2 ಪೂರ್ವಕಾಲವೃತ್ತಾ 36 : 1 (ERVKN)
ಯೆಹೂದದ ಅರಸನಾದ ಯೆಹೋವಾಹಾಜ ಯೆಹೂದದ ಜನರು ಯೆಹೋವಾಹಾಜನನ್ನು ತಮ್ಮ ಹೊಸ ಅರಸನನ್ನಾಗಿ ಜೆರುಸಲೇಮಿನಲ್ಲಿ ಆರಿಸಿದರು. ಯೆಹೋವಾಹಾಜನು ಯೋಷೀಯನ ಮಗನು.
2 ಪೂರ್ವಕಾಲವೃತ್ತಾ 36 : 2 (ERVKN)
ಅವನು ತನ್ನ ಇಪ್ಪತ್ತಮೂರನೆ ವಯಸ್ಸಿನಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳ ಕಾಲ ಆಳಿದನು.
2 ಪೂರ್ವಕಾಲವೃತ್ತಾ 36 : 3 (ERVKN)
ಆ ಬಳಿಕ ಈಜಿಪ್ಟಿನ ನೆಕೋ ಯೆಹೋವಾಹಾಜನನ್ನು ಕೈದಿಯನ್ನಾಗಿ ಮಾಡಿದನು. ಯೆಹೂದದ ಜನರು ತನಗೆ ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿಯನ್ನೂ ಮೂವತ್ತನಾಲ್ಕು ಕಿಲೋಗ್ರಾಂ ಬಂಗಾರವನ್ನೂ ಕೊಡಲು ಆಜ್ಞಾಪಿಸಿದನು.
2 ಪೂರ್ವಕಾಲವೃತ್ತಾ 36 : 4 (ERVKN)
ನೆಕೋ ಯೆಹೋವಾಹಾಜನ ತಮ್ಮನಾದ ಎಲ್ಯಾಕೀಮನನ್ನು ಯೆಹೋವಾಹಾಜನ ಬದಲಿಗೆ ಯೆಹೂದದ ಮತ್ತು ಜೆರುಸಲೇಮಿನ ಅರಸನನ್ನಾಗಿ ಮಾಡಿದನು. ಅವನಿಗೆ ಎಲ್ಯಾಕೀಮನ ಬದಲು ಯೆಹೋಯಾಕೀಮ ಎಂಬ ಹೆಸರಿಟ್ಟನು. ನೆಕೋ ಯೆಹೋವಾಹಾಜನನ್ನು ಈಜಿಪ್ಟಿಗೆ ತೆಗೆದುಕೊಂಡು ಹೋದನು.
2 ಪೂರ್ವಕಾಲವೃತ್ತಾ 36 : 5 (ERVKN)
ಯೆಹೂದದ ಅರಸನಾದ ಯೆಹೋಯಾಕೀಮ ಯೆಹೋಯಾಕೀಮನು ಯೆಹೂದ ದೇಶದ ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಯೆಹೋಯಾಕೀಮನು ಯೆಹೋವನ ಚಿತ್ತಕ್ಕೆ ಒಳಗಾಗಲಿಲ್ಲ. ಅವನು ತನ್ನ ದೇವರಾದ ಯೆಹೋವನ ವಿರುದ್ಧವಾಗಿ ಪಾಪಮಾಡಿದನು.
2 ಪೂರ್ವಕಾಲವೃತ್ತಾ 36 : 6 (ERVKN)
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ಪ್ರಾಂತ್ಯದ ಮೇಲೆ ಯುದ್ಧಕ್ಕೆ ಬಂದನು. ಯೆಹೋಯಾಕೀಮನನ್ನು ಸೆರೆಹಿಡಿದು ಅವನನ್ನು ಕಂಚಿನ ಸರಪಣಿಯಿಂದ ಕಟ್ಟಿಸಿದನು. ನಂತರ ಯೆಹೋಯಾಕೀಮನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು.
2 ಪೂರ್ವಕಾಲವೃತ್ತಾ 36 : 7 (ERVKN)
ನೆಬೂಕದ್ನೆಚ್ಚರನು ದೇವಾಲಯದಿಂದ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋಗಿ ಬಾಬಿಲೋನಿನ ತನ್ನ ಅರಮನೆಯಲ್ಲಿ ಇಟ್ಟುಕೊಂಡನು.
2 ಪೂರ್ವಕಾಲವೃತ್ತಾ 36 : 8 (ERVKN)
ಯೆಹೋಯಾಕೀಮನು ಮಾಡಿದ ದುಷ್ಕ್ರಿಯೆಗಳೆಲ್ಲಾ ಇಸ್ರೇಲಿನ ಮತ್ತು ಯೆಹೂದದ ರಾಜರುಗಳ ಗ್ರಂಥದಲ್ಲಿ ಬರೆಯಲ್ಪಟ್ಟಿವೆ. ಯೆಹೋಯಾಕೀಮನ ಬದಲು ಯೆಹೋಯಾಕೀನನು ಅರಸನಾದನು. ಇವನು ಯೆಹೋಯಾಕೀಮನ ಮಗ.
2 ಪೂರ್ವಕಾಲವೃತ್ತಾ 36 : 9 (ERVKN)
ಯೆಹೂದದ ಅರಸನಾದ ಯೆಹೋಯಾಕೀನ ಯೆಹೋಯಾಕೀನನು ಯೆಹೂದ ದೇಶದ ಪಟ್ಟಕ್ಕೆ ಬಂದಾಗ ಹದಿನೆಂಟು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸಗಳ ಕಾಲ ರಾಜ್ಯವನ್ನಾಳಿದನು. ಅವನು ಯೆಹೋವನ ಚಿತ್ತಕ್ಕನುಸಾರವಾಗಿ ನಡೆಯಲಿಲ್ಲ. ಯೆಹೋಯಾಕೀನನು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದನು.
2 ಪೂರ್ವಕಾಲವೃತ್ತಾ 36 : 10 (ERVKN)
ವಸಂತ ಕಾಲದಲ್ಲಿ ನೆಬೂಕದ್ನೆಚ್ಚರನು ತನ್ನ ಸೇವಕರನ್ನು ಕಳುಹಿಸಿ ಯೆಹೋಯಾಕೀನನನ್ನು ಕರೆಯಿಸಿದನು. ಆ ಸೇವಕರು ದೇವಾಲಯದ ಕೆಲವು ವಸ್ತುಗಳನ್ನೂ ಅವನ ಜೊತೆಯಲ್ಲಿ ಬಾಬಿಲೋನಿಗೆ ತೆಗೆದುಕೊಂಡು ಹೋದರು. ನೆಬೂಕದ್ನೆಚ್ಚರನು ಯೆಹೂದ ಮತ್ತು ಜೆರುಸಲೇಮಿಗೆ ಚಿದ್ಕೀಯನನ್ನು ಹೊಸ ಅರಸನನ್ನಾಗಿ ಮಾಡಿದನು. ಚಿದ್ಕೀಯನು ಯೆಹೋಯಾಕೀನನ ಸಂಬಂಧಿಕನಾಗಿದ್ದನು.
2 ಪೂರ್ವಕಾಲವೃತ್ತಾ 36 : 11 (ERVKN)
ಯೆಹೂದದ ಅರಸನಾದ ಚಿದ್ಕೀಯನು ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಕಾಲ ರಾಜ್ಯಭಾರ ಮಾಡಿದನು.
2 ಪೂರ್ವಕಾಲವೃತ್ತಾ 36 : 12 (ERVKN)
ಚಿದ್ಕೀಯನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ. ಅವನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದನು. ಪ್ರವಾದಿಯಾದ ಯೆರೆಮೀಯನು ದೇವರ ಸಂದೇಶವನ್ನು ಕೊಡುತ್ತಾ ಬಂದನು. ಆದರೆ ಚಿದ್ಕೀಯನು ದೇವರೆದುರಿಗೆ ತನ್ನನ್ನು ತಗ್ಗಿಸಿಕೊಳ್ಳದೆ ಯೆರೆಮೀಯನ ಮೂಲಕ ಬಂದ ದೇವರ ಆಜ್ಞೆಗಳಿಗೆ ವಿಧೇಯನಾಗಲಿಲ್ಲ.
2 ಪೂರ್ವಕಾಲವೃತ್ತಾ 36 : 13 (ERVKN)
ಜೆರುಸಲೇಮಿನ ನಾಶನ ಚಿದ್ಕೀಯನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬೂಕದ್ನೆಚ್ಚರನು ತನಗೆ ವಿಧೇಯನಾಗಿರುವಂತೆ ಚಿದ್ಕೀಯನಿಂದ ಪ್ರಮಾಣ ಮಾಡಿಸಿಕೊಂಡಿದ್ದನು. ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟು ತಾನು ನೆಬೂಕದ್ನೆಚ್ಚರನಿಗೆ ನಂಬಿಗಸ್ತನಾಗಿರುವುದಾಗಿ ಪ್ರಮಾಣಮಾಡಿದ್ದನು. ಆದರೆ ಚಿದ್ಕೀಯನು ಮನಸ್ಸನ್ನು ಕಠಿಣಮಾಡಿಕೊಂಡು ಇಸ್ರೇಲಿನ ದೇವರಾದ ಯೆಹೋವನಿಗೆ ವಿಧೇಯನಾಗಲು ನಿರಾಕರಿಸಿದನು.
2 ಪೂರ್ವಕಾಲವೃತ್ತಾ 36 : 14 (ERVKN)
ಅವನು ಮಾತ್ರವಲ್ಲದೆ ಎಲ್ಲಾ ಯಾಜಕರು, ಯೆಹೂದದ ಜನನಾಯಕರು ಬಹಳ ಪಾಪಗಳನ್ನು ಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟುಹೋಗಿದ್ದರು. ಅವರು ಬೇರೆ ದೇಶಗಳ ನಡವಳಿಕೆಯನ್ನು ಅನುಸರಿಸಿದರು. ಆ ನಾಯಕರುಗಳು ದೇವಾಲಯವನ್ನು ಹಾಳುಮಾಡಿದರು. ಜೆರುಸಲೇಮಿನಲ್ಲಿದ್ದ ಆ ಆಲಯವನ್ನು ಯೆಹೋವನು ತನಗಾಗಿ ಪ್ರತಿಷ್ಠಿಸಿಕೊಂಡಿದ್ದನು.
2 ಪೂರ್ವಕಾಲವೃತ್ತಾ 36 : 15 (ERVKN)
ಅವರ ಪೂರ್ವಿಕರ ದೇವರಾದ ಯೆಹೋವನು ಆಗಾಗ್ಗೆ ತನ್ನ ಪ್ರವಾದಿಗಳನ್ನು ಕಳುಹಿಸಿ ತನ್ನ ಜನರನ್ನು ಎಚ್ಚರಿಸಿದನು. ಯಾಕೆಂದರೆ ಆತನಿಗೆ ತನ್ನ ಜನರೂ ತನ್ನ ಮಂದಿರವೂ ನಾಶವಾಗುವದರಲ್ಲಿ ಇಷ್ಟವಿರಲಿಲ್ಲ.
2 ಪೂರ್ವಕಾಲವೃತ್ತಾ 36 : 16 (ERVKN)
ಆದರೆ ಆತನ ಜನರು ಪ್ರವಾದಿಗಳನ್ನು ಹಾಸ್ಯಮಾಡಿದರು; ಅವರ ಮಾತುಗಳನ್ನು ಕೇಳಲು ನಿರಾಕರಿಸಿದರು; ದೇವರ ಸಂದೇಶವನ್ನು ದ್ವೇಷಿಸಿದರು. ಆಗ ದೇವರ ಕೋಪವು ಅವರ ಮೇಲೆ ಉರಿಯತೊಡಗಿತು. ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಲಿಲ್ಲ.
2 ಪೂರ್ವಕಾಲವೃತ್ತಾ 36 : 17 (ERVKN)
ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ನಾಶಮಾಡಲು ಬಾಬಿಲೋನಿನ ಅರಸನನ್ನು ಕಳುಹಿಸಿದನು. ಬಾಬಿಲೋನಿನ ಅರಸನು ದೇವಾಲಯದೊಳಗಿದ್ದ ಯುವಜನರನ್ನು ಕೊಂದುಹಾಕಿದನು. ಅವನಿಗೆ ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಕರುಣೆಯೇ ಇರಲಿಲ್ಲ. ಅವನು ಚಿಕ್ಕವರನ್ನೂ ದೊಡ್ಡವರನ್ನೂ ಗಂಡಸರನ್ನೂ ಹೆಂಗಸರನ್ನೂ ಬಿಡದೆ ಸಂಹರಿಸಿದನು. ರೋಗಿಗಳನ್ನೂ ಆರೋಗ್ಯವಂತರನ್ನೂ ಸಂಹರಿಸಿದನು; ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಶಿಕ್ಷಿಸಲು ದೇವರು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು.
2 ಪೂರ್ವಕಾಲವೃತ್ತಾ 36 : 18 (ERVKN)
ದೇವಾಲಯದೊಳಗಿದ್ದ ಎಲ್ಲಾ ವಸ್ತುಗಳನ್ನು ನೆಬೂಕದ್ನೆಚ್ಚರನು ಬಾಬಿಲೋನಿಗೆ ಸಾಗಿಸಿದನು. ದೇವಾಲಯದೊಳಗೂ ಅರಸನ ಬಳಿಯಲ್ಲಿಯೂ ಅಧಿಕಾರಿಗಳ ಬಳಿಯಲ್ಲಿಯೂ ಇದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ಬಾಬಿಲೋನಿಗೆ ಸಾಗಿಸಿದನು.
2 ಪೂರ್ವಕಾಲವೃತ್ತಾ 36 : 19 (ERVKN)
ನೆಬೂಕದ್ನೆಚ್ಚರನು ಮತ್ತು ಅವನ ಸೈನಿಕರು ದೇವಾಲಯವನ್ನು ಸುಟ್ಟುಹಾಕಿದರು; ಜೆರುಸಲೇಮ್ ಪಟ್ಟಣದ ಪೌಳಿಗೋಡೆಯನ್ನು ಕೆಡವಿಹಾಕಿದರು; ಅರಸನ ಮತ್ತು ಅವನ ಪರಿವಾರದವರ ಮನೆಗಳನ್ನೆಲ್ಲಾ ಸುಟ್ಟುಹಾಕಿದರು. ಜೆರುಸಲೇಮಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚಿದರು ಮತ್ತು ಸುಟ್ಟುಹಾಕಿದರು;
2 ಪೂರ್ವಕಾಲವೃತ್ತಾ 36 : 20 (ERVKN)
ಜೀವದಿಂದುಳಿದ ಜನರನ್ನು ಸೆರೆಹಿಡಿದು ಬಾಬಿಲೋನಿನಗೆ ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಪಾರಸಿಯ ಸಾಮ್ರಾಜ್ಯ ಸ್ಥಾಪನೆಯಾಗುವ ತನಕ ಅವರು ಅಲ್ಲಿ ಗುಲಾಮರಾಗಿದ್ದರು.
2 ಪೂರ್ವಕಾಲವೃತ್ತಾ 36 : 21 (ERVKN)
ಹೀಗೆ ಯೆಹೋವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿಸಿದ ಮಾತುಗಳನ್ನು ನೆರವೇರಿಸಿದನು. “ಈ ಸ್ಥಳವು ಎಪ್ಪತ್ತು ವರ್ಷಗಳ ತನಕ ಪಾಳುಬೀಳುವದು. ಜನರು ಆಚರಿಸದೆಹೋದ ಸಬ್ಬತ್ ಹಬ್ಬಗಳಿಗೆ ಅದು ಪರಿಹಾರವಾಗಿರುವುದು” ಎಂದು ಯೆರೆಮೀಯನು ಹೇಳಿದ್ದನು.
2 ಪೂರ್ವಕಾಲವೃತ್ತಾ 36 : 22 (ERVKN)
ಪಾರಸಿ ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಯೆಹೋವನು ಅವನಿಂದ ಒಂದು ವಿಶೇಷ ಪ್ರಕಟನೆಯನ್ನು ಹೊರಡಿಸಿದನು. ಯೆರೆಮೀಯನು ಹೇಳಿದ ಮಾತು ನೆರವೇರುವಂತೆ ಇದಾಯಿತು. ಕೊರೇಷನು ತನ್ನ ಸಾಮ್ರಾಜ್ಯದ ಮೂಲೆಮೂಲೆಗಳಿಗೆ ಜನರನ್ನು ಕಳುಹಿಸಿ ಈ ಸಂದೇಶವನ್ನು ಕೊಟ್ಟನು:
2 ಪೂರ್ವಕಾಲವೃತ್ತಾ 36 : 23 (ERVKN)
ಪಾರಸಿ ರಾಜನಾದ ಕೋರೆಷನು ತಿಳಿಸುವದೇನೆಂದರೆ, ಪರಲೋಕದಲ್ಲಿರುವ ದೇವರಾದ ಯೆಹೋವನು ನನ್ನನ್ನು ಇಡೀ ಭೂಮಿಗೆ ಅರಸನನ್ನಾಗಿ ಮಾಡಿದ್ದಾನೆ. ಆತನು ಜೆರುಸಲೇಮಿನಲ್ಲಿರುವ ತನ್ನ ಆಲಯವನ್ನು ತಿರುಗಿ ಕಟ್ಟುವ ಜವಾಬ್ದಾರಿಕೆಯನ್ನು ನನಗೆ ಕೊಟ್ಟಿರುತ್ತಾನೆ. ಆದ್ದರಿಂದ ದೇವರ ಜನರೆಲ್ಲಾ ಜೆರುಸಲೇಮಿಗೆ ಹಿಂತಿರುಗಿ ಹೋಗಬಹುದು. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗೆ ಇರಲಿ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23