1 ಪೇತ್ರನು 2 : 1 (ERVKN)
ಜೀವಂತವಾದ ಕಲ್ಲು ಮತ್ತು ಪವಿತ್ರವಾದ ದೇಶ ಆದ್ದರಿಂದ ಇತರ ಜನರಿಗೆ ಕೇಡುಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ.
1 ಪೇತ್ರನು 2 : 2 (ERVKN)
ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ.
1 ಪೇತ್ರನು 2 : 3 (ERVKN)
ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ.
1 ಪೇತ್ರನು 2 : 4 (ERVKN)
ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ.
1 ಪೇತ್ರನು 2 : 5 (ERVKN)
ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ.
1 ಪೇತ್ರನು 2 : 6 (ERVKN)
ಪವಿತ್ರ ಗ್ರಂಥವು ಹೇಳುವುದೇನೆಂದರೆ, “ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ. ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ” ಯೆಶಾಯ 28:16
1 ಪೇತ್ರನು 2 : 7 (ERVKN)
ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ: “ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.” ಕೀರ್ತನೆ. 118:22
1 ಪೇತ್ರನು 2 : 8 (ERVKN)
ನಂಬದಿರುವ ಜನರಿಗೆ ಆತನು: “ಜನರನ್ನು ಮುಗ್ಗರಿಸುವ ಕಲ್ಲೂ ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.” ಯೆಶಾಯ 8:14 ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.
1 ಪೇತ್ರನು 2 : 9 (ERVKN)
ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.
1 ಪೇತ್ರನು 2 : 10 (ERVKN)
ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ. ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ. ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.
1 ಪೇತ್ರನು 2 : 11 (ERVKN)
ದೇವರಿಗಾಗಿ ಜೀವಿಸಿ ಪ್ರಿಯ ಸ್ನೇಹಿತರೇ, ನೀವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಪರದೇಶದವರಂತೆ ಇದ್ದೀರಿ. ಆದ್ದರಿಂದ ನಿಮ್ಮ ದೇಹಗಳಿಗೆ ಇಷ್ಟವಾದ ಕೆಟ್ಟಸಂಗತಿಗಳಿಂದ ದೂರವಾಗಿರಿ. ಇವು ನಿಮ್ಮ ಜೀವಾತ್ಮಕ್ಕೆ ವಿರುದ್ಧವಾಗಿ ಹೋರಾಡುತ್ತವೆ.
1 ಪೇತ್ರನು 2 : 12 (ERVKN)
ನಂಬಿಕೆಯಿಲ್ಲದ ಜನರು ನಿಮ್ಮ ಸುತ್ತಮುತ್ತಲೆಲ್ಲಾ ವಾಸಿಸುತ್ತಿದ್ದಾರೆ. ನೀವು ತಪ್ಪು ಮಾಡುತ್ತಿರುವಿರೆಂದು ಅವರು ಹೇಳುವ ಸಾಧ್ಯತೆಯಿದೆ. ಆದ್ದರಿಂದ ಒಳ್ಳೆಯವರಾಗಿ ಬಾಳಿರಿ. ನೀವು ಮಾಡುವ ಒಳ್ಳೆಯ ಕಾರ್ಯಗಳನ್ನು ಅವರು ನೋಡುವರು ಮತ್ತು ದೇವರು ಪ್ರತ್ಯಕ್ಷನಾದ ದಿನದಂದು ಆತನನ್ನು ಕೊಂಡಾಡುವರು.
1 ಪೇತ್ರನು 2 : 13 (ERVKN)
ಈ ಲೋಕದ ಪ್ರತಿಯೊಬ್ಬ ಅಧಿಕಾರಿಗೂ ವಿಧೇಯರಾಗಿರಿ ಈ ಲೋಕದ ಅಧಿಕಾರಿಗಳಿಗೆ ವಿಧೇಯರಾಗಿರಿ. ಪ್ರಭುವಿಗಾಗಿ ಇದನ್ನು ಮಾಡಿರಿ. ಸರ್ವಾಧಿಕಾರಿಯಾದ ರಾಜನಿಗೆ ವಿಧೇಯರಾಗಿರಿ.
1 ಪೇತ್ರನು 2 : 14 (ERVKN)
ರಾಜನು ಕಳುಹಿಸುವ ಅಧಿಕಾರಿಗಳಿಗೆ ವಿಧೇಯರಾಗಿರಿ. ತಪ್ಪು ಮಾಡಿದವರನ್ನು ದಂಡಿಸಲೂ ಒಳ್ಳೆಯದನ್ನು ಮಾಡಿದವರನ್ನು ಹೊಗಳಲೂ ಅವರನ್ನು ಕಳುಹಿಸಲಾಗಿದೆ.
1 ಪೇತ್ರನು 2 : 15 (ERVKN)
ನೀವು ಒಳ್ಳೆಯದನ್ನು ಮಾಡುವಾಗ ನಿಮ್ಮನ್ನು ಕುರಿತು ಕೆಟ್ಟಮಾತುಗಳನ್ನು ಆಡಲು ಮೂಢರಿಗೆ ಸಾಧ್ಯವಾಗುವುದಿಲ್ಲ. ದೇವರ ಅಪೇಕ್ಷೆಯೂ ಇದೇ ಆಗಿದೆ.
1 ಪೇತ್ರನು 2 : 16 (ERVKN)
ಸ್ವತಂತ್ರ ಹೊಂದಿದವರಂತೆ ಜೀವಿಸಿರಿ. ಆದರೆ ನೀವು ಮಾಡುವ ಕೆಟ್ಟಕಾರ್ಯಗಳನ್ನು ಮರೆಮಾಡಲು ಆ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿ. ನೀವು ದೇವರ ಸೇವೆಯನ್ನು ಮಾಡುತ್ತಾ ಜೀವಿಸಿರಿ.
1 ಪೇತ್ರನು 2 : 17 (ERVKN)
ಜನರೆಲ್ಲರಿಗೂ ಗೌರವವನ್ನು ತೋರಿಸಿರಿ. ದೇವರ ಕುಟುಂಬದ ಸಹೋದರ ಸಹೋದರಿಯರೆಲ್ಲರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ ಮತ್ತು ರಾಜನನ್ನು ಗೌರವಿಸಿರಿ.
1 ಪೇತ್ರನು 2 : 18 (ERVKN)
ಕ್ರಿಸ್ತನ ಸಂಕಟದ ಉದಾಹರಣೆ ಸೇವಕರೇ, ನಿಮ್ಮ ಒಡೆಯರ ಅಧಿಕಾರವನ್ನು ಒಪ್ಪಿಕೊಳ್ಳಿರಿ. ಇದನ್ನು ತುಂಬಾ ಗೌರವದಿಂದ ಮಾಡಿರಿ. ಒಳ್ಳೆಯವರಾದ ಮತ್ತು ದಯಾಪರರಾದ ಒಡೆಯರಿಗೆ ನೀವು ವಿಧೇಯರಾಗಿರಬೇಕು ಮತ್ತು ಕೆಟ್ಟವರಾದ ಒಡೆಯರಿಗೂ ವಿಧೇಯರಾಗಿರಬೇಕು.
1 ಪೇತ್ರನು 2 : 19 (ERVKN)
ಒಬ್ಬನು ಅನ್ಯಾಯವಾಗಿ ಸಂಕಟಕ್ಕೆ ಒಳಗಾದಾಗ ದೇವರಿಗಾಗಿ ಅದನ್ನು ಸಹಿಸಿಕೊಂಡರೆ ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
1 ಪೇತ್ರನು 2 : 20 (ERVKN)
ಆದರೆ ನಿಮ್ಮ ತಪ್ಪಿಗಾಗಿ ನೀವು ದಂಡಿಸಲ್ಪಟ್ಟರೆ ಆ ದಂಡನೆಯನ್ನು ನೀವು ಅನುಭವಿಸಿದ್ದಕ್ಕೆ ನಿಮಗೇನೂ ಕೀರ್ತಿ ಬರುವುದಿಲ್ಲ. ಆದರೆ ನೀವು ಒಳ್ಳೆಯದನ್ನು ಮಾಡಿದ್ದರಿಂದ ಸಂಕಟಕ್ಕೆ ಒಳಗಾಗಿ ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಅದು ದೇವರನ್ನು ಸಂತೋಷ ಪಡಿಸುತ್ತದೆ.
1 ಪೇತ್ರನು 2 : 21 (ERVKN)
ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು. ನೀವು ಅನುಸರಿಸತಕ್ಕ ಮಾದರಿಯು ಕ್ರಿಸ್ತನೇ ಆಗಿದ್ದಾನೆ. ಆತನು ಮಾಡಿದಂತೆ ನೀವೂ ಮಾಡಿರಿ. ನೀವು ಸಂಕಟವನ್ನು ಅನುಭವಿಸುವಾಗ ತಾಳ್ಮೆಯಿಂದಿರಬೇಕು, ಏಕೆಂದರೆ ಕ್ರಿಸ್ತನು ನಿಮಗಾಗಿ ಸಂಕಟಪಟ್ಟನು.
1 ಪೇತ್ರನು 2 : 22 (ERVKN)
“ಆತನು (ಕ್ರಿಸ್ತನು) ಪಾಪವನ್ನು ಮಾಡಲಿಲ್ಲ. ಆತನ ಬಾಯಿಂದ ಯಾವ ಸುಳ್ಳು ಮಾತೂ ಬರಲಿಲ್ಲ.” ಯೆಶಾಯ 53:9
1 ಪೇತ್ರನು 2 : 23 (ERVKN)
ಜನರು ಕ್ರಿಸ್ತನನ್ನು ಬಯ್ದರೂ ಆತನು ಅವರನ್ನು ಬಯ್ಯಲಿಲ್ಲ. ಆತನು ಸಂಕಟವನ್ನು ಅನುಭವಿಸಿದರೂ ಜನರನ್ನು ಹೆದರಿಸಲಿಲ್ಲ. ಆತನು ತನ್ನ ಕಾರ್ಯವನ್ನು ದೇವರಿಗೆ ವಹಿಸಿದನು. ಸರಿಯಾದ ನ್ಯಾಯತೀರ್ಪು ನೀಡುವಾತನು ದೇವರೊಬ್ಬನೇ.
1 ಪೇತ್ರನು 2 : 24 (ERVKN)
ಕ್ರಿಸ್ತನು ನಮ್ಮ ಪಾಪಗಳನ್ನೆಲ್ಲಾ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನೇರಿದನು. ನಾವು ಪಾಪಕ್ಕೋಸ್ಕರ ಜೀವಿಸದೆ, ನೀತಿವಂತರಾಗಿ ಜೀವಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಆತನ (ಕ್ರಿಸ್ತನ) ಬಾಸುಂಡೆಗಳಿಂದ ನಿಮಗೆ ಗುಣವಾಯಿತು.
1 ಪೇತ್ರನು 2 : 25 (ERVKN)
ನೀವು ದಾರಿ ತಪ್ಪಿದ ಕುರಿಗಳಾಗಿದ್ದಿರಿ. ಆದರೆ ಈಗ ನೀವು ನಿಮ್ಮ ಕುರುಬನ ಬಳಿಗೆ ಅಂದರೆ ನಿಮ್ಮ ಆತ್ಮಗಳನ್ನು ಕಾಪಾಡುವಾತನ ಬಳಿಗೆ ಹಿಂತಿರುಗಿ ಬಂದಿರುವಿರಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25