2 ಸಮುವೇಲನು 24 : 1 (ERVKN)
ಜನಗಣತಿ ಮತ್ತು ಅದರ ಫಲ ಯೆಹೋವನು ಇಸ್ರೇಲರ ಮೇಲೆ ಮತ್ತೆ ಕೋಪಗೊಂಡು ಇಸ್ರೇಲರ ವಿರುದ್ಧನಾಗುವಂತೆ ದಾವೀದನನ್ನು ಪ್ರೇರೇಪಿಸಿದನು. ದಾವೀದನು, “ಇಸ್ರೇಲಿನ ಮತ್ತು ಯೆಹೂದದ ಜನಗಣತಿ ಮಾಡಿರಿ” ಎಂದು ಆಜ್ಞಾಪಿಸಿದನು.
2 ಸಮುವೇಲನು 24 : 2 (ERVKN)
ರಾಜನಾದ ದಾವೀದನು ಸೈನ್ಯದ ಸೇನಾಧಿಪತಿಯಾದ ಯೋವಾಬನಿಗೆ, “ದಾನ್‌ನಿಂದ ಬೇರ್ಷೆಬದವರೆಗಿನ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಸಂಚರಿಸಿ ಜನರನ್ನು ಲೆಕ್ಕಹಾಕಿರಿ. ಆಗ ಅಲ್ಲಿ ಎಷ್ಟು ಜನರಿದ್ದಾರೆಂಬುದು ನನಗೆ ತಿಳಿಯುತ್ತದೆ” ಎಂದು ಹೇಳಿದನು.
2 ಸಮುವೇಲನು 24 : 3 (ERVKN)
ಆದರೆ ಯೋವಾಬನು ರಾಜನಿಗೆ, “ಅಲ್ಲಿ ಎಷ್ಟು ಜನರಿದ್ದಾರೆಂಬುದು ಅಗತ್ಯವಿಲ್ಲ. ನಿನ್ನ ದೇವರಾದ ಯೆಹೋವನು ಈಗ ಇರುವುದಕ್ಕಿಂತ ನೂರರಷ್ಟು ಹೆಚ್ಚು ಜನರನ್ನು ದಯಪಾಲಿಸಲಿ! ಈ ಕಾರ್ಯವು ಸಂಭವಿಸುವುದನ್ನು ನಿನ್ನ ಕಣ್ಣುಗಳಿಂದಲೇ ನೋಡು. ಆದರೆ ನೀನು ಈ ಕಾರ್ಯವನ್ನು ಮಾಡಬೇಕೆಂದಿರುವುದೇಕೆ?” ಎಂದು ಕೇಳಿದನು.
2 ಸಮುವೇಲನು 24 : 4 (ERVKN)
ಆದರೆ ರಾಜನಾದ ದಾವೀದನು ಯೋವಾಬನಿಗೆ ಮತ್ತು ಸೈನ್ಯದ ಸೇನಾಪತಿಗಳಿಗೆ ಜನರನ್ನು ಲೆಕ್ಕಹಾಕಲು ಆಜ್ಞಾಪಿಸಿದನು. ಆದ್ದರಿಂದ ಯೋವಾಬನು ಸೈನ್ಯದ ಸೇನಾಪತಿಗಳೊಡನೆ ಇಸ್ರೇಲಿನ ಜನರನ್ನು ಲೆಕ್ಕಹಾಕಲು ಹೊರಟನು.
2 ಸಮುವೇಲನು 24 : 5 (ERVKN)
ಅವರು ಜೋರ್ಡನ್ ನದಿಯನ್ನು ದಾಟಿ ಅರೋಯೇರಿನಲ್ಲಿ ಪಾಳೆಯ ಮಾಡಿಕೊಂಡರು. ಅವರ ಪಾಳೆಯವು ನಗರದ ಬಲ ಅಂಚಿನಲ್ಲಿತ್ತು. (ಆ ನಗರವು ಗಾದ್ ಕಣಿವೆಯ ಮಧ್ಯಭಾಗದಲ್ಲಿಯೂ ಯಗ್ಜೇರಿನ ಮಾರ್ಗದಲ್ಲಿಯೂ ಇತ್ತು.)
2 ಸಮುವೇಲನು 24 : 6 (ERVKN)
ಆಗ ಅವರು ಗಿಲ್ಯಾದಿಗೆ ಮತ್ತು ತಖ್ತೀಮ್ ಹೊಜೀ ಪ್ರದೇಶಕ್ಕೂ ಯಾನಿನದಾನಿಗೂ, ಚೀದೋನಿನ ಸುತ್ತಲೂ ಹೋದರು.
2 ಸಮುವೇಲನು 24 : 7 (ERVKN)
ಅವರು ತೂರ್ ಕೋಟೆಗೂ ಹಿವ್ವಿಯರ ಮತ್ತು ಕಾನಾನ್ಯರ ಎಲ್ಲಾ ನಗರಗಳಿಗೂ ಯೆಹೂದದ ದಕ್ಷಿಣಕ್ಕಿರುವ ಬೇರ್ಷೆಬಕ್ಕೂ ಹೋದರು.
2 ಸಮುವೇಲನು 24 : 8 (ERVKN)
ಅವರು ದೇಶದಲ್ಲೆಲ್ಲಾ ಸಂಚರಿಸಿ ಒಂಭತ್ತು ತಿಂಗಳು ಮತ್ತು ಇಪ್ಪತ್ತು ದಿನಗಳ ತರುವಾಯ ಜೆರುಸಲೇಮಿಗೆ ಬಂದರು.
2 ಸಮುವೇಲನು 24 : 9 (ERVKN)
ಯೋವಾಬನು ರಾಜನಿಗೆ ಜನರ ಪಟ್ಟಿಯನ್ನು ಕೊಟ್ಟನು. ಇಸ್ರೇಲಿನಲ್ಲಿ ಕತ್ತಿಯನ್ನು ಬಳಸಬಲ್ಲ ಎಂಟು ಲಕ್ಷ ಜನರಿದ್ದರು. ಯೆಹೂದದಲ್ಲಿ ಐದು ಲಕ್ಷ ಜನರಿದ್ದರು.
2 ಸಮುವೇಲನು 24 : 10 (ERVKN)
ಯೆಹೋವನು ದಾವೀದನನ್ನು ದಂಡಿಸಿದನು ದಾವೀದನು ಜನರನ್ನು ಲೆಕ್ಕಹಾಕಿದ ನಂತರ ಅವಮಾನಗೊಂಡಂತೆ ಭಾವಿಸಿದನು. ದಾವೀದನು ಯೆಹೋವನಿಗೆ, “ನಾನು ಈ ಕಾರ್ಯವನ್ನು ಮಾಡಿ ಮಹಾಪಾಪಕ್ಕೆ ಒಳಗಾದೆನು! ಯೆಹೋವನೇ, ನನ್ನ ಪಾಪಕ್ಕಾಗಿ ನನ್ನನ್ನು ಕ್ಷಮಿಸೆಂದು ಬೇಡುತ್ತೇನೆ. ನಾನು ಬಹಳ ಮೂರ್ಖನಾಗಿಬಿಟ್ಟೆ” ಎಂದು ಹೇಳಿದನು.
2 ಸಮುವೇಲನು 24 : 11 (ERVKN)
ದಾವೀದನು ಹೊತ್ತಾರೆಯಲ್ಲಿ ಎದ್ದಾಗ, ಅವನ ದರ್ಶಿಯಾದ ಗಾದನಿಗೆ ಯೆಹೋವನ ಮಾತುಗಳು ಬಂದವು.
2 ಸಮುವೇಲನು 24 : 12 (ERVKN)
ಯೆಹೋವನು ಅವನಿಗೆ, “ನೀನು ಹೋಗಿ, ದಾವೀದನಿಗೆ ಹೋಗಿ ಹೇಳು, ‘ಯೆಹೋವನು ಹೀಗೆ ಹೇಳುತ್ತಾನೆ, ನಾನು ಮೂರು ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಒಂದನ್ನು ಆರಿಸಿಕೋ’ ” ಎಂದು ಹೇಳಿದನು.
2 ಸಮುವೇಲನು 24 : 13 (ERVKN)
ಗಾದನು ದಾವೀದನ ಬಳಿಗೆ ಹೋಗಿ, “ಈ ಮೂರು ಶಿಕ್ಷೆಗಳಲ್ಲಿ ಒಂದನ್ನು ಆರಿಸಿಕೊ: ನಿನಗೆ ಮತ್ತು ನಿನ್ನ ದೇಶಕ್ಕೆ ಏಳು ವರ್ಷಗಳ ಕಾಲ ಬರಗಾಲ ಬರಬೇಕೆ? ಅಥವಾ ನಿನ್ನ ಶತ್ರುಗಳು ನಿನ್ನನ್ನು ಮೂರು ತಿಂಗಳ ಕಾಲ ಅಟ್ಟಿಸಬೇಕೇ? ಅಥವಾ ಮೂರು ದಿನಗಳ ಕಾಲ ನಿನ್ನ ದೇಶದಲ್ಲಿ ರೋಗರುಜಿನಗಳು ವ್ಯಾಪಿಸಬೇಕೇ? ಇವುಗಳ ಬಗ್ಗೆ ಯೋಚಿಸು, ನನ್ನನ್ನು ಕಳುಹಿಸಿದ ಯೆಹೋವನಿಗೆ ನಾನು ಏನು ಹೇಳಬೇಕೆಂಬುದನ್ನು ನೀನು ತೀರ್ಮಾನಿಸು” ಎಂದು ಹೇಳಿದನು.
2 ಸಮುವೇಲನು 24 : 14 (ERVKN)
ದಾವೀದನು ಗಾದನಿಗೆ, “ನಾನು ನಿಜವಾಗಿಯೂ ತೊಂದರೆಗೆ ಒಳಗಾದೆ! ಆದರೆ ಯೆಹೋವನು ಕೃಪಾಪೂರ್ಣನಾಗಿದ್ದಾನೆ. ಆದ್ದರಿಂದ ಆತನು ನಮ್ಮನ್ನು ದಂಡಿಸಲಿ; ಆದರೆ ಅದು ಜನರಿಂದ ಬಾರದಿರಲಿ” ಎಂದು ಹೇಳಿದನು.
2 ಸಮುವೇಲನು 24 : 15 (ERVKN)
ಆದ್ದರಿಂದ ಯೆಹೋವನು ಇಸ್ರೇಲಿಗೆ ರೋಗರುಜಿನಗಳನ್ನು ಬರಮಾಡಿದನು. ಇವು ಹೊತ್ತಾರೆಯಿಂದ ಆರಂಭವಾಗಿ ನಿಯಮಿತಕಾಲದವರೆಗೆ ಮುಂದುವರಿದವು. ದಾನ್‌ನಿಂದ ಬೇರ್ಷೆಬದವರೆಗೆ ಎಪ್ಪತ್ತುಸಾವಿರ ಜನರು ಸತ್ತರು.
2 ಸಮುವೇಲನು 24 : 16 (ERVKN)
ದೇವದೂತನು ಜೆರುಸಲೇಮನ್ನು ನಾಶಗೊಳಿಸಲು ಅದರತ್ತ ತನ್ನ ಕೈಯನ್ನು ಚಾಚಿದನು. ಆದರೆ ಸಂಭವಿಸಿದ ಕೆಟ್ಟಕಾರ್ಯಗಳ ಬಗ್ಗೆ ಯೆಹೋವನು ಪಶ್ಚಾತ್ತಾಪಪಟ್ಟನು. ಯೆಹೋವನು ಜನರನ್ನು ನಾಶಗೊಳಿಸಿದ ದೇವದೂತನಿಗೆ, “ಇಲ್ಲಿಗೆ ಸಾಕು! ನಿನ್ನ ಕೈಯನ್ನು ಕೆಳಗಿಳಿಸು” ಎಂದು ಹೇಳಿದನು. ಆಗ ಆ ಯೆಹೋವನ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.
2 ಸಮುವೇಲನು 24 : 17 (ERVKN)
ದಾವೀದನು ಅರೌನನ ಕಣವನ್ನು ಕೊಂಡುಕೊಂಡನು ಜನರನ್ನು ಕೊಂದ ದೂತನನ್ನು ದಾವೀದನು ನೋಡಿ ಯೆಹೋವನೊಂದಿಗೆ ಮಾತನಾಡಿದನು. ದಾವೀದನು ಯೆಹೋವನಿಗೆ, “ನಾನು ಪಾಪ ಮಾಡಿದೆನು. ನಾನು ತಪ್ಪು ಮಾಡಿದೆನು. ಆದರೆ ಈ ಜನರು ಕೇವಲ ಕುರಿಗಳಂತೆ ನಿರಪರಾಧಿಗಳು. ಅವರು ಯಾವ ತಪ್ಪನ್ನೂ ಮಾಡಲಿಲ್ಲ. ದಯಮಾಡಿ ನಿನ್ನ ದಂಡನೆಯು ನನಗೆ ಮತ್ತು ನನ್ನ ತಂದೆಯ ಕುಲದ ವಿರುದ್ಧವಾಗಿರಲಿ” ಎಂದು ಹೇಳಿದನು.
2 ಸಮುವೇಲನು 24 : 18 (ERVKN)
ಆ ದಿನ ಗಾದನು ದಾವೀದನ ಬಳಿಗೆ ಬಂದು, “ಹೋಗಿ, ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸು” ಎಂದು ಹೇಳಿದನು.
2 ಸಮುವೇಲನು 24 : 19 (ERVKN)
ಅಂತೆಯೇ ದಾವೀದನು ಯೆಹೋವನ ಆಜ್ಞೆಗೆ ವಿಧೇಯನಾಗಿ ಅರೌನನನ್ನು ನೋಡಲು ಹೋದನು.
2 ಸಮುವೇಲನು 24 : 20 (ERVKN)
ರಾಜನು ಅವನ ಸೇವಕರೊಂದಿಗೆ ತನ್ನ ಕಡೆ ಬರುತ್ತಿರುವುದನ್ನು ಅರೌನನು ನೋಡಿದನು. ಅರೌನನು ಹೊರಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು.
2 ಸಮುವೇಲನು 24 : 21 (ERVKN)
ಅರೌನನು, “ರಾಜನಾದ ನನ್ನ ಒಡೆಯನೇ, ನನ್ನ ಬಳಿ ಬಂದದ್ದೇಕೆ?” ಎಂದು ಕೇಳಿದನು. ದಾವೀದನು, “ನಿನ್ನಿಂದ ಕಣವನ್ನು ಕೊಂಡುಕೊಳ್ಳುವುದಕ್ಕಾಗಿ ಬಂದೆನು. ನಾನು ಯೆಹೋವನಿಗೆ ಒಂದು ಯಜ್ಞವೇದಿಕೆಯನ್ನು ನಿರ್ಮಿಸುತ್ತೇನೆ. ಆಗ ರೋಗರುಜಿನಗಳು ನಿಲ್ಲುತ್ತುವೆ” ಎಂದನು.
2 ಸಮುವೇಲನು 24 : 22 (ERVKN)
ಅರೌನನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ಯಜ್ಞವನ್ನು ಸಮರ್ಪಿಸಲು ನೀನು ಏನನ್ನು ಬೇಕಾದರೂ ತೆಗೆದುಕೊ. ಸರ್ವಾಂಗಹೋಮವನ್ನು ಅರ್ಪಿಸಲು ಇಲ್ಲಿ ಕೆಲವು ಹೋರಿಗಳಿವೆ, ನೊಗ ಮುಂತಾದ ಮರದ ಸಲಕರಣೆಗಳಿವೆ.
2 ಸಮುವೇಲನು 24 : 23 (ERVKN)
ರಾಜನೇ, ನಾನು ಎಲ್ಲವನ್ನೂ ನಿನಗೆ ಅರ್ಪಿಸುತ್ತೇನೆ” ಎಂದು ಹೇಳಿದನು. ಇದಲ್ಲದೆ ಅರೌನನು ರಾಜನಿಗೆ, “ನಿನ್ನ ದೇವರಾದ ಯೆಹೋವನು ನಿನ್ನನ್ನು ಮೆಚ್ಚಿಕೊಳ್ಳಲಿ” ಎಂದೂ ಹೇಳಿದನು.
2 ಸಮುವೇಲನು 24 : 24 (ERVKN)
ಆದರೆ ರಾಜನು ಅರೌನನಿಗೆ, “ಇಲ್ಲ, ನಾನು ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ನಾನು ನಿನ್ನ ಭೂಮಿಗೆ ಬೆಲೆಯನ್ನು ಕೊಟ್ಟು ಕೊಂಡುಕೊಳ್ಳುತ್ತೇನೆ. ಉಚಿತವಾಗಿ ಸಿಕ್ಕಿದ್ದನ್ನು ನಾನು ನನ್ನ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು. ಆದ್ದರಿಂದ ದಾವೀದನು ಕಣವನ್ನು ಮತ್ತು ಹೋರಿಗಳನ್ನು ಐವತ್ತು ಶೆಕೆಲ್‌ಗಳಿಗೆ ಕೊಂಡುಕೊಂಡನು.
2 ಸಮುವೇಲನು 24 : 25 (ERVKN)
ನಂತರ ದಾವೀದನು ಅಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸಿದನು. ದಾವೀದನು ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಸಮರ್ಪಿಸಿದನು. ಅವನು ದೇಶಕ್ಕಾಗಿ ಮಾಡಿದ ಪ್ರಾರ್ಥನೆಗೆ ಯೆಹೋವನು ಉತ್ತರಕೊಟ್ಟನು. ಯೆಹೋವನು ಇಸ್ರೇಲಿನ ರೋಗರುಜಿನಗಳನ್ನು ನಿಲ್ಲಿಸಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25