ದಾನಿಯೇಲನು 4 : 1 (ERVKN)
ನೆಬೂಕದ್ನೆಚ್ಚರನಿಗೆ ಮರದ ಕನಸು ಲೋಕದಲ್ಲೆಲ್ಲ ವಾಸಿಸುವ ಸಕಲ ಜನಾಂಗ, ಕುಲ, ಭಾಷೆಗಳ ಜನರಿಗೆ ಅರಸನಾದ ನೆಬೂಕದ್ನೆಚ್ಚರನು ಈ ಪತ್ರವನ್ನು ಕಳುಹಿಸಿದನು. ಶುಭಾಶಯಗಳು,
ದಾನಿಯೇಲನು 4 : 2 (ERVKN)
ಮಹೋನ್ನತನಾದ ದೇವರು ನನಗೋಸ್ಕರ ಮಾಡಿದ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ನಿಮಗೆ ತಿಳಿಸಲು ನನಗೆ ಬಹಳ ಸಂತೋಷವಾಗುತ್ತದೆ.
ದಾನಿಯೇಲನು 4 : 3 (ERVKN)
ದೇವರು ಅಚ್ಚರಿಗೊಳಿಸುವ ಅದ್ಭುತಕಾರ್ಯಗಳನ್ನು ಮಾಡಿದ್ದಾನೆ. ದೇವರು ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
ದೇವರ ಸಾಮ್ರಾಜ್ಯವು ಶಾಶ್ವತವಾದದ್ದು. ದೇವರ ಆಳ್ವಿಕೆಯು ಎಲ್ಲಾ ತಲೆಮಾರುಗಳಲ್ಲಿಯೂ ಮುಂದುವರೆಯುವುದು.
ದಾನಿಯೇಲನು 4 : 4 (ERVKN)
ನೆಬೂಕದ್ನೆಚ್ಚರನಾದ ನಾನು ಅರಮನೆಯಲ್ಲಿದ್ದೆ; ಸುಖಸಂತೋಷದಿಂದ ಇದ್ದೆ.
ದಾನಿಯೇಲನು 4 : 5 (ERVKN)
ಆಗ ನನಗೊಂದು ಕನಸು ಬಿತ್ತು. ಅದು ನನ್ನಲ್ಲಿ ಭಯವನ್ನುಂಟುಮಾಡಿತು. ನಾನು ನನ್ನ ಹಾಸಿಗೆಯ ಮೇಲೆ ಮಲಗಿದ್ದೆ. ಅನೇಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಕಂಡೆ. ಅವುಗಳು ನನ್ನಲ್ಲಿ ಹೆಚ್ಚಿನ ಭಯವನ್ನುಂಟುಮಾಡಿದವು.
ದಾನಿಯೇಲನು 4 : 6 (ERVKN)
ಅದಕ್ಕಾಗಿ ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕರೆತರಬೇಕೆಂದು ಆಜ್ಞೆಯನ್ನು ಕೊಟ್ಟೆ. ಅವರು ನನ್ನ ಕನಸಿನ ಅರ್ಥವನ್ನು ತಿಳಿಸಲಿ ಎಂಬುದೇ ನನ್ನ ಉದ್ದೇಶವಾಗಿತ್ತು.
ದಾನಿಯೇಲನು 4 : 7 (ERVKN)
ಮಂತ್ರವಾದಿಗಳು, ಜೋಯಿಸರು ಮತ್ತು ವಿದ್ವಾಂಸರು ಬಂದ ಮೇಲೆ ನಾನು ಅವರಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ಆದರೆ ಅವರಿಗೆ ಅರ್ಥವನ್ನು ತಿಳಿಸಲಾಗಲಿಲ್ಲ.
ದಾನಿಯೇಲನು 4 : 8 (ERVKN)
ಕೊನೆಗೆ ದಾನಿಯೇಲನು ಬಂದನು. (ನಾನು ದಾನಿಯೇಲನಿಗೆ ನನ್ನ ದೇವರ ಸ್ಮರಣಾರ್ಥವಾಗಿ ಬೇಲ್ತೆಶಚ್ಚರನೆಂಬ ಹೆಸರನ್ನು ಇಟ್ಟಿದ್ದೆ. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿದೆ.) ನಾನು ದಾನಿಯೇಲನಿಗೆ ನನ್ನ ಕನಸಿನ ಬಗ್ಗೆ ಹೇಳಿದೆ.
ದಾನಿಯೇಲನು 4 : 9 (ERVKN)
ನಾನು, “ಬೇಲ್ತೆಶಚ್ಚರನೇ, ಎಲ್ಲಾ ಮಂತ್ರವಾದಿಗಳಿಗಿಂತಲೂ ನೀನು ಬಹಳ ಶ್ರೇಷ್ಠನು. ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿದೆ ಎಂದು ನನಗೆ ಗೊತ್ತಿದೆ. ನಿನಗೆ ತಿಳಿದುಕೊಳ್ಳಲು ಕಷ್ಟವಾದ ಯಾವ ರಹಸ್ಯವೂ ಇಲ್ಲವೆಂದು ನಾನು ಬಲ್ಲೆನು. ನಾನು ಕನಸಿನಲ್ಲಿ ಕಂಡದ್ದು ಇಂತಿದೆ. ಅದರ ಅರ್ಥವನ್ನು ನನಗೆ ಹೇಳು.
ದಾನಿಯೇಲನು 4 : 10 (ERVKN)
ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡಾಗ ಕಂಡ ದೃಶ್ಯಗಳು ಇವು: ನನ್ನ ಎದುರಿಗೆ ಭೂಮಿಯ ಮಧ್ಯದಲ್ಲಿ ಬಹು ಎತ್ತರವಾದ ಒಂದು ಮರವು ಇದ್ದುದನ್ನು ನಾನು ಕಂಡೆ.
ದಾನಿಯೇಲನು 4 : 11 (ERVKN)
ಆ ಮರವು ಬಹಳ ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಆ ಮರದ ತುದಿಯು ಆಕಾಶಕ್ಕೆ ಮುಟ್ಟಿತ್ತು. ಅದನ್ನು ಭೂಲೋಕದ ಯಾವ ಸ್ಥಳದಿಂದಲಾದರೂ ನೋಡಬಹುದಾಗಿತ್ತು.
ದಾನಿಯೇಲನು 4 : 12 (ERVKN)
ಆ ಮರದ ಎಲೆಗಳು ಸುಂದರವಾಗಿದ್ದವು. ಅದು ತುಂಬ ಒಳ್ಳೆಯ ಹಣ್ಣುಗಳನ್ನು ಫಲಿಸಿತ್ತು. ಆ ಮರದಲ್ಲಿ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಹಾರವಿತ್ತು. ಕಾಡುಪ್ರಾಣಿಗಳೂ ಆ ಮರದ ಕೆಳಗೆ ಆಶ್ರಯವನ್ನು ಪಡೆದಿದ್ದವು. ಅದರ ಕೊಂಬೆಗಳಲ್ಲಿ ಪಕ್ಷಿಗಳು ವಾಸಮಾಡಿಕೊಂಡಿದ್ದವು. ಪ್ರತಿಯೊಂದು ಪ್ರಾಣಿಗೂ ಆ ಮರದಿಂದ ಆಹಾರ ಸಿಕ್ಕುತ್ತಿತ್ತು.
ದಾನಿಯೇಲನು 4 : 13 (ERVKN)
“ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡು ನನ್ನ ದರ್ಶನದಲ್ಲಿ ಅದೆಲ್ಲವನ್ನು ನೋಡುತ್ತಿದ್ದೆ. ಆಗ ಪವಿತ್ರ ದೇವದೂತನೊಬ್ಬನು ಆಕಾಶದಿಂದ ಕೆಳಗಿಳಿದು ಬರುವುದನ್ನು ಕಂಡೆ.
ದಾನಿಯೇಲನು 4 : 14 (ERVKN)
ಅವನು ಮಹಾ ಧ್ವನಿಯಿಂದ, ‘ಮರವನ್ನು ಕಡಿದುಹಾಕಿರಿ; ಅದರ ಕೊಂಬೆಗಳನ್ನು ಕಡಿದುಹಾಕಿರಿ; ಅದರ ಎಲೆಗಳನ್ನು ಕಿತ್ತುಹಾಕಿರಿ; ಹಣ್ಣುಗಳನ್ನು ಸುತ್ತಲೂ ಉದುರಿಸಿಬಿಡಿ. ಮರದ ಕೆಳಗೆ ಇದ್ದ ಪ್ರಾಣಿಗಳು ಓಡಿಹೋಗುವವು. ಅದರ ಕೊಂಬೆಗಳಲ್ಲಿ ವಾಸವಾಗಿದ್ದ ಪಕ್ಷಿಗಳು ಹಾರಿಹೋಗುವವು.
ದಾನಿಯೇಲನು 4 : 15 (ERVKN)
ಆದರೆ ಅದರ ಬೇರುಗಳು ಮತ್ತು ಬುಡದ ಮೋಟು ಭೂಮಿಯಲ್ಲಿ ಉಳಿಯಲಿ. ಅದರ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಮೋಟು ಮತ್ತು ಬೇರುಗಳು ಹೊಲದಲ್ಲಿ ಉಳಿಯಲಿ. ಅದರ ಸುತ್ತ ಹುಲ್ಲು ಬೆಳೆದಿರಲಿ. ಅದು ಅಡವಿಯಲ್ಲಿ ಕಾಡುಪ್ರಾಣಿಗಳ ಮತ್ತು ಸಸಿಗಳ ಜೊತೆಯಲ್ಲಿ ಇರಲಿ; ಅದು ಇಬ್ಬನಿಯಿಂದ ನೆನೆಯಲಿ.
ದಾನಿಯೇಲನು 4 : 16 (ERVKN)
ಅದು ಮನುಷ್ಯನಂತೆ ವಿಚಾರ ಮಾಡುವುದನ್ನು ಬಿಟ್ಟು ಪ್ರಾಣಿಯಂತೆ ವಿಚಾರ ಮಾಡತೊಡಗಲಿ. ಅದು ಈ ಸ್ಥಿತಿಯಲ್ಲಿ ಏಳು ವರ್ಷವಿರಲಿ’ ಎಂದು ಹೇಳಿದನು.
ದಾನಿಯೇಲನು 4 : 17 (ERVKN)
“ಈ ಶಿಕ್ಷೆಯನ್ನು ದೇವದೂತನು ಸಾರಿದನು. ಮಾನವ ಸಾಮ್ರಾಜ್ಯಗಳ ಮೇಲೆ ಮಹೋನ್ನತನಾದ ದೇವರು ಆಳುವನು. ಅವನು ಆ ಸಾಮ್ರಾಜ್ಯಗಳನ್ನು ತನಗೆ ಬೇಕಾದವರಿಗೆ ಒಪ್ಪಿಸುವನು, ಕನಿಷ್ಠರನ್ನು ನೇಮಿಸುವನು ಎಂಬುದು ಲೋಕದ ಜನರಿಗೆಲ್ಲ ತಿಳಿದುಬರಲಿ ಎಂದೇ ಅವನು ಸಾರಿದನು.
ದಾನಿಯೇಲನು 4 : 18 (ERVKN)
“ಅರಸನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು. ಈಗ ನೀನು, ಬೇಲ್ತೆಶಚ್ಚರನೇ (ದಾನಿಯೇಲನೇ), ಇದರ ಅರ್ಥವನ್ನು ನನಗೆ ತಿಳಿಸು. ನನ್ನ ರಾಜ್ಯದಲ್ಲಿರುವ ವಿದ್ವಾಂಸರಲ್ಲಿ ಯಾರೂ ಇದರ ಅರ್ಥವನ್ನು ನನಗೆ ಹೇಳಲಾರರು. ಆದರೆ ನೀನು ಈ ಕನಸಿನ ಅರ್ಥವನ್ನು ತಿಳಿಸಬಲ್ಲೆ. ಏಕೆಂದರೆ ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವದು ನನಗೆ ತಿಳಿದದೆ” ಎಂದೆನು.
ದಾನಿಯೇಲನು 4 : 19 (ERVKN)
ಆಗ ದಾನಿಯೇಲನು (ಬೇಲ್ತೆಶಚ್ಚರನು) ಸುಮಾರು ಒಂದು ಗಂಟೆಯವರೆಗೆ ಮೌನವಾಗಿದ್ದನು. ಅವನ ಬುದ್ಧಿಗೆ ತೋರಿದ ವಿಷಯಗಳು ಅವನನ್ನು ಗಾಬರಿಪಡಿಸಿದವು. ಆಗ ರಾಜನು, “ಬೇಲ್ತೆಶಚ್ಚರನೇ, ಕನಸು ಅಥವಾ ಕನಸಿನ ಅರ್ಥವು ನಿನ್ನನ್ನು ಭಯಗೊಳಿಸದಿರಲಿ” ಎಂದು ಧೈರ್ಯ ಹೇಳಿದನು. ಆಗ ಬೇಲ್ತೆಶಚ್ಚರನು ಅರಸನಿಗೆ, “ನನ್ನ ಒಡೆಯನೇ, ಈ ಕನಸು ನಿನ್ನ ವಿರೋಧಿಗಳಿಗೆ ಫಲಿಸಲಿ. ಇದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ ಎಂದು ನಾನು ಹಾರೈಸುತ್ತೇನೆ.
ದಾನಿಯೇಲನು 4 : 20 (ERVKN)
(20-21) ನೀನು ನಿನ್ನ ಕನಸಿನಲ್ಲಿ ಒಂದು ಮರವನ್ನು ಕಂಡೆ. ಆ ಮರವು ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದು ಭೂಲೋಕದ ಎಲ್ಲೆಡೆಯಿಂದಲೂ ಕಾಣಿಸುತ್ತಿತ್ತು. ಅದರ ಎಲೆಗಳು ಸುಂದರವಾಗಿದ್ದವು: ಅದು ಸಾಕಷ್ಟು ಹಣ್ಣುಗಳನ್ನು ಫಲಿಸಿತ್ತು. ಆ ಹಣ್ಣುಗಳು ಎಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಕೊಟ್ಟವು. ಅದು ಕಾಡುಪ್ರಾಣಿಗಳಿಗೆ ವಾಸಸ್ಥಾನವಾಗಿತ್ತು; ಅದರ ಕೊಂಬೆಗಳು ಪಕ್ಷಿಗಳಿಗೆ ಗೂಡುಕಟ್ಟುವ ಸ್ಥಳಗಳಾಗಿದ್ದವು. ಆ ಮರವನ್ನು ನೀನು ನೋಡಿದೆ.
ದಾನಿಯೇಲನು 4 : 22 (ERVKN)
ಅರಸನೇ, ನೀನೇ ಆ ಮರ. ನೀನು ಪ್ರಖ್ಯಾತನೂ ಮತ್ತು ಪ್ರಬಲನೂ ಆಗಿರುವೆ. ನೀನು ಗಗನಚುಂಬಿಯಾದ ಆ ಮರದಂತೆ ಬೆಳೆದಿರುವೆ. ನಿನ್ನ ಪ್ರಾಬಲ್ಯವು ಈ ಭೂಮಿಯಲ್ಲಿ ದೂರದೂರದವರೆಗೆ ಹಬ್ಬಿದೆ.
ದಾನಿಯೇಲನು 4 : 23 (ERVKN)
“ಅರಸನೇ, ನೀನು ಆಕಾಶದಿಂದ ಇಳಿದುಬರುತ್ತಿದ್ದ ಒಬ್ಬ ಪರಿಶುದ್ಧ ದೇವದೂತನನ್ನು ಕಂಡೆ. ಅವನು, ‘ಮರವನ್ನು ಕಡಿದು ನಾಶಮಾಡಿರಿ. ಅದರ ಬುಡದ ಮೋಟಿನ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಬುಡದ ಮೋಟನ್ನು ಮತ್ತು ಬೇರುಗಳನ್ನು ಭೂಮಿಯಲ್ಲಿ ಬಿಟ್ಟುಬಿಡಿ. ಅದರ ಸುತ್ತಲೂ ಕಾಡಿನ ಹುಲ್ಲು ಬೆಳೆಯಲಿ. ಅದು ಇಬ್ಬನಿಯಿಂದ ತೋಯ್ದು ಹೋಗಲಿ. ಅದು ಕಾಡುಪ್ರಾಣಿಯಂತೆ ಇರುವುದು. ಅದು ಏಳು ವರ್ಷ ಕಳೆಯುವವರೆಗೆ ಹಾಗೆಯೇ ಇರುವುದು’ ಎಂದು ಹೇಳಿದನು.
ದಾನಿಯೇಲನು 4 : 24 (ERVKN)
“ಕನಸಿನ ಅರ್ಥವು ಹೀಗಿದೆ: ಅರಸನೇ, ಮಹೋನ್ನತನಾದ ದೇವರು ನನ್ನ ಒಡೆಯನಾದ ಅರಸನಿಗೆ ಹೀಗಾಗಬೇಕೆಂದು ಆಜ್ಞಾಪಿಸಿದ್ದಾನೆ.
ದಾನಿಯೇಲನು 4 : 25 (ERVKN)
ರಾಜನಾದ ನೆಬೂಕದ್ನೆಚ್ಚರನೇ, ನಿನ್ನನ್ನು ಬಲವಂತದಿಂದ ಜನರಿಂದ ದೂರಮಾಡುವರು. ನೀನು ಕಾಡುಪ್ರಾಣಿಗಳೊಂದಿಗೆ ವಾಸಮಾಡುವೆ; ಹಸುಗಳಂತೆ ಹುಲ್ಲು ತಿನ್ನುವೆ; ಇಬ್ಬನಿಯಿಂದ ತೋಯಿಸಿಕೊಳ್ಳುವೆ. ಏಳು ವರ್ಷಗಳು ಕಳೆಯುವವು. ಆಗ ನೀನು ಮಹೋನ್ನತನಾದ ದೇವರು ಮಾನವರ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ರಾಜ್ಯವನ್ನು ಕೊಡುತ್ತಾನೆ ಎಂಬ ಪಾಠವನ್ನು ಕಲಿಯುವೆ.
ದಾನಿಯೇಲನು 4 : 26 (ERVKN)
“ಮರದ ಬುಡದ ಮೋಟನ್ನು ಮತ್ತು ಅದರ ಬೇರುಗಳನ್ನು ಭೂಮಿಯಲ್ಲಿಯೇ ಬಿಟ್ಟುಬಿಡಿ ಎಂಬುದರ ಅರ್ಥವೇನೆಂದರೆ, ನಿನ್ನ ರಾಜ್ಯವನ್ನು ನಿನಗೆ ಹಿಂತಿರುಗಿಸಲಾಗುವುದು. ಮಹೋನ್ನತನಾದ ದೇವರು ನಿನ್ನ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಎಂಬುದನ್ನು ನೀನು ತಿಳಿದುಕೊಂಡ ಬಳಿಕ ಹೀಗಾಗುವುದು.
ದಾನಿಯೇಲನು 4 : 27 (ERVKN)
ಆದ್ದರಿಂದ ರಾಜನೇ, ನನ್ನ ಬುದ್ಧಿವಾದವನ್ನು ದಯವಿಟ್ಟು ಒಪ್ಪಿಕೊ. ನೀನು ಪಾಪಕೃತ್ಯಗಳನ್ನು ಮಾಡಬೇಡ. ನೀತಿಯನ್ನು ಅನುಸರಿಸು; ಕೆಟ್ಟದ್ದನ್ನು ಮಾಡಬೇಡ. ಬಡಜನರಿಗೆ ಕರುಣೆಯನ್ನು ತೋರು. ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾಗುವುದು. ಇದೇ ನನ್ನ ಬುದ್ಧಿವಾದ” ಎಂದು ಅರಿಕೆ ಮಾಡಿದನು.
ದಾನಿಯೇಲನು 4 : 28 (ERVKN)
ಇದೆಲ್ಲವೂ ಅರಸನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು.
ದಾನಿಯೇಲನು 4 : 29 (ERVKN)
(29-30) ಕನಸು ಕಂಡ ಹನ್ನೆರಡು ತಿಂಗಳುಗಳಾದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿದ್ದ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಮಾಳಿಗೆಯ ಮೇಲಿದ್ದಾಗ ಅರಸನು, “ಈ ಬಾಬಿಲೋನ್ ನಗರವನ್ನು ನೋಡಿ, ನಾನು ಈ ಮಹಾನಗರವನ್ನು ಕಟ್ಟಿದೆ. ಇದು ನನ್ನ ಅರಮನೆ. ನಾನು ನನ್ನ ಸಾಮರ್ಥ್ಯದಿಂದ ಈ ಅರಮನೆಯನ್ನು ಕಟ್ಟಿದೆ. ನಾನು ಎಂಥಾ ದೊಡ್ಡವನು ಎಂದು ಲೋಕಕ್ಕೆ ತೋರಿಸಲು ನಾನು ಈ ಅರಮನೆಯನ್ನು ಕಟ್ಟಿದೆ” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದನು.
ದಾನಿಯೇಲನು 4 : 31 (ERVKN)
ಆ ಶಬ್ದಗಳು ಇನ್ನೂ ಬಾಯಿಯಲ್ಲಿಯೇ ಇದ್ದಾಗ, ಆಕಾಶವಾಣಿಯಾಯಿತು. ಆ ಧ್ವನಿಯು, “ಅರಸನಾದ ನೆಬೂಕದ್ನೆಚ್ಚರನೇ, ನಿನ್ನಿಂದ ನಿನ್ನ ರಾಜಪದವಿಯನ್ನು ಕಿತ್ತುಕೊಳ್ಳಲಾಗಿದೆ.
ದಾನಿಯೇಲನು 4 : 32 (ERVKN)
ಜನರನ್ನು ಬಿಟ್ಟುಹೋಗುವಂತೆ ನಿನ್ನನ್ನು ಒತ್ತಾಯಿಸಲಾಗುವುದು. ನೀನು ಕಾಡುಪ್ರಾಣಿಗಳೊಂದಿಗೆ ವಾಸಿಸುವೆ. ಹಸುಗಳಂತೆ ಹುಲ್ಲು ತಿನ್ನುವೆ; ನೀನು ಪಾಠ ಕಲಿಯುವದಕ್ಕೆ ಏಳು ವರ್ಷ ಬೇಕಾಗುವುದು. ಆಗ ಮಹೋನ್ನತನಾದ ದೇವರು ಮಾನವನ ಸಾಮ್ರಾಜ್ಯಗಳ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ಸಾಮ್ರಾಜ್ಯವನ್ನು ಕೊಡುತ್ತಾನೆ ಎಂಬ ಸತ್ಯವನ್ನು ನೀನು ತಿಳಿದುಕೊಳ್ಳುವೆ” ಎಂದು ನುಡಿಯಿತು.
ದಾನಿಯೇಲನು 4 : 33 (ERVKN)
ಆ ಮಾತುಗಳು ತಕ್ಷಣ ನೆರವೇರಿದವು. ನೆಬೂಕದ್ನೆಚ್ಚರನು ಜನರನ್ನು ಬಿಟ್ಟುಹೋಗಬೇಕಾಯಿತು. ಅವನು ಹಸುಗಳಂತೆ ಹುಲ್ಲು ತಿನ್ನತೊಡಗಿದನು. ಅವನು ಇಬ್ಬನಿಯಿಂದ ನೆನೆದನು. ಅವನ ಕೂದಲುಗಳು ಹದ್ದಿನ ಗರಿಗಳಂತೆ ಬೆಳೆದವು. ಅವನ ಉಗುರುಗಳು ಪಕ್ಷಿಗಳ ಉಗುರುಗಳಂತೆ ಬೆಳೆದವು.
ದಾನಿಯೇಲನು 4 : 34 (ERVKN)
ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ನೋಡಿದೆ. ಆಗ ನಾನು ಸ್ವಸ್ಥ ಬುದ್ಧಿಯುಳ್ಳವನಾಗಿದ್ದೆ. ಬಳಿಕ ನಾನು ಮಹೋನ್ನತನಾದ ದೇವರನ್ನು ಸ್ತುತಿಸಿದೆ. ನಿತ್ಯನಾದ ಆ ದೇವರನ್ನು ಕೊಂಡಾಡಿದೆ. ಸ್ತೋತ್ರಮಾಡಿದೆ. ದೇವರ ಆಳ್ವಿಕೆಯು ಶಾಶ್ವತವಾದದ್ದು! ಆತನ ಸಾಮ್ರಾಜ್ಯವು ಎಲ್ಲಾ ತಲೆಮಾರುಗಳಲ್ಲಿಯೂ ಇರುವುದು.
ದಾನಿಯೇಲನು 4 : 35 (ERVKN)
ಭೂಮಿಯ ಜನರು ಬಹು ಮುಖ್ಯರಲ್ಲ. ದೇವರು ಪರಲೋಕ ಸಮೂಹದವರಿಗೂ ಭೂಲೋಕದ ನಿವಾಸಿಗಳಿಗೂ ತನ್ನ ಚಿತ್ತಾನುಸಾರ ಮಾಡುತ್ತಾನೆ.
ಯಾರೂ ಆತನನ್ನು ತಡೆಯಲಾರರು! ಯಾರೂ ಆತನನ್ನು ಪ್ರಶ್ನಿಸಲಾರರು!
ದಾನಿಯೇಲನು 4 : 36 (ERVKN)
ಆಗ ದೇವರು ನನಗೆ ಸರಿಯಾದ ಬುದ್ಧಿಯನ್ನು ಕೊಟ್ಟನು. ನನಗೆ ರಾಜನ ಗೌರವ, ಪ್ರಭಾವ, ವೈಭವಗಳು ಮತ್ತೆ ಲಭಿಸಿದವು. ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಸ್ವೀಕರಿಸಿದರು. ನಾನು ಮತ್ತೆ ಅರಸನಾದೆನು. ನಾನು ಮೊದಲಿಗಿಂತಲೂ ಅಧಿಕ ಶಕ್ತಿಶಾಲಿಯಾದ ಮತ್ತು ಪ್ರಭಾವಶಾಲಿಯಾದ ಅರಸನಾದೆನು.
ದಾನಿಯೇಲನು 4 : 37 (ERVKN)
ಅರಸ ನೆಬೂಕದ್ನೆಚ್ಚರನಾದ ನಾನು ಈಗ ಪರಲೋಕದ ರಾಜನನ್ನು ಘನಪಡಿಸುತ್ತೇನೆ, ಮಹಿಮೆಪಡಿಸುತ್ತೇನೆ. ಆತನು ಮಾಡುವದೆಲ್ಲ ಸರಿ. ಆತನು ಯಾವಾಗಲೂ ನ್ಯಾಯವಂತನಾಗಿದ್ದಾನೆ. ಆತನು ಗರ್ವಿಷ್ಠರನ್ನು ದೀನರನ್ನಾಗಿ ಮಾಡಬಲ್ಲನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37