2 ಕೊರಿಂಥದವರಿಗೆ 5 : 1 (ERVKN)
ಭೂಮಿಯ ಮೇಲೆ ನಾವು ವಾಸವಾಗಿರುವ ಈ ಗುಡಾರವು ಅಂದರೆ ಈ ದೇಹವು ನಾಶವಾಗುವುದೆಂದು ನಮಗೆ ಗೊತ್ತಿದೆ. ಆದರೆ ಅದು ಸಂಭವಿಸಿದಾಗ, ನಮ್ಮ ವಾಸಕ್ಕಾಗಿ ದೇವರು ನಮಗೊಂದು ಮನೆಯನ್ನು ಕೊಡುವನು. ಅದು ಮನುಷ್ಯರಿಂದ ನಿರ್ಮಿತವಾದ ಮನೆಯಲ್ಲ. ಅದು ಪರಲೋಕದಲ್ಲಿರುವ ಶಾಶ್ವತವಾದ ಮನೆಯಾಗಿದೆ.
2 ಕೊರಿಂಥದವರಿಗೆ 5 : 2 (ERVKN)
ಆದರೆ ಈಗ ನಾವು ಈ ದೇಹದಲ್ಲಿ ಬಳಲಿ ಹೋಗಿದ್ದೇವೆ. ಪರಲೋಕದಲ್ಲಿರುವ ನಮ್ಮ ಮನೆಯನ್ನು ದೇವರು ನಮಗೆ ಯಾವಾಗ ಕೊಡುವನೊ ಎಂದು ಹಾತೊರೆಯುತ್ತಿದ್ದೇವೆ.
2 ಕೊರಿಂಥದವರಿಗೆ 5 : 3 (ERVKN)
ನಾವು ಅದನ್ನು ಧರಿಸಿಕೊಂಡಾಗ ಬೆತ್ತಲೆಯಾಗಿರುವುದಿಲ್ಲ.
2 ಕೊರಿಂಥದವರಿಗೆ 5 : 4 (ERVKN)
ಈ ಗುಡಾರದಲ್ಲಿರುವ ತನಕ ನಮಗೆ ಭಾರವಾದ ಹೊರೆಗಳಿವೆ ಮತ್ತು ನಾವು ನರಳುತ್ತೇವೆ. ಬೆತ್ತಲೆಯಾಗಿರಲು ನಾವು ಇಷ್ಟಪಡದೆ ಪರಲೋಕದ ಮನೆಯನ್ನು ಧರಿಸಿಕೊಳ್ಳಲು ಇಷ್ಟಪಡುತ್ತೇವೆ. ಸತ್ತುಹೋಗುವ ಈ ದೇಹವನ್ನು ಜೀವವು ಪೂರ್ಣವಾಗಿ ಆವರಿಸಿಕೊಳ್ಳುವುದು.
2 ಕೊರಿಂಥದವರಿಗೆ 5 : 5 (ERVKN)
ಇದಕ್ಕೋಸ್ಕರವಾಗಿಯೇ ದೇವರು ನಮ್ಮನ್ನು ಸಿದ್ಧಗೊಳಿಸಿದ್ದಾನೆ ಮತ್ತು ಇದನ್ನು ಖಚಿತಪಡಿಸಲು ಪವಿತ್ರಾತ್ಮನನ್ನೇ ನಮಗೆ ಅನುಗ್ರಹಿಸಿದ್ದಾನೆ.
2 ಕೊರಿಂಥದವರಿಗೆ 5 : 6 (ERVKN)
ಆದ್ದರಿಂದ ಯಾವಾಗಲೂ ಧೈರ್ಯದಿಂದಿದ್ದೇವೆ. ಈ ದೇಹದಲ್ಲಿ ವಾಸವಾಗಿರುವತನಕ ಪ್ರಭುವಿನಿಂದ ದೂರವಾಗಿರುತ್ತೇವೆಂಬುದು ನಮಗೆ ತಿಳಿದಿದೆ.
2 ಕೊರಿಂಥದವರಿಗೆ 5 : 7 (ERVKN)
ನಾವು ಯಾವುದನ್ನು ನೋಡುತ್ತಿದ್ದೇವೊ ಅದರಿಂದ ಜೀವಿಸುತ್ತಿಲ್ಲ. ಆದರೆ ಯಾವುದನ್ನು ನಂಬಿದ್ದೇವೊ ಅದರಿಂದ ಜೀವಿಸುತ್ತಿದ್ದೇವೆ.
2 ಕೊರಿಂಥದವರಿಗೆ 5 : 8 (ERVKN)
ಆದ್ದರಿಂದ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಪ್ರಭುವಿನೊಂದಿಗೆ ವಾಸಿಸುವುದನ್ನೇ ನಿಜವಾಗಿಯೂ ಅಪೇಕ್ಷಿಸುತ್ತೇವೆ.
2 ಕೊರಿಂಥದವರಿಗೆ 5 : 9 (ERVKN)
ದೇವರನ್ನು ಮೆಚ್ಚಿಸಬೇಕೆಂಬುದೊಂದೇ ನಮಗಿರುವ ಉದ್ದೇಶವಾಗಿದೆ. ನಾವು ನಮ್ಮ ದೇಹದಲ್ಲಿ ಇಲ್ಲಿ ವಾಸವಾಗಿರುವಾಗಲೂ ಪ್ರಭುವಿನೊಂದಿಗೆ ಅಲ್ಲಿ ವಾಸವಾಗಿರುವಾಗಲೂ ಆತನನ್ನು ಮೆಚ್ಚಿಸಬೇಕೆಂಬುದೊಂದೇ ನಮ್ಮ ಬಯಕೆಯಾಗಿದೆ.
2 ಕೊರಿಂಥದವರಿಗೆ 5 : 10 (ERVKN)
ನಾವೆಲ್ಲರೂ ನ್ಯಾಯ ವಿಚಾರಣೆಗಾಗಿ ಕ್ರಿಸ್ತನ ಮುಂದೆ ನಿಂತುಕೊಳ್ಳಲೇಬೇಕು. ಪ್ರತಿಯೊಬ್ಬನು ಇಹಲೋಕದ ದೇಹದಲ್ಲಿ ವಾಸವಾಗಿದ್ದಾಗ ಮಾಡಿದ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಪ್ರತಿಫಲವನ್ನು ಹೊಂದುವನು.
2 ಕೊರಿಂಥದವರಿಗೆ 5 : 11 (ERVKN)
ಪ್ರಭುವಿನ ಭಯ ಎಂದರೇನೆಂಬುದು ನಮಗೆ ತಿಳಿದಿದೆ. ಆದ್ದರಿಂದ ಸತ್ಯವನ್ನು ಸ್ವೀಕರಿಸಿಕೊಳ್ಳುವಂತೆ ಜನರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲನು. ನೀವು ಸಹ ನಿಮ್ಮ ಹೃದಯಗಳಲ್ಲಿ ನಮ್ಮನ್ನು ತಿಳಿದುಕೊಂಡಿದ್ದೀರೆಂದು ನಂಬುತ್ತೇವೆ.
2 ಕೊರಿಂಥದವರಿಗೆ 5 : 12 (ERVKN)
ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ.
2 ಕೊರಿಂಥದವರಿಗೆ 5 : 13 (ERVKN)
ನಾವು ಹುಚ್ಚರಾಗಿದ್ದರೆ ಅದು ದೇವರಿಗೋಸ್ಕರವಾಗಿಯೇ. ನಮಗೆ ಸ್ವಸ್ಥಬುದ್ಧಿಯಿದ್ದರೆ ಅದು ನಿಮಗೋಸ್ಕರವಾಗಿಯೇ.
2 ಕೊರಿಂಥದವರಿಗೆ 5 : 14 (ERVKN)
ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಿಸುತ್ತದೆ. ಏಕೆಂದರೆ, ಎಲ್ಲಾ ಜನರಿಗೋಸ್ಕರವಾಗಿ ಆತನು ಸತ್ತನೆಂಬುದು ನಮಗೆ ಗೊತ್ತಿದೆ. ಆದ್ದರಿಂದ ಎಲ್ಲರೂ ಸತ್ತುಹೋದರು.
2 ಕೊರಿಂಥದವರಿಗೆ 5 : 15 (ERVKN)
ಜೀವಿಸುವವರು ಇನ್ನು ಮೇಲೆ ತಮಗೋಸ್ಕರ ಜೀವಿಸಬಾರದೆಂದು ಕ್ರಿಸ್ತನು ಎಲ್ಲಾ ಜನರಿಗಾಗಿ ಸತ್ತನು. ಆ ಜನರು ತನಗೋಸ್ಕರ ಜೀವಿಸಲೆಂದು ಆತನು ಅವರಿಗೋಸ್ಕರ ಸತ್ತನು ಮತ್ತು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನು.
2 ಕೊರಿಂಥದವರಿಗೆ 5 : 16 (ERVKN)
ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ.
2 ಕೊರಿಂಥದವರಿಗೆ 5 : 17 (ERVKN)
ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು.
2 ಕೊರಿಂಥದವರಿಗೆ 5 : 18 (ERVKN)
ಇದೆಲ್ಲಾ ದೇವರಿಂದಲೇ ಆಯಿತು. ಕ್ರಿಸ್ತನ ಮೂಲಕವಾಗಿ ದೇವರು ನಮ್ಮನ್ನು ತನ್ನೊಂದಿಗೆ ಸಮಾಧಾನ ಪಡಿಸಿಕೊಂಡಿದ್ದಾನೆ. ಇದಲ್ಲದೆ ಇತರರನ್ನು ಈ ಸಮಾಧಾನಕ್ಕೆ ಕರೆದುಕೊಂಡು ಬರುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ.
2 ಕೊರಿಂಥದವರಿಗೆ 5 : 19 (ERVKN)
ಅಂದರೆ, ದೇವರು ಕ್ರಿಸ್ತನಲ್ಲಿ ಇಡೀ ಜಗತ್ತನ್ನೇ ತನ್ನೊಂದಿಗೆ ಸಮಾಧಾನಪಡಿಸಿಕೊಳ್ಳುತ್ತಿದ್ದನು. ದೇವರು ಕ್ರಿಸ್ತನಲ್ಲಿ ಜನರ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಈ ಸಮಾಧಾನದ ಸಂದೇಶವನ್ನು ಜನರಿಗೆ ತಿಳಿಸುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ.
2 ಕೊರಿಂಥದವರಿಗೆ 5 : 20 (ERVKN)
ಆದ್ದರಿಂದ ಕ್ರಿಸ್ತನ ಪರವಾಗಿ ಮಾತಾಡಲು ನಮ್ಮನ್ನು ಕಳುಹಿಸಲಾಗಿದೆ. ಇದು, ದೇವರು ನಮ್ಮ ಮೂಲಕವಾಗಿ ಜನರನ್ನು ಕರೆಯುವಂತಿದೆ. ದೇವರೊಂದಿಗೆ ಸಮಾಧಾನವಾಗಿರಿ ಎಂದು ನಾವು ನಿಮ್ಮನ್ನು ಬೇಡಿಕೊಳ್ಳುವಾಗ ಕ್ರಿಸ್ತನ ಪರವಾಗಿ ಮಾತಾಡುವವರಾಗಿದ್ದೇವೆ.
2 ಕೊರಿಂಥದವರಿಗೆ 5 : 21 (ERVKN)
ಕ್ರಿಸ್ತನಲ್ಲಿ ಪಾಪವಿರಲಿಲ್ಲ. ಆದರೆ ನಾವು ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಆತನನ್ನು ಪಾಪಸ್ವರೂಪಿಯನ್ನಾಗಿ ಮಾಡಿದನು.

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: