1 ಸಮುವೇಲನು 25 : 1 (ERVKN)
ದಾವೀದ ಮತ್ತು ನಾಬಾಲ್ ಸಮುವೇಲನು ಮರಣಹೊಂದಿದನು. ಇಸ್ರೇಲರೆಲ್ಲರೂ ಒಟ್ಟಾಗಿ ಸೇರಿ ಸಮುವೇಲನ ಮರಣಕ್ಕಾಗಿ ಗೋಳಾಡಿದರು. ಅವರು ಸಮುವೇಲನನ್ನು ಅವನ ನಿವಾಸವಿದ್ದ ರಾಮದಲ್ಲಿ ಸಮಾಧಿಮಾಡಿದರು. ನಂತರ ದಾವೀದನು ಪಾರಾನ್ ಮರಳುಗಾಡಿಗೆ ಹೋದನು.
1 ಸಮುವೇಲನು 25 : 2 (ERVKN)
ಮಾವೋನ್‌ನಲ್ಲಿ ಒಬ್ಬ ಮನುಷ್ಯನು ವಾಸಿಸುತ್ತಿದ್ದನು. ಈ ಮನುಷ್ಯನು ಬಹಳ ಶ್ರೀಮಂತನಾಗಿದ್ದನು. ಅವನು ಮೂರು ಸಾವಿರ ಕುರಿಗಳನ್ನೂ ಒಂದು ಸಾವಿರ ಆಡುಗಳನ್ನೂ ಹೊಂದಿದ್ದನು. ಅವನು ಕರ್ಮೆಲಿನಲ್ಲಿ ವ್ಯಾಪಾರ ಮಾಡುತ್ತಿದ್ದನು. ಒಮ್ಮೆ ಅವನು ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕರ್ಮೆಲಿಗೆ ಹೋಗಿದ್ದನು.
1 ಸಮುವೇಲನು 25 : 3 (ERVKN)
ಈ ಮನುಷ್ಯನ ಹೆಸರು ನಾಬಾಲ್. ಅವನ ಹೆಂಡತಿಯ ಹೆಸರು ಅಬೀಗೈಲ್. ಅಬೀಗೈಲಳು ಬುದ್ಧಿವಂತೆಯೂ ಸುಂದರಿಯೂ ಆಗಿದ್ದಳು. ಆದರೆ ನಾಬಾಲನು ಕ್ರೂರಿ ಮತ್ತು ಕೀಳಾದ ವ್ಯಕ್ತಿ. ನಾಬಾಲನು ಕಾಲೇಬನ ಕುಟುಂಬಕ್ಕೆ ಸೇರಿದವನು.
1 ಸಮುವೇಲನು 25 : 4 (ERVKN)
ನಾಬಾಲನು ತನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿದ್ದಾನೆಂಬ ಸುದ್ದಿಯು ಮರಳುಗಾಡಿನಲ್ಲಿದ್ದ ದಾವೀದನಿಗೆ ತಿಳಿಯಿತು.
1 ಸಮುವೇಲನು 25 : 5 (ERVKN)
ಆದ್ದರಿಂದ ನಾಬಾಲನ ಸಂಗಡ ಮಾತನಾಡಲು ದಾವೀದನು ಹತ್ತು ಜನ ಯುವಕರನ್ನು ಕರೆದು ಅವರಿಗೆ, “ಕರ್ಮೆಲಿಗೆ ಹೋಗಿ ನಾಬಾಲನನ್ನು ಕಂಡುಹಿಡಿಯಿರಿ. ಅವನಿಗೆ ನನ್ನ ಪರವಾಗಿ ಶುಭವನ್ನು ಕೋರಿ.”
1 ಸಮುವೇಲನು 25 : 6 (ERVKN)
ಈ ಸಂದೇಶವನ್ನು ಅವನಿಗೆ ಹೇಳಿರಿ: “ನೀನು ಮತ್ತು ನಿನ್ನ ಕುಟುಂಬದವರು ಕ್ಷೇಮವಾಗಿದ್ದೀರೆಂದು ನಾನು ನಂಬಿದ್ದೇನೆ. ನಿನ್ನ ಸಕಲ ಸಂಪತ್ತು ಚೆನ್ನಾಗಿರುವುದೆಂದು ನಾನು ನಂಬಿದ್ದೇನೆ.
1 ಸಮುವೇಲನು 25 : 7 (ERVKN)
ನೀನು ನಿನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿರುವುದು ನನಗೆ ತಿಳಿಯಿತು. ನಿನ್ನ ಕುರುಬರು ನಮ್ಮೊಡನೆ ಸ್ವಲ್ಪ ಸಮಯವಿದ್ದರು. ನಾವು ಅವರಿಗೆ ಕೆಟ್ಟದ್ದೇನನ್ನೂ ಮಾಡಲಿಲ್ಲ. ಅವರು ಕರ್ಮೆಲಿನಲ್ಲಿ ಸ್ವಲ್ಪ ಸಮಯವಿದ್ದಾಗ ನಾವು ಅವರಿಂದ ಏನನ್ನೂ ತೆಗೆದುಕೊಳ್ಳಲಿಲ್ಲ.
1 ಸಮುವೇಲನು 25 : 8 (ERVKN)
ನಿನ್ನ ಸೇವಕರನ್ನು ಕೇಳು, ಇದು ನಿಜವೆಂಬುದನ್ನು ಅವರು ನಿನಗೆ ತಿಳಿಸುತ್ತಾರೆ. ನನ್ನ ಯುವಕರ ಬಗ್ಗೆ ದಯವಿಟ್ಟು ದಯಾಳುವಾಗಿರು. ಈ ಶುಭಸಂದರ್ಭದಲ್ಲಿ ನಾವು ನಿಮ್ಮ ಹತ್ತಿರಕ್ಕೆ ಬರುತ್ತೇವೆ. ಸ್ನೇಹಿತನಾದ *ಸ್ನೇಹಿತ ಅಕ್ಷರಶಃ, “ಮಗ.” ದಾವೀದನಿಗಾಗಿ ನಿನಗೆ ಸಾಧ್ಯವಿದ್ದಷ್ಟನ್ನು ದಯವಿಟ್ಟು ಈ ಯುವಕರಿಗೆ ಕೊಡು” ಎಂದು ಹೇಳಿ ಕಳುಹಿಸಿದನು.
1 ಸಮುವೇಲನು 25 : 9 (ERVKN)
ದಾವೀದನ ಜನರು ನಾಬಾಲನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸಿದರು.
1 ಸಮುವೇಲನು 25 : 10 (ERVKN)
ಆದರೆ ನಾಬಾಲನು ಅವರನ್ನು ಕೀಳಾಗಿ ಕಂಡು, “ದಾವೀದನು ಯಾರು? ಈ ಇಷಯನ ಮಗನೆಂಬವನು ಯಾರು? ಇತ್ತೀಚಿನ ದಿನಗಳಲ್ಲಿ ತಮ್ಮ ಒಡೆಯರ ಹತ್ತಿರದಿಂದ ಓಡಿ ಹೋಗಿರುವ ಅನೇಕ ಗುಲಾಮರುಗಳಿದ್ದಾರೆ!
1 ಸಮುವೇಲನು 25 : 11 (ERVKN)
ನನ್ನ ಬಳಿ ನೀರು ಮತ್ತು ರೊಟ್ಟಿಗಳಿವೆ. ನನ್ನ ಕುರಿಗಳಿಂದ ತುಪ್ಪಟವನ್ನು ಕತ್ತರಿಸುತ್ತಿರುವ ಸೇವಕರಿಗೋಸ್ಕರ ಮಾಂಸವೂ ನನ್ನಲ್ಲಿದೆ. ಆದರೆ ನನಗೆ ಗೊತ್ತಿಲ್ಲದ ಜನರಿಗೆ ನಾನು ಕೊಡುವುದೇ ಇಲ್ಲ!” ಎಂದು ಹೇಳಿದನು.
1 ಸಮುವೇಲನು 25 : 12 (ERVKN)
ದಾವೀದನ ಜನರು ಹಿಂತಿರುಗಿ ಹೋಗಿ ನಾಬಾಲನು ಹೇಳಿದ್ದನ್ನೆಲ್ಲಾ ದಾವೀದನಿಗೆ ತಿಳಿಸಿದರು.
1 ಸಮುವೇಲನು 25 : 13 (ERVKN)
ಆಗ ದಾವೀದನು ತನ್ನ ಜನರಿಗೆ, “ನಿಮ್ಮ ಆಯುಧಗಳನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ!” ಎಂದು ಹೇಳಿದನು. ದಾವೀದನು ಮತ್ತು ಅವನ ಜನರು ಆಯುಧಗಳನ್ನು ಕಟ್ಟಿಕೊಂಡರು. ದಾವೀದನ ಸಂಗಡ ಸುಮಾರು ನಾನೂರು ಜನರು ಹೋದರು; ಇನ್ನೂರು ಜನರು ಸರಕುಗಳ ಬಳಿಯಲ್ಲಿ ಉಳಿದುಕೊಂಡರು.
1 ಸಮುವೇಲನು 25 : 14 (ERVKN)
ಅಬೀಗೈಲಳು ಕೇಡಿನಿಂದ ತಪ್ಪಿಸುವಳು ನಾಬಾಲನ ಸೇವಕನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ, “ನಮ್ಮ ಒಡೆಯನನ್ನು ವಂದಿಸಲು ದಾವೀದನು ಅರಣ್ಯದಿಂದ ಸಂದೇಶಕರನ್ನು ಕಳುಹಿಸಿದ್ದನು. ಆದರೆ ನಾಬಾಲನು ದಾವೀದನ ಸಂದೇಶಕರೊಂದಿಗೆ ಕೀಳಾಗಿ ನಡೆದುಕೊಂಡನು.
1 ಸಮುವೇಲನು 25 : 15 (ERVKN)
ಈ ಜನರು ನಮಗೆ ಬಹಳ ಒಳ್ಳೆಯವರಾಗಿದ್ದರು. ನಾವು ಆಡುಗಳೊಂದಿಗೆ ಹೊಲಗಳಿಗೆ ಹೋಗಿದ್ದಾಗ ದಾವೀದನ ಜನರು ಆ ಸಮಯದಲ್ಲೆಲ್ಲ ನಮ್ಮ ಜೊತೆಗಿದ್ದರು! ಅವರು ನಮಗೆ ಯಾವುದೇ ಕೆಡುಕನ್ನು ಮಾಡಲಿಲ್ಲ! ಅವರು ನಮ್ಮೊಂದಿಗಿದ್ದ ಸಮಯದಲ್ಲೆಲ್ಲ ನಮ್ಮಿಂದ ಏನನ್ನೂ ಕದಿಯಲಿಲ್ಲ!
1 ಸಮುವೇಲನು 25 : 16 (ERVKN)
ನಾವು ಕುರಿಗಳನ್ನು ಕಾಯುತ್ತಿದ್ದಾಗ ದಾವೀದನ ಜನರು ನಮ್ಮನ್ನು ಹಗಲುರಾತ್ರಿ ರಕ್ಷಿಸಿದರು! ಅವರು ನಮ್ಮ ಸುತ್ತಲೂ ಗೋಡೆಯಂತಿದ್ದರು.
1 ಸಮುವೇಲನು 25 : 17 (ERVKN)
ಈಗ ಅದರ ಬಗ್ಗೆ ಯೋಚಿಸಿ ನೀನು ಮಾಡಬೇಕಾದದ್ದನ್ನು ತೀರ್ಮಾನಿಸು. ಮೂರ್ಖನಾದ ನಾಬಾಲನೊಂದಿಗೆ ಮಾತಾಡಿ ಅವನ ಮನಸ್ಸನ್ನು ಬದಲಾಯಿಸುವುದು ಅಸಾಧ್ಯ. ನಮ್ಮ ಒಡೆಯನಿಗೂ ಅವನ ಕುಟುಂಬಕ್ಕೂ ಭೀಕರವಾದ ಕೇಡು ಬರಲಿದೆ” ಎಂದು ಹೇಳಿದನು.
1 ಸಮುವೇಲನು 25 : 18 (ERVKN)
ಅಬೀಗೈಲಳು ಇನ್ನೂರು ರೊಟ್ಟಿಗಳನ್ನೂ ಎರಡು ದ್ರಾಕ್ಷಾರಸದ ಚೀಲಗಳನ್ನೂ ಐದು ಕುರಿಗಳ ಬೇಯಿಸಿದ ಮಾಂಸವನ್ನೂ ಹದಿನೇಳು ಕಿಲೋಗ್ರಾಂ ಬೇಯಿಸಿದ ಕಾಳನ್ನೂ ನೂರುಗೊಂಚಲು ಒಣದ್ರಾಕ್ಷಿಯನ್ನೂ ಅಂಜೂರ ಹಣ್ಣಿನ ಇನ್ನೂರು ಉಂಡೆಗಳನ್ನೂ ತ್ವರಿತವಾಗಿ ತೆಗೆದುಕೊಂಡಳು. ಅವಳು ಅವುಗಳನ್ನು ಕತ್ತೆಗಳ ಮೇಲೆ ಹೇರಿದಳು.
1 ಸಮುವೇಲನು 25 : 19 (ERVKN)
ನಂತರ ಅಬೀಗೈಲಳು ತನ್ನ ಸೇವಕರಿಗೆ, “ಮುಂದೆ ನಡೆಯಿರಿ, ನಾನು ನಿಮ್ಮ ಹಿಂದೆ ಬರುತ್ತೇನೆ” ಎಂದಳು. ಆದರೆ ಅವಳು ತನ್ನ ಗಂಡನಿಗೆ ಹೇಳಲಿಲ್ಲ.
1 ಸಮುವೇಲನು 25 : 20 (ERVKN)
ಅಬೀಗೈಲಳು ಕತ್ತೆಯ ಮೇಲೆ ಸವಾರಿ ಮಾಡುತ್ತಾ ಬೆಟ್ಟದ ಮತ್ತೊಂದು ಕಡೆಗೆ ಬಂದು ಬೇರೊಂದು ದಿಕ್ಕಿನಿಂದ ಬರುತ್ತಿದ್ದ ದಾವೀದನನ್ನೂ ಅವನ ಜನರನ್ನೂ ಸಂಧಿಸಿದಳು.
1 ಸಮುವೇಲನು 25 : 21 (ERVKN)
ಅಬೀಗೈಲಳನ್ನು ಸಂಧಿಸುವುದಕ್ಕೆ ಮುಂಚೆ ದಾವೀದನು, “ನಾಬಾಲನ ಆಸ್ತಿಯನ್ನು ನಾನು ಅರಣ್ಯದಲ್ಲಿ ಕಾಪಾಡಿದೆನು. ಅವನ ಕುರಿಗಳಲ್ಲಿ ಒಂದೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಂಡೆನು. ನಾನು ಅವನಿಂದ ಏನನ್ನೂ ಅಪೇಕ್ಷಿಸದೆ ಇದನ್ನೆಲ್ಲ ಮಾಡಿದೆ! ನಾನು ಅವನಿಗೆ ಒಳ್ಳೆಯದನ್ನು ಮಾಡಿದೆ; ಆದರೆ ಅವನು ನನಗೆ ಕೆಟ್ಟವನಾದನು.
1 ಸಮುವೇಲನು 25 : 22 (ERVKN)
ನಾಳೆ ಬೆಳಗಾಗುವುದರೊಳಗಾಗಿ ನಾಬಾಲನ ಕುಟುಂಬದಲ್ಲಿ ಒಬ್ಬರಾದರೂ ಜೀವದಿಂದ ಉಳಿದುಕೊಳ್ಳಲು ನಾನು ಅವಕಾಶಕೊಟ್ಟರೆ ದೇವರು ನನ್ನನ್ನು ದಂಡಿಸಲಿ” ಎಂದು ಹೇಳಿದ್ದನು.
1 ಸಮುವೇಲನು 25 : 23 (ERVKN)
ಅಬೀಗೈಲಳು ದಾವೀದನನ್ನು ಕಂಡ ಕೂಡಲೆ ಕತ್ತೆಯಿಂದ ಬೇಗನೆ ಇಳಿದು ದಾವೀದನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು.
1 ಸಮುವೇಲನು 25 : 24 (ERVKN)
ಅಬೀಗೈಲಳು ದಾವೀದನ ಪಾದಗಳಿಗೆ ಬಿದ್ದು, “ಒಡೆಯನೇ, ನಿನ್ನೊಂದಿಗೆ ಮಾತನಾಡಲು ದಯವಿಟ್ಟು ನನಗೆ ಅವಕಾಶ ಕೊಡು. ನಾನು ಹೇಳುವುದನ್ನು ಆಲಿಸು. ನಡೆದುಹೋದ ಸಂಗತಿಗೆ ನನ್ನನ್ನೇ ನಿಂದಿಸು.
1 ಸಮುವೇಲನು 25 : 25 (ERVKN)
ನೀನು ಕಳುಹಿಸಿದ ಜನರನ್ನು ನಾನು ನೋಡಲಿಲ್ಲ. ಒಡೆಯನೇ, ಮೂರ್ಖನಾದ ಆ ಮನುಷ್ಯನ ಮೇಲೆ ಯಾವ ಲಕ್ಷ್ಯವನ್ನೂ ಇಡಬೇಡ. ಅವನು ತನ್ನ ಹೆಸರಿಗೆ ತಕ್ಕಂತೆ ಇದ್ದಾನೆ. ಅವನ ಹೆಸರಿನ ಅರ್ಥವೂ ‘ಮೂರ್ಖ’ ಮತ್ತು ಅವನು ನಿಜವಾಗಿಯೂ ಮೂರ್ಖ.
1 ಸಮುವೇಲನು 25 : 26 (ERVKN)
ಮುಗ್ದಜನರನ್ನು ಕೊಂದು ಅಪರಾಧಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ. ಯೆಹೋವನ ಆಣೆಯಾಗಿಯೂ ನಿನ್ನ ಆಣೆಯಾಗಿಯೂ ನಿನ್ನ ಶತ್ರುಗಳೂ ನಿನಗೆ ಕೇಡುಮಾಡುವವರೂ ನಾಬಾಲನಂತಾಗಲಿ.
1 ಸಮುವೇಲನು 25 : 27 (ERVKN)
ಈಗ ನಾನು ನಿನಗಾಗಿ ಈ ಕೊಡುಗೆಗಳನ್ನು ತಂದಿದ್ದೇನೆ. ನಿನ್ನನ್ನು ಹಿಂಬಾಲಿಸುತ್ತಿರುವ ನಿನ್ನ ಸೇವಕರಿಗೆ ದಯವಿಟ್ಟು ಇವುಗಳನ್ನು ಕೊಡು.
1 ಸಮುವೇಲನು 25 : 28 (ERVKN)
ನಾನು ಮಾಡಿದ ತಪ್ಪನ್ನು ದಯವಿಟ್ಟು ಕ್ಷಮಿಸು. ಯೆಹೋವನು ನಿನ್ನ ಕುಟುಂಬವನ್ನು ಪ್ರಬಲಗೊಳಿಸುತ್ತಾನೆಂದೂ ನಿನ್ನ ಕುಟುಂಬದಿಂದ ಅನೇಕ ರಾಜರು ಬರುತ್ತಾರೆಂದೂ ನನಗೆ ತಿಳಿದಿದೆ! ನೀನು ಯೆಹೋವನ ಯುದ್ಧಗಳಲ್ಲಿ ಹೋರಾಡುವುದರಿಂದ ಯೆಹೋವನು ಇದನ್ನು ನೆರವೇರಿಸುತ್ತಾನೆ. ನೀನು ಜೀವಿಸಿರುವ ತನಕ ಜನರು ನಿನ್ನಲ್ಲಿ ಯಾವುದೇ ಬಗೆಯ ಕೆಟ್ಟದನ್ನು ಕಂಡುಹಿಡಿಯುವುದಿಲ್ಲ!
1 ಸಮುವೇಲನು 25 : 29 (ERVKN)
ನಿನ್ನನ್ನು ಕೊಲ್ಲಲು ಒಬ್ಬ ವ್ಯಕ್ತಿಯು ಅಟ್ಟಿಸಿಕೊಂಡು ಬಂದರೆ, ನಿನ್ನ ದೇವರಾದ ಯೆಹೋವನು ನಿನ್ನ ಜೀವವನ್ನು ರಕ್ಷಿಸುತ್ತಾನೆ! ಆದರೆ ಯೆಹೋವನು ನಿನ್ನ ಶತ್ರುಗಳನ್ನು ಕವಣೆಯ ಕಲ್ಲನ್ನು ಎಸೆಯುವಂತೆ ಎಸೆದುಬಿಡುತ್ತಾನೆ!
1 ಸಮುವೇಲನು 25 : 30 (ERVKN)
ನಿನಗಾಗಿ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿ ಯೆಹೋವನು ವಾಗ್ದಾನ ಮಾಡಿದ್ದಾನೆ. ಯೆಹೋವನು ತನ್ನ ಎಲ್ಲ ವಾಗ್ದಾನಗಳನ್ನೂ ನೆರವೇರಿಸುತ್ತಾನೆ! ದೇವರು ನಿನ್ನನ್ನು ಇಸ್ರೇಲರ ನಾಯಕನನ್ನಾಗಿ ಮಾಡಿದಾಗ
1 ಸಮುವೇಲನು 25 : 31 (ERVKN)
ನಿರಪರಾಧಿಗಳ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀನು ಗುರಿಯಾಗುವುದಿಲ್ಲ; ನೀನು ಆ ಬಲೆಗೂ ಬೀಳುವುದಿಲ್ಲ. ನೀನು ಆ ಮಹಾಪದವಿಗೆ ಬಂದಾಗ ನನ್ನನ್ನು ಮರೆತುಬಿಡಬೇಡ” ಎಂದು ಹೇಳಿದಳು.
1 ಸಮುವೇಲನು 25 : 32 (ERVKN)
ಆಗ ದಾವೀದನು ಅಬೀಗೈಲಳಿಗೆ, “ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ದೇವರೇ ನಿನ್ನನ್ನು ನನ್ನ ಬಳಿಗೆ ಕಳುಹಿಸಿದ್ದಾನೆ.
1 ಸಮುವೇಲನು 25 : 33 (ERVKN)
ನಿನ್ನ ಒಳ್ಳೆಯ ತೀರ್ಪಿಗಾಗಿ ದೇವರು ನಿನ್ನನ್ನು ಆಶೀರ್ವದಿಸಲಿ. ಈ ದಿನ ನಾನು ನಿರ್ದೋಷಿಗಳನ್ನು ಕೊಲ್ಲದಂತೆ ನೀನು ನನ್ನನ್ನು ತಡೆದೆ.
1 ಸಮುವೇಲನು 25 : 34 (ERVKN)
ಇಸ್ರೇಲರ ದೇವರಾದ ಯೆಹೋವನಾಣೆ, ನೀನು ನನ್ನನ್ನು ಸಂಧಿಸಲು ಬೇಗನೆ ಬರದಿದ್ದರೆ ನಾಳೆ ಹೊತ್ತಾರೆಯ ವೇಳೆಗೆ ನಾಬಾಲನ ಕುಟುಂಬದಲ್ಲಿ ಒಬ್ಬನೂ ಜೀವಸಹಿತ ಉಳಿಯುತ್ತಿರಲಿಲ್ಲ” ಎಂದು ಹೇಳಿದನು.
1 ಸಮುವೇಲನು 25 : 35 (ERVKN)
ನಂತರ ದಾವೀದನು ಅಬೀಗೈಲಳ ಕೊಡುಗೆಗಳನ್ನು ಸ್ವೀಕರಿಸಿ ಆಕೆಗೆ, “ಶಾಂತಿಯಿಂದ ಮನೆಗೆ ಹಿಂದಿರುಗು. ನಾನು ನಿನ್ನ ಮಾತುಗಳನ್ನು ಆಲಿಸಿದ್ದೇನೆ ಮತ್ತು ನೀನು ಕೇಳಿಕೊಂಡಿರುವುದನ್ನು ನೆರವೇರಿಸುತ್ತೇನೆ” ಎಂದು ಹೇಳಿದನು.
1 ಸಮುವೇಲನು 25 : 36 (ERVKN)
ನಾಬಾಲನ ಮರಣ ಅಬೀಗೈಲಳು ನಾಬಾಲನ ಬಳಿಗೆ ಹಿಂದಿರುಗಿ ಹೋದಳು. ನಾಬಾಲನು ಮನೆಯಲ್ಲಿಯೇ ಇದ್ದನು. ನಾಬಾಲನು ರಾಜನಂತೆ ತಿನ್ನುತ್ತಾ ಕುಡಿದು ಮತ್ತನಾಗಿದ್ದನು. ಆದ್ದರಿಂದ ಅಬೀಗೈಲಳು ಮಾರನೆಯ ದಿನದ ಹೊತ್ತಾರೆಯವರೆಗೆ ನಾಬಾಲನಿಗೆ ಏನನ್ನೂ ಹೇಳಲಿಲ್ಲ.
1 ಸಮುವೇಲನು 25 : 37 (ERVKN)
ಮಾರನೆಯ ದಿನ ನಾಬಾಲನ ಮತ್ತಿಳಿದಿತ್ತು. ಅವನ ಹೆಂಡತಿಯು ಅವನಿಗೆ ಎಲ್ಲವನ್ನು ತಿಳಿಸಿದಳು. ನಾಬಾಲನಿಗೆ ಹೃದಯಾಘಾತವಾಯಿತು. ಅವನು ಸ್ತಬ್ಧನಾದನು.
1 ಸಮುವೇಲನು 25 : 38 (ERVKN)
ಹತ್ತು ದಿನಗಳಾದ ಮೇಲೆ, ಯೆಹೋವನು ನಾಬಾಲನಿಗೆ ಸಾವನ್ನು ಬರಮಾಡಿದನು.
1 ಸಮುವೇಲನು 25 : 39 (ERVKN)
ನಾಬಾಲನು ಸತ್ತನೆಂಬುದು ದಾವೀದನಿಗೆ ತಿಳಿಯಿತು. ದಾವೀದನು, “ಯೆಹೋವನಿಗೆ ಸ್ತೋತ್ರವಾಗಲಿ! ನಾಬಾಲನು ನನ್ನ ಬಗ್ಗೆ ಕೆಟ್ಟಮಾತುಗಳನ್ನು ಆಡಿದನು, ಆದರೆ ಯೆಹೋವನು ನನಗೆ ಸಹಾಯ ಮಾಡಿದನು. ನಾನು ತಪ್ಪುಮಾಡದಂತೆ ಯೆಹೋವನು ನನ್ನನ್ನು ತಡೆದನು. ನಾಬಾಲನು ಕೆಟ್ಟದನ್ನು ಮಾಡಿದ್ದರಿಂದ ಯೆಹೋವನು ಅವನಿಗೆ ಸಾವನ್ನು ಬರಮಾಡಿದನು” ಎಂದು ಹೇಳಿದನು. ನಂತರ ದಾವೀದನು ಅಬೀಗೈಲಳಿಗೆ ಒಂದು ಸಂದೇಶವನ್ನು ಕಳುಹಿಸಿ ತನ್ನ ಹೆಂಡತಿಯಾಗಬೇಕೆಂದು ಕೇಳಿಕೊಂಡನು.
1 ಸಮುವೇಲನು 25 : 40 (ERVKN)
ದಾವೀದನ ಸೈನಿಕರು ಕರ್ಮೆಲಿಗೆ ಹೋಗಿ ಅಬೀಗೈಲಳಿಗೆ, “ದಾವೀದನು ನಿನ್ನನ್ನು ಕರೆತರಲು ಹೇಳಿದ್ದಾನೆ. ನಿನ್ನನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಳ್ಳಬೇಕೆಂಬುದು ದಾವೀದನ ಅಪೇಕ್ಷೆ” ಎಂದು ಹೇಳಿದರು.
1 ಸಮುವೇಲನು 25 : 41 (ERVKN)
ಅಬೀಗೈಲಳು ಸಾಷ್ಟಾಂಗನಮಸ್ಕಾರಮಾಡಿ, “ನಾನು ನಿಮ್ಮ ದಾಸಿ. ನಾನು ನಿಮ್ಮ ಸೇವೆಗೆ ಸಿದ್ಧಳಾಗಿದ್ದೇನೆ. ನಾನು ನನ್ನ ಒಡೆಯನ ಸೇವಕರ ಪಾದಗಳನ್ನು ತೊಳೆಯಲು ಸಿದ್ಧಳಾಗಿರುವೆ” ಎಂದಳು.
1 ಸಮುವೇಲನು 25 : 42 (ERVKN)
ಅಬೀಗೈಲಳು ಬೇಗನೆ ಒಂದು ಕತ್ತೆಯ ಮೇಲೇರಿ, ದಾವೀದನ ಸಂದೇಶಕರೊಂದಿಗೆ ಹೊರಟುಹೋದಳು. ಅಬೀಗೈಲಳು ಐದು ಜನ ಸೇವಕಿಯರನ್ನು ತನ್ನೊಂದಿಗೆ ಕರೆದುಕೊಂಡು ಹೋದಳು. ಅವಳು ದಾವೀದನ ಹೆಂಡತಿಯಾದಳು.
1 ಸಮುವೇಲನು 25 : 43 (ERVKN)
ದಾವೀದನು ಇಜ್ರೇಲಿನವಳಾದ ಅಹೀನೋವಮಳನ್ನು ಸಹ ಮದುವೆಯಾದನು. ಅಹೀನೋವಮಳು ಮತ್ತು ಅಬೀಗೈಲರಿಬ್ಬರೂ ದಾವೀದನ ಪತ್ನಿಯರು.
1 ಸಮುವೇಲನು 25 : 44 (ERVKN)
ಸೌಲನ ಮಗಳಾದ ಮೀಕಲಳೂ ದಾವೀದನ ಪತ್ನಿ. ಆದರೆ ಸೌಲನು ಅವಳನ್ನು ಗಲ್ಲೀಮ್‌ನ ಲಯಿಷನ ಮಗನಾದ ಪಲ್ಟೀ ಎಂಬವನಿಗೆ ಮದುವೆ ಮಾಡಿಕೊಟ್ಟನು.
❮
❯