2 ಕೊರಿಂಥದವರಿಗೆ 7 : 1 (ERVKN)
ಪ್ರಿಯ ಸ್ನೇಹಿತರೇ, ನಾವು ದೇವರಿಂದ ಈ ವಾಗ್ದಾನಗಳನ್ನು ಹೊಂದಿದ್ದೇವೆ. ಆದ್ದರಿಂದ ನಮ್ಮನ್ನು ಶುದ್ಧರನ್ನಾಗಿ ಮಾಡಿಕೊಳ್ಳಬೇಕು. ನಮ್ಮ ದೇಹವನ್ನಾಗಲಿ ನಮ್ಮ ಆತ್ಮವನ್ನಾಗಲಿ ಅಶುದ್ಧಗೊಳಿಸುವ ಎಲ್ಲಾ ವಿಧದ ಮಲಿನತೆಯಿಂದ ನಾವು ದೂರವಿರೋಣ. ನಾವು ದೇವರನ್ನು ಗೌರವಿಸುವುದರಿಂದ ಪರಿಶುದ್ಧವಾದ ಬಾಳ್ವೆಯನ್ನು ನಡೆಸಲು ನಾವು ಪ್ರಯತ್ನಿಸಬೇಕು.
2 ಕೊರಿಂಥದವರಿಗೆ 7 : 2 (ERVKN)
ಪೌಲನ ಆನಂದ ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವನ್ನು ಕೊಡಿರಿ. ನಾವು ನಿಮ್ಮಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ಯಾರ ನಂಬಿಕೆಯನ್ನೂ ಹಾಳುಮಾಡಿಲ್ಲ; ಯಾರನ್ನೂ ವಂಚಿಸಲಿಲ್ಲ.
2 ಕೊರಿಂಥದವರಿಗೆ 7 : 3 (ERVKN)
ನಾನು ಇದನ್ನು ಹೇಳುತ್ತಿರುವುದು ನಿಮ್ಮನ್ನು ನಿಂದಿಸುವುದಕ್ಕಾಗಿಯಲ್ಲ. ನಿಮ್ಮೊಂದಿಗೆ ಬದುಕುವಷ್ಟರಮಟ್ಟಿಗೆ ಮತ್ತು ಸಾಯುವಷ್ಟರಮಟ್ಟಿಗೆ ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತೇವೆಂದು ನಾನು ಮೊದಲೇ ನಿಮಗೆ ತಿಳಿಸಿದ್ದೇನೆ.
2 ಕೊರಿಂಥದವರಿಗೆ 7 : 4 (ERVKN)
ನಿಮ್ಮ ವಿಷಯದಲ್ಲಿ ನನಗೆ ಬಹಳ ಭರವಸವಿದೆ. ನಾನು ನಿಮ್ಮ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನೀವು ನನ್ನನ್ನು ಬಹಳವಾಗಿ ಸಂತೈಸಿದಿರಿ. ನಮ್ಮ ಎಲ್ಲಾ ಇಕ್ಕಟ್ಟುಗಳಲ್ಲಿಯೂ ನನಗೆ ಮಹಾ ಆನಂದವಿದೆ.
2 ಕೊರಿಂಥದವರಿಗೆ 7 : 5 (ERVKN)
ನಾವು ಮಕೆದೋನಿಯಕ್ಕೆ ಬಂದಾಗ ನಮಗೆ ವಿಶ್ರಾಂತಿಯೇ ಇರಲಿಲ್ಲ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿದ್ದವು. ಹೊರಗೆ ಕಲಹವಿತ್ತು, ಒಳಗೆ ಭಯವಿತ್ತು.
2 ಕೊರಿಂಥದವರಿಗೆ 7 : 6 (ERVKN)
ಆದರೆ ದೇವರು ಇಕ್ಕಟ್ಟುಗಳಲ್ಲಿರುವ ಜನರನ್ನು ಸಂತೈಸುತ್ತಾನೆ. ತೀತನು ಬಂದಾಗ ದೇವರು ನಮ್ಮನ್ನು ಸಂತೈಸಿದನು.
2 ಕೊರಿಂಥದವರಿಗೆ 7 : 7 (ERVKN)
ಅವನ ಆಗಮನದಿಂದಲೂ ನೀವು ಅವನಿಗೆ ಕೊಟ್ಟ ಆದರಣೆಯಿಂದಲೂ ನಮಗೆ ಸಮಾಧಾನವಾಯಿತು. ನನ್ನನ್ನು ನೋಡಲು ನಿಮಗಿರುವ ಹಂಬಲದ ಕುರಿತಾಗಿಯೂ ನಿಮ್ಮ ಕಾರ್ಯಗಳಿಂದ ನಿಮಗಾಗಿರುವ ದುಃಖದ ಕುರಿತಾಗಿಯೂ ನನ್ನ ವಿಷಯವಾಗಿ ನಿಮಗಿರುವ ಮಹಾಹಿತಚಿಂತನೆಯ ಕುರಿತಾಗಿಯೂ ಅವನು ನನಗೆ ಹೇಳಿದಾಗ ನನಗೆ ಬಹಳ ಸಂತೋಷವಾಯಿತು.
2 ಕೊರಿಂಥದವರಿಗೆ 7 : 8 (ERVKN)
ನಾನು ನಿಮಗೆ ಬರೆದ ಪತ್ರವು ನಿಮಗೆ ದುಃಖವನ್ನು ಉಂಟುಮಾಡಿದ್ದರೂ, ಅದನ್ನು ಬರೆದದ್ದಕ್ಕೆ ನನಗೆ ದುಃಖವಿಲ್ಲ, ಆ ಪತ್ರವು ನಿಮಗೆ ದುಃಖವನ್ನು ಉಂಟು ಮಾಡಿತೆಂದು ನನಗೆಗೊತ್ತಿದೆ. ಆ ವಿಷಯದಲ್ಲಿ ನನಗೆ ವ್ಯಸನವಾಯಿತು. ಆದರೆ ಅದು ನಿಮ್ಮನ್ನು ಸ್ವಲ್ಪಕಾಲದವರೆಗೆ ಮಾತ್ರ ದುಃಖಿತರನ್ನಾಗಿ ಮಾಡಿತು.
2 ಕೊರಿಂಥದವರಿಗೆ 7 : 9 (ERVKN)
ಈಗ ನಾನು ಸಂತೋಷವಾಗಿದ್ದೇನೆ. ನಿಮ್ಮನ್ನು ದುಃಖಿತರನ್ನಾಗಿ ಮಾಡಿದ್ದಕ್ಕಾಗಿ ನಾನು ದುಃಖಿಸುತ್ತಿಲ್ಲ. ಆದರೆ ನಿಮ್ಮ ದುಃಖವು ನಿಮ್ಮ ಹೃದಯಗಳಲ್ಲಿ ಪರಿವರ್ತನೆಯನ್ನು ಉಂಟುಮಾಡಿದ್ದರಿಂದ ನಾನು ಸಂತೋಷವಾಗಿದ್ದೇನೆ. ದೇವರ ಇಚ್ಫೆಗನುಸಾರವಾಗಿ ನೀವು ದುಃಖಿತರಾದಿರಿ. ಆದ್ದರಿಂದ ನಮ್ಮಿಂದ ನಿಮಗೆ ಯಾವ ರೀತಿಯಲ್ಲಿಯೂ ನೋವಾಗಲಿಲ್ಲ.
2 ಕೊರಿಂಥದವರಿಗೆ 7 : 10 (ERVKN)
ದೇವರ ಇಷ್ಟಾನುಸಾರವಾದ ದುಃಖವು ಹೃದಯವನ್ನೂ ಜೀವಿತವನ್ನೂ ಪರಿವರ್ತಿಸುತ್ತದೆ. ಈ ಪರಿವರ್ತನೆಯು ರಕ್ಷಣೆಗೆ ನಡೆಸುತ್ತದೆ. ಈ ಪರಿವರ್ತನೆಯ ವಿಷಯದಲ್ಲಿ ನಾವು ವ್ಯಸನಪಡಬೇಕಾಗಿಲ್ಲ. ಆದರೆ, ಲೋಕವು ಹೊಂದಿರುವ ದುಃಖವು ಮರಣವನ್ನು ಬರಮಾಡುತ್ತದೆ.
2 ಕೊರಿಂಥದವರಿಗೆ 7 : 11 (ERVKN)
ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ.
2 ಕೊರಿಂಥದವರಿಗೆ 7 : 12 (ERVKN)
ನಾನು ಆ ಪತ್ರವನ್ನು ಬರೆದದ್ದು ತಪ್ಪು ಮಾಡಿದವನಿಗೋಸ್ಕರವಲ್ಲ, ಆ ತಪ್ಪಿನಿಂದ ದುಃಖಕ್ಕೆ ಒಳಗಾದವನಿಗೋಸ್ಕರವೂ ಅಲ್ಲ. ಆದರೆ ನಮ್ಮ ವಿಷಯದಲ್ಲಿ ನಿಮಗಿರುವ ಮಹಾಚಿಂತೆಯನ್ನು ನೀವು ದೇವರ ಎದುರಿನಲ್ಲಿ ನೋಡುವಂತಾಗಬೇಕೆಂದು ಆ ಪತ್ರವನ್ನು ಬರೆದೆನು.
2 ಕೊರಿಂಥದವರಿಗೆ 7 : 13 (ERVKN)
ಆದ್ದರಿಂದಲೇ ನಮಗೆ ಆದರಣೆಯಾಯಿತು. ತೀತನು ಬಹು ಸಂತೋಷವಾಗಿರುವುದನ್ನು ಕಂಡು ನಮಗೆ ಮತ್ತಷ್ಟು ಸಂತೋಷವಾಯಿತು. ನೀವೆಲ್ಲರೂ ಅವನನ್ನು ಸಂತೋಷಗೊಳಿಸಿದಿರಿ.
2 ಕೊರಿಂಥದವರಿಗೆ 7 : 14 (ERVKN)
ತೀತನ ಮುಂದೆ ನಾನು ನಿಮ್ಮನ್ನು ಹೊಗಳಿದೆನು. ಅದು ಸಮರ್ಪಕವೆಂದು ನೀವು ನಿರೂಪಿಸಿದಿರಿ. ನಾವು ನಿಮಗೆ ಹೇಳಿದ ಪ್ರತಿಯೊಂದೂ ಸತ್ಯವಾಗಿತ್ತು. ನಾವು ತೀತನ ಮುಂದೆ ನಿಮ್ಮ ವಿಷಯದಲ್ಲಿ ಹೇಳಿದ ಹೊಗಳಿಕೆಯ ಮಾತುಗಳೆಲ್ಲಾ ಸತ್ಯವೆಂದು ನೀವು ನಿರೂಪಿಸಿದಿರಿ.
2 ಕೊರಿಂಥದವರಿಗೆ 7 : 15 (ERVKN)
ನೀವೆಲ್ಲರೂ ವಿಧೇಯರಾಗಿರಲು ಸಿದ್ಧರಾಗಿದ್ದನ್ನು ಜ್ಞಾಪಿಸಿಕೊಂಡಾಗಲೆಲ್ಲಾ ಅವನಿಗೆ ನಿಮ್ಮ ಮೇಲೆ ಪ್ರೀತಿಯು ಹೆಚ್ಚಾಗುತ್ತದೆ. ನೀವು ಅವನನ್ನು ಗೌರವದಿಂದಲೂ ಭಯದಿಂದಲೂ ಸ್ವೀಕರಿಸಿದಿರಿ.
2 ಕೊರಿಂಥದವರಿಗೆ 7 : 16 (ERVKN)
ನನಗೆ ನಿಮ್ಮ ವಿಷಯದಲ್ಲಿ ಪೂರ್ಣ ಭರವಸೆ ಇರುವುದರಿಂದ ಬಹು ಸಂತೋಷಪಡುತ್ತೇನೆ.

1 2 3 4 5 6 7 8 9 10 11 12 13 14 15 16