1 ಅರಸುಗಳು 6 : 1 (ERVKN)
ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು ಇಸ್ರೇಲಿನ ಜನರು ಈಜಿಪ್ಟನ್ನು ಬಿಟ್ಟ ನಾನೂರ ಎಂಭತ್ತನೆಯ ವರ್ಷದಲ್ಲಿ ಅಂದರೆ ರಾಜನಾದ ಸೊಲೊಮೋನನು ಇಸ್ರೇಲನ್ನು ಆಳಲಾರಂಭಿಸಿದ ನಾಲ್ಕನೆಯ ವರ್ಷದಲ್ಲಿ ದೇವಾಲಯದ ನಿರ್ಮಾಣವು ಆರಂಭಗೊಂಡಿತು. ಅದು ವರ್ಷದ ಎರಡನೆಯ ತಿಂಗಳಾದ ಜೀವ್ (ವೈಶಾಖ) ತಿಂಗಳಲ್ಲಿ ಆರಂಭಗೊಂಡಿತು.
1 ಅರಸುಗಳು 6 : 2 (ERVKN)
ದೇವಾಲಯವು ತೊಂಭತ್ತು ಅಡ್ಡಿ ಉದ್ದ, ಮೂವತ್ತು ಅಡಿ ಅಗಲ ಮತ್ತು ನಲವತ್ತೈದು ಅಡಿ ಎತ್ತರವಾಗಿತ್ತು.
1 ಅರಸುಗಳು 6 : 3 (ERVKN)
ದೇವಾಲಯದ ಮುಂದಿನ ಮಂಟಪವು ಮೂವತ್ತು ಅಡಿ ಉದ್ದ ಮತ್ತು ನಲವತ್ತೈದು ಅಡಿ ಅಗಲವಾಗಿತ್ತು. ಮುಂದಿನ ಮಂಟಪವು ದೇವಾಲಯದ ಮುಖ್ಯಸ್ಥಳದುದ್ದಕ್ಕೂ ವ್ಯಾಪಿಸಿತ್ತು. ಮಂಟಪದ ಉದ್ದವು ದೇವಾಲಯದ ಅಗಲಕ್ಕೆ ಸಮನಾಗಿತ್ತು.
1 ಅರಸುಗಳು 6 : 4 (ERVKN)
ದೇವಾಲಯದಲ್ಲಿ ಕಿರಿದಾದ ಕಿಟಿಕಿಗಳಿದ್ದವು. ಈ ಕಿಟಕಿಗಳು ಹೊರಗಡೆಯಲ್ಲಿ ಕಿರಿದಾಗಿಯೂ ಮತ್ತು ಒಳಗಡೆ ದೊಡ್ಡದಾಗಿಯೂ ಇದ್ದವು.
1 ಅರಸುಗಳು 6 : 5 (ERVKN)
ನಂತರ ಸೊಲೊಮೋನನು ದೇವಾಲಯದ ಗೋಡೆಯ ಸುತ್ತಲೂ ಸಾಲಾಗಿ ಕೊಠಡಿಗಳನ್ನು ನಿರ್ಮಿಸಿದನು. ಈ ಕೊಠಡಿಗಳನ್ನು ಒಂದರ ಮೇಲೆ ಮತ್ತೊಂದನ್ನು ಕಟ್ಟಿಸಿದನು. ಈ ಸಾಲು ಕೊಠಡಿಗಳು ಮೂರು ಅಂತಸ್ತುಗಳನ್ನು ಹೊಂದಿದ್ದವು.
1 ಅರಸುಗಳು 6 : 6 (ERVKN)
ಈ ಕೊಠಡಿಗಳು ದೇವಾಲಯದ ಗೋಡೆಯನ್ನು ಸ್ಪರ್ಶಿಸಿದರೂ, ಅವುಗಳ ತೊಲೆಗಳು ಗೋಡೆಯಲ್ಲಿ ಸೇರಿಕೊಂಡಿರಲಿಲ್ಲ. ಆ ದೇವಾಲಯದ ಗೋಡೆಯ ಮೇಲ್ಭಾಗವು ತೆಳುವಾಗಿತ್ತು. ಆ ಕೊಠಡಿಗಳ ಒಂದು ಕಡೆಯ ಗೋಡೆಯು, ಅದರ ಕೆಳಭಾಗದ ಗೋಡೆಗಿಂತ ತೆಳುವಾಗಿತ್ತು. ಕೆಳ ಅಂತಸ್ತಿನ ಕೊಠಡಿಗಳ ಅಗಲ ಏಳುವರೆ ಅಡಿಗಳು. ಮಧ್ಯದ ಅಂತಸ್ತಿನ ಕೊಠಡಿಗಳ ಅಗಲ ಒಂಭತ್ತು ಅಡಿಗಳು. ಅದರ ಮೇಲಿನ ಕೊಠಡಿಗಳ ಅಗಲ ಹತ್ತೂವರೆ ಅಡಿಗಳು.
1 ಅರಸುಗಳು 6 : 7 (ERVKN)
ಈ ಗೋಡೆಗಳನ್ನು ಕಟ್ಟಲು ಕೆಲಸಗಾರರು ದೊಡ್ಡದೊಡ್ಡ ಕಲ್ಲುಗಳನ್ನು ಬಳಸಿದ್ದರು. ಕಲ್ಲುಗಣಿಯಿಂದ ಕಲ್ಲುಗಳನ್ನು ಹೊರಗೆ ತೆಗೆಯುವಾಗಲೇ ಕೆಲಸಗಾರರು ಈ ಕಲ್ಲುಗಳನ್ನು ಕೆತ್ತಿದ್ದರು. ಆದ್ದರಿಂದ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಉಪಕರಣಗಳ ಶಬ್ದವು ದೇವಾಲಯದಲ್ಲಿ ಕೇಳಿಸುತ್ತಿರಲಿಲ್ಲ.
1 ಅರಸುಗಳು 6 : 8 (ERVKN)
ಕೆಳಅಂತಸ್ತಿನ ಕೊಠಡಿಗಳ ಪ್ರವೇಶವು ದೇವಾಲಯದ ದಕ್ಷಿಣದ ಕಡೆಗಿತ್ತು. ಎರಡನೆಯ ಅಂತಸ್ತಿನ ಕೊಠಡಿಗಳಿಗೆ ಹೋಗುವ ಮೆಟ್ಟಿಲುಗಳು ಒಳಗಡೆಯಿದ್ದು, ಅಲ್ಲಿಂದ ಮೂರನೆಯ ಅಂತಸ್ತಿನ ಕೊಠಡಿಗಳಿಗೂ ಹೋಗಬಹುದಾಗಿತ್ತು.
1 ಅರಸುಗಳು 6 : 9 (ERVKN)
ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು. ದೇವಾಲಯದೊಳಗಿನ ಪ್ರತಿಯೊಂದು ಭಾಗವನ್ನು ದೇವದಾರು ಮರದ ಹಲಗೆಗಳಿಂದ ಹೊದಿಸಿದನು.
1 ಅರಸುಗಳು 6 : 10 (ERVKN)
ಸೊಲೊಮೋನನು ದೇವಾಲಯದ ಸುತ್ತಲಿನ ಕೊಠಡಿಗಳ ನಿರ್ಮಾಣವನ್ನೂ ಮುಗಿಸಿದನು. ಒಂದೊಂದು ಅಂತಸ್ತು ಏಳೂವರೆ ಅಡಿಗಳಷ್ಟು ಎತ್ತರವಾಗಿತ್ತು. ಈ ಕೊಠಡಿಗಳ ದೇವದಾರು ತೊಲೆಗಳು ದೇವಾಲಯವನ್ನು ಸ್ಪರ್ಶಿಸುತ್ತ್ತಿದ್ದವು.
1 ಅರಸುಗಳು 6 : 11 (ERVKN)
(11-12) ಯೆಹೋವನು ಸೊಲೊಮೋನನಿಗೆ, “ನನ್ನ ಎಲ್ಲಾ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ನೀನು ವಿಧೇಯನಾಗಿದ್ದರೆ, ನಿನ್ನ ತಂದೆಯಾದ ದಾವೀದನಿಗೆ ನಾನು ವಾಗ್ದಾನ ಮಾಡಿದವುಗಳನ್ನು ನಿನಗಾಗಿ ಈಡೇರಿಸುತ್ತೇನೆ.
1 ಅರಸುಗಳು 6 : 12 (ERVKN)
1 ಅರಸುಗಳು 6 : 13 (ERVKN)
ನೀನು ನಿರ್ಮಿಸುತ್ತಿರುವ ಈ ದೇವಾಲಯದಲ್ಲಿ ನಾನು ಇಸ್ರೇಲರೊಂದಿಗೆ ವಾಸಿಸುತ್ತೇನೆ. ನಾನು ಅವರನ್ನು ಎಂದೆಂದಿಗೂ ಬಿಟ್ಟುಹೋಗುವುದಿಲ್ಲ” ಎಂದು ಹೇಳಿದನು.
1 ಅರಸುಗಳು 6 : 14 (ERVKN)
ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು.
1 ಅರಸುಗಳು 6 : 15 (ERVKN)
ದೇವಾಲಯದ ಒಳಗಿನ ಗೋಡೆಗಳಿಗೆ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಕಲ್ಲಿನ ನೆಲಕ್ಕೆ ತುರಾಯಿ ಮರದ ಹಲಗೆಗಳನ್ನು ಹಾಸಿದ್ದರು.
1 ಅರಸುಗಳು 6 : 16 (ERVKN)
ದೇವಾಲಯದ ಹಿಂಭಾಗದಲ್ಲಿ ಅವರು ಮೂವತ್ತು ಅಡಿ ಉದ್ದವಾಗಿರುವ ಒಂದು ಕೊಠಡಿಯನ್ನು ನಿರ್ಮಿಸಿದ್ದರು. ಈ ಕೊಠಡಿಯ ಗೋಡೆಗಳಿಗೂ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಈ ಕೊಠಡಿಯನ್ನು ಮಹಾ ಪವಿತ್ರಸ್ಥಳವೆಂದು ಕರೆದರು.
1 ಅರಸುಗಳು 6 : 17 (ERVKN)
ಈ ಮಹಾ ಪವಿತ್ರಸ್ಥಳದ ಎದುರಿನಲ್ಲಿ ದೇವಾಲಯದ ಮುಖ್ಯ ಭಾಗವಿದೆ. ಈ ಕೊಠಡಿಯ ಉದ್ದ ಅರವತ್ತು ಅಡಿ.
1 ಅರಸುಗಳು 6 : 18 (ERVKN)
ಈ ಕೊಠಡಿಯ ಗೋಡೆಗಳಿಗೆ ದೇವದಾರು ಮರದ ಹೊದಿಕೆಗಳನ್ನು ಹೊದಿಸಲಾಗಿದ್ದು ಈ ಗೋಡೆಗಳಲ್ಲಿದ್ದ ಯಾವುದೇ ಕಲ್ಲುಗಳು ಕಂಡುಬರುತ್ತಿರಲಿಲ್ಲ. ಈ ದೇವದಾರು ಮರದ ಹಲಗೆಗಳ ಮೇಲೆ ಹೂಗಳ ಮತ್ತು ಬಳ್ಳಿಗಳ ಚಿತ್ರಗಳನ್ನು ಕೆತ್ತಲಾಗಿತ್ತು.
1 ಅರಸುಗಳು 6 : 19 (ERVKN)
ಸೊಲೊಮೋನನು ದೇವಾಲಯದ ಹಿಂದಿನ ಭಾಗದಲ್ಲಿ ಒಳಗಡೆ ಒಂದು ಕೋಣೆಯನ್ನು ಸಿದ್ಧಪಡಿಸಿದನು. ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡುವುದಕ್ಕಾಗಿಯೇ ಈ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು.
1 ಅರಸುಗಳು 6 : 20 (ERVKN)
ಈ ಕೊಠಡಿಯು ಮೂವತ್ತು ಅಡಿ ಉದ್ದ ಮೂವತ್ತು ಅಡಿ ಅಗಲ ಮತ್ತು ಮೂವತ್ತು ಅಡಿ ಎತ್ತರವಾಗಿತ್ತು.
1 ಅರಸುಗಳು 6 : 21 (ERVKN)
ಸೊಲೊಮೋನನು ಶುದ್ಧ ಚಿನ್ನದ ತಗಡನ್ನು ಈ ಕೊಠಡಿಗೆ ಹೊದಿಸಿದನು. ಈ ಕೊಠಡಿಯ ಮುಂದೆ ಧೂಪವೇದಿಕೆಯನ್ನು ಅವನು ನಿರ್ಮಿಸಿದನು. ಅವನು ಆ ವೇದಿಕೆಗೆ ಚಿನ್ನದ ಹೊದಿಕೆಯನ್ನೂ ಅದರ ಸುತ್ತಲೂ ಚಿನ್ನದ ಸರಪಣಿಗಳನ್ನೂ ಜೋಡಿಸಿದನು. ಆ ಕೊಠಡಿಯಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳಿದ್ದವು. ಆ ಪ್ರತಿಮೆಗಳಿಗೆ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು.
1 ಅರಸುಗಳು 6 : 22 (ERVKN)
ದೇವಾಲಯಕ್ಕೆಲ್ಲ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. ಅಲ್ಲದೆ, ಮಹಾ ಪವಿತ್ರಸ್ಥಳದ ಮುಂದಿನ ಯಜ್ಞವೇದಿಕೆಗೂ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು.
1 ಅರಸುಗಳು 6 : 23 (ERVKN)
ಕೆಲಸಗಾರರು ರೆಕ್ಕೆಗಳಿರುವ ಎರಡು ಕೆರೂಬಿಗಳ ಪ್ರತಿಮೆಗಳನ್ನು ಆಲೀವ್ ಮರದಿಂದ ಮಾಡಿ ಅವುಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಒಂದೊಂದು ಪ್ರತಿಮೆಯು ಹದಿನೈದು ಅಡಿ ಎತ್ತರವಾಗಿತ್ತು.
1 ಅರಸುಗಳು 6 : 24 (ERVKN)
(24-26) ಈ ಎರಡು ಕೆರೂಬಿಗಳು ಅಳತೆಯಲ್ಲಿಯೂ ಆಕಾರದಲ್ಲಿಯೂ ಒಂದೇ ರೀತಿಯಾಗಿದ್ದವು. ಪ್ರತಿಯೊಂದು ಕೆರೂಬಿಗಳಿಗೆ ಎರಡು ರೆಕ್ಕೆಗಳಿದ್ದವು. ಪ್ರತಿಯೊಂದು ರೆಕ್ಕೆಯ ಉದ್ದ ಏಳುವರೆ ಅಡಿಗಳು. ಒಂದು ರೆಕ್ಕೆಯಿಂದ ಮತ್ತೊಂದು ರೆಕ್ಕೆಯ ಕೊನೆಗಿರುವ ಅಂತರ ಹದಿನೈದು ಅಡಿಗಳು. ಪ್ರತಿಯೊಂದು ಕೆರೂಬಿಯ ಎತ್ತರ ಹದಿನೈದು ಅಡಿಗಳು.
1 ಅರಸುಗಳು 6 : 25 (ERVKN)
1 ಅರಸುಗಳು 6 : 26 (ERVKN)
1 ಅರಸುಗಳು 6 : 27 (ERVKN)
ಈ ಕೆರೂಬಿಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಅವುಗಳು ಒಂದಕ್ಕೊಂದು ಸಮೀಪದಲ್ಲಿದ್ದವು. ಅವುಗಳ ರೆಕ್ಕೆಗಳು ಕೊಠಡಿಯ ಮಧ್ಯಭಾಗದಲ್ಲಿ ಒಂದನ್ನೊಂದು ತಾಕುತ್ತಿದ್ದುವು. ಉಳಿದೆರಡು ರೆಕ್ಕೆಗಳು ಎರಡು ಕಡೆಗಳಲ್ಲಿದ್ದ ಗೋಡೆಗಳನ್ನು ತಾಕುತ್ತಿದ್ದುವು.
1 ಅರಸುಗಳು 6 : 28 (ERVKN)
ಈ ಎರಡು ಕೆರೂಬಿಗಳಿಗೆ ಚಿನ್ನದ ತಗಡನ್ನು ಹೊದಿಸಲಾಗಿತ್ತು.
1 ಅರಸುಗಳು 6 : 29 (ERVKN)
ಮುಖ್ಯಕೊಠಡಿಯ ಮತ್ತು ಒಳಕೋಣೆಯ ಗೋಡೆಗಳ ಮೇಲೆ ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಕೆತ್ತಿದ್ದರು.
1 ಅರಸುಗಳು 6 : 30 (ERVKN)
ಈ ಎರಡು ಕೊಠಡಿಗಳ ನೆಲಕ್ಕೆ ಚಿನ್ನದ ತಗಡನ್ನು ಹಾಸಿದ್ದರು.
1 ಅರಸುಗಳು 6 : 31 (ERVKN)
ಕೆಲಸಗಾರರು ಆಲೀವ್ ಮರದ ಎರಡು ಬಾಗಿಲುಗಳನ್ನು ಮಾಡಿದರು. ಅವರು ಮಹಾಪವಿತ್ರ ಸ್ಥಳದ ಪ್ರವೇಶದ್ವಾರದಲ್ಲಿ ಈ ಎರಡು ಬಾಗಿಲುಗಳನ್ನು ಇಟ್ಟರು. ಬಾಗಿಲಿನ ಚೌಕಟ್ಟನ್ನು ಪಂಚಕೋಣಾಕೃತಿಯಲ್ಲಿ ಮಾಡಿದ್ದರು.
1 ಅರಸುಗಳು 6 : 32 (ERVKN)
ಅವರು ಆಲೀವ್ ಮರದಿಂದ ಎರಡು ಬಾಗಿಲುಗಳನ್ನು ಮಾಡಿದರು. ಕೆಲಸಗಾರರು ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದರು. ನಂತರ ಬಾಗಿಲುಗಳಿಗೆ ಚಿನ್ನವನ್ನು ಹೊದಿಸಿದರು.
1 ಅರಸುಗಳು 6 : 33 (ERVKN)
ಅವರು ಮುಖ್ಯ ಕೊಠಡಿಯ ಪ್ರವೇಶಕ್ಕೂ ಬಾಗಿಲುಗಳನ್ನು ಮಾಡಿದರು. ಅವರು ಚೌಕಾಕಾರದ ಬಾಗಿಲಿನ ಚೌಕಟ್ಟನ್ನು ಆಲೀವ್ ಮರದಿಂದ ಮಾಡಿದರು.
1 ಅರಸುಗಳು 6 : 34 (ERVKN)
ನಂತರ ಅವರು ತುರಾಯಿ ಮರದ ಬಾಗಿಲುಗಳನ್ನು ಮಾಡಿದರು. ಅಲ್ಲಿ ಎರಡು ಬಾಗಿಲುಗಳಿದ್ದು, ಪ್ರತಿಯೊಂದೂ ಮಡಿಸುವಂತಹ ಎರಡು ಭಾಗಗಳನ್ನು ಹೊಂದಿದ್ದವು.
1 ಅರಸುಗಳು 6 : 35 (ERVKN)
ಅವರು ಕೆರೂಬಿಗಳ, ಖರ್ಜೂರವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದ್ದರು. ಅವರು ಅವುಗಳಿಗೆ ಚಿನ್ನವನ್ನು ಹೊದಿಸಿದರು.
1 ಅರಸುಗಳು 6 : 36 (ERVKN)
ನಂತರ ಅವರು ಒಳಾಂಗಣವನ್ನು ನಿರ್ಮಿಸಿದರು. ಅವರು ಒಳಾಂಗಣದ ಸುತ್ತಲೂ ಗೋಡೆಗಳನ್ನು ನಿರ್ಮಿಸಿದರು. ಪ್ರತಿಯೊಂದು ಗೋಡೆಯು ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನೂ ದೇವದಾರುಮರದ ತೊಲೆಗಳ ಒಂದು ಸಾಲನ್ನೂ ಹೊಂದಿತ್ತು.
1 ಅರಸುಗಳು 6 : 37 (ERVKN)
ಅವರು ವರ್ಷದ ಎರಡನೆಯ ತಿಂಗಳಿನ ಜೀವ್ (ವೈಶಾಖ) ಮಾಸದಲ್ಲಿ ದೇವಾಲಯವನ್ನು ಕಟ್ಟಲಾರಂಭಿಸಿದರು. ಇಸ್ರೇಲನ್ನು ಸೊಲೊಮೋನನು ಆಳಲು ಆರಂಭಿಸಿದ ನಾಲ್ಕನೆಯ ವರ್ಷದಲ್ಲಿ ಇದು ನಡೆಯಿತು.
1 ಅರಸುಗಳು 6 : 38 (ERVKN)
ಈ ದೇವಾಲಯದ ನಿರ್ಮಾಣವು ವರ್ಷದ ಎಂಟನೇ ತಿಂಗಳಾದ ಬುಲ್ (ಕಾರ್ತಿಕ) ತಿಂಗಳಲ್ಲಿ ಮುಗಿಯಿತು. ಅದು ಸೊಲೊಮೋನನ ಆಳ್ವಿಕೆಯ ಹನ್ನೊಂದನೆಯ ವರ್ಷವಾಗಿತ್ತು. ದೇವಾಲಯವನ್ನು ಕಟ್ಟಲು ಏಳು ವರ್ಷ ಹಿಡಿಯಿತು. ದೇವಾಲಯವನ್ನು ಅದರ ನಿಯಮಾನುಸಾರವಾಗಿ ಕಟ್ಟಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38