1 ಸಮುವೇಲನು 27 : 1 (ERVKN)
ದಾವೀದನು ಫಿಲಿಷ್ಟಿಯರ ಜೊತೆಯಲ್ಲಿ ವಾಸಿಸುವನು ಆದರೆ ದಾವೀದನು, “ಸೌಲನು ಎಂದಾದರೂ ಒಂದು ದಿನ ನನ್ನನ್ನು ಹಿಡಿದುಕೊಳ್ಳುವನು. ಈಗ ಫಿಲಿಷ್ಟಿಯರ ರಾಜ್ಯಕ್ಕೆ ತಪ್ಪಿಸಿಕೊಂಡು ಹೋಗುವುದೇ ನಾನು ಮಾಡಬಹುದಾದ ಒಳ್ಳೆಯ ಕೆಲಸ. ಆಗ ಸೌಲನು ಇಸ್ರೇಲಿನಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟುಬಿಡುತ್ತಾನೆ. ಸೌಲನಿಂದ ತಪ್ಪಿಸಿಕೊಳ್ಳಲು ಇದೇ ಸರಿಯಾದ ಮಾರ್ಗ” ಎಂದು ತನ್ನಲ್ಲೇ ಯೋಚಿಸಿದನು.
1 ಸಮುವೇಲನು 27 : 2 (ERVKN)
ಆದ್ದರಿಂದ ದಾವೀದನು ತನ್ನ ಆರುನೂರು ಜನರೊಡನೆ ಇಸ್ರೇಲನ್ನು ಬಿಟ್ಟುಹೋದನು. ಅವನು ಮಾವೋಕನ ಮಗನಾದ ಆಕೀಷನಲ್ಲಿಗೆ ಹೋದನು. ಆಕೀಷನು ಗತ್‌ನ ರಾಜ.
1 ಸಮುವೇಲನು 27 : 3 (ERVKN)
ದಾವೀದನೂ ಅವನ ಜನರೂ ಅವರ ಕುಟುಂಬಗಳವರೂ ಆಕೀಷನೊಂದಿಗೆ ಗತ್‌ನಲ್ಲಿ ನೆಲೆಸಿದರು. ದಾವೀದನ ಜೊತೆಯಲ್ಲಿ ಅವನ ಇಬ್ಬರು ಹೆಂಡತಿಯರೂ ಇದ್ದರು. ಅವರು ಯಾರೆಂದರೆ, ಇಜ್ರೇಲ್ಯಳಾದ ಅಹೀನೋವಮಳು ಮತ್ತು ಕರ್ಮೆಲಿನ ಅಬೀಗೈಲಳು. ಅಬೀಗೈಲಳು ನಾಬಾಲನ ವಿಧವೆ.
1 ಸಮುವೇಲನು 27 : 4 (ERVKN)
ದಾವೀದನು ಗತ್‌ಗೆ ಓಡಿಹೋದನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು ಅವನನ್ನು ಹುಡುಕುವುದನ್ನು ಬಿಟ್ಟುಬಿಟ್ಟನು.
1 ಸಮುವೇಲನು 27 : 5 (ERVKN)
ದಾವೀದನು ಆಕೀಷನಿಗೆ, “ನೀನು ನನ್ನನ್ನು ಮೆಚ್ಚಿಕೊಂಡಿದ್ದರೆ ಯಾವುದಾದರೊಂದು ಊರಲ್ಲ್ಲಿ ನನಗೆ ಸ್ಥಳವನ್ನು ಕೊಡು. ನಾನು ನಿನ್ನ ಸೇವಕನಷ್ಟೆ. ನಾನು ನಿನ್ನೊಡನೆ ಈ ರಾಜಧಾನಿಯಲ್ಲಿ ಇರುವುದಕ್ಕಿಂತ ಅಲ್ಲಿ ವಾಸಮಾಡುತ್ತೇನೆ” ಎಂದು ಹೇಳಿದನು.
1 ಸಮುವೇಲನು 27 : 6 (ERVKN)
ಆಕೀಷನು ಕೂಡಲೆ ದಾವೀದನಿಗೆ ಚಿಕ್ಲಗ್ ಎಂಬ ಊರನ್ನು ಕೊಟ್ಟನು. ಅಂದಿನಿಂದಲೂ ಚಿಕ್ಲಗ್ ಊರು ಯೆಹೂದದ ರಾಜನಿಗೆ ಸೇರಿರುತ್ತದೆ.
1 ಸಮುವೇಲನು 27 : 7 (ERVKN)
ದಾವೀದನು ಫಿಲಿಷ್ಟಿಯರೊಂದಿಗೆ ಒಂದು ವರ್ಷ ನಾಲ್ಕು ತಿಂಗಳು ವಾಸಮಾಡಿದನು.
1 ಸಮುವೇಲನು 27 : 8 (ERVKN)
ದಾವೀದನು ರಾಜನಾದ ಆಕೀಷನನ್ನು ಮೋಸಗೊಳಿಸುವನು ದಾವೀದನು ಮತ್ತು ಅವನ ಜನರು ಅಮಾಲೇಕ್ಯರ ಮೇಲೆಯೂ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಯುದ್ಧಮಾಡಲು ಹೋದರು. ದಾವೀದನ ಜನರು ಅವರನ್ನು ಸೋಲಿಸಿ ಅವರ ಸಂಪತ್ತನ್ನು ವಶಪಡಿಸಿಕೊಂಡರು. ಈಜಿಪ್ಟಿನವರೆಗೆ ವಿಸ್ತರಿಸಿರುವ ಶೂರಿನ ಸಮೀಪದ ತೇಲಾಮಿನವರೆಗೂ ಆ ಜನರು ವಾಸಿಸುತ್ತಿದ್ದರು.
1 ಸಮುವೇಲನು 27 : 9 (ERVKN)
ದಾವೀದನು ಆ ಪ್ರದೇಶದ ಜನರೊಂದಿಗೆ ಯುದ್ಧಮಾಡಿ ಯಾರನ್ನೂ ಜೀವಸಹಿತ ಬಿಡಲಿಲ್ಲ. ಅವರಿಗೆ ಸೇರಿದ ಕುರಿಗಳನ್ನು ದನಗಳನ್ನು, ಹೇಸರಕತ್ತೆಗಳನ್ನು, ಒಂಟೆಗಳನ್ನು ಮತ್ತು ಬಟ್ಟೆಗಳನ್ನು ದಾವೀದನು ವಶಪಡಿಸಿಕೊಂಡನು. ನಂತರ ಅವುಗಳನ್ನು ಆಕೀಷನ ಬಳಿಗೆ ತಂದನು.
1 ಸಮುವೇಲನು 27 : 10 (ERVKN)
ದಾವೀದನು ಅನೇಕ ಸಲ ಹೀಗೆ ಮಾಡಿದನು. ಪ್ರತಿಸಲವೂ ಆಕೀಷನು ದಾವೀದನನ್ನು, “ನೀನು ಎಲ್ಲಿ ಯುದ್ಧಮಾಡಿದೆ ಮತ್ತು ಇವುಗಳನ್ನು ಎಲ್ಲಿಂದ ತಂದೆ” ಎಂದು ಕೇಳುತ್ತಿದ್ದನು. ದಾವೀದನು, “ನಾನು ಯೆಹೂದ ದೇಶದ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲಿ, “ನಾನು ಎರಹ್ಮೇಲ್ಯರ ದಕ್ಷಿಣಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ “ನಾನು ಕೇನ್ಯರ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲಿ ಹೇಳುತ್ತಿದ್ದನು.
1 ಸಮುವೇಲನು 27 : 11 (ERVKN)
ದಾವೀದನು ಒಬ್ಬ ಗಂಡಸನ್ನಾಗಲಿ ಹೆಂಗಸನ್ನಾಗಲಿ ಗತ್ ಊರಿಗೆ ಜೀವಸಹಿತ ಎಂದೂ ತರಲಿಲ್ಲ. ದಾವೀದನು, “ನಾವು ಒಬ್ಬ ಮನುಷ್ಯನನ್ನು ಜೀವಸಹಿತ ಬಿಟ್ಟರೆ, ನಾನು ನಿಜವಾಗಿ ಮಾಡುತ್ತಿರುವುದನ್ನು ಅವನು ಆಕೀಷನಿಗೆ ತಿಳಿಸಬಹುದು” ಎಂದು ಯೋಚಿಸಿದನು. ದಾವೀದನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಹೀಗೆಯೇ ಮಾಡುತ್ತಿದ್ದನು.
1 ಸಮುವೇಲನು 27 : 12 (ERVKN)
ಆಕೀಷನು ದಾವೀದನಲ್ಲಿ ಭರವಸೆ ಇಡತೊಡಗಿದನು. ಆಕೀಷನು ತನ್ನೊಳಗೆ, “ಈಗ ದಾವೀದನ ಸ್ವಂತ ಜನರೇ ಅವನನ್ನು ದ್ವೇಷಿಸುವರು. ಇಸ್ರೇಲರು ದಾವೀದನನ್ನು ಬಹಳವಾಗಿ ದ್ವೇಷಿಸುತ್ತಾರೆ. ಈಗ ದಾವೀದನು ಶಾಶ್ವತವಾಗಿ ನನ್ನ ಸೇವೆಮಾಡುವನು” ಎಂದುಕೊಂಡನು.

1 2 3 4 5 6 7 8 9 10 11 12