1 ತಿಮೊಥೆಯನಿಗೆ 1 : 1 (ERVKN)
ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ನಮ್ಮ ರಕ್ಷಕನಾದ ದೇವರು ಮತ್ತು ನಮ್ಮ ನಿರೀಕ್ಷೆಗೆ ಆಧಾರವಾದ ಕ್ರಿಸ್ತ ಯೇಸುವಿನ ಆಜ್ಞೆಗನುಸಾರವಾಗಿ ನಾನು ಅಪೊಸ್ತಲನಾದೆನು.
1 ತಿಮೊಥೆಯನಿಗೆ 1 : 2 (ERVKN)
ನೀನು ನಂಬಿಕೆ ಉಳ್ಳವನಾಗಿರುವುದರಿಂದ ನನಗೆ ನಿಜವಾದ ಮಗನಂತಿರುವೆ. ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ಕೃಪೆಯೂ ಕರುಣೆಯೂ ಶಾಂತಿಯೂ ನಿನಗೆ ಲಭಿಸಲಿ.
1 ತಿಮೊಥೆಯನಿಗೆ 1 : 3 (ERVKN)
ದುರ್ಬೋಧನೆಗಳ ವಿರುದ್ಧ ಎಚ್ಚರಿಕೆ ನಾನು ಮಕೆದೋನಿಯಕ್ಕೆ ಹೋಗುವಾಗ, ನೀನು ಎಫೆಸದಲ್ಲೇ ಇರು ಎಂದು ನಿನಗೆ ತಿಳಿಸಿದ್ದೆ. ಏಕೆಂದರೆ ಕೆಲವರು ಅಲ್ಲಿ ಸುಳ್ಳು ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. ನೀನು ಅದನ್ನು ನಿಲ್ಲಿಸಬೇಕು.
1 ತಿಮೊಥೆಯನಿಗೆ 1 : 4 (ERVKN)
ಕಲ್ಪನಾಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಗಮನಕೊಡಬಾರದೆಂದು ಅವರಿಗೆ ಆಜ್ಞಾಪಿಸು. ಆ ಸಂಗತಿಗಳು ವಾದವಿವಾದಗಳನ್ನು ಮಾತ್ರ ತರುತ್ತವೆ. ಅವುಗಳಿಂದ ದೇವರ ಕಾರ್ಯಕ್ಕೆ ಪ್ರಯೋಜನವೇನೂ ಇಲ್ಲ. ದೇವರ ಕಾರ್ಯವನ್ನು ನಂಬಿಕೆಯಿಂದ ಮಾಡಬೇಕು.
1 ತಿಮೊಥೆಯನಿಗೆ 1 : 5 (ERVKN)
ಪ್ರೀತಿಯೇ ಈ ಆಜ್ಞೆಯ ಗುರಿಯಾಗಿದೆ. ಈ ಪ್ರೀತಿಯನ್ನು ಹೊಂದಿಕೊಳ್ಳಲು ಜನರು ಶುದ್ಧಹೃದಯ ಉಳ್ಳವರಾಗಿರಬೇಕು; ಯೋಗ್ಯವಾದ ಕಾರ್ಯವನ್ನೇ ಮಾಡುವವರಾಗಿರಬೇಕು; ಮತ್ತು ನಿಷ್ಕಪಟವಾದ ನಂಬಿಕೆಯನ್ನು ಹೊಂದಿದವರಾಗಿರಬೇಕು.
1 ತಿಮೊಥೆಯನಿಗೆ 1 : 6 (ERVKN)
ಕೆಲವರು ಈ ಗುರಿತಪ್ಪಿ ನಿರರ್ಥಕವಾದ ವಿಷಯಗಳನ್ನು ಕುರಿತು ಮಾತಾಡುತ್ತಿದ್ದಾರೆ.
1 ತಿಮೊಥೆಯನಿಗೆ 1 : 7 (ERVKN)
ತಾವು ಧರ್ಮೋಪದೇಶಕರಾಗಬೇಕೆಂಬುದು ಅವರ ಅಪೇಕ್ಷೆ. ಆದರೆ ತಾವು ಏನು ಮಾತಾಡುತ್ತಿದ್ದೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಮಗೆ ಖಚಿತವಾಗಿ ತಿಳಿದಿದೆ ಎಂದು ತಾವು ಹೇಳುವ ಸಂಗತಿಗಳನ್ನೂ ಅವರು ಅರ್ಥಮಾಡಿಕೊಳ್ಳುವುದಿಲ್ಲ.
1 ತಿಮೊಥೆಯನಿಗೆ 1 : 8 (ERVKN)
ಧರ್ಮಶಾಸ್ತ್ರವು ಒಳ್ಳೆಯದೇ. ಆದರೆ ಅದನ್ನು ನಿಷ್ಠೆಯಿಂದ ಅನುಸರಿಸಬೇಕು.
1 ತಿಮೊಥೆಯನಿಗೆ 1 : 9 (ERVKN)
ಧರ್ಮಶಾಸ್ತ್ರವನ್ನು ರೂಪಿಸಿದ್ದು ಒಳ್ಳೆಯವರಿಗಾಗಿಯಲ್ಲ ಎಂಬುದು ನಮಗೆ ತಿಳಿದಿದೆ. ಅದನ್ನು ರೂಪಿಸಿದ್ದು ಅದರ ವಿರುದ್ಧವಾಗಿ ನಡೆಯುವ ಮತ್ತು ಅದನ್ನು ಅನುಸರಿಸಲು ಒಪ್ಪದಿರುವ ಜನರಿಗಷ್ಟೇ. ದೇವರಿಗೆ ವಿರುದ್ಧವಾದ ಜನರಿಗೆ ಮತ್ತು ಪಾಪಿಷ್ಠರಿಗೆ, ಅಧರ್ಮಿಗಳಿಗೆ ಮತ್ತು ಪರಿಶುದ್ಧರಲ್ಲದವರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ ಮತ್ತು ಕೊಲೆಗಾರರಿಗೆ,
1 ತಿಮೊಥೆಯನಿಗೆ 1 : 10 (ERVKN)
ಲೈಂಗಿಕ ಪಾಪಗಳನ್ನು ಮಾಡುವವರಿಗೆ, ಸಲಿಂಗಕಾಮಿಗಳಿಗೆ, ಗುಲಾಮರನ್ನು ಮಾರಾಟ ಮಾಡುವವರಿಗೆ, ಸುಳ್ಳನ್ನು ಹೇಳುವವರಿಗೆ, ಒಪ್ಪಂದವನ್ನು ಮೀರುವ ಜನರಿಗೆ, ದೇವರ ಸತ್ಯೋಪದೇಶಕ್ಕೆ ವಿರುದ್ಧವಾಗಿ ಏನನ್ನು ಬೇಕಾದರೂ ಮಾಡುವವರಿಗೆ ಅದನ್ನು ರೂಪಿಸಲಾಗಿದೆ.
1 ತಿಮೊಥೆಯನಿಗೆ 1 : 11 (ERVKN)
ಈ ಉಪದೇಶವು ಜನರಿಗೆ ತಿಳಿಸುವುದಕ್ಕಾಗಿ ದೇವರು ನನಗೆ ಕೊಟ್ಟ ಸುವಾರ್ತೆಯ ಒಂದು ಭಾಗವಾಗಿದೆ. ಭಾಗ್ಯವಂತನಾದ ದೇವರಿಂದಲೇ ಈ ಮಹಿಮೆಯ ಸುವಾರ್ತೆಯು ಬಂದಿತು.
1 ತಿಮೊಥೆಯನಿಗೆ 1 : 12 (ERVKN)
ದೇವರ ಕರುಣೆಗಾಗಿ ಕೃತಜ್ಞತೆಗಳು ನಮ್ಮ ಪ್ರಭುವಾದ ಕ್ರಿಸ್ತ ಯೇಸು ನನ್ನ ಮೇಲಿನ ನಂಬಿಕೆಯಿಂದ, ಆತನ ಸೇವೆ ಮಾಡುವ ಈ ಕಾರ್ಯವನ್ನು ನನಗೆ ದಯಪಾಲಿಸಿದ್ದರಿಂದ ನಾನು ಆತನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆತನು ನನ್ನನ್ನು ಬಲಪಡಿಸುತ್ತಾನೆ.
1 ತಿಮೊಥೆಯನಿಗೆ 1 : 13 (ERVKN)
ಮೊದಲು, ನಾನು ಕ್ರಿಸ್ತನ ವಿರುದ್ಧ ಮಾತನಾಡಿದ್ದೆನು. ಆತನನ್ನು ಹಿಂಸಿಸಿದ್ದೆನು. ಆತನಿಗೆ ನೋವಾಗುವಂಥ ಕಾರ್ಯಗಳನ್ನು ಮಾಡಿದ್ದೆನು. ಆದರೆ ನಾನೇನು ಮಾಡುತ್ತಿದ್ದೇನೆಂಬುದು ನನಗೆ ತಿಳಿದಿರಲಿಲ್ಲವಾದ್ದರಿಂದ ದೇವರು ನನಗೆ ಕರುಣೆ ತೋರಿದನು. ನಂಬದಿರುವಾಗ ನಾನು ಅವುಗಳನ್ನು ಮಾಡಿದೆನು.
1 ತಿಮೊಥೆಯನಿಗೆ 1 : 14 (ERVKN)
ಆದರೆ ನಮ್ಮ ಪ್ರಭುವಿನ ಕೃಪೆಯು ಸಂಪೂರ್ಣವಾಗಿ ನನಗೆ ಲಭಿಸಿತು. ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಗಳು ಆ ಕೃಪೆಯೊಂದಿಗೆ ಬಂದವು.
1 ತಿಮೊಥೆಯನಿಗೆ 1 : 15 (ERVKN)
ನಾನು ಹೇಳುತ್ತಿರುವ ಈ ಸಂಗತಿ ಸತ್ಯವಾದದ್ದು. ಆದ್ದರಿಂದ ನೀವು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಅದೇನೆಂದರೆ: ಪಾಪಿಗಳನ್ನು ರಕ್ಷಿಸುವುದಕ್ಕೆ ಕ್ರಿಸ್ತ ಯೇಸು ಈ ಲೋಕದಲ್ಲಿ ಪ್ರತ್ಯಕ್ಷನಾದನು. ಆ ಪಾಪಿಗಳಲ್ಲಿ ನಾನೇ ಮುಖ್ಯನು.
1 ತಿಮೊಥೆಯನಿಗೆ 1 : 16 (ERVKN)
ಆದರೆ ನನಗೆ ಕರುಣೆ ದೊರೆಯಿತು. ಕ್ರಿಸ್ತ ಯೇಸು ತನ್ನ ಅಮಿತವಾದ ತಾಳ್ಮೆಯನ್ನು ನನ್ನಲ್ಲಿ ತೋರ್ಪಡಿಸುವುದಕ್ಕಾಗಿಯೇ ನನಗೆ ಕರುಣೆಯನ್ನು ದಯಪಾಲಿಸಿದನು. ಪಾಪಿಗಳಲ್ಲೆಲ್ಲಾ ಮುಖ್ಯನಾಗಿದ್ದ ನನಗೆ ಕ್ರಿಸ್ತನು ತನ್ನ ತಾಳ್ಮೆಯನ್ನು ತೋರಿದನು. ನಿತ್ಯಜೀವಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಜನರಿಗೆ ನಾನು ದೃಷ್ಟಾಂತವಾಗಿರಬೇಕೆಂದೇ ಆತನು ನನ್ನನ್ನು ಕರುಣಿಸಿದನು.
1 ತಿಮೊಥೆಯನಿಗೆ 1 : 17 (ERVKN)
ಸದಾಕಾಲ ಆಳುವ ಅರಸನಿಗೆ ಗೌರವವೂ ಮಹಿಮೆಯೂ ಇರಲಿ. ಆತನಿಗೆ ಲಯವೆಂಬುದೇ ಇಲ್ಲ. ಆತನು ಅದೃಶ್ಯನಾಗಿರುವನು. ಒಬ್ಬನೇ ದೇವರಾದ ಆತನಿಗೆ ಗೌರವವೂ ಮಹಿಮೆಯೂ ಉಂಟಾಗಲಿ. ಆಮೆನ್.
1 ತಿಮೊಥೆಯನಿಗೆ 1 : 18 (ERVKN)
ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಮೊದಲು ನಿನ್ನ ವಿಷಯದಲ್ಲಿ ತಿಳಿಸಲಾದ ಪ್ರವಾದನೆಗಳಿಗೆ ಅನುಗುಣವಾಗಿ ನಂಬಿಕೆಯ ದಿವ್ಯ ಹೋರಾಟವನ್ನು ಮಾಡು.
1 ತಿಮೊಥೆಯನಿಗೆ 1 : 19 (ERVKN)
ನಂಬಿಕೆಯು ನಿನ್ನಲ್ಲಿ ಅಚಲವಾಗಿರಲಿ, ನಿನಗೆ ಯೋಗ್ಯವೆನಿಸಿದ್ದನ್ನೇ ಮಾಡು. ಕೆಲವು ಜನರು ಹೀಗೆ ಮಾಡಲಿಲ್ಲ. ಅವರ ನಂಬಿಕೆಯೆಲ್ಲವೂ ನಾಶವಾಯಿತು.
1 ತಿಮೊಥೆಯನಿಗೆ 1 : 20 (ERVKN)
ಹುಮೆನಾಯನು ಮತ್ತು ಅಲೆಗ್ಸಾಂಡರನು ಹಾಗೆ ಮಾಡಿದರು. ದೇವರ ವಿರುದ್ಧವಾಗಿ ಮಾತನಾಡಕೂಡದೆಂದು ಅವರು ತಿಳಿದುಕೊಳ್ಳಲೆಂದೇ ಅವರನ್ನು ಸೈತಾನನಿಗೆ ಒಪ್ಪಿಸಿದೆನು.

1 2 3 4 5 6 7 8 9 10 11 12 13 14 15 16 17 18 19 20