1 ಸಮುವೇಲನು 15 : 1 (ERVKN)
ಸೌಲನಿಂದ ಅಮಾಲೇಕ್ಯರ ನಾಶನ ಒಂದು ದಿನ ಸಮುವೇಲನು ಸೌಲನಿಗೆ, “ಯೆಹೋವನು ಇಸ್ರೇಲರ ಮೇಲೆ ನಿನ್ನನ್ನು ರಾಜನನ್ನಾಗಿ ಅಭಿಷೇಕಿಸಲು ನನ್ನನ್ನು ಕಳುಹಿಸಿದನು. ಈಗ ಯೆಹೋವನ ಸಂದೇಶವನ್ನು ಕೇಳು.
1 ಸಮುವೇಲನು 15 : 2 (ERVKN)
ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಅಮಾಲೇಕ್ಯರು ಅವರನ್ನು ಕಾನಾನಿಗೆ ಹೋಗದಂತೆ ತಡೆಯಲು ಪ್ರಯತ್ನಿಸಿದರು. ಅಮಾಲೇಕ್ಯರು ಮಾಡಿದ್ದನ್ನು ನಾನು ನೋಡಿದೆ.
1 ಸಮುವೇಲನು 15 : 3 (ERVKN)
ಈಗ, ನೀನು ಹೋಗಿ ಅಮಾಲೇಕ್ಯರ ವಿರುದ್ಧ ಹೋರಾಡು. ನೀನು ಅಮಾಲೇಕ್ಯರನ್ನೂ ಮತ್ತು ಅವರಿಗೆ ಸೇರಿದ ಎಲ್ಲವನ್ನೂ ನಾಶಗೊಳಿಸಬೇಕು. ಯಾರನ್ನೂ ಜೀವದಿಂದ ಉಳಿಸಬೇಡ, ನೀನು ಎಲ್ಲ ಗಂಡಸರನ್ನು ಮತ್ತು ಹೆಂಗಸರನ್ನು ಕೊಲ್ಲಬೇಕು. ನೀನು ಎಲ್ಲ ಮಕ್ಕಳನ್ನೂ ಎಳೆಕೂಸುಗಳನ್ನೂ ಕೊಲ್ಲಬೇಕು. ನೀನು ಅವರಿಗೆ ಸೇರಿದ ಎಲ್ಲ ಹಸುಗಳನ್ನೂ ಕುರಿಗಳನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಂದುಹಾಕಬೇಕು’ ” ಎಂದು ಹೇಳಿದನು.
1 ಸಮುವೇಲನು 15 : 4 (ERVKN)
ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದನು. ಅಲ್ಲಿ ಎರಡು ಲಕ್ಷ ಮಂದಿ ಭೂಸೈನಿಕರಿದ್ದರು ಮತ್ತು ಇತರ ಹತ್ತು ಸಾವಿರ ಮಂದಿ ಜನರಿದ್ದರು. ಯೆಹೂದ್ಯರೂ ಅವರೊಂದಿಗೆ ಸೇರಿಕೊಂಡಿದ್ದರು.
1 ಸಮುವೇಲನು 15 : 5 (ERVKN)
ಸೌಲನು ಅಮಾಲೇಕ್ಯರ ನಗರಕ್ಕೆ ಹೋಗಿ ಅಲ್ಲಿನ ಕಣಿವೆಯಲ್ಲಿ ಹೊಂಚುಹಾಕುತ್ತಿದ್ದನು.
1 ಸಮುವೇಲನು 15 : 6 (ERVKN)
ಸೌಲನು ಕೇನ್ಯದ ಜನರಿಗೆ, “ಅಮಾಲೇಕ್ಯರನ್ನು ತ್ಯಜಿಸಿ ಹೊರಗೆ ಹೋಗಿ, ಆಗ ನಿಮ್ಮನ್ನು ಅಮಾಲೇಕ್ಯರೊಂದಿಗೆ ನಾಶಗೊಳಿಸುವುದಿಲ್ಲ. ಇಸ್ರೇಲರು ಈಜಿಪ್ಟಿನಿಂದ ಹೊರ ಬಂದಾಗ ನೀವು ಅವರಿಗೆ ಅನುಕಂಪ ತೋರಿದ್ದೀರಿ” ಎಂದು ಹೇಳಿದನು. ಆದ್ದರಿಂದ ಕೇನ್ಯರು ಅಮಾಲೇಕ್ಯರನ್ನು ಬಿಟ್ಟುಹೋದರು.
1 ಸಮುವೇಲನು 15 : 7 (ERVKN)
ಸೌಲನು ಅಮಾಲೇಕ್ಯರನ್ನು ಸೋಲಿಸಿದನು. ಅವನು ಹವೀಲಾದಿಂದ ಈಜಿಪ್ಟಿನ ಗಡಿಯಲ್ಲಿರುವ ಶೂರಿನವರೆಗೂ ಅವರೊಡನೆ ಹೋರಾಡಿದನು.
1 ಸಮುವೇಲನು 15 : 8 (ERVKN)
ಸೌಲನು ಅಮಾಲೇಕ್ಯರ ರಾಜನಾದ ಅಗಾಗನನ್ನು ಜೀವಸಹಿತ ಉಳಿಸಿದನು. ಆದರೆ ಉಳಿದ ಅಮಾಲೇಕ್ಯರನ್ನೆಲ್ಲ ಕೊಂದುಹಾಕಿದನು.
1 ಸಮುವೇಲನು 15 : 9 (ERVKN)
ಹೀಗೆ ಸೌಲನು ಮತ್ತು ಇಸ್ರೇಲ್ ಸೈನಿಕರು ಅಗಾಗನಿಗೆ ಜೀವದಾನ ಮಾಡಿದರು. ಅವರು ಉತ್ತಮ ಕುರಿಗಳನ್ನೂ ದನಗಳನ್ನೂ ಆಡಿನ ಮರಿಗಳನ್ನೂ ಉಳಿಸಿದರು. ಅವರು ಉಪಯುಕ್ತವಾದುದನ್ನು ಉಳಿಸಿ, ಅನುಪಯುಕ್ತವಾದುದನ್ನು ನಾಶಗೊಳಿಸಿದರು.
1 ಸಮುವೇಲನು 15 : 10 (ERVKN)
ಸಮುವೇಲನು ಸೌಲನಿಗೆ ಅವನ ಪಾಪದ ಬಗ್ಗೆ ತಿಳಿಸುವನು ಸಮುವೇಲನಿಗೆ ಯೆಹೋವನ ಸಂದೇಶ ಬಂದಿತು.
1 ಸಮುವೇಲನು 15 : 11 (ERVKN)
ಯೆಹೋವನು ಸಮುವೇಲನಿಗೆ, “ಸೌಲನು ನನ್ನ ಮಾರ್ಗವನ್ನು ತ್ಯಜಿಸಿದನು. ನಾನು ಸೌಲನನ್ನು ರಾಜನನ್ನಾಗಿ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತೇನೆ. ನಾನು ಆಜ್ಞಾಪಿಸಿದ ಕಾರ್ಯಗಳನ್ನು ಅವನು ಮಾಡುತ್ತಿಲ್ಲ” ಎಂದು ಹೇಳಿದನು. ಸಮುವೇಲನು ತಳಮಳಗೊಂಡನು. ಅವನು ರಾತ್ರಿಯೆಲ್ಲ ಅಳುತ್ತಾ ಯೆಹೋವನಲ್ಲಿ ಮೊರೆಯಿಟ್ಟನು.
1 ಸಮುವೇಲನು 15 : 12 (ERVKN)
ಸಮುವೇಲನು ಮಾರನೆಯ ದಿನ ಬೆಳಿಗ್ಗೆ ಮೇಲೆದ್ದು, ಸೌಲನನ್ನು ಭೇಟಿಮಾಡಲು ಹೋದನು. ಆದರೆ ಜನರೆಲ್ಲ ಸಮುವೇಲನಿಗೆ, “ಸೌಲನು ತನ್ನ ಗೌರವಾರ್ಥವಾಗಿ ಜ್ಞಾಪಕಸ್ತಂಭವನ್ನು ನಿರ್ಮಿಸಲು ಕರ್ಮೆಲ್ ಎಂಬ ಪಟ್ಟಣಕ್ಕೆ ಹೋದನು. ನಂತರ ಸೌಲನು ಕೆಲವು ಪ್ರದೇಶಗಳನ್ನು ಸುತ್ತಿಕೊಂಡು ಗಿಲ್ಗಾಲಿಗೆ ಹೋದನು” ಎಂದು ಹೇಳಿದರು. ಸಮುವೇಲನು ಸೌಲನಿದ್ದ ಸ್ಥಳಕ್ಕೆ ಹೋದನು. ಸೌಲನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳನ್ನು ಪ್ರಥಮ ಸರ್ವಾಂಗಹೋಮವಾಗಿ ಯೆಹೋವನಿಗೆ ಅರ್ಪಿಸುತ್ತಿದ್ದನು.
1 ಸಮುವೇಲನು 15 : 13 (ERVKN)
ಸೌಲನು ಸಮುವೇಲನ ಹತ್ತಿರಕ್ಕೆ ಹೋಗಿ, “ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಯೆಹೋವನ ಆಜ್ಞೆಗಳನ್ನು ಪಾಲಿಸಿದ್ದೇನೆ” ಎಂದು ಹೇಳಿದನು.
1 ಸಮುವೇಲನು 15 : 14 (ERVKN)
ಅದಕ್ಕೆ ಸಮುವೇಲನು, “ಹಾಗಿದ್ದರೆ ನಾನು ಕೇಳುತ್ತಿರುವ ಶಬ್ದವೇನು? ದನಕುರಿಗಳ ಶಬ್ದವು ಕೇಳುತ್ತಿದೆಯಲ್ಲಾ!” ಎಂದನು.
1 ಸಮುವೇಲನು 15 : 15 (ERVKN)
ಸೌಲನು, “ಸೈನಿಕರು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳಲ್ಲಿ ಉತ್ತಮವಾದುದ್ದನ್ನು ನಿನ್ನ ದೇವರಾದ ಯೆಹೋವನಿಗೆ ಅರ್ಪಿಸುವುದಕ್ಕಾಗಿ ತೆಗೆದುಕೊಂಡು ಬಂದಿದ್ದಾರೆ. ಆದರೆ ನಾವು ಉಳಿದೆಲ್ಲವನ್ನು ನಾಶಪಡಿಸಿದೆವು” ಎಂದು ಉತ್ತರಿಸಿದನು.
1 ಸಮುವೇಲನು 15 : 16 (ERVKN)
ಸಮುವೇಲನು ಸೌಲನಿಗೆ, “ಯೆಹೋವನು ಕಳೆದ ರಾತ್ರಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುತ್ತೇನೆ” ಎಂದನು. ಸೌಲನು. “ಸರಿ, ತಿಳಿಸು” ಎಂದು ಉತ್ತರಿಸಿದನು.
1 ಸಮುವೇಲನು 15 : 17 (ERVKN)
ಸಮುವೇಲನು, “ನೀನು ಮೊದಲು ನಿನ್ನನ್ನು ಅಲ್ಪನೆಂದು ತಿಳಿದಿದ್ದೆ. ಯೆಹೋವನು ನಿನ್ನನ್ನು ಇಸ್ರೇಲರಿಗೆ ರಾಜನನ್ನಾಗಿ ಆರಿಸಿಕೊಂಡದ್ದರಿಂದ ಇಸ್ರೇಲ್ ಕುಲಗಳಿಗೆ ನಾಯಕನಾದೆ.
1 ಸಮುವೇಲನು 15 : 18 (ERVKN)
ಆತನು ನಿನಗೆ, ‘ಹೋಗು ದುಷ್ಟರಾದ ಅಮಾಲೇಕ್ಯರ ಮೇಲೆ ಯುದ್ಧ ಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಗೊಳಿಸು’ ಎಂದು ಆಜ್ಞಾಪಿಸಿದರು.
1 ಸಮುವೇಲನು 15 : 19 (ERVKN)
ಆದರೆ ನೀನು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ. ನೀನು ಅವುಗಳನ್ನು ನಿನ್ನ ಬಳಿಯಲ್ಲಿಟ್ಟುಕೊಳ್ಳಲು ಬಯಸಿದೆ. ಹೀಗೆ ಯೆಹೋವನು ಕೆಟ್ಟದೆಂದು ಹೇಳಿದ್ದನ್ನೇ ನೀನು ಮಾಡಿದೆ!” ಎಂದು ಹೇಳಿದನು.
1 ಸಮುವೇಲನು 15 : 20 (ERVKN)
ಸೌಲನು, “ಆದರೆ ನಾನು ಯೆಹೋವನಿಗೆ ವಿಧೇಯನಾದೆ. ಆತನು ಕಳುಹಿಸಿದಲ್ಲಿಗೆ ನಾನು ಹೋಗಿ ಅಮಾಲೇಕ್ಯರೆಲ್ಲರನ್ನು ನಾಶಗೊಳಿಸಿದೆ. ಆದರೆ ಒಬ್ಬನನ್ನೇ ನಾನು ತಂದೆನು. ಅವನೇ ರಾಜನಾದ ಅಗಾಗ.
1 ಸಮುವೇಲನು 15 : 21 (ERVKN)
ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞವನರ್ಪಿಸುವುದಕ್ಕಾಗಿ ಸೈನಿಕರು ಉತ್ತಮವಾದ ದನಕುರಿಗಳನ್ನು ವಶಪಡಿಸಿಕೊಂಡು ಬಂದರು” ಎಂದು ಉತ್ತರಿಸಿದನು.
1 ಸಮುವೇಲನು 15 : 22 (ERVKN)
ಆದಕ್ಕೆ ಸಮುವೇಲನು, “ಯೆಹೋವನಿಗೆ ಯಾವುದು ಹೆಚ್ಚು ಮೆಚ್ಚಿಗೆಯಾಗಿದೆ? ಸರ್ವಾಂಗಹೋಮಗಳೇ? ಯಜ್ಞಗಳೇ? ಇಲ್ಲವೆ ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದೇ? ದೇವರಿಗೆ ಯಜ್ಞವನ್ನು ಸಮರ್ಪಿಸುವುದಕ್ಕಿಂತ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದೇ ಉತ್ತಮ. ಟಗರುಗಳ ಕೊಬ್ಬನ್ನು ಅರ್ಪಿಸುವುದಕ್ಕಿಂತ ಆತನ ಮಾತುಗಳನ್ನು ಆಲಿಸುವುದು ಉತ್ತಮ.
1 ಸಮುವೇಲನು 15 : 23 (ERVKN)
ಅವಿಧೇಯತೆಯು ಮಾಟಮಂತ್ರಗಳಷ್ಟೇ ಪಾಪಪೂರಿತವಾದುದು. ಮೊಂಡುತನದಿಂದ ತನ್ನ ಇಷ್ಟದಂತೆ ಮಾಡುವುದು ವಿಗ್ರಹಾರಾಧನೆಯಷ್ಟೇ ಪಾಪಪೂರಿತವಾದುದು. ನೀನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ. ಈ ಕಾರಣದಿಂದ ಈಗ ಯೆಹೋವನು ನಿನ್ನನ್ನು ರಾಜನನ್ನಾಗಿ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಸೌಲನಿಗೆ ಉತ್ತರಿಸಿದನು.
1 ಸಮುವೇಲನು 15 : 24 (ERVKN)
ಆಗ ಸೌಲನು ಸಮುವೇಲನಿಗೆ, “ನಾನು ಪಾಪ ಮಾಡಿದ್ದೇನೆ. ನಾನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ; ನೀನು ಹೇಳಿದ್ದನ್ನು ನಾನು ಮಾಡಲಿಲ್ಲ. ನಾನು ಜನರಿಗೆ ಹೆದರಿ ಅವರು ಹೇಳಿದಂತೆ ಮಾಡಿದೆ.
1 ಸಮುವೇಲನು 15 : 25 (ERVKN)
ಈಗ ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ, ನನ್ನ ಪಾಪವನ್ನು ಕ್ಷಮಿಸು. ನನ್ನೊಂದಿಗೆ ಹಿಂದಿರುಗಿ ಬಾ, ಆಗ ನಾನು ಯೆಹೋವನನ್ನು ಆರಾಧಿಸಲು ಸಾಧ್ಯವಾಗುವುದು” ಎಂದು ಅವನನ್ನು ಬೇಡಿಕೊಂಡನು.
1 ಸಮುವೇಲನು 15 : 26 (ERVKN)
ಆದರೆ ಸಮುವೇಲನು ಸೌಲನಿಗೆ, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ನಿರಾಕರಿಸಿರುವೆ. ಈಗ ಆತನೂ ನಿನ್ನನ್ನು ಇಸ್ರೇಲಿನ ರಾಜತ್ವದಿಂದ ನಿರಾಕರಿಸುತ್ತಾನೆ” ಎಂದು ಹೇಳಿದನು.
1 ಸಮುವೇಲನು 15 : 27 (ERVKN)
ಸಮುವೇಲನು ಹೋಗಲು ತಿರುಗಿದಾಗ ಸೌಲನು ಸಮುವೇಲನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು. ಮೇಲಂಗಿಯು ಹರಿದುಹೋಯಿತು.
1 ಸಮುವೇಲನು 15 : 28 (ERVKN)
ಆಗ ಸಮುವೇಲನು ಸೌಲನಿಗೆ, “ನೀನು ನನ್ನ ಮೇಲಂಗಿಯನ್ನು ಹರಿದುಹಾಕಿದೆ. ಇದೇರೀತಿ ಯೆಹೋವನು ಈ ದಿನ ನಿನ್ನಿಂದ ಇಸ್ರೇಲ್ ರಾಜ್ಯವನ್ನು ಹರಿದುಹಾಕಿದನು. ನಿನ್ನ ಸ್ನೇಹಿತರಲ್ಲಿ ಒಬ್ಬನಿಗೆ ಯೆಹೋವನು ರಾಜ್ಯಾಧಿಕಾರವನ್ನು ಕೊಟ್ಟಿದ್ದಾನೆ. ಅವನು ನಿನಗಿಂತ ಉತ್ತಮ ವ್ಯಕ್ತಿ.
1 ಸಮುವೇಲನು 15 : 29 (ERVKN)
ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಯೆಹೋವನು ಸರ್ವಕಾಲದಲ್ಲೂ ಇರುವನು. ಯೆಹೋವನು ಸುಳ್ಳಾಡುವುದಿಲ್ಲ; ಆತನು ಮನುಷ್ಯನಂತೆ ಪದೇಪದೇ ಮನಸ್ಸನ್ನು ಬದಲಾಯಿಸುವವನಲ್ಲ” ಎಂದು ಹೇಳಿದನು.
1 ಸಮುವೇಲನು 15 : 30 (ERVKN)
ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆಂಬುದು ಸರಿ. ಆದರೆ ದಯವಿಟ್ಟು ನನ್ನ ಜೊತೆಯಲ್ಲಿ ಹಿಂದಿರುಗಿ ಬಾ. ಇಸ್ರೇಲಿನ ಜನರೆದುರು ಮತ್ತು ನಾಯಕರೆದುರು ಸ್ವಲ್ಪ ಗೌರವವನ್ನು ತೋರಿಸು. ನನ್ನ ಜೊತೆಯಲ್ಲಿ ನೀನು ಹಿಂದಿರುಗಿ ಬಂದರೆ, ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸಬಹುದು” ಎಂದು ಬೇಡಿಕೊಂಡನು.
1 ಸಮುವೇಲನು 15 : 31 (ERVKN)
ಆಗ ಸಮುವೇಲನು ಸೌಲನ ಜೊತೆಯಲ್ಲಿ ಹೋದನು. ಸೌಲನು ದೇವರನ್ನು ಆರಾಧಿಸಿದನು.
1 ಸಮುವೇಲನು 15 : 32 (ERVKN)
ಸಮುವೇಲನು, “ಅಮಾಲೇಕ್ಯರ ರಾಜನಾದ ಅಗಾಗನನ್ನು ನನ್ನ ಬಳಿಗೆ ಕರೆದುಕೊಂಡು ಬಾ” ಎಂದು ಹೇಳಿದನು. ಅಗಾಗನು ಸಮುವೇಲನ ಹತ್ತಿರಕ್ಕೆ ಬಂದನು. ಅಗಾಗನನ್ನು ಸರಪಣಿಗಳಿಂದ ಬಂಧಿಸಲಾಗಿತ್ತು. ಅಗಾಗನು, “ಅವನು ನನ್ನನ್ನು ನಿಜವಾಗಿಯೂ ಕೊಲ್ಲುವುದಿಲ್ಲ” ಎಂದು ಆಲೋಚಿಸಿದನು.
1 ಸಮುವೇಲನು 15 : 33 (ERVKN)
ಆದರೆ ಸಮುವೇಲನು ಅಗಾಗನಿಗೆ, “ನಿನ್ನ ಕತ್ತಿಯು ಅನೇಕ ತಾಯಂದಿರಿಗೆ ಮಕ್ಕಳಿಲ್ಲದಂತೆ ಮಾಡಿದೆ. ಆದ್ದರಿಂದ ಈಗ ನಿನ್ನ ತಾಯಿಗೆ ಮಕ್ಕಳಿಲ್ಲದಂತಾಯಿತು” ಎಂದು ಹೇಳಿ ಅಗಾಗನನ್ನು ಗಿಲ್ಗಾಲಿನ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.
1 ಸಮುವೇಲನು 15 : 34 (ERVKN)
ನಂತರ ಸಮುವೇಲನು ಅಲ್ಲಿಂದ ಹೊರಟು ರಾಮಕ್ಕೆ ಹೋದನು. ಸೌಲನು ಗಿಬೆಯದ ತನ್ನ ಮನೆಗೆ ಹೋದನು.
1 ಸಮುವೇಲನು 15 : 35 (ERVKN)
ಅನಂತರ ಸಮುವೇಲನು ತನ್ನ ಜೀವಿತದ ಅವಧಿಯಲ್ಲಿ ಸೌಲನನ್ನು ನೋಡಲಿಲ್ಲ. ಸಮುವೇಲನು ಸೌಲನಿಗಾಗಿ ಬಹಳ ದುಃಖಪಟ್ಟನು. ಸೌಲನನ್ನು ಇಸ್ರೇಲರ ರಾಜನನ್ನಾಗಿ ಮಾಡಿದ್ದಕ್ಕೆ ಯೆಹೋವನು ಬಹಳ ಸಂತಾಪಪಟ್ಟನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35