2 ಕೊರಿಂಥದವರಿಗೆ 11 : 1 (ERVKN)
ಪೌಲನು ಮತ್ತು ಸುಳ್ಳು ಅಪೊಸ್ತಲರು ನಾನು ಸ್ವಲ್ಪ ಬುದ್ಧಿಹೀನನಾಗಿರುವಾಗಲೂ ನೀವು ನನ್ನ ವಿಷಯದಲ್ಲಿ ತಾಳ್ಮೆಯಿಂದಿರಬೇಕೆಂದು ಅಪೇಕ್ಷಿಸುತ್ತೇನೆ. ಆದರೆ ನೀವು ಈಗಾಗಲೇ ನನ್ನ ವಿಷಯದಲ್ಲಿ ತಾಳ್ಮೆಯಿಂದಿದ್ದೀರಿ.
2 ಕೊರಿಂಥದವರಿಗೆ 11 : 2 (ERVKN)
ನಿಮ್ಮ ವಿಷಯದಲ್ಲಿ ನಾನು ಚಿಂತಿಸುತ್ತೇನೆ. ಈ ಚಿಂತೆಯು ದೇವರಿಂದ ಬಂದದ್ದು. ನಿಮ್ಮನ್ನು ಕ್ರಿಸ್ತನಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಕ್ರಿಸ್ತನೊಬ್ಬನೇ ನಿಮ್ಮ ಪತಿಯಾಗಿರಬೇಕು. ನಾನು ನಿಮ್ಮನ್ನು ಕ್ರಿಸ್ತನಿಗೆ ಆತನ ಶುದ್ಧ ವಧುವನ್ನಾಗಿ ಕೊಡಲು ಅಪೇಕ್ಷಿಸುತ್ತೇನೆ.
2 ಕೊರಿಂಥದವರಿಗೆ 11 : 3 (ERVKN)
ಹವ್ವಳು ಸರ್ಪದ ಕುಯುಕ್ತಿಯಿಂದ ಮೋಸಗೊಂಡಂತೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿ ಇರಬೇಕಾದ ಯಥಾರ್ಥತೆಯನ್ನೂ ಪರಿಶುದ್ಧತೆಯನ್ನೂ ಬಿಟ್ಟು ಕೆಟ್ಟುಹೋದೀತೆಂಬ ಭಯ ನನಗಿದೆ.
2 ಕೊರಿಂಥದವರಿಗೆ 11 : 4 (ERVKN)
ಯೇಸುವಿನ ಬಗ್ಗೆ ನಾವು ಬೋಧಿಸಿದ ಸಂಗತಿಗಳಿಗೆ ಭಿನ್ನವಾದಂಥ ಸಂಗತಿಗಳನ್ನು ಬೋಧಿಸುವ ಬೋಧಕರು ನಿಮ್ಮ ಬಳಿಗೆ ಬಂದು ಬೋಧಿಸಿದರೂ ನೀವು ತಾಳ್ಮೆಯಿಂದಿರುತ್ತೀರಿ. ನೀವು ನಮ್ಮಿಂದ ಸ್ವೀಕರಿಸಿಕೊಂಡ ಪವಿತ್ರಾತ್ಮನಿಗೂ ಸುವಾರ್ತೆಗೂ ಭಿನ್ನವಾದ ಆತ್ಮವನ್ನೂ ಸುವಾರ್ತೆಯನ್ನೂ ಸ್ವೀಕರಿಸಿಕೊಳ್ಳಲು ಬಹು ಇಷ್ಟವುಳ್ಳವರಾಗಿದ್ದೀರಿ. ಆದ್ದರಿಂದ ನೀವು ನಮ್ಮ ವಿಷಯದಲ್ಲಿ ತಾಳ್ಮೆಯಿಂದಿರಬೇಕು.
2 ಕೊರಿಂಥದವರಿಗೆ 11 : 5 (ERVKN)
ಆ “ಮಹಾ ಅಪೊಸ್ತಲರು” ನನಗಿಂತ ಮಿಗಿಲಾದವರೆಂದು ನಾನು ಭಾವಿಸುವುದಿಲ್ಲ.
2 ಕೊರಿಂಥದವರಿಗೆ 11 : 6 (ERVKN)
ನಾನು ತರಬೇತಿ ಹೊಂದಿದ ಭಾಷಣಗಾರನಲ್ಲ ಎಂಬುದೇನೊ ನಿಜ, ಆದರೆ ನನಗೂ ಜ್ಞಾನವಿದೆ. ಇದನ್ನು ನಿಮಗೆ ಪ್ರತಿಯೊಂದು ವಿಧದಲ್ಲಿಯೂ ಸ್ಪಷ್ಟವಾಗಿ ತೋರಿಸಿದೆವು.
2 ಕೊರಿಂಥದವರಿಗೆ 11 : 7 (ERVKN)
ನಾನು ನಿಮಗೆ ದೇವರ ಸುವಾರ್ತೆಯನ್ನು ಉಚಿತವಾಗಿ ಬೋಧಿಸಿದೆನು. ನಿಮ್ಮನ್ನು ಪ್ರಮುಖರನ್ನಾಗಿ ಮಾಡಲು ನನ್ನನ್ನು ತಗ್ಗಿಸಿಕೊಂಡೆನು. ಅದು ತಪ್ಪೆಂದು ಭಾವಿಸುತ್ತೀರೋ?
2 ಕೊರಿಂಥದವರಿಗೆ 11 : 8 (ERVKN)
ನಾನು ಇತರ ಸಭೆಗಳಿಂದ ನಿಮ್ಮ ಮಧ್ಯದಲ್ಲಿ ಸೇವೆ ಮಾಡುವುದಕ್ಕಾಗಿ ಹಣವನ್ನು ತೆಗೆದುಕೊಂಡೆನು.
2 ಕೊರಿಂಥದವರಿಗೆ 11 : 9 (ERVKN)
ನಾನು ನಿಮ್ಮಲ್ಲಿದ್ದಾಗ ನನ್ನ ಯಾವ ಕೊರತೆಯಲ್ಲಿಯೂ ನಿಮಗೆ ತೊಂದರೆ ಕೊಡಲಿಲ್ಲ. ಮಕೆದೋನಿಯದಿಂದ ಬಂದಿದ್ದ ಸಹೋದರರು ನನಗೆ ಬೇಕಾಗಿದ್ದದ್ದನ್ನೆಲ್ಲ ಕೊಟ್ಟರು. ನಾನು ನಿಮಗೆ ಯಾವ ರೀತಿಯಲ್ಲಿಯೂ ಭಾರವಾಗದಂತೆ ನೋಡಿಕೊಂಡೆನು. ಇನ್ನು ಮುಂದೆಯೂ ನಾನು ನಿಮಗೆ ಭಾರವಾಗಿರುವುದಿಲ್ಲ.
2 ಕೊರಿಂಥದವರಿಗೆ 11 : 10 (ERVKN)
ಈ ವಿಷಯದಲ್ಲಿ ನಾನು ಹೆಮ್ಮೆಪಡುವುದನ್ನು ಅಖಾಯದಲ್ಲಿರುವ ಯಾರೂ ನಿಲ್ಲಿಸಲಾರರು. ಕ್ರಿಸ್ತನ ಸತ್ಯವು ನನ್ನೊಳಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ.
2 ಕೊರಿಂಥದವರಿಗೆ 11 : 11 (ERVKN)
ನಾನು ನಿಮಗೆ ಭಾರವಾಗದಿರುವುದು ನಿಮ್ಮ ಮೇಲೆ ನನಗೆ ಪ್ರೀತಿಯಿಲ್ಲದಿರುವ ಕಾರಣದಿಂದಲೋ? ಇಲ್ಲ! ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತಿದೆ.
2 ಕೊರಿಂಥದವರಿಗೆ 11 : 12 (ERVKN)
ಈಗ ನಾನು ಮಾಡುತ್ತಿರುವುದನ್ನು ಮುಂದುವರೆಸುತ್ತೇನೆ. ಆ ಜನರಿಗೆ ಹೊಗಳಿಕೊಳ್ಳಲು ಯಾವ ಕಾರಣವೂ ಸಿಕ್ಕಬಾರದೆಂದು ಇದನ್ನು ಮುಂದುವರಿಸುತ್ತೇನೆ. ಅವರು ತಮ್ಮ ಕೆಲಸದ ಬಗ್ಗೆ ಜಂಬಪಡುತ್ತಾರೆ. ತಾವು ಮಾಡುವ ಆ ಕೆಲಸವು ನಮ್ಮ ಕೆಲಸದಂತೆಯೇ ಇದೆಯೆಂದು ಹೇಳಿಕೊಳ್ಳಲು ಬಯಸುತ್ತಾರೆ.
2 ಕೊರಿಂಥದವರಿಗೆ 11 : 13 (ERVKN)
ಅವರು ನಿಜ ಅಪೊಸ್ತಲರಲ್ಲ. ಅವರು ಮೋಸಗಾರರಾದ ಕೆಲಸಗಾರರು. ತಾವು ಕ್ರಿಸ್ತನ ಅಪೊಸ್ತಲರಲ್ಲದಿದ್ದರೂ ಜನರು ತಮ್ಮನ್ನು ಕ್ರಿಸ್ತನ ಅಪೊಸ್ತಲರೆಂದು ತಿಳಿದುಕೊಳ್ಳುವಂತೆ ನಟಿಸುತ್ತಾರೆ.
2 ಕೊರಿಂಥದವರಿಗೆ 11 : 14 (ERVKN)
ಇದು ನಮಗೆ ಆಶ್ಚರ್ಯವಾದದ್ದೇನೂ ಅಲ್ಲ. ಏಕೆಂದರೆ ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ.
2 ಕೊರಿಂಥದವರಿಗೆ 11 : 15 (ERVKN)
ಹೀಗಿರಲು ಸೈತಾನನ ಸೇವಕರು ತಾವು ಸರಿಯಾದ ಕೆಲಸವನ್ನು ಮಾಡುತ್ತಿರುವವರಂತೆ ನಟಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಅವರು ಮಾಡುತ್ತಿರುವ ಕೆಲಸಗಳ ಪ್ರತಿಫಲವಾಗಿ ಅವರಿಗೆ ಕೊನೆಯಲ್ಲಿ ದಂಡನೆಯಾಗುವುದು.
2 ಕೊರಿಂಥದವರಿಗೆ 11 : 16 (ERVKN)
ಪೌಲನು ತನಗಾದ ಹಿಂಸೆಯ ಬಗ್ಗೆ ತಿಳಿಸುವನು ನಾನು ನಿಮಗೆ ಮತ್ತೆ ಹೇಳುವುದೇನೆಂದರೆ, ನನ್ನನ್ನು ಬುದ್ಧಿಹೀನನೆಂದು ಯಾರೂ ಯೋಚಿಸಕೂಡದು. ಬುದ್ಧಿಹೀನನೆಂದು ನೀವು ಯೋಚಿಸುವುದಾಗಿದ್ದರೆ, ನೀವು ಬದ್ಧಿಹೀನನನ್ನು ಸ್ವೀಕರಿಸಿಕೊಳ್ಳುವಂತೆ ನನ್ನನ್ನು ಸ್ವೀಕರಿಸಿಕೊಳ್ಳಿರಿ. ಆಗ ನಾನು ಸ್ವಲ್ಪ ಹೆಮ್ಮೆಪಡಲು ಸಾಧ್ಯವಾಗುವುದು.
2 ಕೊರಿಂಥದವರಿಗೆ 11 : 17 (ERVKN)
ನನಗೆ ನನ್ನ ವಿಷಯದಲ್ಲಿ ಭರವಸೆ ಇರುವುದರಿಂದ ನಾನು ಹೊಗಳಿಕೊಳ್ಳುತ್ತೇನೆ. ಆದರೆ ಪ್ರಭು ಮಾತಾಡುವಂತೆ ನಾನು ಮಾತಾಡುತ್ತಿಲ್ಲ. ನಾನು ಬುದ್ಧಿಹೀನನೆಂದು ಹೊಗಳಿಕೊಳ್ಳುತ್ತಿದ್ದೇನೆ.
2 ಕೊರಿಂಥದವರಿಗೆ 11 : 18 (ERVKN)
ಅನೇಕ ಜನರು ತಮ್ಮ ಪ್ರಾಪಂಚಿಕ ಜೀವನದ ಬಗ್ಗೆ ಹೊಗಳಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾನು ಸಹ ಹೊಗಳಿಕೊಳ್ಳುತ್ತೇನೆ.
2 ಕೊರಿಂಥದವರಿಗೆ 11 : 19 (ERVKN)
ನೀವು ಬುದ್ಧಿವಂತರಾಗಿರುವುದರಿಂದ ಬುದ್ಧಿಹೀನರ ವಿಷಯದಲ್ಲಿ ಸಂತೋಷದಿಂದ ತಾಳ್ಮೆಯಿಂದಿರುತ್ತೀರಿ.
2 ಕೊರಿಂಥದವರಿಗೆ 11 : 20 (ERVKN)
ಏಕೆಂದರೆ ನಿಮ್ಮಿಂದ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುವವನ ಮತ್ತು ನಿಮ್ಮನ್ನು ಉಪಯೋಗಿಸಿಕೊಳ್ಳುವವನ ವಿಷಯದಲ್ಲಿಯೂ ಸಹ ತಾಳ್ಮೆಯಿಂದಿರುತ್ತೀರಿ. ನಿಮ್ಮನ್ನು ಮೋಸಗೊಳಿಸುವವರ, ತಮ್ಮನ್ನು ನಿಮಗಿಂಥ ಉತ್ತಮರೆಂದು ಭಾವಿಸಿಕೊಂಡಿರುವವರ ಮತ್ತು ನಿಮ್ಮ ಮುಖದ ಮೇಲೆ ಹೊಡೆಯುವವರ ವಿಷಯದಲ್ಲಿಯೂ ನೀವು ತಾಳ್ಮೆಯಿಂದಿರುತ್ತೀರಿ.
2 ಕೊರಿಂಥದವರಿಗೆ 11 : 21 (ERVKN)
ಇದನ್ನು ಹೇಳುವುದಕ್ಕೇ ನಾಚಿಕೆಯಾಗುತ್ತದೆ. ಆದರೆ, ನಿಮ್ಮೊಂದಿಗೆ ಆ ರೀತಿ ನಡೆದುಕೊಳ್ಳುವಷ್ಟು “ಬಲ” ನಮಗಿರಲಿಲ್ಲ! ಆದರೆ ಹೊಗಳಿಕೊಳ್ಳಲು ಯಾರಿಗಾದರೂ ಸಾಕಷ್ಟು ಧೈರ್ಯವಿದ್ದರೆ ನಾನು ಸಹ ಧೈರ್ಯದಿಂದ ಹೊಗಳಿಕೊಳ್ಳುತ್ತೇನೆ. (ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ.)
2 ಕೊರಿಂಥದವರಿಗೆ 11 : 22 (ERVKN)
ಆ ಜನರು ಇಬ್ರಿಯರೇ? ನಾನು ಸಹ ಇಬ್ರಿಯನು. ಅವರು ಇಸ್ರೇಲರೇ? ನಾನು ಸಹ ಇಸ್ರೇಲನು. ಅವರು ಅಬ್ರಹಾಮನ ಕುಟುಂಬಕ್ಕೆ ಸೇರಿದವರೇ? ನಾನು ಸಹ ಅಬ್ರಹಾಮನ ಕುಟುಂಬಕ್ಕೆ ಸೇರಿದವನು.
2 ಕೊರಿಂಥದವರಿಗೆ 11 : 23 (ERVKN)
ಅವರು ಕ್ರಿಸ್ತನ ಸೇವೆಮಾಡುತ್ತಿದ್ದಾರೋ? ನಾನು ಸಹ ಅವರಿಗಿಂತಲೂ ಹೆಚ್ಚಾಗಿ ಸೇವೆಮಾಡುತ್ತಿದ್ದೇನೆ. (ನಾನು ಹುಚ್ಚನಂತೆ ಹೀಗೆ ಮಾತಾಡುತ್ತಿದ್ದೇನೆ.) ನಾನು ಅವರಿಗಿಂತಲೂ ಹೆಚ್ಚು ಕಷ್ಟಪಟ್ಟು ದುಡಿದಿದ್ದೇನೆ; ಹೆಚ್ಚು ಸಲ ಸೆರೆಮನೆಯಲ್ಲಿದ್ದೆನು. ಹೆಚ್ಚು ಏಟುಗಳನ್ನು ತಿಂದಿದ್ದೇನೆ, ನಾನು ಅನೇಕ ಸಲ ಮರಣದ ಸಮೀಪದಲ್ಲಿದ್ದೆನು.
2 ಕೊರಿಂಥದವರಿಗೆ 11 : 24 (ERVKN)
ಚಾವಟಿಯಿಂದ ಮೂವತ್ತೊಂಭತ್ತು ಏಟುಗಳನ್ನು ಹೊಡೆಯಿಸಿಕೊಳ್ಳುವ ಶಿಕ್ಷೆಯನ್ನು ಯೆಹೂದಿಯರು ನನಗೆ ಐದು ಸಲ ವಿಧಿಸಿದರು.
2 ಕೊರಿಂಥದವರಿಗೆ 11 : 25 (ERVKN)
ಮೂರು ಸಲ ಕಬ್ಬಿಣದ ಸರಳುಗಳಿಂದ ಏಟನ್ನು ತಿಂದಿದ್ದೇನೆ. ಒಂದು ಸಲ ಕಲ್ಲೆಸೆದು ನನ್ನನ್ನು ಅರೆಜೀವ ಮಾಡಿದರು. ಮೂರು ಸಲ ನಾನಿದ್ದ ಹಡಗುಗಳು ಒಡೆದುಹೋದವು. ಒಮ್ಮೆ, ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿರಬೇಕಾಯಿತು.
2 ಕೊರಿಂಥದವರಿಗೆ 11 : 26 (ERVKN)
ಅನೇಕ ಪ್ರಯಾಣಗಳನ್ನು ಮಾಡಿದೆನು. ನದಿಗಳಿಂದಲೂ ಕಳ್ಳರಿಂದಲೂ ನನ್ನ ಸ್ವಂತ ಜನರಾದ ಯೆಹೂದ್ಯರಿಂದಲೂ ಮತ್ತು ಯೆಹೂದ್ಯರಲ್ಲದವರಿಂದಲೂ ಅಪಾಯಕ್ಕೀಡಾಗಿದ್ದೆನು. ಪಟ್ಟಣಗಳಲ್ಲಿಯೂ ಜನರು ವಾಸವಾಗಿಲ್ಲದ ಸ್ಥಳಗಳಲ್ಲಿಯೂ ಸಮುದ್ರಗಳಲ್ಲಿಯೂ ಸುಳ್ಳುಸಹೋದರರ ಮಧ್ಯದಲ್ಲಿಯೂ ಅಪಾಯಕ್ಕೀಡಾಗಿದ್ದೆನು.
2 ಕೊರಿಂಥದವರಿಗೆ 11 : 27 (ERVKN)
ಕಷ್ಟಕರವಾದ ಮತ್ತು ಅಪಾಯಕರವಾದ ಕೆಲಸಗಳನ್ನು ಮಾಡಿದ್ದೇನೆ. ಕೆಲವು ಸಲ ನಿದ್ರಿಸಲೂ ಇಲ್ಲ. ಹಸಿವೆ ಬಾಯಾರಿಕೆಗಳಿಂದ ಕಷ್ಟಪಟ್ಟಿದ್ದೇನೆ. ಅನೇಕಸಲ ನನಗೆ ಊಟ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರೂ ಬಟ್ಟೆಯಿರಲಿಲ್ಲ.
2 ಕೊರಿಂಥದವರಿಗೆ 11 : 28 (ERVKN)
ಹೀಗೆ ನಾನು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಎಲ್ಲಾ ಸಭೆಗಳ ಮೇಲೆ ನನಗಿರುವ ಚಿಂತೆಯೂ ಇವುಗಳಲ್ಲಿ ಒಂದು. ನಾನು ಪ್ರತಿನಿತ್ಯ ಅವುಗಳ ಬಗ್ಗೆ ಚಿಂತಿಸುತ್ತೇನೆ.
2 ಕೊರಿಂಥದವರಿಗೆ 11 : 29 (ERVKN)
ಯಾವನಾದರೂ ಬಲಹೀನನಾಗಿರುವಾಗ ನಾನೂ ಬಲಹೀನನಾಗಿರುತ್ತೇನೆ. ಯಾವನಾದರೂ ಪಾಪದಲ್ಲಿ ನಡೆಸಲ್ಪಟ್ಟರೆ ನನ್ನೊಳಗೆ ಕೋಪಗೊಳ್ಳುತ್ತೇನೆ.
2 ಕೊರಿಂಥದವರಿಗೆ 11 : 30 (ERVKN)
ಹೊಗಳಿಕೊಳ್ಳಬೇಕಾದರೆ, ನನ್ನನ್ನು ಬಲಹೀನನೆಂದು ತೋರಿಸುವ ಸಂಗತಿಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ.
2 ಕೊರಿಂಥದವರಿಗೆ 11 : 31 (ERVKN)
ನಾನು ಸುಳ್ಳು ಹೇಳುತ್ತಿಲ್ಲವೆಂದು ದೇವರಿಗೆ ಗೊತ್ತಿದೆ. ಆತನು ಪ್ರಭು ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿದ್ದಾನೆ. ಆತನಿಗೆ ಸದಾಕಾಲ ಸ್ತೋತ್ರ ಸಲ್ಲಿಸಬೇಕು.
2 ಕೊರಿಂಥದವರಿಗೆ 11 : 32 (ERVKN)
ನಾನು ದಮಸ್ಕದಲ್ಲಿದ್ದಾಗ ರಾಜನಾದ ಅರೇತನ ಅಧೀನದಲ್ಲಿದ್ದ ರಾಜ್ಯಪಾಲನು ನನ್ನನ್ನು ಬಂಧಿಸಬೇಕೆಂದಿದ್ದನು. ಅವನು ಪಟ್ಟಣದ ಸುತ್ತಲೂ ಕಾವಲುಗಾರರನ್ನು ನಿಲ್ಲಿಸಿದನು.
2 ಕೊರಿಂಥದವರಿಗೆ 11 : 33 (ERVKN)
ಆದರೆ ನನ್ನ ಕೆಲವು ಸ್ನೇಹಿತರು ನನ್ನನ್ನು ಬುಟ್ಟಿಯೊಳಗೆ ಕುಳ್ಳಿರಿಸಿ, ಗೋಡೆಯ ಕಿಟಕಿಯೊಳಗಿಂದ ಕೆಳಗಿಳಿಸಿದರು. ಹೀಗೆ ನಾನು ರಾಜ್ಯಪಾಲನಿಂದ ತಪ್ಪಿಸಿಕೊಂಡೆನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33