಣ್ಣುಗಳ ಮಧ್ಯದ ಕೊಂಬು ಮೊದಲನೆಯ ಅರಸ.
ದಾನಿಯೇಲನು 8 : 22 (ERVKN)
ಆ ಕೊಂಬು ಮುರಿಯಿತು; ಅದರ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ನಾಲ್ಕು ಕೊಂಬುಗಳು ನಾಲ್ಕು ರಾಜ್ಯಗಳನ್ನು ಸೂಚಿಸುವವು. ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನ ರಾಷ್ಟ್ರದಿಂದ ಹುಟ್ಟುವವು. ಆದರೆ ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನಷ್ಟು ಶಕ್ತಿಶಾಲಿಯಾಗಿರುವದಿಲ್ಲ.
ದಾನಿಯೇಲನು 8 : 23 (ERVKN)
“ಆ ರಾಜ್ಯಗಳ ಅಂತ್ಯಕಾಲ ಸಮೀಪಿಸಿದಾಗ ಒಬ್ಬ ಧೈರ್ಯಶಾಲಿಯಾದ ಮತ್ತು ಕ್ರೂರನಾದ ಅರಸನು ತಲೆದೋರುವನು. ಈ ಅರಸನು ಬಹಳ ಕುತಂತ್ರಿಯಾಗಿರುವನು. ಅಧರ್ಮಿಗಳ ಮತ್ತು ಪಾಪಿಗಳ ಸಂಖ್ಯೆ ಹೆಚ್ಚಾದಾಗ ಇದೆಲ್ಲ ನಡೆಯುವುದು.
ದಾನಿಯೇಲನು 8 : 24 (ERVKN)
ಈ ಅರಸನು ಬಹಳ ಪ್ರಬಲನಾಗಿರುವನು. ಆದರೆ ಆ ಪ್ರಾಬಲ್ಯ ಸ್ವಶಕ್ತಿಯಿಂದ ಬಂದುದಲ್ಲ. ಈ ಅರಸನು ಅಪಾರ ವಿನಾಶವನ್ನುಂಟು ಮಾಡುವನು. ಅವನು ಕೈಕೊಂಡ ಪ್ರತಿಯೊಂದು ಕೆಲಸದಲ್ಲಿ ಅವನಿಗೆ ಜಯ ಲಭಿಸುವುದು. ಅವನು ಬಲಿಷ್ಠರನ್ನೂ ದೇವಭಕ್ತರನ್ನೂ ನಾಶಮಾಡುವನು.
ದಾನಿಯೇಲನು 8 : 25 (ERVKN)
“ಅರಸನು ಚತುರನೂ ಕುತಂತ್ರಿಯೂ ಆಗಿರುವನು. ಅವನು ತನ್ನ ಬುದ್ಧಿಶಕ್ತಿಯನ್ನೂ ಹುಸಿನುಡಿಗಳನ್ನೂ ಬಳಸಿಕೊಂಡು ಅಭಿವೃದ್ಧಿ ಹೊಂದುವನು. ತಾನು ಬಹಳ ಮುಖ್ಯನೆಂದು ಅವನು ಭಾವಿಸುವನು. ನೆಮ್ಮದಿಯಾಗಿರುವ ಅನೇಕ ಜನರನ್ನು ಅನಿರೀಕ್ಷಿತವಾಗಿ ನಾಶಮಾಡುವನು. ಅವನು ರಾಜರುಗಳ ರಾಜನೊಂದಿಗೆ (ದೇವರೊಂದಿಗೆ) ಸಹ ಹೋರಾಡುವ ಪ್ರಯತ್ನ ಮಾಡುವನು. ಆದರೆ ಆ ಕ್ರೂರ ರಾಜನ ಶಕ್ತಿಯು ನಾಶವಾಗುವುದು. ಆದರೆ ಅದು ಮನುಷ್ಯನ ಕೈಯಿಂದ ನಾಶವಾಗುವದಿಲ್ಲ.
ದಾನಿಯೇಲನು 8 : 26 (ERVKN)
“ಆಗಿನ ಕಾಲದ ಮತ್ತು ಪರಿಸ್ಥಿತಿಯ ಬಗ್ಗೆ ಕಂಡ ದರ್ಶನಗಳು ನಿಜವಾಗುವವು. ಈ ದರ್ಶನ ಗುಟ್ಟಾಗಿರಲಿ. ಅದೆಲ್ಲ ನಡೆಯಬೇಕಾದರೆ ಇನ್ನೂ ಬಹಳ ಕಾಲಬೇಕು” ಎಂದು ಹೇಳಿದನು.
ದಾನಿಯೇಲನು 8 : 27 (ERVKN)
ದಾನಿಯೇಲನೆಂಬ ನಾನು ಬಹಳ ಅಶಕ್ತನಾದೆನು. ಆ ದರ್ಶನದ ತರುವಾಯ ಹಲವಾರು ದಿವಸ ನಾನು ಕಾಯಿಲೆ ಬಿದ್ದೆನು. ಆಮೇಲೆ ನಾನು ಗುಣಹೊಂದಿ ರಾಜಕಾರ್ಯವನ್ನು ಪ್ರಾರಂಭಿಸಿದೆನು. ಆದರೆ ಆ ದರ್ಶನದಿಂದ ನನ್ನ ಮನಸ್ಸು ಕಲಕಿತು. ಆ ದರ್ಶನದ ಅರ್ಥವೇನೆಂಬುದು ನನಗೆ ತಿಳಿಯಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27