2 ಸಮುವೇಲನು 10 : 1 (ERVKN)
ದಾವೀದನ ಜನರಿಗೆ ಹಾನೂನನು ಅವಮಾನ ಮಾಡಿದ್ದು ತರುವಾಯ, ಅಮ್ಮೋನಿಯರ ರಾಜನಾದ ನಾಹಾಷನು ಸತ್ತನು. ಅವನ ನಂತರ ಅವನ ಮಗನಾದ ಹಾನೂನನು ರಾಜನಾದನು.
2 ಸಮುವೇಲನು 10 : 2 (ERVKN)
ದಾವೀದನು, “ನಾಹಾಷನು ನನಗೆ ದಯೆತೋರಿಸಿದ್ದನು. ಆದ್ದರಿಂದ ಅವನ ಮಗನಿಗೆ ನಾನು ದಯೆತೋರಿಸುವೆನು” ಎಂದು ಹೇಳಿದನು. ಆದ್ದರಿಂದ ತಂದೆಯ ಸಾವಿನಿಂದ ಶೋಕತಪ್ತನಾಗಿರುವ ಹಾನೂನನನ್ನು ಸಂತೈಸಲು ದಾವೀದನು ತನ್ನ ಅಧಿಕಾರಿಗಳನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಹೋದರು.
2 ಸಮುವೇಲನು 10 : 3 (ERVKN)
ಆದರೆ ಅಮ್ಮೋನಿಯರ ನಾಯಕರು ತಮ್ಮ ಪ್ರಭುವಾದ ಹಾನೂನನಿಗೆ, “ನಿನ್ನನ್ನು ಸಂತೈಸಲು ಕೆಲವು ಜನರನ್ನು ಕಳುಹಿಸುವುದರ ಮೂಲಕ ದಾವೀದನು ನಿನ್ನ ತಂದೆಯನ್ನು ಗೌರವಿಸಲು ಪ್ರಯತ್ನಿಸುತ್ತಿರುವನೆಂದು ನೀನು ಭಾವಿಸಿರುತ್ತಿಯಲ್ಲವೇ? ಇಲ್ಲ! ನಿನ್ನ ನಗರದ ಸಂಗತಿಗಳನ್ನು ರಹಸ್ಯವಾಗಿ ಕಂಡುಕೊಳ್ಳಲು ಮತ್ತು ತಿಳಿದುಕೊಳ್ಳಲು ದಾವೀದನು ಈ ಜನರನ್ನು ಕಳುಹಿಸಿದ್ದಾನೆ. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡಲು ಯೋಜನೆ ಮಾಡುತ್ತಿದ್ದಾರೆ” ಎಂದು ಹೇಳಿದರು.
2 ಸಮುವೇಲನು 10 : 4 (ERVKN)
ಆದ್ದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ ಅವರ ಗಡ್ಡದ ಅರ್ಧಭಾಗವನ್ನು ಬೋಳಿಸಿದನು. ಅವರ ನಡುವಿನ ಕೆಳಭಾಗವು ಕಾಣುವಂತೆ ಅವರ ಬಟ್ಟೆಗಳನ್ನು ಮಧ್ಯಭಾಗದಲ್ಲಿ ಕತ್ತರಿಸಿದನು, ನಂತರ ಅವರನ್ನು ಕಳುಹಿಸಿದನು.
2 ಸಮುವೇಲನು 10 : 5 (ERVKN)
ಅವರು ದಾವೀದನಿಗೆ ಈ ಸುದ್ದಿಯನ್ನು ತಿಳಿಸಿದರು. ಆಗ ದಾವೀದನು ತನ್ನ ಬಳಿಗೆ ಬರಲು ಬಹಳ ನಾಚಿಕೆಯಿಂದಿದ್ದ ಅಧಿಕಾರಗಳ ಬಳಿಗೆ ಸಂದೇಶಕರನ್ನು ಕಳುಹಿಸಿ, “ನಿಮ್ಮ ಗಡ್ಡಗಳು ಮತ್ತೆ ಬೆಳೆಯುವವರೆಗೆ ಜೆರಿಕೊವಿನಲ್ಲಿ ಇರಿ. ಅನಂತರ ಜೆರುಸಲೇಮಿಗೆ ಬನ್ನಿ” ಎಂದು ತಿಳಿಸಿದನು.
2 ಸಮುವೇಲನು 10 : 6 (ERVKN)
ಅಮ್ಮೋನಿಯರ ವಿರುದ್ಧ ಯುದ್ಧ ಅಮ್ಮೋನಿಯರು ತಾವು ದಾವೀದನಿಗೆ ಶತ್ರುಗಳಾಗಿರುವುದಾಗಿ ತಿಳಿದುಕೊಂಡರು. ಆದ್ದರಿಂದ ಅಮ್ಮೋನಿಯರು ಹಣಕೊಟ್ಟು ಬೇತ್‌ರೆಹೋಬ್ ಮತ್ತು ಚೋಬಾಗಳಿಂದ ಅರಾಮ್ಯರ ಇಪ್ಪತ್ತುಸಾವಿರ ಮಂದಿ ಭೂದಳವನ್ನು ಬರಮಾಡಿಕೊಂಡರು. ಅಮ್ಮೋನಿಯರು ಮಾಕಾದ ರಾಜನನ್ನು ಮತ್ತು ಅವನ ಒಂದು ಸಾವಿರ ಸೈನಿಕರನ್ನು ಹಾಗೂ ಟೋಬ್‌ನಿಂದ ಹನ್ನೆರಡು ಸಾವಿರ ಮಂದಿ ಸೈನಿಕರನ್ನು ಬರಮಾಡಿಕೊಂಡರು.
2 ಸಮುವೇಲನು 10 : 7 (ERVKN)
ಇದು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಯೋವಾಬನನ್ನು ಎಲ್ಲಾ ಶೂರ ಸೈನಿಕರೊಂದಿಗೆ ಕಳುಹಿಸಿದನು.
2 ಸಮುವೇಲನು 10 : 8 (ERVKN)
ಅಮ್ಮೋನಿಯರು ಹೊರಗೆ ಬಂದು ಯುದ್ಧಕ್ಕೆ ಸಿದ್ಧರಾದರು. ಅವರು ನಗರದ ಬಾಗಿಲಿನಲ್ಲಿ ನಿಂತರು. ಚೋಬಾ ಮತ್ತು ರೆಹೋಬ್‌ಗಳ ಅರಾಮ್ಯರು, ಟೋಬ್ ಮತ್ತು ಮಾಕಾದ ಜನರು ಯುದ್ಧರಂಗದಲ್ಲಿ ಅಮ್ಮೋನಿಯರ ಜೊತೆಯಲ್ಲಿ ಒಟ್ಟಾಗಿ ನಿಲ್ಲಲಿಲ್ಲ.
2 ಸಮುವೇಲನು 10 : 9 (ERVKN)
ಅಮ್ಮೋನಿಯರು ತಮ್ಮ ವಿರುದ್ಧವಾಗಿ ಹಿಂದೆ ಮತ್ತು ಮುಂದೆ ನಿಂತಿರುವುದನ್ನು ನೋಡಿದ ಯೋವಾಬನು ಇಸ್ರೇಲರಲ್ಲಿ ಶ್ರೇಷ್ಠರಾದವರನ್ನು ಆರಿಸಿಕೊಂಡು ಅರಾಮ್ಯರ ವಿರುದ್ಧ ಯುದ್ಧಮಾಡಲು ಅವರನ್ನು ಸಾಲಾಗಿ ನಿಲ್ಲಿಸಿದನು.
2 ಸಮುವೇಲನು 10 : 10 (ERVKN)
ಬಳಿಕ ಯೋವಾಬನು ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು ಅಮ್ಮೋನಿಯರ ವಿರುದ್ಧ ಹೋರಾಡಲು ಕಳುಹಿಸಿದನು.
2 ಸಮುವೇಲನು 10 : 11 (ERVKN)
ಯೋವಾಬನು ಅಬೀಷೈಗೆ, “ಅರಾಮ್ಯರು ನನಗಿಂತ ಬಲಶಾಲಿಗಳೆಂದು ಕಂಡುಬಂದರೆ ನೀನು ನನಗೆ ಸಹಾಯಮಾಡು. ಅಮ್ಮೋನಿಯರು ನಿನಗೆ ಬಲಶಾಲಿಗಳೆಂದು ಕಂಡು ಬಂದರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ.
2 ಸಮುವೇಲನು 10 : 12 (ERVKN)
ನೀನು ಶಕ್ತನಾಗಿರು. ನಮ್ಮ ಜನರಿಗಾಗಿ ಮತ್ತು ನಮ್ಮ ದೇವರ ನಗರಗಳಿಗಾಗಿ ಧೈರ್ಯದಿಂದ ಹೋರಾಡೋಣ. ಯೆಹೋವನು ತನಗೆ ಸರಿಯೆನಿಸುವುದನ್ನು ಮಾಡಲಿ” ಎಂದು ಹೇಳಿದನು.
2 ಸಮುವೇಲನು 10 : 13 (ERVKN)
ನಂತರ ಯೋವಾಬನು ಮತ್ತು ಅವನ ಜನರು ಅರಾಮ್ಯರ ಮೇಲೆ ಆಕ್ರಮಣ ಮಾಡಿದರು. ಯೋವಾಬ ಮತ್ತು ಅವನ ಜನರನ್ನು ಬಿಟ್ಟು ಅರಾಮ್ಯರು ಓಡಿಹೋದರು.
2 ಸಮುವೇಲನು 10 : 14 (ERVKN)
ಅರಾಮ್ಯರು ಓಡಿಹೋಗುತ್ತಿರುವುದನ್ನು ನೋಡಿದ ಅಮ್ಮೋನಿಯರು ಅಬೀಷೈಯನ್ನು ಬಿಟ್ಟು ಓಡಿಹೋದರು. ಅವರು ತಮ್ಮ ನಗರಕ್ಕೆ ಹಿಂದಿರುಗಿದರು. ಯೋವಾಬನು ಯುದ್ಧರಂಗದಿಂದ ಹಿಂದಿರುಗಿ ಜೆರುಸಲೇಮಿಗೆ ಬಂದನು.
2 ಸಮುವೇಲನು 10 : 15 (ERVKN)
ಅರಾಮ್ಯರು ಮತ್ತೆ ಯುದ್ಧ ಮಾಡಲು ತೀರ್ಮಾನಿಸಿದರು ಇಸ್ರೇಲರು ತಮ್ಮನ್ನು ಸೋಲಿಸಿದರೆಂಬುದನ್ನು ಅರಾಮ್ಯರು ತಿಳಿದುಕೊಂಡರು. ಆದ್ದರಿಂದ ಅವರೆಲ್ಲರೂ ಒಟ್ಟಾಗಿ ಸೇರಿ ಒಂದು ದೊಡ್ಡ ಸೈನ್ಯವನ್ನು ಕಟ್ಟಿದರು.
2 ಸಮುವೇಲನು 10 : 16 (ERVKN)
ಯೂಫ್ರೇಟೀಸ್ ನದಿಯ ಮತ್ತೊಂದು ತೀರದಲ್ಲಿ ವಾಸಿಸುತ್ತಿದ್ದ ಅರಾಮ್ಯರನ್ನು ಕರೆತರಲು ಹದದೆಜೆರನು ಸಂದೇಶಕರನ್ನು ಕಳುಹಿಸಿದನು. ಈ ಅರಾಮ್ಯರು ಹೇಲಾಮಿಗೆ ಬಂದರು. ಹದದೆಜೆರನ ಸೇನಾಪತಿಯಾದ ಶೋಬಕನು ಅವರ ನಾಯಕನಾದನು.
2 ಸಮುವೇಲನು 10 : 17 (ERVKN)
ಈ ವಿಷಯವು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಇಸ್ರೇಲರೆಲ್ಲರನ್ನೂ ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಹೇಲಾಮಿಗೆ ಹೋದನು. ಅಲ್ಲಿ ಅರಾಮ್ಯರು ಯುದ್ಧಕ್ಕೆ ಸಿದ್ಧರಾಗಿ ಆಕ್ರಮಣ ಮಾಡಿದರು.
2 ಸಮುವೇಲನು 10 : 18 (ERVKN)
ಆದರೆ ದಾವೀದನು ಅರಾಮ್ಯರನ್ನು ಸೋಲಿಸಿದನು. ಅರಾಮ್ಯರು ಇಸ್ರೇಲರನ್ನು ಬಿಟ್ಟು ಓಡಿಹೋದರು. ದಾವೀದನು ಅರಾಮ್ಯರ ಏಳು ನೂರು ಮಂದಿ ರಥದ ಸಾರಥಿಯರನ್ನೂ ನಲವತ್ತು ಸಾವಿರ ಮಂದಿ ರಾಹುತರನ್ನೂ ಕೊಂದುಹಾಕಿದನು. ಅರಾಮ್ಯರ ಸೇನಾಪತಿಯಾದ ಶೋಬಕನನ್ನು ಸಹ ದಾವೀದನು ಕೊಂದುಹಾಕಿದನು.
2 ಸಮುವೇಲನು 10 : 19 (ERVKN)
ಹದದೆಜೆರನ ಸೇವೆಯಲ್ಲಿದ್ದ ರಾಜರಿಗೆ ಇಸ್ರೇಲರು ತಮ್ಮನ್ನು ಸೋಲಿಸಿದುದು ತಿಳಿದುಬಂತು. ಆದುದರಿಂದ ಅವರು ಇಸ್ರೇಲರೊಂದಿಗೆ ಶಾಂತಿಸಂಧಾನ ಮಾಡಿಕೊಂಡು ಅವರ ಸೇವಕರಾದರು. ಅಂದಿನಿಂದ ಅಮ್ಮೋನಿಯರಿಗೆ ಮತ್ತೆ ಸಹಾಯಮಾಡಲು ಅರಾಮ್ಯರು ಭಯಗೊಂಡರು.

1 2 3 4 5 6 7 8 9 10 11 12 13 14 15 16 17 18 19