2 ತಿಮೊಥೆಯನಿಗೆ 1 : 1 (ERVKN)
ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ದೇವರ ಚಿತ್ತಾನುಸಾರವಾಗಿ ನಾನು ಅಪೊಸ್ತಲನಾದೆನು. ಕ್ರಿಸ್ತ ಯೇಸುವಿನಲ್ಲಿರುವ ಜೀವ ವಾಗ್ದಾನವನ್ನು ಜನರಿಗೆ ತಿಳಿಯಪಡಿಸಲು ದೇವರು ನಮ್ಮನ್ನು ಕಳುಹಿಸಿದನು.
2 ತಿಮೊಥೆಯನಿಗೆ 1 : 2 (ERVKN)
ತಿಮೊಥೆಯನೇ, ನೀನು ನನಗೆ ಪ್ರಿಯ ಮಗನಂತಿರುವೆ. ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಲಭಿಸಲಿ.
2 ತಿಮೊಥೆಯನಿಗೆ 1 : 3 (ERVKN)
ಕೃತಜ್ಞತಾಸ್ತುತಿ ಮತ್ತು ಪ್ರೋತ್ಸಾಹ ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ತಪ್ಪದೆ ನಿನ್ನನ್ನು ಜ್ಞಾಪಿಸಿಕೊಂಡು ನಿನ್ನ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇನೆ. ನನ್ನ ಪೂರ್ವಿಕರು ಸೇವೆ ಸಲ್ಲಿಸಿದ್ದು ಆತನಿಗೇ. ಯೋಗ್ಯವಾದದ್ದೆಂದು ನನಗೆ ತಿಳಿದಿರುವುದನ್ನೇ ಮಾಡುತ್ತಾ ಆತನ ಸೇವೆ ಮಾಡುತ್ತಿದ್ದೇನೆ.
2 ತಿಮೊಥೆಯನಿಗೆ 1 : 4 (ERVKN)
ನೀನು ನನಗಾಗಿ ಕಣ್ಣೀರು ಸುರಿಸಿದ್ದು ನನ್ನ ನೆನಪಿನಲ್ಲಿದೆ. ನಿನ್ನನ್ನು ನೋಡಬೇಕೆಂದು ಬಹಳ ಆಸೆಯಾಗಿದೆ. ನಿನ್ನನ್ನು ನೋಡಿದಾಗ ನನ್ನಲ್ಲಿ ಆನಂದವು ತುಂಬಿಹೋಗುವುದು.
2 ತಿಮೊಥೆಯನಿಗೆ 1 : 5 (ERVKN)
ನಿನ್ನ ನಿಜವಾದ ನಂಬಿಕೆಯು ನನ್ನ ನೆನಪಿನಲ್ಲಿದೆ. ಆ ವಿಧವಾದ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಲ್ಲೂ ನಿನ್ನ ತಾಯಿಯಾದ ಯೂನಿಕೆಯಲ್ಲೂ ಇತ್ತು. ಈಗ ಅದೇ ನಂಬಿಕೆಯು ನಿನ್ನಲ್ಲಿಯೂ ಇದೆಯೆಂದು ನನಗೆ ತಿಳಿದಿದೆ.
2 ತಿಮೊಥೆಯನಿಗೆ 1 : 6 (ERVKN)
ದೇವರು ನಿನಗೆ ದಯಪಾಲಿಸಿರುವ ವರವನ್ನು ನೀನು ನೆನಪು ಮಾಡಿಕೊಳ್ಳಬೇಕೆಂದು ನಾನು ಅಪೇಕ್ಷಿಸುವುದು ಈ ಕಾರಣದಿಂದಲೇ. ನಾನು ನನ್ನ ಕೈಗಳನ್ನು ನಿನ್ನ ಮೇಲಿಟ್ಟಾಗ ಆತನು ನಿನಗೆ ಆ ವರವನ್ನು ದಯಪಾಲಿಸಿದನು. ಬೆಂಕಿಯ ಕಿಡಿಯು ಪ್ರಜ್ವಲವಾಗಿ ದಟ್ಟವಾದ ಬೆಂಕಿಯಾಗುವಂತೆ ನಿನ್ನ ವರವನ್ನು ಉಪಯೋಗಿಸುತ್ತಾ ಅದನ್ನು ಅಧಿಕಗೊಳಿಸಬೇಕೆಂಬುದು ನನ್ನ ಅಪೇಕ್ಷೆ.
2 ತಿಮೊಥೆಯನಿಗೆ 1 : 7 (ERVKN)
ದೇವರು ನಮಗೆ ಕೊಟ್ಟದ್ದು ನಮ್ಮನ್ನು ಹೇಡಿಗಳನ್ನಾಗಿ ಮಾಡುವ ಆತ್ಮವನ್ನಲ್ಲ. ನಮ್ಮನ್ನು ಬಲದಿಂದ, ಪ್ರೀತಿಯಿಂದ ಮತ್ತು ಸ್ವಶಿಕ್ಷಣದಿಂದ ತುಂಬಿಸುವ ಆತ್ಮವನ್ನು ಆತನು ಕೊಟ್ಟನು.
2 ತಿಮೊಥೆಯನಿಗೆ 1 : 8 (ERVKN)
ನಮ್ಮ ಪ್ರಭುವಾದ ಯೇಸುವನ್ನು ಕುರಿತು ಜನರಿಗೆ ತಿಳಿಸುವುದಕ್ಕಾಗಲಿ ಪ್ರಭುವಿಗಾಗಿ ಸೆರೆಯಲ್ಲಿರುವ ನನ್ನ ವಿಷಯದಲ್ಲಾಗಲಿ ನಾಚಿಕೆಪಟ್ಟುಕೊಳ್ಳಬೇಡ. ಅದಕ್ಕೆ ಬದಲಾಗಿ ಸುವಾರ್ತೆಗೋಸ್ಕರ ನನ್ನೊಡನೆ ಸಂಕಟವನ್ನು ಅನುಭವಿಸು. ಅದಕ್ಕೆ ಬೇಕಾದ ಶಕ್ತಿಯನ್ನು ದೇವರೇ ನಮಗೆ ದಯಪಾಲಿಸುತ್ತಾನೆ.
2 ತಿಮೊಥೆಯನಿಗೆ 1 : 9 (ERVKN)
ಆತನು ನಮ್ಮನ್ನು ರಕ್ಷಿಸಿ, ತನ್ನ ಪವಿತ್ರ ಜನರಾಗಿರುವುದಕ್ಕಾಗಿ ನಮ್ಮನ್ನು ಕರೆದನು. ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದ ಹೀಗಾಯಿತು ಎಂದಲ್ಲ. ಆತನು ತನ್ನ ಸಂಕಲ್ಪಕ್ಕನುಸಾರವಾಗಿ ಮತ್ತು ಕೃಪೆಗನುಸಾರವಾಗಿ ನಮ್ಮನ್ನು ರಕ್ಷಿಸಿ ತನ್ನವರನ್ನಾಗಿ ಮಾಡಿದನು. ಅನಾದಿಕಾಲದಲ್ಲಿಯೇ ಈ ಕೃಪೆಯು ಕ್ರಿಸ್ತ ಯೇಸುವಿನ ಮೂಲಕ ನಮಗೆ ದೊರೆಯಿತು.
2 ತಿಮೊಥೆಯನಿಗೆ 1 : 10 (ERVKN)
ಆ ಕೃಪೆಯನ್ನು ಈವರೆಗೆ ನಮಗೆ ತೋರ್ಪಡಿಸಿರಲಿಲ್ಲ. ನಮ್ಮ ರಕ್ಷಕನಾದ ಕ್ರಿಸ್ತ ಯೇಸು ಪ್ರತ್ಯಕ್ಷನಾದಾಗ ಅದನ್ನು ನಮಗೆ ತೋರಿಸಲಾಯಿತು. ಯೇಸು ಮರಣವನ್ನು ನಾಶಪಡಿಸಿ, ನಮಗೆ ಜೀವಮಾರ್ಗವನ್ನು ಸುವಾರ್ತೆಯ ಮೂಲಕ ತೋರಿದನು.
2 ತಿಮೊಥೆಯನಿಗೆ 1 : 11 (ERVKN)
ಆ ಸುವಾರ್ತೆಗೋಸ್ಕರ ನನ್ನನ್ನು ಪ್ರಚಾರಕನನ್ನಾಗಿಯೂ ಅಪೊಸ್ತಲನನ್ನಾಗಿಯೂ ಉಪದೇಶಕನನ್ನಾಗಿಯೂ ಆರಿಸಿಕೊಳ್ಳಲಾಯಿತು.
2 ತಿಮೊಥೆಯನಿಗೆ 1 : 12 (ERVKN)
ಸುವಾರ್ತೆಯನ್ನು ತಿಳಿಸಿದ್ದರಿಂದಲೇ ನಾನೀಗ ಸಂಕಟವನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನ್ನ ವಶಕ್ಕೆ ಒಪ್ಪಿಸಿರುವುದನ್ನು ಆ ದಿನವು ಬರುವತನಕ ಸಂರಕ್ಷಿಸಲು ಆತನು ಸಮರ್ಥನೆಂಬುದನ್ನು ಖಚಿತವಾಗಿ ಬಲ್ಲೆನು.
2 ತಿಮೊಥೆಯನಿಗೆ 1 : 13 (ERVKN)
ನನ್ನಿಂದ ಕೇಳಿರುವ ಸತ್ಯಬೋಧನೆಗಳನ್ನು ಅನುಸರಿಸು. ನೀನು ಏನನ್ನು ಉಪದೇಶ ಮಾಡಬೇಕೆಂಬುದಕ್ಕೆ ಆ ಬೋಧನೆಗಳೇ ನಿನಗೆ ದೃಷ್ಟಾಂತಗಳಾಗಿವೆ.
2 ತಿಮೊಥೆಯನಿಗೆ 1 : 14 (ERVKN)
ನಿನ್ನ ವಶಕ್ಕೆ ಕೊಟ್ಟಿರುವ ಸತ್ಯವನ್ನು ಪವಿತ್ರಾತ್ಮನ ಸಹಾಯದಿಂದ ಸಂರಕ್ಷಿಸು. ಆತನು ನಮ್ಮೊಳಗೆ ವಾಸ ಮಾಡುತ್ತಿದ್ದಾನೆ.
2 ತಿಮೊಥೆಯನಿಗೆ 1 : 15 (ERVKN)
ಏಷ್ಯಾ ದೇಶದಲ್ಲಿರುವವರೆಲ್ಲರೂ ನನ್ನನ್ನು ತೊರೆದಿರುವರೆಂಬುದು ನಿನಗೆ ತಿಳಿದಿದೆ. ಪುಗೇಲನೂ, ಹೆರ್ಮೊಗೇನನೂ ನನ್ನನ್ನು ತೊರೆದಿದ್ದಾರೆ.
2 ತಿಮೊಥೆಯನಿಗೆ 1 : 16 (ERVKN)
ಪ್ರಭುವು ಒನೇಸಿಫ್ರೋರನ ಕುಟುಂಬಕ್ಕೆ ಕರುಣೆಯನ್ನು ತೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವನು ಅನೇಕ ಸಂದರ್ಭಗಳಲ್ಲಿ ನನಗೆ ಸಹಾಯ ಮಾಡಿದ್ದಾನೆ. ನಾನು ಸೆರೆಮನೆಯಲ್ಲಿದ್ದರೂ ಅವನು ನಾಚಿಕೆಪಟ್ಟುಕೊಳ್ಳಲಿಲ್ಲ.
2 ತಿಮೊಥೆಯನಿಗೆ 1 : 17 (ERVKN)
ಅವನು ರೋಮಿಗೆ ಬಂದಾಗ, ಬಹಳ ಹುಡುಕಾಡಿ ನನ್ನನ್ನು ಸಂಧಿಸಿದನು.
2 ತಿಮೊಥೆಯನಿಗೆ 1 : 18 (ERVKN)
ಆ ದಿನದಂದು ಒನೇಸಿಫೋರನು ಪ್ರಭುವಿನಿಂದ ಕರುಣೆಯನ್ನು ಪಡೆಯಲಿ ಎಂದು ನಾನು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇನೆ. ಎಫೆಸದಲ್ಲಿ ಅವನು ನನಗೆ ಎಷ್ಟು ವಿಧದಲ್ಲಿ ಸಹಾಯ ಮಾಡಿದನೆಂಬುದು ನಿನಗೆ ತಿಳಿದಿದೆ.

1 2 3 4 5 6 7 8 9 10 11 12 13 14 15 16 17 18