2 ಪೇತ್ರನು 2 : 1 (ERVKN)
ಸುಳ್ಳುಬೋಧಕರು ಹಿಂದಿನ ಕಾಲದಲ್ಲಿ, ದೇವಜನರಲ್ಲಿ ಸುಳ್ಳುಪ್ರವಾದಿಗಳಿದ್ದರು. ಈಗಲೂ ಇದ್ದಾರೆ. ನಿಮ್ಮಲ್ಲಿಯೂ ಸಹ ಕೆಲವು ಸುಳ್ಳುಪ್ರವಾದಿಗಳಿರುತ್ತಾರೆ. ಜನರನ್ನು ನಾಶನಕ್ಕೆ ನಡೆಸುವ ಸುಳ್ಳುಬೋಧನೆಗಳನ್ನು ಅವರು ಬೋಧಿಸುತ್ತಾರೆ. ತಾವು ಸುಳ್ಳುಬೋಧಕರೆಂಬುದು ನಿಮಗೆ ಸುಲಭವಾಗಿ ತಿಳಿಯದ ರೀತಿಯಲ್ಲಿ ಅವರು ಬೋಧಿಸುತ್ತಾರೆ. ಅವರು ತಮಗೆ ಬಿಡುಗಡೆ ತಂದುಕೊಟ್ಟ ಒಡೆಯನನ್ನೇ (ಯೇಸು) ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಅವರು ಬಹುಬೇಗನೆ ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ.
2 ಪೇತ್ರನು 2 : 2 (ERVKN)
ಅವರು ಮಾಡುವ ಕೆಟ್ಟಕಾರ್ಯಗಳನ್ನು ಅನೇಕ ಜನರು ಅನುಸರಿಸುತ್ತಾರೆ. ಆ ಜನರ ದೆಸೆಯಿಂದ ಸತ್ಯಮಾರ್ಗದ ಕುರಿತಾಗಿ ಇತರರು ಕೆಟ್ಟಮಾತುಗಳನ್ನು ಆಡುತ್ತಾರೆ.
2 ಪೇತ್ರನು 2 : 3 (ERVKN)
ಆ ಸುಳ್ಳುಬೋಧಕರಿಗೆ ಬೇಕಾಗಿರುವುದು ಕೇವಲ ನಿಮ್ಮ ಹಣವಷ್ಟೆ. ಆದ್ದರಿಂದ ಅವರು ನಿಜವಲ್ಲದ ಸಂಗತಿಗಳನ್ನು ನಿಮಗೆ ಹೇಳಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಆದರೆ ಬಹಳ ಹಿಂದಿನಿಂದಲೇ ಆ ಸುಳ್ಳುಬೋಧಕರ ವಿರುದ್ಧವಾದ ತೀರ್ಪು ಸಿದ್ಧವಾಗಿದೆ. ಅವರನ್ನು ನಾಶಪಡಿಸುವಾತನಿಂದ (ದೇವರಿಂದ) ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
2 ಪೇತ್ರನು 2 : 4 (ERVKN)
ದೇವದೂತರು ಪಾಪಗಳನ್ನು ಮಾಡಿದಾಗ, ದೇವರು ಅವರನ್ನು ದಂಡಿಸದೆ ಬಿಡಲಿಲ್ಲ. ಆತನು ಅವರನ್ನು ನರಕಕ್ಕೆ ದಬ್ಬಿದನು. ಕತ್ತಲೆಯ ಗುಂಡಿಗಳಿಗೆ ಹಾಕಿದನು. ಅವರಿಗೆ ನ್ಯಾಯತೀರ್ಪಾಗುವವರೆಗೂ ಅವರು ಅಲ್ಲಿಯೇ ಇರುವರು.
2 ಪೇತ್ರನು 2 : 5 (ERVKN)
ಬಹಳ ಹಿಂದೆ ಬದುಕಿದ್ದ ಕೆಟ್ಟ ಜನರನ್ನು ದೇವರು ದಂಡಿಸಿದನು. ಈ ಲೋಕದಲ್ಲಿ ತನಗೆ ವಿರುದ್ಧವಾದ ಜನರು ತುಂಬಿಕೊಂಡಿದ್ದಾಗ ಆತನು ಜಲಪ್ರಳಯವನ್ನು ಬರಮಾಡಿ ದನು. ಆದರೆ ನೋಹನನ್ನೂ ಅವನೊಂದಿಗಿದ್ದ ಏಳು ಮಂದಿಯನ್ನೂ ರಕ್ಷಿಸಿದನು. ಯೋಗ್ಯರಾಗಿ ಜೀವಿಸಬೇಕೆಂದು ಆ ಜನರಿಗೆ ತಿಳಿಸಿದವನೇ ನೋಹ.
2 ಪೇತ್ರನು 2 : 6 (ERVKN)
ದೇವರು ಸೊದೋಮ್, ಗೊಮೋರ ಎಂಬ ಕೆಟ್ಟ ಪಟ್ಟಣಗಳನ್ನು ದಂಡಿಸಿದನು. ಆತನು ಆ ಪಟ್ಟಣಗಳಲ್ಲಿ ಏನೂ ಉಳಿಯದಂತೆ, ಸುಟ್ಟು ಬೂದಿಮಾಡಿದನು. ತನಗೆ ವಿರುದ್ಧವಾಗಿರುವ ಜನರಿಗೆ ಏನಾಗುತ್ತದೆ ಎಂಬುದಕ್ಕೆ ಆತನು ಆ ಪಟ್ಟಣಗಳನ್ನು ನಿದರ್ಶನಗಳನ್ನಾಗಿ ಇಟ್ಟಿದ್ದಾನೆ.
2 ಪೇತ್ರನು 2 : 7 (ERVKN)
ಆದರೆ ದೇವರು ಆ ಪಟ್ಟಣಗಳಿಂದ ಲೋಟನನ್ನು ರಕ್ಷಿಸಿದನು. ಲೋಟನು ನೀತಿವಂತನಾಗಿದ್ದನು. ದುಷ್ಟ ಜನರ ಕೆಟ್ಟ ನಡತೆಯಿಂದ ಅವನು ದುಃಖಗೊಂಡಿದ್ದನು.
2 ಪೇತ್ರನು 2 : 8 (ERVKN)
(ಲೋಟನು ನೀತಿವಂತನಾಗಿದ್ದನು. ಆದರೆ ಅವನು ಪ್ರತಿದಿನವೂ ಆ ದುಷ್ಟಜನರ ಮಧ್ಯೆ ಜೀವಿಸುತ್ತಿದ್ದನು. ಕೆಟ್ಟಕಾರ್ಯಗಳನ್ನು ನೋಡಿ ಮತ್ತು ಕೇಳಿ ಅವನ ಒಳ್ಳೆಯ ಹೃದಯವು ವೇದನೆಗೆ ಒಳಗಾಗಿತ್ತು.)
2 ಪೇತ್ರನು 2 : 9 (ERVKN)
ಹೌದು, ಪ್ರಭುವಾದ ದೇವರು ತನ್ನ ಭಕ್ತರನ್ನು ತೊಂದರೆಗಳಿಂದ ಯಾವಾಗಲೂ ರಕ್ಷಿಸುತ್ತಾನೆ. ಆತನು ದುಷ್ಟಜನರನ್ನು ನ್ಯಾಯತೀರ್ಪಿನ ದಿನ ಬರುವತನಕ ದಂಡಿಸುತ್ತಾನೆ.
2 ಪೇತ್ರನು 2 : 10 (ERVKN)
ಪ್ರಭುವಿನ ಅಧಿಕಾರವನ್ನು ದ್ವೇಷಿಸುವ ಜನರನ್ನು ಮತ್ತು ತಮ್ಮ ಪಾಪಸ್ವಭಾವದ ಇಚ್ಚೆಗನುಸಾರವಾಗಿ ಕೆಟ್ಟಕಾರ್ಯಗಳನ್ನು ಮಾಡುವ ಜನರನ್ನು ದೇವರು ಹೀಗೆ ದಂಡಿಸುತ್ತಾನೆ. ಈ ಸುಳ್ಳುಬೋಧಕರು ತಮಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾರೆ ಮತ್ತು ತಮ್ಮ ಬಗ್ಗೆ ಹೊಗಳಿಕೊಳ್ಳುತ್ತಾರೆ. ಪ್ರಭಾವದಿಂದ ಕೂಡಿರುವ ದೇವದೂತರ ಬಗ್ಗೆ ಕೆಟ್ಟದ್ದನ್ನು ಹೇಳಲು ಅವರು ಹೆದರುವುದಿಲ್ಲ.
2 ಪೇತ್ರನು 2 : 11 (ERVKN)
ದೇವದೂತರು ಈ ಸುಳ್ಳುಬೋಧಕರಿಗಿಂತ ಹೆಚ್ಚು ಬಲಿಷ್ಠರಾಗಿದ್ದಾರೆ ಮತ್ತು ಹೆಚ್ಚು ಶಕ್ತಿಯುಳ್ಳವರಾಗಿದ್ದಾರೆ. ಆದರೂ ದೇವದೂತರು ಸುಳ್ಳುಬೋಧಕರನ್ನು ಪ್ರಭುವಿನ ಸನ್ನಿಧಿಯಲ್ಲಿ ದೂಷಿಸುವುದಿಲ್ಲ.
2 ಪೇತ್ರನು 2 : 12 (ERVKN)
ಆದರೆ ಈ ಸುಳ್ಳುಬೋಧಕರು ತಮಗೆ ಅರ್ಥವಾಗದ ಸಂಗತಿಗಳ ವಿರುದ್ಧ ಕೆಟ್ಟದ್ದನ್ನು ಮಾತಾಡುತ್ತಾರೆ. ಅವರು ವಿವೇಚಿಸದೆ ಕಾರ್ಯ ಮಾಡುವ ಪ್ರಾಣಿಗಳಂತಿದ್ದಾರೆ. ಹಿಡಿಯಲ್ಪಟ್ಟು ಕೊಲ್ಲಲ್ಪಡುವುದಕ್ಕಾಗಿಯೇ ಹುಟ್ಟಿರುವ ಕ್ರೂರಪ್ರಾಣಿಗಳಂತೆ ಅವರು ನಾಶವಾಗುವರು.
2 ಪೇತ್ರನು 2 : 13 (ERVKN)
ಅವರಿಂದ ಅನೇಕ ಜನರು ಸಂಕಟಕ್ಕೆ ಒಳಗಾಗುವರು. ಅವರು ಮಾಡಿದ್ದಕ್ಕೆ ಅದೇ ಪ್ರತಿಫಲವಾಗಿರುವುದು.ಈ ಸುಳ್ಳುಬೋಧಕರು ಜನರೆಲ್ಲರ ಎದುರಿನಲ್ಲಿ ಕೆಟ್ಟದ್ದನ್ನು ಮಾಡಲು ಸಂತೋಷಿಸುತ್ತಾರೆ. ತಮ್ಮನ್ನು ಸಂತಸಗೊಳಿಸುವ ಕೆಟ್ಟಕಾರ್ಯಗಳಿಂದ ಅವರು ಆನಂದಿಸುತ್ತಾರೆ. ಅವರು ನಿಮ್ಮ ಮಧ್ಯದಲ್ಲಿ ಕೊಳಕಾದ ಕಲೆಗಳಂತಿದ್ದಾರೆ. ನೀವು ಒಟ್ಟಾಗಿ ಊಟ ಮಾಡುವಾಗ ಅವರು ನಿಮಗೆ ಅಪಮಾನಕರವಾಗಿದ್ದಾರೆ.
2 ಪೇತ್ರನು 2 : 14 (ERVKN)
ಅವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರಾಗಿದ್ದಾರೆ. ಅವರು ದುರ್ಬಲರನ್ನು ಪಾಪವೆಂಬ ಉರುಲಿನಲ್ಲಿ ಬೀಳಿಸುತ್ತಾರೆ. ಅವರು ತಮ್ಮ ಹೃದಯಗಳಿಗೆ ಸ್ವಾರ್ಥವನ್ನೇ ಕಲಿಸಿದ್ದಾರೆ. ಅವರು ಶಾಪಗ್ರಸ್ತರಾಗಿದ್ದಾರೆ.
2 ಪೇತ್ರನು 2 : 15 (ERVKN)
ಈ ಸುಳ್ಳುಬೋಧಕರು ಸರಿಯಾದ ಮಾರ್ಗವನ್ನು ತೊರೆದು, ಕೆಟ್ಟಮಾರ್ಗವನ್ನು ಅನುಸರಿಸಿದ್ದಾರೆ. ಬಿಳಾಮನು ಬೆಯೋರನ ಮಗ. ಅವನು ಅಧರ್ಮದಿಂದ ದೊರೆಯುವ ಲಾಭವನ್ನು ಪ್ರೀತಿಸಿದನು.
2 ಪೇತ್ರನು 2 : 16 (ERVKN)
ಆದರೆ ಅವನು ಮಾಡುತ್ತಿರುವುದು ತಪ್ಪೆಂದು ಒಂದು ಹೇಸರಕತ್ತೆಯು ಅವನಿಗೆ ತಿಳಿಸಿತು. ಅದು ಒಂದು ಮೂಕಪ್ರಾಣಿ. ಆದರೆ ಅದು ಮಾನವನಂತೆ ಮಾತಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು.
2 ಪೇತ್ರನು 2 : 17 (ERVKN)
ಈ ಸುಳ್ಳುಬೋಧಕರು ನೀರಿಲ್ಲದ ಒರತೆಗಳಂತಿದ್ದಾರೆ. ಅವರು ಬಿರುಗಾಳಿಯಿಂದ ಬಡಿದುಕೊಂಡು ಹೋಗುವ ಮೋಡಗಳಂತಿದ್ದಾರೆ. ಅವರಿಗಾಗಿ ಒಂದು ಕಗ್ಗತ್ತಲಾದ ಸ್ಥಳವನ್ನು ಕಾದಿರಿಸಲಾಗಿದೆ.
2 ಪೇತ್ರನು 2 : 18 (ERVKN)
ಅವರು ಅರ್ಥವಿಲ್ಲದ ಮಾತು ಗಳಿಂದ ಬಡಾಯಿಕೊಚ್ಚಿಕೊಳ್ಳುತ್ತಾರೆ; ಜನರನ್ನು ಪಾಪಗಳ ಬಲೆಗೆ ನಡೆಸುತ್ತಿದ್ದಾರೆ. ತಪ್ಪುಮಾರ್ಗದಲ್ಲಿ ನಡೆಯುವ ಜನರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡು ಬಂದ ಜನರನ್ನು ದಾರಿತಪ್ಪಿಸುತ್ತಾರೆ. ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಮಾಡಲು ಇಚ್ಛಿಸುವ ಕೆಟ್ಟಕಾರ್ಯಗಳನ್ನು ಬಳಸಿಕೊಂಡು ಈ ಸುಳ್ಳುಬೋಧಕರು ಅವರನ್ನು ದಾರಿ ತಪ್ಪಿಸುತ್ತಾರೆ.
2 ಪೇತ್ರನು 2 : 19 (ERVKN)
ಈ ಸುಳ್ಳುಬೋಧಕರು ಆ ಜನರಿಗೆ ಸ್ವಾತಂತ್ರ್ಯವನ್ನು ಕೊಡುವುದಾಗಿ ವಾಗ್ದಾನ ಮಾಡುತ್ತಾರೆ. ಆದರೆ ಈ ಸುಳ್ಳುಬೋಧಕರೇ ಸ್ವತಂತ್ರರಾಗದೆ ನಾಶವಾಗುವಂಥ ಸಂಗತಿಗಳಿಗೆ ಗುಲಾಮರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋತುಹೋಗಿದ್ದಾನೋ ಅದಕ್ಕೆ ಗುಲಾಮನಾಗಿದ್ದಾನೆ.
2 ಪೇತ್ರನು 2 : 20 (ERVKN)
ಈ ಲೋಕದಲ್ಲಿನ ಕೆಟ್ಟಕಾರ್ಯಗಳಿಂದ ಆ ಜನರನ್ನು ಪಾರುಮಾಡಲಾಯಿತು. ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೂಲಕ ಅವರಿಗೆ ಬಿಡುಗಡೆಯಾಯಿತು. ಆದರೆ ಆ ಜನರು ತಮ್ಮ ಹಿಂದಿನ ಸಂಗತಿಗಳ ಕಡೆಗೆ ಹಿಂದಿರುಗಿಹೋದರೆ ಮತ್ತು ಅವುಗಳು ಅವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವರು ಮೊದಲಿಗಿಂತಲೂ ಹೆಚ್ಚು ಕೆಟ್ಟುಹೋಗುತ್ತಾರೆ.
2 ಪೇತ್ರನು 2 : 21 (ERVKN)
ಹೌದು, ಆ ಜನರು ಸರಿಯಾದ ಮಾರ್ಗವನ್ನು ತಿಳಿಯದೆ ಹೋಗಿದ್ದರೇ ಒಳ್ಳೆಯದಾಗುತ್ತಿತ್ತು. ಸರಿಯಾದ ಮಾರ್ಗವನ್ನು ಅರಿತುಕೊಂಡು, ಪವಿತ್ರ ಬೋಧನೆಗಳಿಗೆ ವಿಮುಖರಾಗುವುದಕ್ಕಿಂತ ಅದನ್ನು ತಿಳಿದುಕೊಳ್ಳದಿದ್ದರೇ ಚೆನ್ನಾಗಿರುತ್ತಿತ್ತು.
2 ಪೇತ್ರನು 2 : 22 (ERVKN)
ನಿಜವಾಗಿ ಈ ಗಾದೆಗಳಂತೆಯೇ ಅವರು ಮಾಡಿದರು: “ನಾಯಿಯು ತಾನು ಕಕ್ಕಿದ್ದನ್ನೇ ನೆಕ್ಕಲು ತಿರುಗಿಕೊಂಡಿತು” ✡ಉಲ್ಲೇಖನ: ಜ್ಞಾನೋಕ್ತಿ. 26:11. ಮತ್ತು “ತೊಳೆದ ಹಂದಿಯು ಕೆಸರಿನಲ್ಲಿ ಹೊರಳಾಡಲು ಹೋಯಿತು.” ✡ಉಲ್ಲೇಖನ: ಜ್ಞಾನೋಕ್ತಿ. 26:11.
❮
❯
1
2
3
4
5
6
7
8
9
10
11
12
13
14
15
16
17
18
19
20
21
22