2 ಅರಸುಗಳು 19 : 1 (ERVKN)
ಹಿಜ್ಕೀಯನು ತನ್ನ ಅಧಿಕಾರಿಗಳನ್ನು ಪ್ರವಾದಿಯಾದ ಯೆಶಾಯನ ಬಳಿಗೆ ಕಳುಹಿಸಿದನು ರಾಜನಾದ ಹಿಜ್ಕೀಯನು ಅವುಗಳನ್ನೆಲ್ಲ ಕೇಳಿ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯದೊಳಕ್ಕೆ ಹೋದನು.
2 ಅರಸುಗಳು 19 : 2 (ERVKN)
ಹಿಜ್ಕೀಯನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ ಮತ್ತು ಹಿರಿಯರಾದ ಯಾಜಕರನ್ನು ಆಮೋಚನ ಮಗನೂ ಪ್ರವಾದಿಯೂ ಆಗಿದ್ದ ಯೆಶಾಯನ ಬಳಿಗೆ ಕಳುಹಿಸಿದನು. ಅವರು ತಮ್ಮ ದುಃಖವನ್ನೂ ಕಳವಳವನ್ನೂ ತೋರ್ಪಡಿಸುವಂತೆ ಗೋಣಿತಟ್ಟನ್ನು ಧರಿಸಿದ್ದರು.
2 ಅರಸುಗಳು 19 : 3 (ERVKN)
ಅವರು ಯೆಶಾಯನಿಗೆ, “ಹಿಜ್ಕೀಯನು ಹೇಳುವುದೇನೆಂದರೆ, ಇಂದು ಮಹಾಕಷ್ಟದ ದಿನವಾಗಿದೆ. ನಾವು ಶಿಕ್ಷೆಯನ್ನೂ ನಿಂದೆಯನ್ನೂ ಅನುಭವಿಸಬೇಕಾಯಿತು. ಇದು ಪ್ರಸವವೇದನೆಯ ದಿನದಂತಿದೆ. ಆದರೆ ಹೆರಲು ಶಕ್ತಿಯೇ ಇಲ್ಲವಾಗಿದೆ.
2 ಅರಸುಗಳು 19 : 4 (ERVKN)
ಸೇನಾಧಿಪತಿಯ ಒಡೆಯನಾದ ಅಶ್ಶೂರದ ರಾಜನು, ಜೀವಸ್ವರೂಪನಾದ ದೇವರ ಬಗ್ಗೆ ಕೆಟ್ಟದ್ದನ್ನು ನುಡಿಯಲು ಅವನನ್ನು ಕಳುಹಿಸಿದನು. ನಿಮ್ಮ ದೇವರಾದ ಯೆಹೋವನು ಅವುಗಳನ್ನೆಲ್ಲ ಕೇಳಿರುತ್ತಾನೆ. ಯೆಹೋವನು ಶತ್ರುಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಬಹುದು! ಆದ್ದರಿಂದ ಇನ್ನೂ ಜೀವಸಹಿತ ಉಳಿದಿರುವ ಜನರಿಗಾಗಿ ಪ್ರಾರ್ಥಿಸಿ” ಎಂದು ಹೇಳಿದರು.
2 ಅರಸುಗಳು 19 : 5 (ERVKN)
ರಾಜನಾದ ಹಿಜ್ಕೀಯನ ಅಧಿಕಾರಿಗಳು ಯೆಶಾಯನ ಬಳಿಗೆ ಹೋದರು.
2 ಅರಸುಗಳು 19 : 6 (ERVKN)
ಯೆಶಾಯನು ಅವರಿಗೆ, “ನಿಮ್ಮ ಒಡೆಯನಾದ ಹಿಜ್ಕೀಯನಿಗೆ ಈ ಸಂದೇಶವನ್ನು ತಿಳಿಸಿ: ‘ಯೆಹೋವನು ಹೀಗೆನ್ನುತ್ತಾನೆ: ಅಶ್ಶೂರದ ರಾಜನ ಅಧಿಕಾರಿಗಳು ನನ್ನನ್ನು ಅಪಹಾಸ್ಯಮಾಡಲೆಂದು ಹೇಳಿದ ಸಂಗತಿಗಳಿಂದ ನೀವು ಹೆದರಬೇಡಿ.
2 ಅರಸುಗಳು 19 : 7 (ERVKN)
ನಾನು ಅವನಲ್ಲಿ ಒಂದು ಆತ್ಮವನ್ನಿರಿಸುತ್ತೇನೆ. ಅವನು ಒಂದು ಸುದ್ದಿಯನ್ನು ಕೇಳುತ್ತಾನೆ. ನಂತರ ಅವನು ತನ್ನ ಸ್ವಂತ ದೇಶಕ್ಕೆ ಹಿಂದಿರುಗಿ ಓಡಿಹೋಗುತ್ತಾನೆ. ನಾನು ಅವನನ್ನು ಅವನ ಸ್ವಂತ ದೇಶದಲ್ಲಿ ಖಡ್ಗದಿಂದ ಕೊಲ್ಲಲ್ಪಡುವಂತೆ ಮಾಡುತ್ತೇನೆ’ ” ಎಂದು ಹೇಳಿದನು.
2 ಅರಸುಗಳು 19 : 8 (ERVKN)
ಅಶ್ಶೂರದ ರಾಜ ಹಿಜ್ಕೀಯನನ್ನು ಮತ್ತೆ ಎಚ್ಚರಿಸುವನು ಅಶ್ಶೂರದ ರಾಜನು ಲಾಕೀಷನ್ನು ಬಿಟ್ಟುಹೋದನೆಂಬ ಸುದ್ದಿಯನ್ನು ಸೇನಾಧಿಪತಿಯು ಕೇಳಿ ಲಿಬ್ನಕ್ಕೆ ಹೋದಾಗ ರಾಜನು ಲಿಬ್ನದ ವಿರುದ್ಧ ಯುದ್ಧ ಮಾಡುತ್ತಿದ್ದನು.
2 ಅರಸುಗಳು 19 : 9 (ERVKN)
ಇಥಿಯೋಪಿಯದ ರಾಜ ತಿರ್ಹಾಕನ ಬಗ್ಗೆ ಅಶ್ಶೂರದ ರಾಜ ಒಂದು ಗಾಳಿ ಸುದ್ದಿಯನ್ನು ಕೇಳಿದನು. “ತಿರ್ಹಾಕನು ನಿನ್ನ ವಿರುದ್ಧ ಹೋರಾಡಲು ಬಂದಿದ್ದಾನೆ” ಎಂಬುದೇ ಆ ಗಾಳಿಸುದ್ದಿಯಾಗಿತ್ತು. ಆದ್ದರಿಂದ ಅಶ್ಶೂರದ ರಾಜನು ಹಿಜ್ಕೀಯನ ಬಳಿಗೆ ಮತ್ತೆ ಸಂದೇಶಕರನ್ನು ಕಳುಹಿಸಿದನು. ಅಶ್ಶೂರದ ರಾಜನು ಈ ಸಂದೇಶಕರಿಗೆ ಒಂದು ಸಂದೇಶವನ್ನು ನೀಡಿದನು.
2 ಅರಸುಗಳು 19 : 10 (ERVKN)
ಯೆಹೂದದ ರಾಜನಾದ ಹಿಜ್ಕೀಯನಿಗೆ ಇದನ್ನು ಹೇಳಿ: “ನೀನು ನಂಬುವ ದೇವರು ನಿನ್ನನ್ನು ಮೋಸಗೊಳಿಸಲು ಅವಕಾಶ ನೀಡಬೇಡ. ಅಶ್ಶೂರದ ರಾಜ ಜೆರುಸಲೇಮನ್ನು ಸೋಲಿಸುವುದಿಲ್ಲ ಎಂಬ ನಿನ್ನ ದೇವರ ಮಾತನ್ನು ನಂಬಬೇಡ.
2 ಅರಸುಗಳು 19 : 11 (ERVKN)
ಅಶ್ಶೂರದ ರಾಜನು ಇತರ ಎಲ್ಲಾ ಜನಾಂಗಗಳಿಗೆ ಮಾಡಿದವುಗಳನ್ನು ನೀನು ಕೇಳಿರುವೆ. ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು! ನೀನು ರಕ್ಷಿಸಲ್ಪಡುವೆಯಾ? ಇಲ್ಲ!
2 ಅರಸುಗಳು 19 : 12 (ERVKN)
ಆ ರಾಜ್ಯಗಳ ದೇವರುಗಳು ತಮ್ಮ ಜನರನ್ನು ರಕ್ಷಿಸಲಾಗಲಿಲ್ಲ. ನನ್ನ ಪೂರ್ವಿಕರು ಅವರನ್ನೆಲ್ಲ ನಾಶಗೊಳಿಸಿದರು. ಅವರು ಗೋಜಾನ್, ಖಾರಾನ್, ರೆಚೆಫ್ ಮತ್ತು ತೆಲಸ್ಸಾರ್ನ ಎದೆನಿನ ಜನರನ್ನು ನಾಶಗೊಳಿಸಿದರು!
2 ಅರಸುಗಳು 19 : 13 (ERVKN)
ಹಮಾತಿನ ರಾಜನು ಎಲ್ಲಿದ್ದಾನೆ? ಅರ್ಪಾದ್ನ ರಾಜನೆಲ್ಲಿ? ಸೆಫರ್ವಯಿಮ್ ರಾಜನೆಲ್ಲಿ? ಹೇನ ಮತ್ತು ಇವ್ವಾಗಳ ರಾಜರೆಲ್ಲಿ?” (ಅವರೆಲ್ಲರೂ ಹತರಾದರು!)
2 ಅರಸುಗಳು 19 : 14 (ERVKN)
ಹಿಜ್ಕೀಯನು ಯೆಹೋವನಿಗೆ ಪ್ರಾರ್ಥಿಸುವನು ಹಿಜ್ಕೀಯನು ಸಂದೇಶಕರಿಂದ ಬಂದ ಪತ್ರಗಳನ್ನು ತೆಗೆದುಕೊಂಡು ಓದಿದನು. ನಂತರ ಹಿಜ್ಕೀಯನು ದೇವಾಲಯದವರೆಗೆ ಹೋಗಿ, ಯೆಹೋವನ ಸನ್ನಿಧಿಯಲ್ಲಿ ಆ ಪತ್ರಗಳನ್ನಿರಿಸಿದನು.
2 ಅರಸುಗಳು 19 : 15 (ERVKN)
ಹಿಜ್ಕೀಯನು ಯೆಹೋವನ ಸನ್ನಿಧಿಯಲ್ಲಿ, “ಯೆಹೋವನೇ, ಕೆರೂಬಿಗಳ ಮೇಲೆ ರಾಜನಾಗಿ ಕುಳಿತುಕೊಳ್ಳುವ ಇಸ್ರೇಲರ ದೇವರೇ, ಲೋಕದ ರಾಜ್ಯಗಳಿಗೆಲ್ಲಾ ನೀನೊಬ್ಬನೇ ದೇವರಾಗಿರುವೆ. ನೀನು ಪರಲೋಕವನ್ನು ಮತ್ತು ಈ ಲೋಕವನ್ನು ಸೃಷ್ಟಿಸಿದೆ!
2 ಅರಸುಗಳು 19 : 16 (ERVKN)
ಯೆಹೋವನೇ, ದಯವಿಟ್ಟು ನನ್ನ ಮಾತುಗಳನ್ನು ಆಲಿಸು! ಯೆಹೋವನೇ, ನಿನ್ನ ಕಣ್ಣುಗಳನ್ನು ತೆರೆದು, ಈ ಪತ್ರವನ್ನು ನೋಡು. ಸನ್ಹೇರೀಬನು ಜೀವಸ್ವರೂಪನಾದ ದೇವರನ್ನು ನಿಂದಿಸಿ ಕಳುಹಿಸಿರುವ ಈ ವಾಕ್ಯವನ್ನು ಕೇಳು!
2 ಅರಸುಗಳು 19 : 17 (ERVKN)
ಯೆಹೋವನೇ, ಅಶ್ಶೂರದ ರಾಜರು ಆ ರಾಜ್ಯಗಳನ್ನೆಲ್ಲ ನಾಶಗೊಳಿಸಿದ್ದು ನಿಜ!
2 ಅರಸುಗಳು 19 : 18 (ERVKN)
ಅವರು ಆ ದೇಶಗಳ ದೇವರುಗಳನ್ನು ಬೆಂಕಿಯಲ್ಲಿ ಎಸೆದರು. ಆದರೆ ಅವು ನಿಜವಾದ ದೇವರುಗಳಲ್ಲ. ಅವುಗಳು ಮಾನವರಿಂದ ಮರ ಮತ್ತು ಕಲ್ಲುಗಳಿಂದ ನಿರ್ಮಿತವಾಗಿದ್ದವು. ಆದಕಾರಣವೇ ಅಶ್ಶೂರದ ರಾಜರುಗಳು ಅವುಗಳನ್ನು ನಾಶಗೊಳಿಸಿದರು.
2 ಅರಸುಗಳು 19 : 19 (ERVKN)
ನಮ್ಮ ದೇವರಾದ ಯೆಹೋವನೇ, ಅಶ್ಶೂರದ ರಾಜನಿಂದ ನಮ್ಮನ್ನು ರಕ್ಷಿಸು. ಭೂಲೋಕದ ರಾಜ್ಯಗಳೆಲ್ಲ ನೀನೊಬ್ಬನೇ ದೇವರಾದ ಯೆಹೋವನೆಂದು ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು” ಎಂದು ಪ್ರಾರ್ಥಿಸಿದನು.
2 ಅರಸುಗಳು 19 : 20 (ERVKN)
ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಈ ಸಂದೇಶವನ್ನು ಕಳುಹಿಸಿದನು: “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ಅಶ್ಶೂರದ ರಾಜನಾದ ಸನ್ಹೇರೀಬನ ವಿರುದ್ಧವಾಗಿ ನೀವು ನನ್ನಲ್ಲಿ ಪಾರ್ಥಿಸಿರುವಿರಿ. ನಾನು ನಿಮ್ಮ ಪ್ರಾರ್ಥನೆಯನ್ನು ಕೇಳಿದ್ದೇನೆ.
2 ಅರಸುಗಳು 19 : 21 (ERVKN)
“ಸನ್ಹೇರೀಬನನ್ನು ಕುರಿತು ಯೆಹೋವನು ಹೇಳುವುದೇನೆಂದರೆ: ‘ಚೀಯೋನ್ ಕುವರಿಯು ನಿನ್ನನ್ನು ತಿರಸ್ಕರಿಸುತ್ತಾಳೆ; ನಿನ್ನನ್ನು ಪರಿಹಾಸ್ಯ ಮಾಡುತ್ತಾಳೆ.
ಜೆರುಸಲೇಮಿನ ಕುವರಿಯು ನಿನ್ನ ಹಿಂದಿನಿಂದ ತಲೆಯಾಡಿಸುತ್ತಾಳೆ.
2 ಅರಸುಗಳು 19 : 22 (ERVKN)
ನೀನು ಯಾರನ್ನು ನಿಂದಿಸಿ ಪರಿಹಾಸ್ಯ ಮಾಡಿದೆ? ನೀನು ಯಾರ ವಿರುದ್ಧ ಮಾತನಾಡಿದೆ?
ನೀನು ಇಸ್ರೇಲಿನ ಪವಿತ್ರನಿಗೆ ವಿರೋಧಿಯಲ್ಲವೆ! ನೀನು ಅವನಿಗಿಂತ ಉತ್ತಮನಂತೆ ನಟಿಸಿದೆ!
2 ಅರಸುಗಳು 19 : 23 (ERVKN)
ನೀನು ಯೆಹೋವನನ್ನು ನಿಂದಿಸಲು ನಿನ್ನ ಸಂದೇಶಕರನ್ನು ಬಳಸಿದೆ, “ನಾನು ನನ್ನ ಅನೇಕ ರಥಗಳೊಂದಿಗೆ ಉನ್ನತಗಿರಿಗಳಿಗೆ ಬಂದೆನು. ನಾನು ಲೆಬನೋನಿನ ದುರ್ಗಮ ಸ್ಥಳಗಳಿಗೆ ಹೋದೆನು.
ನಾನು ಲೆಬನೋನಿನ ಎತ್ತರವಾದ ದೇವದಾರು ಮರಗಳನ್ನೂ ಲೆಬನೋನಿನ ಉತ್ತಮ ತುರಾಯಿಮರಗಳನ್ನೂ ಕಡಿದುರುಳಿಸಿದೆನು.
2 ಅರಸುಗಳು 19 : 24 (ERVKN)
ನಾನು ಬಾವಿಗಳನ್ನು ತೋಡಿ ಹೊಸ ಸ್ಥಳಗಳಲ್ಲಿ ನೀರು ಕುಡಿದೆನು. ನಾನು ಈಜಿಪ್ಟಿನ ನದಿಗಳನ್ನು ಬತ್ತಿಸಿದ್ದೇನೆ; ಆ ದೇಶದ ಮೇಲೆಲ್ಲಾ ನಡೆದಾಡಿದ್ದೇನೆ” ಎಂದು ನೀನು ಹೇಳಿದೆ.
2 ಅರಸುಗಳು 19 : 25 (ERVKN)
ಆದರೆ ನೀನು ಕೇಳಿಲ್ಲವೇ? ನಾನು ಬಹುಕಾಲದ ಹಿಂದೆಯೇ ಅದನ್ನು ಯೋಜಿಸಿದ್ದೆನು.
ಪುರಾತನ ಕಾಲದಿಂದಲೇ ಅದನ್ನು ಆಲೋಚಿಸಿದ್ದೆನು, ಈಗ ನಾನು ಅದನ್ನು ನೆರವೇರಿಸಿದ್ದೇನೆ.
ನೀನು ಬಲಾಢ್ಯ ನಗರಗಳನ್ನು ಹಾಳುದಿಬ್ಬಗಳನ್ನಾಗಿ ಮಾಡಲು ಅವಕಾಶ ನೀಡಿದವನು ನಾನೇ.
2 ಅರಸುಗಳು 19 : 26 (ERVKN)
ನಗರಗಳಲ್ಲಿ ವಾಸಿಸುವ ಜನರು ಬಲವಿಲ್ಲದವರಾಗಿ ನಿರಾಶೆಯಿಂದ ಗಲಿಬಿಲಿಗೊಂಡರು.
ಜನರು ಹೊಲಗಳಲ್ಲಿನ ಹುಲ್ಲಿನಂತೆಯೂ ಹಸಿರುಗಿಡಗಳಂತೆಯೂ ಮಾಳಿಗೆಯ ಮೇಲೆ ಒಣಗಿ ಹಾಳಾಗುವ ಹುಲ್ಲಿನಂತೆಯೂ ಇದ್ದರು.
2 ಅರಸುಗಳು 19 : 27 (ERVKN)
ನೀನು ಮೇಲೇಳುವುದೂ ಕುಳಿತುಕೊಳ್ಳುವುದೂ ನನಗೆ ಗೊತ್ತಿದೆ. ನೀನು ಒಳಗೆ ಬರುವುದೂ ಹೊರಗೆ ಹೋಗುವುದೂ ನನಗೆ ತಿಳಿದಿದೆ.
ನೀನು ನನ್ನ ವಿರುದ್ಧ ಯಾವಾಗ ದಂಗೆಯೇಳುವೆ ಎಂಬುದೂ ನನಗೆ ತಿಳಿದಿದೆ.
2 ಅರಸುಗಳು 19 : 28 (ERVKN)
ನೀನು ನನ್ನ ವಿರುದ್ಧ ದಂಗೆ ಎದ್ದಿರುವೆ. ನಿನ್ನ ಗರ್ವದ ನಿಂದನೆಯನ್ನು ನಾನು ಕೇಳಿರುವೆ.
ಆದ್ದರಿಂದ ನಾನು ನಿನ್ನ ಬಾಯಿಗೆ ಕಡಿವಾಣವನ್ನು ಹಾಕಿ ನೀನು ಬಂದ ದಾರಿಯಲ್ಲಿಯೇ ಹಿಂದಿರುಗುವಂತೆ ಮಾಡುತ್ತೇನೆ.’ ”
2 ಅರಸುಗಳು 19 : 29 (ERVKN)
ಹಿಜ್ಕೀಯನಿಗೆ ಯೆಹೋವನ ಸಂದೇಶ “ನಾನು ನಿನಗೆ ಸಹಾಯ ಮಾಡುತ್ತೇನೆಂಬುದಕ್ಕೆ ಇದು ಸಾಕ್ಷಿಯ ಗುರುತಾಗಿದೆ: ಈ ವರ್ಷ ನೀವು ತಾನಾಗಿಯೇ ಬೆಳೆಯುವ ಧಾನ್ಯವನ್ನು ತಿನ್ನುತ್ತೀರಿ. ಮುಂದಿನ ವರ್ಷ ನೀವು ಬೀಜದಿಂದ ಬೆಳೆಯುವ ಧಾನ್ಯವನ್ನು ತಿನ್ನುತ್ತೀರಿ. ಆದರೆ ಮೂರನೆಯ ವರ್ಷದಲ್ಲಿ ನೀವು ಬೆಳೆಸಿದ ಧಾನ್ಯವನ್ನು ಒಟ್ಟುಗೂಡಿಸುತ್ತೀರಿ. ನೀವು ದ್ರಾಕ್ಷಿತೋಟಗಳನ್ನು ಬೆಳೆಸುತ್ತೀರಿ; ಅವುಗಳ ದ್ರಾಕ್ಷಿಯನ್ನು ತಿನ್ನುತ್ತೀರಿ.
2 ಅರಸುಗಳು 19 : 30 (ERVKN)
ತಪ್ಪಿಸಿಕೊಂಡು ಉಳಿದ ಯೆಹೂದ ಕುಲದವರು ಮತ್ತೆ ವೃದ್ಧಿಯಾಗುವರು. ಅವರು ಆಳವಾಗಿ ಬೇರೂರಿ ಫಲವನ್ನು ಫಲಿಸುವರು.
2 ಅರಸುಗಳು 19 : 31 (ERVKN)
ಜೆರುಸಲೇಮಿನಲ್ಲಿ ಉಳಿದವರು ಹರಡಿಕೊಳ್ಳುವರು; ಚಿಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ಧಿ ಹೊಂದುವರು; ಯೆಹೋವನ ಸ್ವಾಭಿಮಾನವೇ ಇದನ್ನು ನೆರವೇರಿಸುವುದು.
2 ಅರಸುಗಳು 19 : 32 (ERVKN)
“ಯೆಹೋವನು ಅಶ್ಶೂರದ ರಾಜನನ್ನು ಕುರಿತು ಹೀಗೆನ್ನುತ್ತಾನೆ: ‘ಅವನು ಈ ನಗರದೊಳಕ್ಕೆ ಬರುವುದಿಲ್ಲ. ಅವನು ಈ ನಗರದಲ್ಲಿ ಒಂದು ಬಾಣವನ್ನೂ ಎಸೆಯುವುದಿಲ್ಲ.
ಅವನು ಈ ನಗರದ ವಿರುದ್ಧ ಗುರಾಣಿಗಳೊಂದಿಗೆ ಬರುವುದಿಲ್ಲ. ಅವನು ಈ ನಗರವನ್ನು ಮುತ್ತಲು ಮಣ್ಣಿನ ದಿಬ್ಬವನ್ನು ನಿರ್ಮಿಸುವುದಿಲ್ಲ.
2 ಅರಸುಗಳು 19 : 33 (ERVKN)
ಅವನು ತಾನು ಬಂದ ದಾರಿಯಲ್ಲೇ ಹಿಂದಕ್ಕೆ ಹೋಗುತ್ತಾನೆ. ಅವನು ಈ ನಗರದೊಳಕ್ಕೆ ಬರುವುದಿಲ್ಲ.
ಯೆಹೋವನೇ ಇದನ್ನು ನುಡಿದಿದ್ದಾನೆ.
2 ಅರಸುಗಳು 19 : 34 (ERVKN)
ನಾನು ಈ ನಗರವನ್ನು ಕಾಪಾಡುತ್ತೇನೆ ಮತ್ತು ಇದನ್ನು ರಕ್ಷಿಸುತ್ತೇನೆ. ನನಗಾಗಿಯೂ ನನ್ನ ಸೇವಕನಾದ ದಾವೀದನಿಗಾಗಿಯೂ ನಾನು ಇದನ್ನು ಮಾಡುತ್ತೇನೆ.’ ”
2 ಅರಸುಗಳು 19 : 35 (ERVKN)
ಅಶ್ಶೂರದ ಸೇನೆಯು ನಾಶಗೊಳಿಸಲ್ಪಟ್ಟಿತು ಆ ರಾತ್ರಿ ಯೆಹೋವನ ದೂತನು ಹೊರಕ್ಕೆ ಹೋಗಿ, ಅಶ್ಶೂರದ ಶಿಬಿರದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಜನರನ್ನು ಕೊಂದುಹಾಕಿದನು. ಜನರು ಬೆಳಗಿನ ಜಾವದಲ್ಲಿ ಮೇಲಕ್ಕೆದ್ದಾಗ ಸತ್ತ ದೇಹಗಳನ್ನು ನೋಡಿದರು.
2 ಅರಸುಗಳು 19 : 36 (ERVKN)
ಆಗ ಅಶ್ಶೂರದ ರಾಜನಾದ ಸನ್ಹೇರೀಬನು ತಾನು ವಾಸಿಸುತ್ತಿದ್ದ ನಿನವೆಗೆ ಹಿಂದಿರುಗಿಹೋದನು.
2 ಅರಸುಗಳು 19 : 37 (ERVKN)
ಸನ್ಹೇರೀಬನು ಒಂದು ದಿನ ತನ್ನ ದೇವರಾದ ನಿಸ್ರೋಕನನ್ನು ಆಲಯದಲ್ಲಿ ಆರಾಧಿಸುತ್ತಿದ್ದನು. ಅವನ ಮಕ್ಕಳಾದ ಅದ್ರಮ್ಮೆಲೆಕ್ ಮತ್ತು ಸರೆಚೆರ್ ಅವನನ್ನು ಖಡ್ಗದಿಂದ ಇರಿದುಕೊಂದರು. ನಂತರ ಅದ್ರಮ್ಮೆಲೆಕ್ ಮತ್ತು ಸರೆಚೆರ್ ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಸನ್ಹೇರೀಬನ ಮಗನಾದ ಏಸರ್ಹದ್ದೋನನು ಅವನ ನಂತರ ಹೊಸ ರಾಜನಾದನು.
❮
❯