ಕೊಲೊಸ್ಸೆಯವರಿಗೆ 1 : 1 (ERVKN)
ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ.
ಕೊಲೊಸ್ಸೆಯವರಿಗೆ 1 : 2 (ERVKN)
ಕೊಲೊಸ್ಸೆಯಲ್ಲಿರುವ ದೇವಜನರಿಗೆ ಅಂದರೆ ಕ್ರಿಸ್ತನಲ್ಲಿ ನಂಬಿಗಸ್ತರಾದ ಮತ್ತು ಪವಿತ್ರರಾದ ಸಹೋದರ, ಸಹೋದರಿಯರಿಗೆ ನಾನು ಈ ಪತ್ರವನ್ನು ನಮ್ಮ ಸಹೋದರನಾದ ತಿಮೊಥೆಯನ ಜೊತೆಗೂಡಿ ಬರೆಯುತ್ತಿದ್ದೇನೆ. ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಶಾಂತಿಯೂ ದೊರಕಲಿ.
ಕೊಲೊಸ್ಸೆಯವರಿಗೆ 1 : 3 (ERVKN)
ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯೇ ದೇವರು.
ಕೊಲೊಸ್ಸೆಯವರಿಗೆ 1 : 4 (ERVKN)
ನಾವು ದೇವರಿಗೆ ಸ್ತೋತ್ರ ಮಾಡಲು ಕಾರಣವೇನೆಂದರೆ ಕ್ರಿಸ್ತ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ, ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದ್ದೇವೆ.
ಕೊಲೊಸ್ಸೆಯವರಿಗೆ 1 : 5 (ERVKN)
(5-6) ನಿಮಗೆ ನಿರೀಕ್ಷೆ ಇರುವುದರಿಂದಲೇ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದೀರಿ ಮತ್ತು ದೇವಜನರನ್ನು ಪ್ರೀತಿಸುತ್ತೀರಿ. ನೀವು ನಿರೀಕ್ಷಿಸುವಂಥವುಗಳು ನಿಮಗೋಸ್ಕರ ಪರಲೋಕದಲ್ಲಿ ಸಿದ್ಧ ಮಾಡಲ್ಪಟ್ಟಿವೆ ಎಂಬುದು ನಿಮಗೆ ತಿಳಿದಿದೆ. ನಿಮಗೆ ತಿಳಿಸಲಾದ ಸತ್ಯವಾಕ್ಯವನ್ನು ಅಂದರೆ ಸುವಾರ್ತೆಯನ್ನು ನೀವು ಕೇಳಿದಾಗ ಈ ನಿರೀಕ್ಷೆಯ ಬಗ್ಗೆ ತಿಳಿದುಕೊಂಡಿರಿ. ನೀವು ಸುವಾರ್ತೆಯನ್ನು ಕೇಳಿ ದೇವರ ಕೃಪೆಯ ಸತ್ಯಾರ್ಥವನ್ನು ತಿಳಿದುಕೊಂಡಂದಿನಿಂದ ಸುವಾರ್ತೆಯು ನಿಮ್ಮಲ್ಲಿ ವೃದ್ಧಿಯಾಗುತ್ತಿದೆ ಮತ್ತು ಜನರಿಗೆ ಆಶೀರ್ವಾದಕರವಾಗಿದೆ. ಅದೇ ರೀತಿ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸುವಾರ್ತೆಯು ವೃದ್ಧಿಯಾಗುತ್ತಿದೆ ಮತ್ತು ಆಶೀರ್ವಾದಕರವಾಗಿದೆ.
ಕೊಲೊಸ್ಸೆಯವರಿಗೆ 1 : 6 (ERVKN)
ಕೊಲೊಸ್ಸೆಯವರಿಗೆ 1 : 7 (ERVKN)
ನೀವು ಎಪಫ್ರನಿಂದ ದೇವರ ಕೃಪೆಯ ಬಗ್ಗೆ ತಿಳಿದುಕೊಂಡಿರಿ. ಅವನು ನಮ್ಮ ಜೊತೆಯಲ್ಲಿಯೇ ಸೇವೆ ಮಾಡುತ್ತಿದ್ದಾನೆ. ನಾವು ಅವನನ್ನು ಪ್ರೀತಿಸುತ್ತೇವೆ. ಅವನು ನಮಗೋಸ್ಕರ ಕ್ರಿಸ್ತನ ನಂಬಿಗಸ್ತ ಸೇವಕನಾಗಿದ್ದಾನೆ.
ಕೊಲೊಸ್ಸೆಯವರಿಗೆ 1 : 8 (ERVKN)
ಪವಿತ್ರಾತ್ಮ ಪ್ರೇರಿತವಾದ ನಿಮ್ಮ ಪ್ರೀತಿಯ ಬಗ್ಗೆ ಎಪಫ್ರನು ಸಹ ನಮಗೆ ತಿಳಿಸಿದನು.
ಕೊಲೊಸ್ಸೆಯವರಿಗೆ 1 : 9 (ERVKN)
ನಿಮ್ಮ ಬಗ್ಗೆ ಈ ಸಂಗತಿಗಳನ್ನು ಕೇಳಿದ ದಿನದಿಂದ, ನಿಮಗೋಸ್ಕರ ಎಡಬಿಡದೆ ಪ್ರಾರ್ಥಿಸುತ್ತಿದ್ದೇವೆ. ದೇವರು ಅಪೇಕ್ಷಿಸುವ ಸಂಗತಿಗಳೆಲ್ಲವನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳಬೇಕೆಂತಲೂ ಆತ್ಮಿಕ ಸಂಗತಿಗಳಲ್ಲಿ ಮಹಾಜ್ಞಾನವನ್ನು ಮತ್ತು ತಿಳುವಳಿಕೆಯನ್ನು ಹೊಂದಿಕೊಳ್ಳಬೇಕೆಂತಲೂ
ಕೊಲೊಸ್ಸೆಯವರಿಗೆ 1 : 10 (ERVKN)
ಪ್ರಭುವಿಗೆ ಯೋಗ್ಯರಾಗಿ ನಡೆದು ಪ್ರತಿಯೊಂದು ವಿಷಯದಲ್ಲಿ ಆತನನ್ನು ಸಂತೋಷಪಡಿಸಬೇಕೆಂತಲೂ ನೀವು ಎಲ್ಲಾ ವಿಧವಾದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ದೇವಜ್ಞಾನದಲ್ಲಿ ಬೆಳಯಬೇಕೆಂತಲೂ
ಕೊಲೊಸ್ಸೆಯವರಿಗೆ 1 : 11 (ERVKN)
ಆತನ ಮಹಿಮಾಶಕ್ತಿಯಿಂದ ಪರಿಪೂರ್ಣ ಬಲ ಹೊಂದಿ ಆನಂದಪೂರ್ವಕವಾದ ತಾಳ್ಮೆಯನ್ನು, ದೀರ್ಘಶಾಂತಿಯನ್ನು ಯಾವಾಗಲೂ ತೋರಿಸುವವರಾಗಿರಬೇಕೆಂತಲೂ ನಾವು ಪ್ರಾರ್ಥಿಸುತ್ತಿದ್ದೇವೆ.
ಕೊಲೊಸ್ಸೆಯವರಿಗೆ 1 : 12 (ERVKN)
ಆಗ ನೀವು ಆನಂದದಿಂದ ತಂದೆಗೆ ಕೃತಜ್ಞತಾಸ್ತುತಿ ಮಾಡಬಲ್ಲಿರಿ. ಬೆಳಕಿನಲ್ಲಿ ವಾಸಿಸುವ ತನ್ನ ಜನರೆಲ್ಲರಿಗೂ ಆತನು ಸಿದ್ಧಪಡಿಸಿರುವಂಥವುಗಳನ್ನು ಹೊಂದಿಕೊಳ್ಳಲು ಆತನೇ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದನು.
ಕೊಲೊಸ್ಸೆಯವರಿಗೆ 1 : 13 (ERVKN)
ದೇವರು ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡುಗಡೆ ಮಾಡಿದ್ದಾನೆ. ಆತನು ನಮ್ಮನ್ನು ತನ್ನ ಪ್ರಿಯ ಮಗನ (ಯೇಸುವಿನ) ರಾಜ್ಯದೊಳಗೆ ಸೇರಿಸಿದ್ದಾನೆ.
ಕೊಲೊಸ್ಸೆಯವರಿಗೆ 1 : 14 (ERVKN)
ಮಗನು ನಮ್ಮ ಪಾಪಗಳಿಗೆ ಪರಿಹಾರ ನೀಡಿದನು. ಆತನಲ್ಲಿಯೇ ನಮ್ಮ ಪಾಪಗಳಿಗೆ ಕ್ಷಮೆ ದೊರೆಯಿತು.
ಕೊಲೊಸ್ಸೆಯವರಿಗೆ 1 : 15 (ERVKN)
ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ. ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ. ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
ಕೊಲೊಸ್ಸೆಯವರಿಗೆ 1 : 16 (ERVKN)
ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು, ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು, ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.
ಕೊಲೊಸ್ಸೆಯವರಿಗೆ 1 : 17 (ERVKN)
ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು. ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
ಕೊಲೊಸ್ಸೆಯವರಿಗೆ 1 : 18 (ERVKN)
ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ. ಪ್ರತಿಯೊಂದೂ ಆತನಿಂದಲೇ ಬರುತ್ತದೆ. ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.
ಕೊಲೊಸ್ಸೆಯವರಿಗೆ 1 : 19 (ERVKN)
ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
ಕೊಲೊಸ್ಸೆಯವರಿಗೆ 1 : 20 (ERVKN)
ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.
ಕೊಲೊಸ್ಸೆಯವರಿಗೆ 1 : 21 (ERVKN)
ಒಂದು ಕಾಲದಲ್ಲಿ ನೀವು ದೇವರಿಂದ ಬೇರ್ಪಟ್ಟಿದ್ದಿರಿ, ದುಷ್ಕೃತ್ಯಗಳನ್ನು ಮಾಡುತ್ತಾ ನಿಮ್ಮ ಮನಸ್ಸುಗಳಲ್ಲಿ ದೇವರಿಗೆ ಶತ್ರುಗಳಾಗಿದ್ದಿರಿ.
ಕೊಲೊಸ್ಸೆಯವರಿಗೆ 1 : 22 (ERVKN)
ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು.
ಕೊಲೊಸ್ಸೆಯವರಿಗೆ 1 : 23 (ERVKN)
ನೀವು ಕೇಳಿದ ಸುವಾರ್ತೆಯ ಮೇಲೆ ನಿಮಗಿರುವ ನಂಬಿಕೆಯಲ್ಲಿ ದೃಢವಾಗಿ ನೆಲೆಗೊಂಡಿದ್ದು ಅದರಿಂದುಂಟಾಗುವ ನಿರೀಕ್ಷೆಯನ್ನು ಬಿಟ್ಟು ಹೋಗದಿದ್ದರೆ ಇದು ಸಾಧ್ಯ. ಈ ಸುವಾರ್ತೆಯನ್ನು ಪ್ರಪಂಚದ ಜನರಿಗೆಲ್ಲ ಸಾರಲಾಗಿದೆ. ಪೌಲನಾದ ನಾನು ಈ ಸುವಾರ್ತೆಯನ್ನು ಸಾರುವ ಸೇವಕನಾದೆನು.
ಕೊಲೊಸ್ಸೆಯವರಿಗೆ 1 : 24 (ERVKN)
ಸಭೆಗಾಗಿ ಪೌಲನ ಕಾರ್ಯ ನಾನು ನಿಮಗಾಗಿ ಅನುಭವಿಸಿದ ಬಾಧೆಗಳಿಂದ ನನಗೆ ಸಂತೋಷವಾಗಿದೆ. ಕ್ರಿಸ್ತನು ಸಭೆಯೆಂಬ ತನ್ನ ದೇಹದ ಮೂಲಕ ಇನ್ನೂ ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಈ ಸಂಕಟಗಳಲ್ಲಿ ನಾನು ಅನುಭವಿಸಬೇಕಾದವುಗಳನ್ನು ಆತನ ದೇಹಕ್ಕೋಸ್ಕರ ನನ್ನ ದೇಹದಲ್ಲಿ ಅನುಭವಿಸುತ್ತೇನೆ.
ಕೊಲೊಸ್ಸೆಯವರಿಗೆ 1 : 25 (ERVKN)
ನಾನು ಸಭೆಗೆ ಸೇವಕನಾದೆನು. ಏಕೆಂದರೆ ದೇವರು ನನಗೆ ವಿಶೇಷವಾದ ಕಾರ್ಯವನ್ನು ಮಾಡುವಂತೆ ಆಜ್ಞಾಪಿಸಿದನು. ಈ ಕಾರ್ಯವು ನಿಮಗೆ ಸಹಾಯ ಮಾಡುವುದು. ದೇವರ ಉಪದೇಶವನ್ನು ಸಂಪೂರ್ಣವಾಗಿ ತಿಳಿಸುವುದೇ ಆ ಕಾರ್ಯ.
ಕೊಲೊಸ್ಸೆಯವರಿಗೆ 1 : 26 (ERVKN)
ಆದಿಕಾಲದಿಂದಲೂ ಅಡಗಿಸಿಟ್ಟಿದ್ದ ರಹಸ್ಯಸತ್ಯವೇ ಈ ಉಪದೇಶ. ಈ ಸತ್ಯವನ್ನು ಎಲ್ಲಾ ಜನರಿಗೆ ಮರೆಮಾಡಲಾಗಿತ್ತು. ಈಗಲಾದರೋ ಈ ರಹಸ್ಯಸತ್ಯವನ್ನು ದೇವರ ಪವಿತ್ರ ಜನರಿಗೆ ತಿಳಿಸಲಾಗಿದೆ.
ಕೊಲೊಸ್ಸೆಯವರಿಗೆ 1 : 27 (ERVKN)
ಮಹಿಮಾತಿಶಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲು ದೇವರು ತೀರ್ಮಾನಿಸಿದನು. ಈ ಮಹಾಸತ್ಯವು ಎಲ್ಲಾ ಜನರಿಗಾಗಿ ಪ್ರಕಟವಾಯಿತು. ನಿಮ್ಮಲ್ಲಿರುವ ಕ್ರಿಸ್ತನೇ ಆ ಸತ್ಯವಾಗಿದ್ದಾನೆ. ದೇವರ ಮಹಿಮೆಯಲ್ಲಿ ಪಾಲುಹೊಂದಲು ಆತನೇ ನಮಗಿರುವ ಏಕೈಕ ನಿರೀಕ್ಷೆ.
ಕೊಲೊಸ್ಸೆಯವರಿಗೆ 1 : 28 (ERVKN)
ಆದ್ದರಿಂದಲೇ ನಾವು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುವವರಾಗಿದ್ದೇವೆ. ಪ್ರತಿಯೊಬ್ಬರನ್ನೂ ಬಲಪಡಿಸುವುದಕ್ಕಾಗಿ ಪ್ರತಿಯೊಬ್ಬರಿಗೂ ಉಪದೇಶಿಸುವುದಕ್ಕಾಗಿ ನಮ್ಮ ಜ್ಞಾನವನ್ನೆಲ್ಲಾ ಉಪಯೋಗಿಸುತ್ತೇವೆ. ಪ್ರತಿಯೊಬ್ಬರನ್ನು ಕ್ರಿಸ್ತನಲ್ಲಿ ಸಂಪೂರ್ಣ ಆತ್ಮಿಕರನ್ನಾಗಿ ಮಾಡಿ ದೇವರ ಸನ್ನಿಧಿಗೆ ತರಲು ಪ್ರಯತ್ನಿಸುತ್ತೇವೆ.
ಕೊಲೊಸ್ಸೆಯವರಿಗೆ 1 : 29 (ERVKN)
ಕ್ರಿಸ್ತನು ನನಗೆ ನೀಡಿರುವ ಬಲದಿಂದ ಇದಕ್ಕೋಸ್ಕರವೇ ಕೆಲಸ ಮಾಡುತ್ತೇನೆ ಮತ್ತು ಹೋರಾಡುತ್ತೇನೆ. ಆ ಬಲವೇ ನನ್ನ ಜೀವನದಲ್ಲಿ ಕಾರ್ಯಮಾಡುತ್ತಿದೆ.
❮
❯