1 ಸಮುವೇಲನು 1 : 1 (ERVKN)
ಶೀಲೋವಿನಲ್ಲಿ ಆರಾಧನೆ ಎಲ್ಕಾನ ಎಂಬ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ರಾಮಾತಯಿಮ್ ಎಂಬ ಊರಿನವನು. ಅವನು ಚೋಫೀಮ್ ಕುಟುಂಬದವನೂ ಯೆರೋಹಾಮನ ಮಗನೂ ಆಗಿದ್ದನು. ಯೆರೋಹಾಮನು ಎಲೀಹುವಿನ ಮಗ. ಎಲೀಹುವನು ತೋಹುವನ ಮಗ. ತೋಹುವನು ಚೂಫನ ಮಗ. ಇವರೆಲ್ಲ ಎಫ್ರಾಯೀಮ್ ಕುಲದವರು.
1 ಸಮುವೇಲನು 1 : 2 (ERVKN)
ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಹನ್ನಳು ಎಂಬುದು ಒಬ್ಬಳ ಹೆಸರಾದರೆ, ಇನ್ನೊಬ್ಬಳು ಪೆನಿನ್ನಳು. ಪೆನಿನ್ನಳಿಗೆ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.
1 ಸಮುವೇಲನು 1 : 3 (ERVKN)
ಎಲ್ಕಾನನು ಪ್ರತಿ ವರ್ಷವೂ ತನ್ನ ಪಟ್ಟಣವಾದ ರಾಮಾತವನ್ನು ಬಿಟ್ಟು ಶೀಲೋವಿಗೆ ಹೋಗುತ್ತಿದ್ದನು. ಅವನು ಶೀಲೋವಿನಲ್ಲಿ ಸರ್ವಶಕ್ತನಾದ ಯೆಹೋವನನ್ನು ಆರಾಧಿಸಿ ಆತನಿಗೆ ಯಜ್ಞವನ್ನು ಅರ್ಪಿಸುತ್ತಿದ್ದನು. ಹೊಫ್ನಿ ಮತ್ತು ಫೀನೆಹಾಸರೆಂಬ ಯಾಜಕರು ಯೆಹೋವನ ಸೇವೆಮಾಡುವ ಸ್ಥಳವೇ ಶೀಲೋವ. ಹೊಫ್ನಿ ಮತ್ತು ಫೀನೆಹಾಸರು ಏಲಿಯನ ಮಕ್ಕಳು.
1 ಸಮುವೇಲನು 1 : 4 (ERVKN)
ಎಲ್ಕಾನನು ಪ್ರತಿಸಲ ಯಜ್ಞವನ್ನು ಅರ್ಪಿಸುವಾಗ, ಪೆನಿನ್ನಳಿಗೆ ಯಜ್ಞದ ಒಂದು ಭಾಗವನ್ನೂ ಅವಳ ಮಕ್ಕಳಿಗೆ ಒಂದು ಭಾಗವನ್ನೂ ಕೊಡುತ್ತಿದ್ದನು.
1 ಸಮುವೇಲನು 1 : 5 (ERVKN)
ಎಲ್ಕಾನನು ಹನ್ನಳಿಗೆ ಯಾವಾಗಲೂ ಎರಡು ಭಾಗವನ್ನು ಕೊಡುತ್ತಿದ್ದನು. ಯೆಹೋವನು ಹನ್ನಳಿಗೆ ಮಕ್ಕಳನ್ನು ಕೊಡದೇ ಇದ್ದರೂ, ಎಲ್ಕಾನನು ಎರಡು ಭಾಗವನ್ನು ಕೊಡುತ್ತಿದ್ದನು. ಎಲ್ಕಾನನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಹೀಗೆ ಮಾಡುತ್ತಿದ್ದನು.
1 ಸಮುವೇಲನು 1 : 6 (ERVKN)
ಪೆನಿನ್ನಳು ಹನ್ನಳನ್ನು ನೋಯಿಸುವಳು ಪೆನಿನ್ನಳು ಯಾವಾಗಲೂ ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಹನ್ನಳು ಬಂಜೆಯಾಗಿದ್ದುದೇ ಅದಕ್ಕೆ ಕಾರಣ.
1 ಸಮುವೇಲನು 1 : 7 (ERVKN)
ಪ್ರತಿ ವರ್ಷವೂ ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವರ ಕುಟುಂಬವು ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಒಂದು ದಿನ ಎಲ್ಕಾನನು ಯಜ್ಞವನ್ನು ಅರ್ಪಿಸುವಾಗ, ಹನ್ನಳು ನೊಂದುಕೊಂಡು ಅಳಲಾರಂಭಿಸಿದಳು. ಹನ್ನಳು ಊಟಮಾಡಲೇ ಇಲ್ಲ.
1 ಸಮುವೇಲನು 1 : 8 (ERVKN)
ಅವಳ ಗಂಡನಾದ ಎಲ್ಕಾನನು ಅವಳನ್ನು ಕುರಿತು, “ಹನ್ನಾ, ಯಾಕೆ ಅಳುತ್ತಿರುವೆ? ಯಾಕೆ ಊಟಮಾಡುತ್ತಿಲ್ಲ? ಯಾಕೆ ವ್ಯಸನದಿಂದಿರುವೆ? ನಿನಗೆ ನಾನಿಲ್ಲವೇ? ನಾನು ನಿನ್ನ ಗಂಡ. ನಾನು ನಿನಗೆ ಹತ್ತು ಗಂಡುಮಕ್ಕಳಿಗಿಂತಲೂ ಹೆಚ್ಚಾಗಿದ್ದೇನಲ್ಲಾ” ಎಂದು ಹೇಳಿದನು.
1 ಸಮುವೇಲನು 1 : 9 (ERVKN)
ಹನ್ನಳ ಪ್ರಾರ್ಥನೆ ಹನ್ನಳು ಅನ್ನಪಾನಗಳನ್ನು ತೆಗೆದುಕೊಂಡು ಸದ್ದಿಲ್ಲದೆ ಮೇಲೆದ್ದು ಯೆಹೋವನಿಗೆ ಪ್ರಾರ್ಥಿಸಲು ಹೋದಳು. ಯೆಹೋವನ ಪವಿತ್ರ ಆಲಯದ ದ್ವಾರದ ಹತ್ತಿರ ಯಾಜಕನಾದ ಏಲಿಯು ಕುಳಿತಿದ್ದನು.
1 ಸಮುವೇಲನು 1 : 10 (ERVKN)
ಹನ್ನಳು ಬಹು ದುಃಖಿತಳಾಗಿದ್ದುದರಿಂದ ಕಣ್ಣೀರು ಸುರಿಯುತ್ತಿತ್ತು. ಅವಳು ಯೆಹೋವನಿಗೆ ಪ್ರಾರ್ಥಿಸುತ್ತಿದ್ದಳು.
1 ಸಮುವೇಲನು 1 : 11 (ERVKN)
ಅವಳು ದೇವರಲ್ಲಿ ಒಂದು ವಿಶೇಷ ವಾಗ್ದಾನವನ್ನು ಮಾಡಿದಳು. ಅವಳು, “ಯೆಹೋವನೇ, ಸರ್ವಶಕ್ತನೇ, *ಸರ್ವಶಕ್ತ ಅಕ್ಷರಶಃ, “ನನ್ನ ಕೊಂಬು ಯೆಹೋವನಿಂದ ಮೇಲೆತ್ತಲ್ಪಟ್ಟಿದೆ.” ನಾನು ಎಷ್ಟು ದುಃಖಿತಳೆಂಬುದನ್ನು ನೋಡು, ನನ್ನನ್ನು ಜ್ಞಾಪಿಸಿಕೊ! ನನ್ನನ್ನು ಮರೆಯದಿರು. ನೀನು ನನಗೊಬ್ಬ ಮಗನನ್ನು ಕರುಣಿಸಿದರೆ, ಅವನು ಜೀವದಿಂದಿರುವ ತನಕ ನಿನ್ನವನಾಗಿರುವಂತೆ ನಿನಗೇ ಪ್ರತಿಷ್ಠಿಸುತ್ತೇನೆ. ಅವನು ನಾಜೀರನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಇತರೆ ಮದ್ಯವನ್ನಾಗಲಿ ಸೇವಿಸುವುದಿಲ್ಲ. ಅವನ ತಲೆಕೂದಲನ್ನು ಕ್ಷೌರ ಕತ್ತಿಯಿಂದ ಕತ್ತರಿಸುವುದಿಲ್ಲ” †ಕ್ಷೌರ ಕತ್ತಿಯಿಂದ ಕತ್ತರಿಸುವುದಿಲ್ಲ ತಲೆಯ ಕೂದಲನ್ನು ಕತ್ತಿಯಿಂದ ಕತ್ತರಿಸುವುದಿಲ್ಲ ಮತ್ತು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಎಂಬ ವಿಶೇಷ ವಾಗ್ದಾನ ಮಾಡುತ್ತಿದ್ದ ಜನರನ್ನು ನಾಜೀರರೆಂದು ಕರೆಯುತ್ತಿದ್ದರು. ಇವರು ದೇವರಿಗಾಗಿ ದೇಹತ್ಯಾಗವನ್ನೂ ಮಾಡುತ್ತಿದ್ದರು. ಎಂದು ಹೇಳಿದಳು
1 ಸಮುವೇಲನು 1 : 12 (ERVKN)
ಹನ್ನಳು ಬಹಳ ಹೊತ್ತಿನವರೆಗೆ ಯೆಹೋವನಿಗೆ ಪ್ರಾರ್ಥನೆ ಮಾಡಿದಳು. ಅವಳು ಪ್ರಾರ್ಥನೆ ಮಾಡುತ್ತಿದ್ದಾಗ ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು.
1 ಸಮುವೇಲನು 1 : 13 (ERVKN)
ಹನ್ನಳು ತನ್ನ ಹೃದಯದಲ್ಲಿಯೇ ಪ್ರಾರ್ಥಿಸುತ್ತಿದ್ದಳು. ಅವಳ ತುಟಿಗಳು ಚಲಿಸಿದರೂ ಮಾತುಗಳು ಕೇಳಿಸಲಿಲ್ಲ. ಅವಳು ಮದ್ಯಪಾನ ಮಾಡಿರುತ್ತಾಳೆಂದು
1 ಸಮುವೇಲನು 1 : 14 (ERVKN)
ಏಲಿಯು ನೆನಸಿ, “ನೀನು ಹೆಚ್ಚು ಕುಡಿದಿರುವೆ. ಅಮಲನ್ನು ಇಳಿಸಿಕೊ” ಎಂದು ಹನ್ನಳಿಗೆ ಹೇಳಿದನು.
1 ಸಮುವೇಲನು 1 : 15 (ERVKN)
ಹನ್ನಳು “ಸ್ವಾಮೀ, ನಾನು ಯಾವುದೇ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದಿಲ್ಲ. ನಾನು ಬಹುದುಃಖಿತಳು. ನಾನು ಯೆಹೋವನಲ್ಲಿ ನನ್ನ ಎಲ್ಲ ತೊಂದರೆಗಳನ್ನು ನಿವೇದಿಸಿಕೊಳ್ಳುತ್ತಿದ್ದೆನು.
1 ಸಮುವೇಲನು 1 : 16 (ERVKN)
ನನ್ನನ್ನು ಅಯೋಗ್ಯ ಹೆಂಗಸೆಂದು ನೆನಸಬೇಡಿ. ನಾನು ಬಹು ದುಃಖಿತಳಾಗಿರುವುದರಿಂದ ಮತ್ತು ಹೆಚ್ಚು ನೊಂದಿರುವುದರಿಂದ ದೀರ್ಘಕಾಲ ಪ್ರಾರ್ಥನೆ ಮಾಡಿದೆ” ಎಂದು ಉತ್ತರಿಸಿದಳು.
1 ಸಮುವೇಲನು 1 : 17 (ERVKN)
ಏಲಿಯು, “ಸಮಾಧಾನದಿಂದ ಹೋಗು. ಇಸ್ರೇಲಿನ ದೇವರು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ” ಎಂದು ಉತ್ತರಿಸಿದನು.
1 ಸಮುವೇಲನು 1 : 18 (ERVKN)
ಹನ್ನಳು, “ನನ್ನ ಮೇಲೆ ನಿಮ್ಮ ದಯೆಯಿರಲಿ” ಎಂದು ಹೇಳಿದಳು. ಆಗ ಅವಳು ತನ್ನ ಮಾರ್ಗದಲ್ಲಿಯೇ ಹಿಂದಿರುಗಿ. ಸ್ವಲ್ಪ ಊಟ ಮಾಡಿದಳು. ಅಂದಿನಿಂದ ಅವಳು ದುಃಖಿತಳಾಗಲಿಲ್ಲ.
1 ಸಮುವೇಲನು 1 : 19 (ERVKN)
ಎಲ್ಕಾನನ ಕುಟುಂಬದವರು ಮರುದಿನ ಬೆಳಿಗ್ಗೆ ಎದ್ದು ಯೆಹೋವನನ್ನು ಆರಾಧಿಸಿ, ರಾಮಾತದಲ್ಲಿದ್ದ ತಮ್ಮ ಮನೆಗೆ ಹಿಂದಿರುಗಿದರು. ಎಲ್ಕಾನನು ಹನ್ನಳನ್ನು ಕೂಡಿದನು. ಯೆಹೋವನು ಹನ್ನಳನ್ನು ಜ್ಞಾಪಿಸಿಕೊಂಡನು.
1 ಸಮುವೇಲನು 1 : 20 (ERVKN)
ಸಮುವೇಲನ ಜನನ ಹನ್ನಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಹನ್ನಳು ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು. ಅವಳು, “ಅವನ ಹೆಸರು ಸಮುವೇಲ, ಏಕೆಂದರೆ ನಾನು ಅವನಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದ್ದೆ” ಎಂದಳು.
1 ಸಮುವೇಲನು 1 : 21 (ERVKN)
ಎಲ್ಕಾನನು ಯಜ್ಞವನ್ನು ಅರ್ಪಿಸಲು ಮತ್ತು ಯೆಹೋವನಿಗೆ ಮಾಡಿದ ಹರಕೆಯನ್ನು ಸಲ್ಲಿಸಲು ಆ ವರ್ಷವೂ ಶೀಲೋವಿಗೆ ತನ್ನ ಕುಟುಂಬ ಸಮೇತವಾಗಿ ಹೋದನು.
1 ಸಮುವೇಲನು 1 : 22 (ERVKN)
ಆದರೆ ಹನ್ನಳು ಹೋಗಲಿಲ್ಲ. ಅವಳು ಎಲ್ಕಾನನಿಗೆ, “ಮಗುವು ಗಟ್ಟಿಯಾದ ಊಟಮಾಡುವ ತನಕ ನಾನು ಬರುವುದಿಲ್ಲ. ಅವನು ದೊಡ್ಡವನಾದ ಮೇಲೆ ನಾನೇ ಶೀಲೋವಿಗೆ ಕರೆದೊಯ್ದು ಯೆಹೋವನಿಗೆ ಒಪ್ಪಿಸುತ್ತೇನೆ. ಅವನು ನಾಜೀರನಾಗುತ್ತಾನೆ. ಅವನು ಯಾವಾಗಲೂ ಶೀಲೋವಿನಲ್ಲಿಯೇ ಇರುತ್ತಾನೆ” ಎಂದು ಹೇಳಿದಳು.
1 ಸಮುವೇಲನು 1 : 23 (ERVKN)
ಹನ್ನಳ ಗಂಡನಾದ ಎಲ್ಕಾನನು ಅವಳಿಗೆ, “ನಿನಗೆ ಸರಿತೋರಿದಂತೆ ಮಾಡು. ಮಗುವು ಗಟ್ಟಿಯಾದ ಊಟ ಮಾಡುವಷ್ಟು ವಯಸ್ಸಾಗುವ ತನಕ ಮನೆಯಲ್ಲಿಯೇ ಇರು. ನೀನು ಹೇಳಿದ್ದನ್ನು ಯೆಹೋವನು ನೆರವೇರಿಸಲಿ” ಎಂದು ಹೇಳಿದನು. ಆದ್ದರಿಂದ ಹನ್ನಳು ತನ್ನ ಮಗುವು ಗಟ್ಟಿಯಾದ ಆಹಾರವನ್ನು ತಿನ್ನಲು ಆರಂಭಿಸುವ ತನಕ ಆರೈಕೆಮಾಡಿ ಬೆಳೆಸಲು ಮನೆಯಲ್ಲಿಯೇ ಇದ್ದಳು.
1 ಸಮುವೇಲನು 1 : 24 (ERVKN)
ಸಮುವೇಲನನ್ನು ಯೆಹೋವನಿಗೆ ಒಪ್ಪಿಸಿದ್ದು ಮಗುವು ಗಟ್ಟಿಯಾದ ಊಟ ಮಾಡುವಂತಾದಾಗ ಹನ್ನಳು ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವನನ್ನು ಕರೆದುಕೊಂಡು ಹೋದಳು. ಹನ್ನಳು ಮೂರು ವರ್ಷದ ಒಂದು ಹೋರಿಯನ್ನೂ ಮೂವತ್ತು ಸೇರು ಹಿಟ್ಟನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋದಳು.
1 ಸಮುವೇಲನು 1 : 25 (ERVKN)
ಅವರೆಲ್ಲಾ ಯೆಹೋವನ ಸನ್ನಿಧಿಗೆ ಹೋದರು. ಎಲ್ಕಾನನು ಎಂದಿನಂತೆ ಹೋರಿಯನ್ನು ಯಜ್ಞವಾಗಿ ಅರ್ಪಿಸಿದನು. ಆಮೇಲೆ ಹನ್ನಳು ಏಲಿಯನ ಬಳಿಗೆ ಮಗನನ್ನು ಕರೆದೊಯ್ದಳು.
1 ಸಮುವೇಲನು 1 : 26 (ERVKN)
ಹನ್ನಳು, “ಸ್ವಾಮೀ, ನನ್ನನ್ನು ಕ್ಷಮಿಸಿ. ನಿಮ್ಮ ಬಳಿ ನಿಂತಿರುವ ನಾನೇ ಅಂದು ಯೆಹೋವನಿಗೆ ಪ್ರಾರ್ಥನೆ ಮಾಡಿದವಳು. ನಾನು ಹೇಳುತ್ತಿರುವುದು ನಿಜವೆಂದು ಪ್ರಮಾಣ ಮಾಡುತ್ತೇನೆ.
1 ಸಮುವೇಲನು 1 : 27 (ERVKN)
ನಾನು ಈ ಮಗುವಿಗಾಗಿ ಪ್ರಾರ್ಥನೆ ಮಾಡಿದೆ. ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರಿಸಿದನು. ಯೆಹೋವನು ಅನುಗ್ರಹಿಸಿದ ಮಗನೇ ಇವನು.
1 ಸಮುವೇಲನು 1 : 28 (ERVKN)
ಈಗ ನಾನು ಈ ಮಗನನ್ನು ಯೆಹೋವನಿಗೆ ಒಪ್ಪಿಸುತ್ತೇನೆ. ಇವನು ಜೀವದಿಂದಿರುವ ತನಕ ಯೆಹೋವನಿಗೆ ಪ್ರತಿಷ್ಠಿತನಾಗಿರುತ್ತಾನೆ” ಎಂದು ಏಲಿಗೆ ಹೇಳಿದಳು. ಬಳಿಕ ಹನ್ನಳು ಆ ಬಾಲಕನನ್ನು ಅಲ್ಲಿಯೇ ಬಿಟ್ಟು ಯೆಹೋವನನ್ನು ಆರಾಧಿಸಿದಳು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28