ದಾನಿಯೇಲನು 1 : 1 (ERVKN)
ದಾನಿಯೇಲನು ಬಾಬಿಲೋನಿಗೆ ಸೆರೆಯ್ಯೊದ್ದದ್ದು ನೆಬೂಕದ್ನೆಚ್ಚರನು ಬಾಬಿಲೋನಿನ ಅರಸನಾಗಿದ್ದನು. ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದನು. ನೆಬೂಕದ್ನೆಚ್ಚರನು ತನ್ನ ಸೈನ್ಯ ಸಮೇತ ಜೆರುಸಲೇಮಿಗೆ ಮುತ್ತಿಗೆ ಹಾಕಿದನು. ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ *ಯೆಹೋಯಾಕೀಮ … ವರ್ಷ ಅಂದರೆ ಕ್ರಿ.ಪೂ. 605. ಈ ಘಟನೆ ನಡೆಯಿತು.
ದಾನಿಯೇಲನು 1 : 2 (ERVKN)
ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಅವನು ಆಲಯದ ಸಾಮಾಗ್ರಿಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಆ ಸಾಮಾಗ್ರಿಗಳನ್ನು ಅವನು ತನ್ನ ವಿಗ್ರಹಾಲಯದಲ್ಲಿಟ್ಟನು.
ದಾನಿಯೇಲನು 1 : 3 (ERVKN)
ಆಗ ಅರಸನಾದ ನೆಬೂಕದ್ನೆಚ್ಚರನು ಅಶ್ಪೆನಜನಿಗೆ ಆದೇಶಕೊಟ್ಟನು. ಅಶ್ಪೆನಜನು ಅರಸನ ಸೇವೆಯಲ್ಲಿದ್ದ ಎಲ್ಲಾ ಕಂಚುಕಿಯರಿಗೆ ಮುಖಂಡನಾಗಿದ್ದನು. ಅರಸನು ಕೆಲವು ಜನ ಇಸ್ರೇಲರನ್ನು ತನ್ನ ಅರಮನೆಗೆ ಸೇರಿಸಬೇಕೆಂದು ಅಶ್ಪೆನಜನಿಗೆ ಹೇಳಿದನು. ನೆಬೂಕದ್ನೆಚ್ಚರನು ಇಸ್ರೇಲರ ರಾಜವಂಶೀಯರನ್ನು ಮತ್ತು ಪ್ರಮುಖ ಮನೆತನದವರನ್ನು ತನ್ನ ಅರಮನೆಗೆ ಸೇರಿಸಬಯಸಿದನು.
ದಾನಿಯೇಲನು 1 : 4 (ERVKN)
ಅರಸನಾದ ನೆಬೂಕದ್ನೆಚ್ಚರನು ಆರೋಗ್ಯವಂತರೂ ಅಂಗದೋಷವಿಲ್ಲದವರೂ ಸುಂದರರೂ ಬುದ್ಧಿವಂತರೂ ವಿದ್ಯಾನಿಪುಣರೂ ಆಗಿದ್ದ ಯುವಕರನ್ನು ತನ್ನ ಸನ್ನಿಧಿಸೇವೆಗಾಗಿ ಆರಿಸಿಕೊಂಡು ಅವರಿಗೆ ಕಸ್ದೀಯ ಭಾಷೆಯನ್ನೂ ಬರವಣಿಗೆಯನ್ನೂ ಕಲಿಸಬೇಕೆಂದು ಆಜ್ಞೆ ವಿಧಿಸಿದನು.
ದಾನಿಯೇಲನು 1 : 5 (ERVKN)
ಅರಸನಾದ ನೆಬೂಕದ್ನೆಚ್ಚರನು ದಿನಾಲು ಆ ತರುಣರಿಗೆ ತಾನು ಸೇವಿಸುವ ಆಹಾರವನ್ನು ಮತ್ತು ದ್ರಾಕ್ಷಾರಸವನ್ನು ಕೊಡುತ್ತಿದ್ದನು. ಅವರನ್ನು ತನ್ನ ಸೇವಕರನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಮೂರು ವರ್ಷಗಳ ತರಬೇತಿ ಕೊಡಬೇಕೆಂದು ಆಜ್ಞಾಪಿಸಿದನು.
ದಾನಿಯೇಲನು 1 : 6 (ERVKN)
ಆ ತರುಣರಲ್ಲಿ ಯೆಹೂದ ಕುಲಕ್ಕೆ ಸೇರಿದವರಾದ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬವರಿದ್ದರು.
ದಾನಿಯೇಲನು 1 : 7 (ERVKN)
ಅಶ್ಪೆನಜನು ಆ ಯೆಹೂದ್ಯ ತರುಣರಿಗೆ ಬಾಬಿಲೋನಿನ ಹೆಸರುಗಳನ್ನಿಟ್ಟನು. ದಾನಿಯೇಲನ ಹೊಸ ಹೆಸರು ಬೇಲ್ತೆಶಚ್ಚರ್, ಹನನ್ಯನ ಹೊಸ ಹೆಸರು ಶದ್ರಕ್, ಮೀಶಾಯೇಲನ ಹೊಸ ಹೆಸರು ಮೇಶಕ್ ಮತ್ತು ಅಜರ್ಯನ ಹೊಸ ಹೆಸರು ಅಬೇದ್‌ನೆಗೋ.
ದಾನಿಯೇಲನು 1 : 8 (ERVKN)
ದಾನಿಯೇಲನು ಅರಸನ ಪುಷ್ಟಿದಾಯಕ ಆಹಾರವನ್ನು ಮತ್ತು ಪಾನೀಯವನ್ನು ಇಷ್ಟಪಡಲಿಲ್ಲ. ಆ ಆಹಾರ ಮತ್ತು ಪಾನೀಯಗಳಿಂದ ತನ್ನನ್ನು ಅಶುದ್ಧಗೊಳಿಸಿಕೊಳ್ಳಲು ದಾನಿಯೇಲನಿಗೆ ಇಷ್ಟವಿರಲಿಲ್ಲ. ಆದ್ದರಿಂದ ಈ ರೀತಿ ತನ್ನನ್ನು ಅಶುದ್ಧಗೊಳಿಸಿಕೊಳ್ಳದೆ ಇರುವದಕ್ಕಾಗಿ ಅಶ್ಪೆನಜನ ಅಪ್ಪಣೆಯನ್ನು ಕೇಳಿದನು.
ದಾನಿಯೇಲನು 1 : 9 (ERVKN)
ದೇವರು ಅಶ್ಪೆನಜನ ಮನಸ್ಸಿನಲ್ಲಿ ದಾನಿಯೇಲನ ಮೇಲೆ ಕನಿಕರವನ್ನೂ ದಯೆಯನ್ನೂ ಹುಟ್ಟಿಸಿದನು.
ದಾನಿಯೇಲನು 1 : 10 (ERVKN)
ಆದರೆ ಅಶ್ಪೆನಜನು ದಾನಿಯೇಲನಿಗೆ, “ನಾನು ನನ್ನ ಒಡೆಯನಾದ ಅರಸನಿಗೆ ಹೆದರುತ್ತೇನೆ. ಈ ಆಹಾರ ಮತ್ತು ಪಾನೀಯಗಳನ್ನು ನಿನಗೆ ಕೊಡಬೇಕೆಂದು ಅರಸನು ಅಪ್ಪಣೆ ಮಾಡಿದ್ದಾನೆ. ನೀನು ಈ ಆಹಾರವನ್ನು ತೆಗೆದುಕೊಳ್ಳದಿದ್ದರೆ ಅಶಕ್ತನಾಗಿಯೂ ಅಸ್ವಸ್ಥನಾಗಿಯೂ ಕಾಣಿಸುವೆ. ನೀನು ನಿನ್ನ ವಯಸ್ಸಿನ ಬೇರೆ ತರುಣರಿಗಿಂತ ಸೊರಗಿದವನಾಗಿ ಕಾಣುವೆ. ಅರಸನು ಇದನ್ನು ಗಮನಿಸಿ ನನ್ನ ಮೇಲೆ ಕೋಪಗೊಂಡು ನನ್ನ ತಲೆಯನ್ನೇ ಕತ್ತರಿಸಬಹುದು. ಅದಕ್ಕೆ ನೀನೇ ಹೊಣೆಯಾಗುವೆ” ಎಂದನು.
ದಾನಿಯೇಲನು 1 : 11 (ERVKN)
ಆಗ ದಾನಿಯೇಲನು ತಮ್ಮ ಕಾವಲುಗಾರನೊಂದಿಗೆ ಮಾತನಾಡಿದನು. ಅಶ್ಪೆನಜನು ಕಾವಲುಗಾರನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳ ಮೇಲೆ ದೃಷ್ಟಿಯಿಟ್ಟಿರಬೇಕೆಂದು ಆಜ್ಞಾಪಿಸಿದನು.
ದಾನಿಯೇಲನು 1 : 12 (ERVKN)
ದಾನಿಯೇಲನು ಕಾವಲುಗಾರನಿಗೆ, “ದಯವಿಟ್ಟು ಹತ್ತು ದಿನಗಳವರೆಗೆ ನಮ್ಮನ್ನು ಪರೀಕ್ಷಿಸಿರಿ. ತಿನ್ನುವದಕ್ಕೆ ಕಾಯಿಪಲ್ಯ, ಕುಡಿಯುವದಕ್ಕೆ ನೀರು, ಇವುಗಳ ಹೊರತು ನಮಗೆ ಇನ್ನೇನೂ ಕೊಡಬೇಡಿ.
ದಾನಿಯೇಲನು 1 : 13 (ERVKN)
ಹತ್ತು ದಿನಗಳಾದ ಮೇಲೆ ನಮ್ಮನ್ನು ಅರಸನ ಆಹಾರ ಪಾನೀಯಗಳನ್ನು ಸ್ವೀಕರಿಸುವ ತರುಣರ ಜೊತೆಗೆ ಹೋಲಿಸಿ ನೋಡಿರಿ. ಯಾರು ಹೆಚ್ಚು ಆರೋಗ್ಯವಂತರಾಗಿ ಕಾಣುತ್ತಾರೆಂಬುದನ್ನು ನೀವೇ ಪರೀಕ್ಷಿಸಿ ನೋಡಿರಿ. ಆಮೇಲೆ ನಮ್ಮ ವಿಷಯದಲ್ಲಿ ನೀವೇ ತೀರ್ಮಾನಿಸಿರಿ. ನಾವು ನಿಮ್ಮ ಸೇವಕರಾಗಿದ್ದೇವೆ” ಎಂದು ಬೇಡಿಕೊಂಡನು.
ದಾನಿಯೇಲನು 1 : 14 (ERVKN)
ಕಾವಲುಗಾರನು ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳನ್ನು ಹತ್ತು ದಿನಗಳವರೆಗೆ ಪರೀಕ್ಷಿಸಲು ಒಪ್ಪಿಕೊಂಡನು.
ದಾನಿಯೇಲನು 1 : 15 (ERVKN)
ಹತ್ತು ದಿನಗಳ ತರುವಾಯ ದಾನಿಯೇಲ ಮತ್ತು ಅವನ ಸ್ನೇಹಿತರು ಅರಸನ ಆಹಾರವನ್ನು ಊಟಮಾಡಿದ ಇತರ ಎಲ್ಲ ತರುಣರಿಗಿಂತ ಆರೋಗ್ಯವಂತರಾಗಿ ಕಾಣಿಸಿದರು.
ದಾನಿಯೇಲನು 1 : 16 (ERVKN)
ಆದ್ದರಿಂದ ಕಾವಲುಗಾರನು ಅರಸನ ವಿಶೇಷ ಆಹಾರವನ್ನು ಮತ್ತು ದ್ರಾಕ್ಷಾರಸವನ್ನು ತೆಗೆದುಕೊಂಡು ಅದಕ್ಕೆ ಬದಲಾಗಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳಿಗೆ ಕಾಯಿಪಲ್ಯಗಳನ್ನು ಕೊಡಲು ಪ್ರಾರಂಭಿಸಿದನು.
ದಾನಿಯೇಲನು 1 : 17 (ERVKN)
ದೇವರು ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳಿಗೆ ಅನೇಕ ಶಾಸ್ತ್ರಗಳನ್ನೂ ವಿಜ್ಞಾನವನ್ನೂ ಕಲಿಯುವ ಬುದ್ಧಿಸಾಮರ್ಥ್ಯಗಳನ್ನು ದಯಪಾಲಿಸಿದನು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಗ್ರಹಿಸಬಲ್ಲವನಾಗಿದ್ದನು.
ದಾನಿಯೇಲನು 1 : 18 (ERVKN)
ಎಲ್ಲ ತರುಣರು ಮೂರು ವರ್ಷ ತರಬೇತಿ ಪಡೆಯಬೇಕೆಂದು ಅರಸನು ಹೇಳಿದ್ದನು. ಆ ಅವಧಿ ಮುಗಿದ ಮೇಲೆ ಅಶ್ಪೆನಜನು ಆ ಎಲ್ಲ ತರುಣರನ್ನು ಅರಸನಾದ ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆತಂದನು.
ದಾನಿಯೇಲನು 1 : 19 (ERVKN)
ರಾಜನು ಅವರ ಸಂಗಡ ಮಾತಾಡಿದನು. ಅರಸನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರಷ್ಟು ಯೊಗ್ಯರಾದವರು ಆ ಸಮಸ್ತ ಯುವಕರಲ್ಲಿ ಮತ್ತಾರೂ ಕಂಡು ಬರಲಿಲ್ಲ. ಆದ್ದರಿಂದ ಆ ನಾಲ್ಕು ಜನ ಯುವಕರು ರಾಜನ ಸೇವಕರಾದರು.
ದಾನಿಯೇಲನು 1 : 20 (ERVKN)
ಅರಸನು ಮಹತ್ವಪೂರ್ಣವಾದ ವಿಷಯಗಳ ಬಗ್ಗೆ ಅವರನ್ನು ಕೇಳಿದಾಗಲೆಲ್ಲ ಅವರು ಹೆಚ್ಚಿನ ಪ್ರಜ್ಞೆಯನ್ನು, ಬುದ್ಧಿಯನ್ನು ತೋರಿದರು. ಅವರು ಇಡೀ ದೇಶದ ಎಲ್ಲ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿದ್ದಾರೆಂಬುದನ್ನು ಅರಸನು ಕಂಡುಕೊಂಡನು.
ದಾನಿಯೇಲನು 1 : 21 (ERVKN)
ದಾನಿಯೇಲನು ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆ ವರ್ಷದ ಕೋರೆಷನ … ವರ್ಷ ಕ್ರಿ.ಪೂ. 539-538. ತನಕ ಅರಸನ ಸೇವಕನಾಗಿ ಮುಂದುವರಿದನು.

1 2 3 4 5 6 7 8 9 10 11 12 13 14 15 16 17 18 19 20 21