ಆಮೋಸ 2 : 1 (ERVKN)
ಮೋವಾಬ್ಯರಿಗೆ ಶಿಕ್ಷೆ ಯೆಹೋವನು ಹೇಳುವುದೇನೆಂದರೆ, “ಮೋವಾಬ್ಯರು ಅನೇಕ ಅಪರಾಧಗಳನ್ನು ಮಾಡಿದ್ದರಿಂದ ನಾನು ಖಂಡಿತವಾಗಿಯೂ ಅವರನ್ನು ಶಿಕ್ಷಿಸುವೆನು. ಎದೋಮ್ಯರ ಅರಸನ ಎಲುಬುಗಳನ್ನು ಮೋವಾಬ್ಯರು ಸುಟ್ಟು ಸುಣ್ಣವಾಗಿ ಮಾಡಿದರು.
ಆಮೋಸ 2 : 2 (ERVKN)
ಆದ್ದರಿಂದ ಮೋವಾಬಿನಲ್ಲಿ ನಾನು ಬೆಂಕಿಯನ್ನು ಹಾಕುವೆನು. ಅದು ಕೆರಿಯೋತಿನ ಉನ್ನತ ಗೋಪುರಗಳನ್ನು ನಾಶಮಾಡುವದು. ಅಲ್ಲಿ ಭಯಂಕರವಾದ ಕೂಗಾಟವೂ ತುತ್ತೂರಿಯ ಧ್ವನಿಯೂ ಇರುತ್ತದೆ. ಆಗ ಮೋವಾಬು ಸಾಯುವದು.
ಆಮೋಸ 2 : 3 (ERVKN)
ಹೀಗೆ ನಾನು ಮೋವಾಬಿನ ಅರಸರಿಗೆ ಅಂತ್ಯವನ್ನು ಮಾಡುವೆನು. ಮೋವಾಬಿನ ಎಲ್ಲಾ ನಾಯಕರುಗಳನ್ನು ಸಾಯಿಸುವೆನು” ಇದು ಯೆಹೋವನ ನುಡಿ.
ಆಮೋಸ 2 : 4 (ERVKN)
ಯೆಹೂದಕ್ಕೆ ಶಿಕ್ಷೆ ಯೆಹೋವನು ಹೇಳುವುದೇನೆಂದರೆ, “ಯೆಹೂದ ಜನರ ಅನೇಕ ಅಪರಾಧಗಳಿಗಾಗಿ ಅವರನ್ನು ಖಂಡಿತವಾಗಿಯೂ ದಂಡಿಸುವೆನು. ಯಾಕೆಂದರೆ ಅವರು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲಿಲ್ಲ. ಅವರ ಪೂರ್ವಿಕರು ಸುಳ್ಳನ್ನು ನಂಬಿದರು. ಆ ಸುಳ್ಳುಗಳಿಂದ ಅವರು ನನ್ನನ್ನು ಹಿಂಬಾಲಿಸಲಿಲ್ಲ.
ಆಮೋಸ 2 : 5 (ERVKN)
ಆದ್ದರಿಂದ ನಾನು ಯೆಹೂದದಲ್ಲಿ ಬೆಂಕಿಯನ್ನು ಹಚ್ಚುವೆನು; ಆ ಬೆಂಕಿಯು ಜೆರುಸಲೇಮಿನ ಉನ್ನತ ಬುರುಜುಗಳನ್ನು ನಾಶಮಾಡುವದು.”
ಆಮೋಸ 2 : 6 (ERVKN)
ಇಸ್ರೇಲಿನ ಶಿಕ್ಷೆ ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ಇಸ್ರೇಲನ್ನು ನಾನು ಖಂಡಿತವಾಗಿಯೂ ದಂಡಿಸುವೆನು. ಯಾಕೆಂದರೆ ಅವರು ಸ್ವಲ್ಪ ಬೆಳ್ಳಿಗಾಗಿ ಒಳ್ಳೆಯವರನ್ನೂ ಮತ್ತು ನಿರಪರಾಧಿಗಳನ್ನೂ ಮಾರಿದರು; ಒಂದು ಜೊತೆ ಕೆರಗಳ ಕ್ರಯಕ್ಕೆ ಬಡ ಜನರನ್ನು ಮಾರಿದರು.
ಆಮೋಸ 2 : 7 (ERVKN)
ಆ ಬಡಜನರ ಮುಖವನ್ನು ನೆಲದ ಮೇಲೆ ದೂಡಿ ಅವರ ಮೇಲೆ ನಡೆದರು. ಕಷ್ಟ ಅನುಭವಿಸುವ ಜನರ ಮೊರೆಯನ್ನು ಅವರು ಲಾಲಿಸದೆ ಹೋದರು. ತಂದೆಗಳೂ ಗಂಡುಮಕ್ಕಳೂ ಒಬ್ಬ ತರುಣಿಯೊಂದಿಗೇ ಲೈಂಗಿಕ ಸಂಬಂಧವನ್ನಿಟ್ಟುಕೊಂಡರು. ನನ್ನ ಪವಿತ್ರನಾಮವನ್ನು ಹಾಳುಮಾಡಿದರು.
ಆಮೋಸ 2 : 8 (ERVKN)
ಬಡಜನರ ಬಟ್ಟೆಗಳನ್ನು ತೆಗೆದುಕೊಂಡು ತಾವು ವೇದಿಕೆಯ ಮೇಲೆ ಯಜ್ಞ ಮಾಡುತ್ತಿರುವಾಗ ಆ ಬಟ್ಟೆಗಳ ಮೇಲೆ ಕುಳಿತುಕೊಳ್ಳುವರು. ಬಡವರಿಗೆ ಸಾಲಕೊಟ್ಟು ಅವರು ಬಟ್ಟೆಗಳನ್ನು ಒತ್ತೆಗೆ ತೆಗೆದುಕೊಳ್ಳುವರು. ಅವರು ಜನರಿಗೆ ದಂಡ ವಿಧಿಸಿ, ಆ ಹಣದಿಂದ ದ್ರಾಕ್ಷಾರಸವನ್ನು ಕೊಂಡುಕೊಂಡು ದೇವರ ಆಲಯದಲ್ಲಿ ಕುಡಿಯುವರು.
ಆಮೋಸ 2 : 9 (ERVKN)
“ಆದರೆ ಅವರ ಎದುರಿನಲ್ಲಿ ಅಮೋರಿಯರನ್ನು ನಾಶಮಾಡಿದವನು ನಾನೇ, ಅಮೋರಿಯರು ದೇವದಾರು ಮರಗಳಂತೆ ಎತ್ತರವೂ, ಅಲ್ಲೊನ್ ಮರಗಳಂತೆ ಬಲಶಾಲಿಗಳೂ ಆಗಿದ್ದರು. ಆದರೆ ನಾನು ಕೆಳಗಿನಿಂದ ಅವರ ಬೇರನ್ನೂ ಮೇಲಿನಿಂದ ಅವರ ಫಲಗಳನ್ನೂ ನಾಶಮಾಡಿದೆನು.
ಆಮೋಸ 2 : 10 (ERVKN)
“ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರತಂದವನು ನಾನೇ. ನಲವತ್ತು ವರ್ಷಗಳ ತನಕ ನಾನು ಅಡವಿಯಲ್ಲಿ ನಿಮ್ಮನ್ನು ನಡಿಸಿದೆನು. ನಾನು ಅಮೋರಿಯರ ದೇಶವನ್ನು ಸ್ವಾಧೀನಪಡಿಸಲು ಅವರಿಗೆ ಸಹಾಯ ಮಾಡಿದೆನು.
ಆಮೋಸ 2 : 11 (ERVKN)
ನಿಮ್ಮ ಕೆಲವು ಗಂಡುಮಕ್ಕಳನ್ನು ನಾನು ಪ್ರವಾದಿಗಳನ್ನಾಗಿ ಮಾಡಿದೆನು. ಇನ್ನು ಕೆಲವರನ್ನು ನಾಜೀರರನ್ನಾಗಿ ಮಾಡಿದೆನು. ಇಸ್ರೇಲ್ ಜನರೇ, ಇವು ಸತ್ಯವಾದ ಮಾತುಗಳು,” ಇವು ಯೆಹೋವನ ನುಡಿಗಳು.
ಆಮೋಸ 2 : 12 (ERVKN)
“ಆದರೆ ನೀವು ನಾಜೀರರನ್ನು ದ್ರಾಕ್ಷಾರಸ ಕುಡಿಯುವಂತೆ ಮಾಡಿದಿರಿ. ಪ್ರವಾದಿಗಳನ್ನು ಪ್ರವಾದಿಸಬೇಡಿ ಎಂದು ಹೇಳಿದಿರಿ.
ಆಮೋಸ 2 : 13 (ERVKN)
ನೀವು ನನಗೆ ಬಹು ಭಾರವಾಗಿದ್ದೀರಿ. ಬಂಡಿಯಲ್ಲಿ ಒತ್ತಿ ತುಂಬಿಸಿದಾಗ ಹೇಗೆ ಬಗ್ಗುತ್ತದೋ ಅದೇ ರೀತಿಯಲ್ಲಿ ನಾನು ಬಹುವಾಗಿ ಬಗ್ಗಿರುತ್ತೇನೆ. ಆದರೆ ನಾನು ನಿಮ್ಮನ್ನು ಅದೇ ರೀತಿಯಲ್ಲಿ ಬಗ್ಗಿಸುತ್ತೇನೆ. *ಬಗ್ಗಿಸುತ್ತೇನೆ ಬಹುಶಃ, “ನಾನು ನಿಮಗೆ ತೊಂದರೆ ಕೊಡುತ್ತೇನೆ.”
ಆಮೋಸ 2 : 14 (ERVKN)
ಯಾರೂ ತಪ್ಪಿಸಿಕೊಳ್ಳಲಾರರು. ಅತಿ ವೇಗವಾದ ಓಟಗಾರರೂ ತಪ್ಪಿಸಿಕೊಳ್ಳಲಾರರು. ಬಲಶಾಲಿಗಳಿಗೂ ಶಕ್ತಿ ಸಾಲದು. ಸಿಪಾಯಿಗಳಿಗೂ ತಮ್ಮನ್ನು ಕಾಪಾಡಿಕೊಳ್ಳಲಾಗದು.
ಆಮೋಸ 2 : 15 (ERVKN)
ಬಿಲ್ಲುಬಾಣ ಹಿಡಿದಿರುವವರೂ ಉಳಿಯರು. ವೇಗದ ಓಟಗಾರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕುದುರೆ ಮೇಲಿನ ಸವಾರರು ಜೀವಸಹಿತ ತಪ್ಪಿಸಿಕೊಳ್ಳುವುದಿಲ್ಲ.
ಆಮೋಸ 2 : 16 (ERVKN)
ಆ ಸಮಯದಲ್ಲಿ ಅತಿ ಧೈರ್ಯಶಾಲಿಗಳೂ ರಣವೀರರೂ ಓಡಿಬಿಡುವರು. ತಮ್ಮ ಬಟ್ಟೆಗಳನ್ನು ಧರಿಸಿಕೊಳ್ಳಲೂ ಅವರಿಗೆ ಸಮಯವಿರುವುದಿಲ್ಲ.” ಇವು ಯೆಹೋವನ ನುಡಿ.

1 2 3 4 5 6 7 8 9 10 11 12 13 14 15 16