1 ಸಮುವೇಲನು 8 : 1 (ERVKN)
ಇಸ್ರೇಲರು ತಮಗೊಬ್ಬ ರಾಜನನ್ನು ಕೇಳಿಕೊಳ್ಳುವರು ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರೇಲರಿಗೆ ನ್ಯಾಯಾಧೀಶರನ್ನಾಗಿ ಮಾಡಿದನು.
1 ಸಮುವೇಲನು 8 : 2 (ERVKN)
ಅವನ ಮೊದಲನೆಯ ಮಗ ಯೋವೇಲ್, ಎರಡನೆಯ ಮಗ ಅಬೀಯ. ಯೋವೇಲನು ಮತ್ತು ಅಬೀಯನು ಬೇರ್ಷೆಬದಲ್ಲಿ ನ್ಯಾಯಾಧೀಶರಾಗಿದ್ದರು.
1 ಸಮುವೇಲನು 8 : 3 (ERVKN)
ಆದರೆ ಸಮುವೇಲನ ಮಕ್ಕಳು ಅವನಂತೆ ನಡೆದುಕೊಳ್ಳಲಿಲ್ಲ. ಅವರು ಲಂಚವನ್ನು ಪಡೆದು ನ್ಯಾಯಾಲಯದಲ್ಲಿ ಅನ್ಯಾಯದ ತೀರ್ಪುಗಳು ಮಾಡುತ್ತಿದ್ದರು ಮತ್ತು ಜನರನ್ನು ವಂಚಿಸುತ್ತಿದ್ದರು.
1 ಸಮುವೇಲನು 8 : 4 (ERVKN)
ಆದ್ದರಿಂದ ಇಸ್ರೇಲರ ಹಿರಿಯರೆಲ್ಲ ಒಟ್ಟುಗೂಡಿದರು. ಅವರು ಸಮುವೇಲನನ್ನು ಭೇಟಿಮಾಡಲು ರಾಮಕ್ಕೆ ಹೋದರು.
1 ಸಮುವೇಲನು 8 : 5 (ERVKN)
ಹಿರಿಯರು ಸಮುವೇಲನಿಗೆ, “ನೀನು ಮುದುಕನಾಗಿರುವೆ ಮತ್ತು ನಿನ್ನ ಮಕ್ಕಳು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿಲ್ಲ, ಅವರು ನಿನ್ನಂತಲ್ಲ. ಈಗ, ಬೇರೆ ದೇಶಗಳಂತೆ ಒಬ್ಬ ರಾಜನನ್ನು ನಮ್ಮನ್ನಾಳಲು ನೇಮಿಸು” ಎಂದು ಹೇಳಿದರು.
1 ಸಮುವೇಲನು 8 : 6 (ERVKN)
ಹೀಗೆ ಹಿರಿಯರೆಲ್ಲರು ತಮ್ಮನ್ನು ಮುನ್ನಡೆಸಲು ರಾಜನೊಬ್ಬನು ಬೇಕೆಂದರು. ಸಮುವೇಲನಿಗೆ ಇದು ಸರಿಯೆನಿಸಲಿಲ್ಲ. ಆದ್ದರಿಂದ ಅವನು ಯೆಹೋವನಲ್ಲಿ ಪ್ರಾರ್ಥಿಸಿದನು.
1 ಸಮುವೇಲನು 8 : 7 (ERVKN)
ಯೆಹೋವನು ಅವನಿಗೆ, “ಜನರು ನಿನಗೆ ಹೇಳಿದಂತೆ ಮಾಡು ಅವರು ನಿನ್ನನ್ನು ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ತಿರಸ್ಕರಿಸಿದ್ದಾರೆ! ಅವರಿಗೆ ನಾನು ರಾಜನಾಗಿರುವುದು ಬೇಕಿಲ್ಲ!
1 ಸಮುವೇಲನು 8 : 8 (ERVKN)
ಅವರು ಯಾವಾಗಲೂ ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ. ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ಆದರೆ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳ ಸೇವೆ ಮಾಡಿದರು. ಅವರು ನಿನಗೂ ಹೀಗೆಯೇ ಮಾಡುತ್ತಿದ್ದಾರೆ.
1 ಸಮುವೇಲನು 8 : 9 (ERVKN)
ಆದ್ದರಿಂದ ಜನರ ಮಾತಿಗೆ ಕಿವಿಗೊಟ್ಟು ಅವರು ಹೇಳಿದಂತೆ ಮಾಡು. ಆದರೆ ಅವರಿಗೆ ಎಚ್ಚರಿಕೆಕೊಡು. ರಾಜನಾದವನು ಜನರಿಗೆ ಏನು ಮಾಡುತ್ತಾನೆ ಎಂಬುದನ್ನು ಅವರಿಗೆ ತಿಳಿಸಿ ಹೇಳು! ರಾಜನಾದವನು ಜನರನ್ನು ಹೇಗೆ ಆಳುತ್ತಾನೆಂಬುದನ್ನೂ ಅವರಿಗೆ ತಿಳಿಸಿಕೊಡು” ಎಂದು ಹೇಳಿದನು.
1 ಸಮುವೇಲನು 8 : 10 (ERVKN)
ಆ ಜನರು ರಾಜನೊಬ್ಬನನ್ನು ಕೇಳಿಕೊಂಡರು. ಆದ್ದರಿಂದ ಸಮುವೇಲನು ಅವರಿಗೆ ಯೆಹೋವನು ಹೇಳಿದ್ದನ್ನೆಲ್ಲ ತಿಳಿಸಿದನು.
1 ಸಮುವೇಲನು 8 : 11 (ERVKN)
ಸಮುವೇಲನು, “ನೀವು ನಿಮ್ಮನ್ನು ಆಳಲು ರಾಜನು ಬೇಕೆಂದರೆ, ಅವನು ಬಲವಂತದಿಂದ ಹೀಗೆಲ್ಲ ಮಾಡುತ್ತಾನೆ: ಅವನು ನಿಮ್ಮ ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಸೇವಕರನ್ನಾಗಿಯೂ ಸೈನಿಕರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಸೈನ್ಯದಲ್ಲಿಯೂ ಅಶ್ವಸೈನ್ಯದಲ್ಲಿಯೂ ಸೇರಿ ಹೋರಾಡಬೇಕಾಗುತ್ತದೆ. ನಿನ್ನ ಮಕ್ಕಳು ರಾಜನ ರಥದ ಮುಂದೆ ಓಡುವ ಬೆಂಗಾವಲಿನವರಾಗಬೇಕಾಗುತ್ತದೆ.
1 ಸಮುವೇಲನು 8 : 12 (ERVKN)
“ರಾಜನು ನಿಮ್ಮ ಮಕ್ಕಳನ್ನು ಯೋಧರನ್ನಾಗಿ ಮಾಡಿಕೊಳ್ಳುವನು. ಅವರಲ್ಲಿ ಕೆಲವರು ಒಂದು ಸಾವಿರ ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು. ಇನ್ನು ಕೆಲವರು ಐವತ್ತು ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು. “ತನ್ನ ಭೂಮಿಯನ್ನು ಉಳಲು ಮತ್ತು ಪೈರನ್ನು ಕೊಯ್ಯಲು ರಾಜನು ನಿಮ್ಮ ಮಕ್ಕಳನ್ನು ತೆಗೆದುಕೊಳ್ಳುವನು; ಯುದ್ಧದ ಆಯುಧಗಳನ್ನು ತಯಾರಿಸಲೂ ತನ್ನ ರಥಕ್ಕೆ ಬೇಕಾದ ಸಾಮಾಗ್ರಿಗಳನ್ನು ತಯಾರಿಸಲೂ ಅವನು ಅವರನ್ನು ಬಳಸಿಕೊಳ್ಳುವನು.
1 ಸಮುವೇಲನು 8 : 13 (ERVKN)
“ರಾಜನು ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ತನಗಾಗಿ ಸುಗಂಧದ್ರವ್ಯಗಳನ್ನು ತಯಾರಿಸಲೂ ಅಡಿಗೆ ಮಾಡಲೂ ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
1 ಸಮುವೇಲನು 8 : 14 (ERVKN)
“ನಿಮಗೆ ಸೇರಿದ ಉತ್ತಮ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಆಲಿವ್ ತೋಪುಗಳನ್ನೂ ರಾಜನು ಕಿತ್ತುಕೊಂಡು ತನ್ನ ಅಧಿಕಾರಿಗಳಿಗೆ ಕೊಡುತ್ತಾನೆ.
1 ಸಮುವೇಲನು 8 : 15 (ERVKN)
ನೀವು ಬೆಳೆದ ಧಾನ್ಯಗಳಲ್ಲಿ ಮತ್ತು ದ್ರಾಕ್ಷಿಗಳಲ್ಲಿ ಅವನು ಹತ್ತನೆ ಒಂದು ಭಾಗವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಸೇವಕರಿಗೂ ಕೊಡುತ್ತಾನೆ.
1 ಸಮುವೇಲನು 8 : 16 (ERVKN)
“ರಾಜನು, ನಿಮ್ಮ ಸೇವಕಸೇವಕಿಯರನ್ನು ತೆಗೆದುಕೊಳ್ಳುವನು; ಶ್ರೇಷ್ಠವಾದ ಎತ್ತುಗಳನ್ನೂ ಕತ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸಕ್ಕಾಗಿ ಬಳಸಿಕೊಳ್ಳುವನು.
1 ಸಮುವೇಲನು 8 : 17 (ERVKN)
ನಿಮ್ಮ ಕುರಿಹಿಂಡುಗಳಲ್ಲಿ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುವನು. “ಆಗ ನೀವು ರಾಜನಿಗೆ ಸೇವಕರಾಗುವಿರಿ;
1 ಸಮುವೇಲನು 8 : 18 (ERVKN)
ರಾಜನು ಬೇಕೆಂದು ಕೇಳಿಕೊಂಡದ್ದಕ್ಕಾಗಿ ಗೋಳಾಡುವಿರಿ. ಆದರೆ ಆಗ ಯೆಹೋವನು ನಿಮಗೆ ಉತ್ತರಿಸುವುದಿಲ್ಲ” ಎಂದು ಹೇಳಿದನು.
1 ಸಮುವೇಲನು 8 : 19 (ERVKN)
ಆದರೆ ಸಮುವೇಲನ ಮಾತುಗಳಿಗೆ ಜನರು ಕಿವಿಗೊಡಲಿಲ್ಲ. ಅವರು, “ಇಲ್ಲ, ನಮ್ಮನ್ನಾಳಲು ಒಬ್ಬ ರಾಜನು ಇರಲೇ ಬೇಕು.
1 ಸಮುವೇಲನು 8 : 20 (ERVKN)
ಆಗ ನಾವು ಇತರ ಅನ್ಯಜನಾಂಗಗಳಂತೆ ಆಗುವೆವು. ನಮ್ಮ ರಾಜನು ನಮ್ಮನ್ನು ಮುನ್ನಡೆಸುವನು. ಅವನು ನಮ್ಮೊಡನೆ ಬಂದು ನಮಗೋಸ್ಕರ ಹೋರಾಡುವನು” ಎಂದು ಹೇಳಿದರು.
1 ಸಮುವೇಲನು 8 : 21 (ERVKN)
ಸಮುವೇಲನು ಅವರ ಮಾತುಗಳನ್ನೆಲ್ಲಾ ಯೆಹೋವನಿಗೆ ತಿಳಿಸಿದನು.
1 ಸಮುವೇಲನು 8 : 22 (ERVKN)
ಯೆಹೋವನು ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ರಾಜನನ್ನು ನೇಮಿಸು” ಎಂದು ಹೇಳಿದನು. ಆಗ ಸಮುವೇಲನು ಇಸ್ರೇಲರಿಗೆ, “ಹಾಗೆಯೇ ಆಗಲಿ, ನೀವು ಒಬ್ಬ ಹೊಸ ರಾಜನನ್ನು ಪಡೆದುಕೊಳ್ಳುವಿರಿ. ಈಗ ನೀವೆಲ್ಲ ನಿಮ್ಮ ನಿಮ್ಮ ಮನೆಗಳಿಗೆ ಹಿಂದಿರುಗಿರಿ” ಎಂದನು.

1 2 3 4 5 6 7 8 9 10 11 12 13 14 15 16 17 18 19 20 21 22