2 ಅರಸುಗಳು 4 : 1 (ERVKN)
ವಿಧವೆಯ ಬೇಡಿಕೆ ಒಂದು ದಿನ ಪ್ರವಾದಿಮಂಡಲಿಯವರಲ್ಲೊಬ್ಬನ ಪತ್ನಿಯು ಗೋಳಾಡುತ್ತಾ ಎಲೀಷನಲ್ಲಿಗೆ ಹೋಗಿ, “ನನ್ನ ಗಂಡನು ನಿನಗೆ ಸೇವಕನಂತಿದ್ದನು. ಈಗ ನನ್ನ ಗಂಡ ಸತ್ತಿದ್ದಾನೆ! ಅವನು ಯೆಹೋವನಲ್ಲಿ ಭಯಭಕ್ತಿ ಉಳ್ಳವನಾಗಿದ್ದದು ನಿನಗೆ ತಿಳಿದಿದೆ. ಆದರೆ ಅವನು ಒಬ್ಬ ಮನುಷ್ಯನಿಗೆ ಹಣವನ್ನು ಕೊಡಬೇಕಾಗಿದೆ. ಈಗ ಆ ಮನುಷ್ಯನು ನನ್ನ ಎರಡು ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳಲು ಬರುತ್ತಿದ್ದಾನೆ!” ಎಂದು ಹೇಳಿದಳು.
2 ಅರಸುಗಳು 4 : 2 (ERVKN)
ಎಲೀಷನು, “ನಾನು ನಿನಗೆ ಹೇಗೆ ಸಹಾಯ ಮಾಡಲಿ? ನಿನ್ನ ಮನೆಯಲ್ಲಿ ಏನಿದೆ? ನನಗೆ ಅದನ್ನು ತಿಳಿಸು” ಎಂದು ಕೇಳಿದನು. ಆ ಸ್ತ್ರೀಯು, “ನನ್ನ ಮನೆಯಲ್ಲಿ ನನ್ನ ಹತ್ತಿರ ಏನೂ ಇಲ್ಲ. ನನ್ನ ಹತ್ತಿರ ಒಂದು ಪಾತ್ರೆ ಆಲೀವ್ ಎಣ್ಣೆ ಮಾತ್ರ ಇದೆ” ಎಂದು ಹೇಳಿದಳು.
2 ಅರಸುಗಳು 4 : 3 (ERVKN)
ಆಗ ಎಲೀಷನು, “ಹೋಗಿ ನಿನ್ನ ನೆರೆಯವರೆಲ್ಲರಿಂದ ಪಾತ್ರೆಗಳನ್ನು ತೆಗೆದುಕೊ. ಅವು ಬರಿದಾಗಿರಬೇಕು. ಆದಷ್ಟು ಪಾತ್ರೆಗಳನ್ನು ತೆಗೆದುಕೊ.
2 ಅರಸುಗಳು 4 : 4 (ERVKN)
ನಂತರ ನಿನ್ನ ಮನೆಗೆ ಹೋಗಿ ಬಾಗಿಲುಗಳನ್ನು ಮುಚ್ಚು. ನೀನು ಮತ್ತು ನಿನ್ನ ಮಕ್ಕಳು ಮಾತ್ರ ಮನೆಯಲ್ಲಿರಬೇಕು. ಈ ಪಾತ್ರೆಗಳಿಗೆಲ್ಲಾ ಎಣ್ಣೆಯನ್ನು ತುಂಬಿಸಿ ಪ್ರತ್ಯೇಕವಾದ ಸ್ಥಳದಲ್ಲಿಡು” ಎಂದು ಹೇಳಿದನು.
2 ಅರಸುಗಳು 4 : 5 (ERVKN)
ಆ ಸ್ತ್ರೀಯು ಎಲೀಷನ ಬಳಿಯಿಂದ ತನ್ನ ಮನೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿದಳು. ಅವಳು ಮತ್ತು ಅವಳ ಮಕ್ಕಳು ಮಾತ್ರ ಮನೆಯಲ್ಲಿದ್ದರು. ಅವಳ ಮಕ್ಕಳು ಪಾತ್ರೆಗಳನ್ನು ಅವಳ ಬಳಿಗೆ ತಂದರು; ಅವಳು ಆ ಪಾತ್ರೆಗಳಿಗೆ ಎಣ್ಣೆಯನ್ನು ಸುರಿದಳು.
2 ಅರಸುಗಳು 4 : 6 (ERVKN)
ಅವಳು ಅನೇಕ ಪಾತ್ರೆಗಳನ್ನು ತುಂಬಿಸಿಟ್ಟು ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ” ಎಂದಳು. ಆದರೆ ಎಲ್ಲಾ ಪಾತ್ರೆಗಳು ತುಂಬಿಹೋಗಿದ್ದವು. ಅವಳ ಮಕ್ಕಳಲ್ಲಿ ಒಬ್ಬನು, “ಇಲ್ಲಿ ಯಾವ ಪಾತ್ರೆಗಳೂ ಇಲ್ಲ” ಎಂದು ಹೇಳಿದನು. ಆ ಸಮಯಕ್ಕೆ ಸರಿಯಾಗಿ ಪಾತ್ರೆಯಲ್ಲಿದ್ದ ಎಣ್ಣೆಯು ಮುಗಿದಿತ್ತು.
2 ಅರಸುಗಳು 4 : 7 (ERVKN)
ಆಗ ಆ ಸ್ತ್ರೀಯು ದೇವರ ಮನುಷ್ಯನ (ಎಲೀಷನ) ಬಳಿಗೆ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಎಲೀಷನು ಅವಳಿಗೆ, “ಹೋಗು, ಎಣ್ಣೆಯನ್ನು ಮಾರಾಟಮಾಡಿ, ನಿನ್ನ ಸಾಲವನ್ನು ತೀರಿಸು. ಉಳಿದ ಹಣದಲ್ಲಿ ನೀನು ಮತ್ತು ನಿನ್ನ ಮಕ್ಕಳು ಜೀವನಮಾಡಿ” ಎಂದು ಹೇಳಿದನು.
2 ಅರಸುಗಳು 4 : 8 (ERVKN)
ಎಲೀಷ ಮತ್ತು ಶೂನೇಮಿನ ಸ್ತ್ರೀ ಒಂದು ದಿನ ಎಲೀಷನು ಶೂನೇಮಿಗೆ ಹೋದನು. ಪ್ರಮುಖಳಾದ ಸ್ತ್ರೀಯೊಬ್ಬಳು ಶೂನೇಮಿನಲ್ಲಿ ವಾಸಿಸುತ್ತಿದ್ದಳು. ಆ ಸ್ತ್ರೀಯು ತನ್ನ ಮನೆಯಲ್ಲಿ ಊಟಮಾಡಿಕೊಂಡು ಹೋಗುವಂತೆ ಎಲೀಷನನ್ನು ಕೇಳಿಕೊಂಡಳು. ಅಂದಿನಿಂದ ಎಲೀಷನು ಆ ಸ್ಥಳದ ಮೂಲಕ ಹೋಗುವಾಗಲೆಲ್ಲಾ ಅವಳ ಮನೆಯಲ್ಲಿ ಊಟಮಾಡುತ್ತಿದ್ದನು.
2 ಅರಸುಗಳು 4 : 9 (ERVKN)
ಆ ಸ್ತ್ರೀಯು ತನ್ನ ಗಂಡನಿಗೆ, “ನೋಡಿ, ನಮ್ಮ ಮನೆಯ ದಾರಿಯಲ್ಲಿ ಹಾದುಹೋಗುವ ಎಲೀಷನು ಪರಿಶುದ್ಧನೂ ದೇವಮನುಷ್ಯನೂ ಎಂದು ನನಗೆ ತೋರುತ್ತದೆ.
2 ಅರಸುಗಳು 4 : 10 (ERVKN)
ದಯವಿಟ್ಟು ಎಲೀಷನಿಗಾಗಿ ಮಾಳಿಗೆಯ ಮೇಲೆ ಚಿಕ್ಕದೊಂದು ಕೊಠಡಿಯನ್ನು ಕಟ್ಟೋಣ. ಆ ಕೊಠಡಿಯಲ್ಲಿ ಹಾಸಿಗೆಯೊಂದನ್ನು ಹಾಕೋಣ. ಅಲ್ಲಿ ಒಂದು ಮೇಜು, ಕುರ್ಚಿ ಮತ್ತು ದೀಪಸ್ತಂಭವನ್ನು ಇಡೋಣ. ಅವನು ನಮ್ಮ ಮನೆಗೆ ಬಂದಾಗ, ಈ ಕೊಠಡಿಯನ್ನು ತನಗಾಗಿ ಉಪಯೋಗಿಸಲಿ” ಎಂದು ಹೇಳಿದನು.
2 ಅರಸುಗಳು 4 : 11 (ERVKN)
ಒಂದು ದಿನ ಎಲೀಷನು ಆ ಸ್ತ್ರೀಯ ಮನೆಗೆ ಬಂದನು. ಅವನು ಆ ಕೊಠಡಿಗೆ ಹೋಗಿ ವಿಶ್ರಾಂತಿಯನ್ನು ಪಡೆದನು.
2 ಅರಸುಗಳು 4 : 12 (ERVKN)
ಎಲೀಷನು ತನ್ನ ಸೇವಕನಾದ ಗೇಹಜಿಗೆ, “ಶೂನೇಮ್ಯಳಾದ ಆ ಸ್ತ್ರೀಯನ್ನು ಕರೆದುಕೊಂಡು ಬಾ” ಎಂದು ಹೇಳಿದನು. ಸೇವಕನು ಶೂನೇಮ್ಯಳಾದ ಆ ಸ್ತ್ರೀಯನ್ನು ಕರೆದುಕೊಂಡು ಬಂದಾಗ ಆಕೆಯು ಎಲೀಷನ ಎದುರಿನಲ್ಲಿ ನಿಂತುಕೊಂಡಳು.
2 ಅರಸುಗಳು 4 : 13 (ERVKN)
ಎಲೀಷನು ಗೇಹಜಿಗೆ (ಸೇವಕನಿಗೆ), “ನೀನು ಆ ಸ್ತ್ರೀಯ ಬಳಿಗೆ ಹೋಗಿ, ‘ನೋಡು, ನೀನು ನಮ್ಮನ್ನು ಉಪಚರಿಸುವುದಕ್ಕಾಗಿ ನಿನ್ನಿಂದ ಸಾಧ್ಯವಾದಷ್ಟು ಮಾಡಿರುವೆ. ನಮ್ಮಿಂದ ನಿನಗೇನಾದರೂ ಉಪಕಾರವಾಗಬೇಕೇ? ನಿನ್ನ ಬಗ್ಗೆ ರಾಜನ ಬಳಿಯಲ್ಲಾದರೂ ಅಥವಾ ಸೈನ್ಯಾಧಿಕಾರಿಯ ಬಳಿಯಲ್ಲಾದರೂ ನಾವು ಮಾತನಾಡಬೇಕೇ?’ ಎಂದು ಕೇಳು” ಎಂಬುದಾಗಿ ಹೇಳಿದನು. ಆ ಸ್ತ್ರೀಯು, “ಇಲ್ಲಿ ನಾನು ನನ್ನ ಜನರೊಡನೆ ಸುಖವಾಗಿ ಜೀವಿಸುತ್ತಿದ್ದೇನೆ” ಎಂದು ಉತ್ತರಿಸಿದಳು.
2 ಅರಸುಗಳು 4 : 14 (ERVKN)
ಎಲೀಷನು ಗೇಹಜಿಗೆ, “ನಾನು ಅವಳಿಗೆ ಏನು ಮಾಡಲಿ?” ಎಂದು ಕೇಳಿದನು. ಗೇಹಜಿಯು, “ನನಗೆ ತಿಳಿದಿದೆ! ಅವಳಿಗೆ ಮಕ್ಕಳಿಲ್ಲ, ಅವಳ ಗಂಡ ಮುದುಕನಾಗಿದ್ದಾನೆ” ಎಂದು ಉತ್ತರಿಸಿದನು.
2 ಅರಸುಗಳು 4 : 15 (ERVKN)
ಆಗ ಎಲೀಷನು, “ಅವಳನ್ನು ಕರೆದುಕೊಂಡು ಬಾ” ಎಂದು ಹೇಳಿದನು. ಗೇಹಜಿಯು ಆ ಸ್ತ್ರೀಯನ್ನು ಕರೆದನು. ಆಕೆಯು ಬಂದು ಅವನ ಬಾಗಿಲಿನ ಹತ್ತಿರ ನಿಂತಳು.
2 ಅರಸುಗಳು 4 : 16 (ERVKN)
ಎಲೀಷನು ಆ ಸ್ತ್ರೀಗೆ, “ಮುಂದಿನ ವಸಂತಮಾಸದ ಈ ಕಾಲಕ್ಕೆ ನೀನು ನಿನ್ನ ಗಂಡುಮಗುವನ್ನು ಅಪ್ಪಿಕೊಂಡಿರುವೆ” ಎಂದು ಹೇಳಿದನು. ಆ ಸ್ತ್ರೀಯು, “ದೇವಮನುಷ್ಯನೇ, ಹೀಗೆ ಹೇಳಿ ನಿನ್ನ ಸೇವಕಿಯನ್ನು ವಂಚಿಸಬೇಡ” ಎಂದು ಹೇಳಿದಳು.
2 ಅರಸುಗಳು 4 : 17 (ERVKN)
ಆ ಸ್ತ್ರೀಯು ಗರ್ಭಿಣಿಯಾದಳು. ಎಲೀಷನು ಹೇಳಿದಂತೆ, ಮುಂದಿನ ವಂಸತದಲ್ಲಿ ಅವಳು ಒಬ್ಬ ಮಗನಿಗೆ ಜನ್ಮನೀಡಿದಳು.
2 ಅರಸುಗಳು 4 : 18 (ERVKN)
ಬಾಲಕನು ಬೆಳೆದನು. ಒಂದು ದಿನ, ಹೊಲದಲ್ಲಿ ಬೆಳೆಕೊಯ್ಯುತ್ತಿದ್ದ ಜನರೊಂದಿಗಿದ್ದ ತನ್ನ ತಂದೆಯನ್ನು ನೋಡಲು ಆ ಬಾಲಕನು ಹೊಲಕ್ಕೆ ಹೋಗಿದ್ದನು.
2 ಅರಸುಗಳು 4 : 19 (ERVKN)
ಈ ಬಾಲಕನು ತನ್ನ ತಂದೆಗೆ, “ಅಯ್ಯೋ, ನನ್ನ ತಲೆ ನೋಯುತ್ತಿದೆ! ನನ್ನ ತಲೆ ನೋಯುತ್ತಿದೆ!” ಎಂದು ಹೇಳಿದನು. ತಂದೆಯು ತನ್ನ ಸೇವಕನಿಗೆ, “ಅವನ ತಾಯಿಯ ಬಳಿಗೆ ಅವನನ್ನು ಕೊಂಡೊಯ್ಯಿ” ಎಂದು ಹೇಳಿದನು.
2 ಅರಸುಗಳು 4 : 20 (ERVKN)
ಆ ಸೇವಕನು ಬಾಲಕನನ್ನು ಅವನ ತಾಯಿಯ ಬಳಿಗೆ ಕರೆದೊಯ್ದನು. ಬಾಲಕನು ಮಧ್ಯಾಹ್ನದವರೆಗೆ ತಾಯಿಯ ತೊಡೆಯ ಮೇಲೆ ಕುಳಿತಿದ್ದನು. ನಂತರ ಅವನು ಸತ್ತುಹೋದನು.
2 ಅರಸುಗಳು 4 : 21 (ERVKN)
ಶೂನೇಮಿನ ಸ್ತ್ರೀಯು ಎಲೀಷನನ್ನು ನೋಡಲು ಹೋಗುವಳು ಆ ಸ್ತ್ರೀಯು ಬಾಲಕನನ್ನು ದೇವಮನುಷ್ಯನ (ಎಲೀಷನ) ಹಾಸಿಗೆಯ ಮೇಲೆ ಮಲಗಿಸಿದಳು. ನಂತರ ಅವಳು ಬಾಗಿಲನ್ನು ಮುಚ್ಚಿಕೊಂಡು, ಹೊರಗೆ ಹೋದಳು.
2 ಅರಸುಗಳು 4 : 22 (ERVKN)
ಅವಳು ತನ್ನ ಗಂಡನನ್ನು ಕರೆದು, “ದಯವಿಟ್ಟು ಒಬ್ಬ ಸೇವಕನನ್ನೂ ಒಂದು ಹೇಸರಕತ್ತೆಯನ್ನೂ ನನಗೆ ಕಳುಹಿಸಿಕೊಡಿ. ನಾನು ದೇವಮನುಷ್ಯನನ್ನು ಕರೆತರಲು ಬೇಗ ಹೋಗಿ ಹಿಂದಿರುಗಿ ಬರುತ್ತೇನೆ” ಎಂದು ಹೇಳಿದಳು.
2 ಅರಸುಗಳು 4 : 23 (ERVKN)
ಆ ಸ್ತ್ರೀಯ ಗಂಡನು, “ಈ ದಿನ ದೇವಮನುಷ್ಯನ ಬಳಿಹೋಗಲು ನೀನೇಕೆ ಅಪೇಕ್ಷೆಪಡುವೆ? ಇಂದು ಅಮಾವಾಸ್ಯೆಯೂ ಅಲ್ಲ, ಸಬ್ಬತ್ ದಿನವೂ ಅಲ್ಲ” ಎಂದು ಹೇಳಿದನು. ಅವಳು, “ಚಿಂತಿಸಬೇಡ, ಎಲ್ಲವೂ ಸರಿಹೋಗುತ್ತದೆ” ಎಂದು ಹೇಳಿದಳು.
2 ಅರಸುಗಳು 4 : 24 (ERVKN)
ನಂತರ ಅವಳು ಒಂದು ತಡಿಯನ್ನು ಕತ್ತೆಯ ಮೇಲೆ ಹಾಕಿ ತನ್ನ ಸೇವಕನಿಗೆ, “ಬೇಗ ಬಾ! ನಾವು ವೇಗವಾಗಿ ಸವಾರಿ ಮಾಡಿಕೊಂಡು ಹೋಗೋಣ. ನಾನು ನಿನಗೆ ಹೇಳಿದಾಗ ನಿಧಾನಿಸು!” ಎಂದು ಹೇಳಿದಳು.
2 ಅರಸುಗಳು 4 : 25 (ERVKN)
ಆ ಸ್ತ್ರೀಯು ದೇವಮನುಷ್ಯನನ್ನು ಕಾಣಲು ಕರ್ಮೆಲ್ ಪರ್ವತಕ್ಕೆ ಹೋದಳು. ಶೂನೇಮಿನ ಸ್ತ್ರೀಯು ದೂರದಿಂದ ಬರುತ್ತಿರುವುದನ್ನು ಕಂಡ ಎಲೀಷನು ತನ್ನ ಸೇವಕನಾದ ಗೇಹಜಿಗೆ, “ನೋಡು, ಶೂನೇಮ್ಯಳಾದ ಸ್ತ್ರೀಯು ಬರುತ್ತಿದ್ದಾಳೆ!
2 ಅರಸುಗಳು 4 : 26 (ERVKN)
ಅವಳನ್ನು ಭೇಟಿ ಮಾಡುವುದಕ್ಕೆ ಓಡಿಹೋಗಿ ಅವಳಿಗೆ, ‘ನೀನು ಕ್ಷೇಮವಾಗಿರುವೆಯಾ? ನಿನ್ನ ಗಂಡ ಕ್ಷೇಮವಾಗಿರುವನೇ? ನಿನ್ನ ಮಗು ಕ್ಷೇಮವಾಗಿರುವುದೇ?’ ಎಂದು ಕೇಳು” ಎಂಬುದಾಗಿ ಹೇಳಿ ಕಳುಹಿಸಿದನು. ಅಂತೆಯೇ ಗೇಹಜಿಯು ಆಕೆಯನ್ನು ಕೇಳಿದನು. ಅವಳು “ಹೌದು, ಕ್ಷೇಮವಾಗಿದ್ದೇವೆ” ಎಂದು ಉತ್ತರಿಸಿದಳು.
2 ಅರಸುಗಳು 4 : 27 (ERVKN)
ಆದರೆ ಶೂನೇಮಿನ ಈ ಸ್ತ್ರೀಯು ದೇವಮನುಷ್ಯನಿದ್ದ ಬೆಟ್ಟದವರೆಗೆ ಹೋದಳು. ಅವಳು ನೆಲಕ್ಕೆ ಬಾಗಿ, ಎಲೀಷನ ಪಾದಗಳನ್ನು ಹಿಡಿದುಕೊಂಡಳು. ಶೂನೇಮಿನ ಆ ಸ್ತ್ರೀಯನ್ನು ತಳ್ಳಿಬಿಡಲು ಗೇಹಜಿಯು ಹತ್ತಿರಕ್ಕೆ ಬಂದನು. ಆದರೆ ದೇವಮನುಷ್ಯನು ಗೇಹಜಿಗೆ, “ಅವಳನ್ನು ತಡೆಯಬೇಡ! ಅವಳು ಬಹಳ ತಳಮಳಗೊಂಡಿದ್ದಾಳೆ. ಯೆಹೋವನು ನನಗೆ ಆಕೆಯ ದುಃಖವನ್ನು ಪ್ರಕಟಿಸಲಿಲ್ಲ; ನನಗೆ ಮರೆಮಾಡಿದ್ದಾನೆ” ಎಂದು ಹೇಳಿದನು.
2 ಅರಸುಗಳು 4 : 28 (ERVKN)
ಆಗ ಶೂನೇಮಿನ ಆ ಸ್ತ್ರೀಯು, “ಸ್ವಾಮೀ, ನಾನು ಮಗನನ್ನು ಕೇಳಲೇ ಇಲ್ಲ. ‘ನನ್ನನ್ನು ವಂಚಿಸಬೇಡ’ ಎಂದು ನಾನು ನಿನಗೆ ಹೇಳಿದೆ!” ಎಂದಳು.
2 ಅರಸುಗಳು 4 : 29 (ERVKN)
ಎಲೀಷನು ಗೇಹಜಿಗೆ, “ಹೊರಡಲು ಸಿದ್ಧನಾಗು. ನನ್ನ ಕೋಲನ್ನು ತೆಗೆದುಕೊಂಡು ಹೋಗು. ಯಾರ ಹತ್ತಿರವಾಗಲಿ ಮಾತನಾಡಲು ನಿಲ್ಲದಿರು! ನೀನು ಯಾರನ್ನಾದರೂ ಸಂಧಿಸಿದರೆ ಅವನಿಗೆ, ‘ಕ್ಷೇಮವಾಗಿರುವೆಯಾ?’ ಎಂದು ಕೇಳದಿರು. ಯಾರಾದರೂ ನಿನ್ನನ್ನು ‘ಕ್ಷೇಮವಾಗಿರುವೆಯಾ?’ ಎಂದು ಕೇಳಿದರೆ, ಅವನಿಗೆ ಉತ್ತರಿಸದಿರು. ಹೀಗೆ ನೀನು ಹೋಗಿ, ನನ್ನ ಕೋಲನ್ನು ಮಗುವಿನ ಮುಖದ ಮೇಲೆ ಇಡು” ಎಂದು ಹೇಳಿದನು.
2 ಅರಸುಗಳು 4 : 30 (ERVKN)
ಆದರೆ ಮಗುವಿನ ತಾಯಿಯು, “ಯೆಹೋವನಾಣೆ, ನಿನ್ನಾಣೆ, ನಿನ್ನನ್ನು ಬಿಟ್ಟು ನಾನು ಹೋಗುವುದಿಲ್ಲ” ಎಂದು ಹೇಳಿದಳು. ಎಲೀಷನು ಮೇಲೆದ್ದು ಶೂನೇಮಿನ ಆ ಸ್ತ್ರೀಯನ್ನು ಹಿಂಬಾಲಿಸಿದನು.
2 ಅರಸುಗಳು 4 : 31 (ERVKN)
ಶೂನೇಮಿನ ಆ ಸ್ತ್ರೀಯ ಮನೆಗೆ, ಎಲೀಷನು ಮತ್ತು ಶೂನೇಮಿನ ಸ್ತ್ರೀಯು ಬರುವುದಕ್ಕೆ ಮುಂಚೆಯೇ ಗೇಹಜಿಯು ಬಂದನು. ಗೇಹಜಿಯು ಮಗುವಿನ ಮುಖದ ಮೇಲೆ ಆ ಕೋಲನ್ನಿಟ್ಟನು. ಆದರೆ ಆ ಮಗು ಮಾತನಾಡಲಿಲ್ಲ; ಅಲುಗಾಡಲಿಲ್ಲ. ಆಗ ಗೇಹಜಿಯು ಎಲೀಷನನ್ನು ಸಂಧಿಸಲು ಹಿಂದಿರುಗಿ ಬಂದು ಎಲೀಷನಿಗೆ, “ಮಗು ಎಚ್ಚರಗೊಳ್ಳಲಿಲ್ಲ” ಎಂದು ಹೇಳಿದನು.
2 ಅರಸುಗಳು 4 : 32 (ERVKN)
ಎಲೀಷನು ಮನೆಯೊಳಕ್ಕೆ ಬಂದನು. ಆ ಮಗು ಅವನ ಹಾಸಿಗೆಯ ಮೇಲೆ ಸತ್ತುಬಿದ್ದಿತ್ತು.
2 ಅರಸುಗಳು 4 : 33 (ERVKN)
ಎಲೀಷನು ಕೊಠಡಿಯಲ್ಲಿ ಪ್ರವೇಶಿಸಿ ಬಾಗಿಲನ್ನು ಮುಚ್ಚಿದನು. ಈಗ ಎಲೀಷ ಮತ್ತು ಮಗು ಮಾತ್ರ ಕೊಠಡಿಯಲ್ಲಿದ್ದರು. ನಂತರ ಎಲೀಷನು ಯೆಹೋವನಲ್ಲಿ ಪ್ರಾರ್ಥಿಸಿದನು.
2 ಅರಸುಗಳು 4 : 34 (ERVKN)
ಎಲೀಷನು ಹಾಸಿಗೆಗೆ ಹೋಗಿ ಮಗುವಿನ ಮೇಲೆ ಮಲಗಿದನು. ಎಲೀಷನು ತನ್ನ ಬಾಯಿಯನ್ನು ಮಗುವಿನ ಬಾಯಿಯ ಮೇಲಿಟ್ಟನು. ಎಲೀಷನು ತನ್ನ ಕೈಗಳನ್ನು ಮಗುವಿನ ಕೈಗಳ ಮೇಲಿಟ್ಟನು. ಎಲೀಷನು ಕೈಚಾಚಿ ಮಗುವನ್ನು ಅಪ್ಪಿಕೊಂಡನು. ಆಗ ಮಗುವಿನ ದೇಹವು ಬೆಚ್ಚಗಾಯಿತು.
2 ಅರಸುಗಳು 4 : 35 (ERVKN)
ಎಲೀಷನು ಕೊಠಡಿಯಿಂದ ಹೊರಗೆ ಬಂದು ಮನೆಯಲ್ಲಿ ಸುತ್ತಲೂ ನಡೆದಾಡಿದನು. ನಂತರ ಅವನು ಕೊಠಡಿಯೊಳಕ್ಕೆ ಹಿಂದಿರುಗಿ ಹೋಗಿ ಕೈಚಾಚಿ ಮಗುವನ್ನು ಅಪ್ಪಿಕೊಂಡನು. ಆಗ ಮಗು ಏಳು ಸಾರಿ ಸೀನಿ ತನ್ನ ಕಣ್ಣುಗಳನ್ನು ತೆರೆಯಿತು.
2 ಅರಸುಗಳು 4 : 36 (ERVKN)
ಎಲೀಷನು ಗೇಹಜಿಯನ್ನು ಕರೆದು, “ಶೂನೇಮಿನ ಸ್ತ್ರೀಯನ್ನು ಕರೆ” ಎಂದು ಹೇಳಿದನು. ಗೇಹಜಿಯು ಶೂನೇಮಿನ ಸ್ತ್ರೀಯನ್ನು ಕರೆದನು. ಅವಳು ಎಲೀಷನ ಹತ್ತಿರಕ್ಕೆ ಬಂದಳು. ಎಲೀಷನು, “ನಿನ್ನ ಮಗನನ್ನು ಎತ್ತಿಕೊ” ಎಂದು ಹೇಳಿದನು.
2 ಅರಸುಗಳು 4 : 37 (ERVKN)
ಆಗ ಶೂನೇಮಿನ ಆ ಸ್ತ್ರೀಯು ಕೊಠಡಿಯೊಳಕ್ಕೆ ಹೋಗಿ, ಎಲೀಷನ ಪಾದಗಳಿಗೆ ಬಾಗಿ ನಮಸ್ಕರಿಸಿದಳು. ನಂತರ ಅವಳು ತನ್ನ ಮಗನನ್ನು ಎತ್ತಿಕೊಂಡು ಹೊರಗೆ ಹೋದಳು.
2 ಅರಸುಗಳು 4 : 38 (ERVKN)
ಎಲೀಷ ಮತ್ತು ವಿಷದ ಸಾರು ಎಲೀಷನು ಗಿಲ್ಗಾಲಿಗೆ ಮತ್ತೆ ಬಂದನು. ಆಗ ಆ ದೇಶದಲ್ಲಿ ಬರಗಾಲವಿತ್ತು. ಪ್ರವಾದಿಗಳ ಗುಂಪು ಎಲೀಷನ ಎದುರಿನಲ್ಲಿ ಕುಳಿತಿದ್ದರು. ಎಲೀಷನು ತನ್ನ ಸೇವಕನಿಗೆ, “ಒಂದು ದೊಡ್ಡ ಪಾತ್ರೆಯನ್ನು ಒಲೆಯ ಮೇಲಿಟ್ಟು ಪ್ರವಾದಿಗಳ ಗುಂಪಿಗೆಲ್ಲ ಸಾರನ್ನು ಮಾಡು” ಎಂದು ಹೇಳಿದನು.
2 ಅರಸುಗಳು 4 : 39 (ERVKN)
ಒಬ್ಬನು ಅಡಿಗೆಯ ಸೊಪ್ಪಿಗಾಗಿ ತೋಟಕ್ಕೆ ಹೋದನು. ಅಲ್ಲಿ ಅವನು ಒಂದು ಕಾಡುಬಳ್ಳಿಯಿಂದ ಕಾಡುಸೋರೆ ಕಾಯಿಗಳನ್ನು ಕಿತ್ತುಕೊಂಡು, ಅವುಗಳನ್ನು ತನ್ನ ಮೇಲಂಗಿಯ ಜೇಬಿನಲ್ಲಿ ತುಂಬಿಸಿಕೊಂಡನು. ನಂತರ ಅವನು ಬಂದು, ಆ ಕಾಡುಸೋರೆ ಕಾಯಿಗಳನ್ನು ಪಾತ್ರೆಯಲ್ಲಿ ಹಾಕಿದನು. ಆದರೆ ಪ್ರವಾದಿಗಳ ಗುಂಪಿಗೆ ಅವು ಯಾವ ಜಾತಿಯ ಸೋರೆಕಾಯಿಗಳೆಂಬುದು ತಿಳಿದಿರಲಿಲ್ಲ.
2 ಅರಸುಗಳು 4 : 40 (ERVKN)
ನಂತರ ಅವರು ಸ್ವಲ್ಪ ಸಾರನ್ನು ಜನರಿಗೆ ತಿನ್ನಲು ಬಡಿಸಿದರು. ಆದರೆ ಅವರು ಆ ಸಾರನ್ನು ಊಟಮಾಡಲಾರಂಭಿಸಿದಾಗ, ಅವರು, “ದೇವಮನುಷ್ಯನೇ! ಪಾತ್ರೆಯಲ್ಲಿ ವಿಷವಿದೆ!” ಎಂದು ಎಲೀಷನನ್ನು ಕೂಗಿಕೊಂಡರು. ಆ ಆಹಾರವು ತಿನ್ನಲು ಯೋಗ್ಯವಾಗಿರಲಿಲ್ಲವಾದುದರಿಂದ ಅವರು ಆ ಪಾತ್ರೆಯಿಂದ ಏನನ್ನೂ ತಿನ್ನಲಿಲ್ಲ.
2 ಅರಸುಗಳು 4 : 41 (ERVKN)
ಆದರೆ ಎಲೀಷನು, “ಸ್ವಲ್ಪ ಹಿಟ್ಟನ್ನು ತನ್ನಿ” ಎಂದು ಹೇಳಿದನು. ಅವರು ಎಲೀಷನ ಬಳಿಗೆ ಹಿಟ್ಟನ್ನು ತಂದರು. ಅವನು ಅದನ್ನು ಪಾತ್ರೆಯೊಳಗೆ ಹಾಕಿದನು. ನಂತರ ಎಲೀಷನು, “ಜನರಿಗೆ ಸಾರನ್ನು ಬಡಿಸಿ, ಅವರು ಊಟಮಾಡಲಿ” ಎಂದು ಹೇಳಿದನು. ಆಗ ಆ ಸಾರಿನಲ್ಲಿ ಯಾವ ದೋಷವೂ ಇರಲಿಲ್ಲ.
2 ಅರಸುಗಳು 4 : 42 (ERVKN)
ಎಲೀಷನು ಪ್ರವಾದಿಗಳ ಗುಂಪಿಗೆ ಊಟ ಒದಗಿಸಿದನು ಬಾಳ್‌ಷಾಲಿಷಾದಿಂದ ಒಬ್ಬ ಮನುಷ್ಯನು ಪ್ರಥಮ ಸುಗ್ಗಿಯ ರೊಟ್ಟಿಗಳನ್ನು ದೇವಮನುಷ್ಯನಿಗೆ (ಎಲೀಷನಿಗೆ) ತೆಗೆದುಕೊಂಡು ಬಂದನು. ಇವನು ಇಪ್ಪತ್ತು ಜವೆಗೋಧಿ ರೊಟ್ಟಿಗಳನ್ನೂ ಒಂದು ಚೀಲದಲ್ಲಿ ಹಸೀ ತೆನೆಗಳನ್ನೂ ತಂದನು. ಆಗ ಎಲೀಷನು, “ಜನರಿಗೆ ಈ ಆಹಾರವನ್ನು ಕೊಡು, ಅವರು ತಿನ್ನಲಿ” ಎಂದು ಹೇಳಿದನು.
2 ಅರಸುಗಳು 4 : 43 (ERVKN)
ಎಲೀಷನ ಸೇವಕನು, “ಏನು? ಇಲ್ಲಿ ನೂರು ಮಂದಿ ಜನರಿದ್ದಾರೆ. ಈ ಆಹಾರವನ್ನು ಇಲ್ಲಿರುವ ಜನರಿಗೆಲ್ಲ ಹೇಗೆ ಕೊಡಲಿ?” ಎಂದನು. ಆದರೆ ಎಲೀಷನು, “ಜನರಿಗೆ ತಿನ್ನಲು ಆಹಾರವನ್ನು ಕೊಡು, ಯೆಹೋವನು ಹೀಗೆನ್ನುವನು: ‘ಅವರು ತಿಂದರೂ ಆಹಾರವು ಉಳಿಯುತ್ತದೆ’ ” ಎಂದು ಹೇಳಿದನು.
2 ಅರಸುಗಳು 4 : 44 (ERVKN)
ಆಗ ಎಲೀಷನ ಸೇವಕನು ಪ್ರವಾದಿಗಳ ಗುಂಪಿನ ಮುಂದೆ ಆಹಾರವನ್ನು ಇಟ್ಟನು. ಆ ಗುಂಪಿನ ಪ್ರವಾದಿಗಳು ಸಾಕಾಗುವಷ್ಟು ತಿಂದರೂ ಆಹಾರವು ಉಳಿದುಹೋಯಿತು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44