1 ಪೇತ್ರನು 5 : 1 (ERVKN)
ದೇವರ ಮಂದೆ ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ.
1 ಪೇತ್ರನು 5 : 2 (ERVKN)
ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ.
1 ಪೇತ್ರನು 5 : 3 (ERVKN)
ನೀವು ಜವಾಬ್ದಾರರಾಗಿರುವ ಆ ಮಂದೆಯ ಮೇಲೆ ದಬ್ಬಾಳಿಕೆ ಮಾಡಬೇಡಿ. ನೀವು ಅವರಿಗೆ ಉತ್ತಮ ಮಾದರಿಯಾಗಿರಿ.
1 ಪೇತ್ರನು 5 : 4 (ERVKN)
ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಆ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.
1 ಪೇತ್ರನು 5 : 5 (ERVKN)
ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು. “ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ. ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.” ಜ್ಞಾನೋಕ್ತಿಗಳು 3:34
1 ಪೇತ್ರನು 5 : 6 (ERVKN)
ಆದ್ದರಿಂದ ದೇವರ ಶಕ್ತಿಯುತವಾದ ಹಸ್ತದ ಕೆಳಗೆ ನಮ್ರತೆಯಿಂದಿರಿ. ಯೋಗ್ಯಕಾಲವು ಸಮೀಪಿಸಿದಾಗ ಆತನು ನಿಮ್ಮನ್ನು ಮೇಲೆತ್ತುವನು.
1 ಪೇತ್ರನು 5 : 7 (ERVKN)
ಆತನು ನಿಮ್ಮನ್ನು ಪರಿಪಾಲಿಸುವುದರಿಂದ ನಿಮ್ಮ ಚಿಂತೆಗಳನ್ನೆಲ್ಲಾ ಆತನಿಗೆ ಒಪ್ಪಿಸಿರಿ.
1 ಪೇತ್ರನು 5 : 8 (ERVKN)
ಸ್ವಸ್ಥಚಿತ್ತರಾಗಿರಿ ಮತ್ತು ಎಚ್ಚರವಾಗಿರಿ! ಸೈತಾನನು ನಿಮ್ಮ ಶತ್ರು. ಗರ್ಜಿಸುವ ಸಿಂಹವು ಯಾರನ್ನು ತಿನ್ನಲಿ ಎಂದು ಹುಡುಕುತ್ತಿರುವಂತೆ ಅವನು ಮನುಷ್ಯನನ್ನು ಹುಡುಕುತ್ತಿದ್ದಾನೆ.
1 ಪೇತ್ರನು 5 : 9 (ERVKN)
ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿದ್ದು ಅವನನ್ನು ಎದುರಿಸಿರಿ. ಯಾಕೆಂದರೆ ಲೋಕದಲ್ಲಿರುವ ನಿಮ್ಮ ಸಹೋದರ ಸಹೋದರಿಯರೆಲ್ಲರೂ ನಿಮಗಿರುವಂಥ ಬಾಧೆಗಳನ್ನು ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.
1 ಪೇತ್ರನು 5 : 10 (ERVKN)
ಹೌದು, ನೀವು ಸ್ವಲ್ಪಕಾಲ ಮಾತ್ರ ಸಂಕಟವನ್ನು ಅನುಭವಿಸುವಿರಿ. ಆದರೆ ಅನಂತರ ದೇವರು ಎಲ್ಲವನ್ನು ಸರಿಪಡಿಸುತ್ತಾನೆ. ಆತನು ನಿಮ್ಮನ್ನು ಬಲಪಡಿಸುತ್ತಾನೆ. ನೀವು ಕೆಳಕ್ಕೆ ಬೀಳದಂತೆ ಆತನು ನಿಮಗೆ ಆಧಾರವಾಗುವನು. ಎಲ್ಲರಿಗೂ ಕೃಪೆಯನ್ನು ತೋರುವ ದೇವರು ಆತನೇ. ತನ್ನ ಪ್ರಭಾವದಲ್ಲಿ ಪಾಲುಗಾರರಾಗಲು ಕ್ರಿಸ್ತನೇ ನಿಮ್ಮನ್ನು ಕರೆದನು. ಆ ಪ್ರಭಾವವು ಶಾಶ್ವತವಾದದ್ದು.
1 ಪೇತ್ರನು 5 : 11 (ERVKN)
ಸರ್ವಾಧಿಪತ್ಯವು ಎಂದೆಂದಿಗೂ ಆತನದೇ. ಆಮೆನ್.
1 ಪೇತ್ರನು 5 : 12 (ERVKN)
ಅಂತಿಮ ಶುಭಾಶಯಗಳು ನಾನು ಈ ಕಿರುಪತ್ರವನ್ನು ಸಿಲ್ವಾನನ ನೆರವಿನಿಂದ ಬರೆದೆನು. ಅವನು ಕ್ರಿಸ್ತನಲ್ಲಿ ನಂಬಿಗಸ್ತನಾದ ಸಹೋದರನೆಂಬುದು ನನಗೆ ತಿಳಿದಿದೆ. ನಾನು ನಿಮ್ಮನ್ನು ಸಂತೈಸಲು ಮತ್ತು ಪ್ರೋತ್ಸಾಹಿಸಲು ಈ ಪತ್ರವನ್ನು ಬರೆದೆನು. ಇದುವೇ ದೇವರ ನಿಜವಾದ ಕೃಪೆ ಎಂಬುದನ್ನು ನಿಮಗೆ ತಿಳಿಸಬೇಕೆಂಬುದೇ ನನ್ನ ಅಪೇಕ್ಷೆಯಾಗಿತ್ತು. ಆ ಕೃಪೆಯಲ್ಲಿ ಸ್ಥಿರತೆಯಿಂದಿರಿ.
1 ಪೇತ್ರನು 5 : 13 (ERVKN)
ಬಾಬಿಲೋನಿನಲ್ಲಿರುವ ಸಭೆಯವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ನಿಮ್ಮನ್ನು ಆರಿಸಿಕೊಂಡಂತೆಯೇ ಆ ಜನರನ್ನೂ ಆರಿಸಿಕೊಳ್ಳಲಾಗಿದೆ. ಕ್ರಿಸ್ತನಲ್ಲಿ ನನ್ನ ಮಗನಾದ ಮಾರ್ಕನೂ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ.
1 ಪೇತ್ರನು 5 : 14 (ERVKN)
ನೀವು ಭೇಟಿ ಮಾಡಿದಾಗ ಒಬ್ಬರಿಗೊಬ್ಬರು ಪ್ರೀತಿಯ ಮುದ್ದನ್ನು ನೀಡಿರಿ. ಕ್ರಿಸ್ತನಲ್ಲಿರುವ ನಿಮಗೆಲ್ಲರಿಗೂ ಶಾಂತಿಯಿರಲಿ.

1 2 3 4 5 6 7 8 9 10 11 12 13 14