1 ಅರಸುಗಳು 13 : 1 (ERVKN)
ಬೇತೇಲಿಗೆ ದೇವರ ಶಾಪ ಯೆಹೂದ ದೇಶದವನಾದ ಒಬ್ಬ ದೇವಮನುಷ್ಯನು ಯೆಹೋವನ ಆಜ್ಞೆಯಂತೆ ಬೇತೇಲಿಗೆ ಬಂದನು. ಆಗ ಯಾರೊಬ್ಬಾಮನು ಧೂಪವನ್ನು ಅರ್ಪಿಸುತ್ತಾ, ಯಜ್ಞವೇದಿಕೆಯ ಹತ್ತಿರ ನಿಂತಿದ್ದನು.
1 ಅರಸುಗಳು 13 : 2 (ERVKN)
ಯಜ್ಞವೇದಿಕೆಯ ವಿರುದ್ಧ ಮಾತನಾಡುವಂತೆ ಆ ದೇವಮನುಷ್ಯನಿಗೆ ಯೆಹೋವನು ಆಜ್ಞಾಪಿಸಿದನು. ಆಗ ಅವನು ಹೇಳಿದ್ದೇನೆಂದರೆ: “ಯಜ್ಞವೇದಿಕೆಯೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ: ‘ದಾವೀದನ ವಂಶದಲ್ಲಿ ಯೋಷೀಯನೆಂಬ ಮಗನು ಹುಟ್ಟುವನು. ಈಗ ಈ ಪೂಜಾಸ್ಥಳಗಳಲ್ಲಿ ಧೂಪಸುಡುತ್ತಿರುವ ಈ ಯಾಜಕರನ್ನು ಅವನು ಹಿಡಿದು ಅವರನ್ನು ನಿನ್ನ ಮೇಲೆಯೇ ಕೊಲ್ಲುವನು; ಈಗ ನಿನ್ನ ಮೇಲೆ ಧೂಪಸುಡುತ್ತಿರುವ ಯಾಜಕರನ್ನು ಅವನು ಹಿಡಿದು ಅವರ ಮೂಳೆಗಳನ್ನು ನಿನ್ನ ಮೇಲೆ ಸುಡುವನು.’ ”
1 ಅರಸುಗಳು 13 : 3 (ERVKN)
ಇದಲ್ಲದೆ ದೇವಮನುಷ್ಯನು ಜನರಿಗೆ, “ಯೆಹೋವನು ಇದರ ಬಗ್ಗೆ ನನಗೆ ಹೇಳಿರುವ ಗುರುತೇನೆಂದರೆ, ‘ಯಜ್ಞವೇದಿಕೆಯು ಒಡೆದುಹೋಳಾಗುವುದು, ಬೂದಿಯು ನೆಲದ ಮೇಲೆ ಚೆಲ್ಲಿಹೋಗುವುದು’ ” ಎಂದನು.
1 ಅರಸುಗಳು 13 : 4 (ERVKN)
ಬೇತೇಲಿನ ಯಜ್ಞವೇದಿಕೆಯನ್ನು ಕುರಿತು ದೇವಮನುಷ್ಯನು ಹೇಳಿದ ಸಂದೇಶವು ರಾಜನಾದ ಯಾರೊಬ್ಬಾಮನಿಗೆ ಕೇಳಿಸಿತು. ಅವನು ತನ್ನ ಕೈಯನ್ನು ಯಜ್ಞವೇದಿಕೆಯಿಂದ ಥಟ್ಟನೆ ತೆಗೆದು, ಆ ಮನುಷ್ಯನ ಕಡೆಗೆ ಗುರಿಮಾಡಿ, “ಆ ಮನುಷ್ಯನನ್ನು ಹಿಡಿಯಿರಿ!” ಎಂದು ಹೇಳಿದನು. ಆದರೆ ರಾಜನು ಇದನ್ನು ಹೇಳಿದಾಗ, ಅವನ ಕೈಗೆ ಲಕ್ವ ಹೊಡೆಯಿತು. ಅವನು ಅದನ್ನು ಚಲಿಸಲಾಗಲಿಲ್ಲ,
1 ಅರಸುಗಳು 13 : 5 (ERVKN)
ಯಜ್ಞವೇದಿಕೆಯೂ ಒಡೆದು ಚೂರಾಯಿತು. ಅದರ ಮೇಲಿನ ಬೂದಿಯು ನೆಲದ ಮೇಲೆ ಚೆಲ್ಲಿಹೋಯಿತು. ದೇವರೇ ಆಜ್ಞಾಪಿಸಿದನೆಂದು ದೇವಮನುಷ್ಯನು ಹೇಳಿದ ಸಂಗತಿಗಳಿಗೆ ಇದೇ ಗುರುತಾಗಿತ್ತು.
1 ಅರಸುಗಳು 13 : 6 (ERVKN)
ನಂತರ ರಾಜನಾದ ಯಾರೊಬ್ಬಾಮನು ದೇವಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನಲ್ಲಿ ನನಗಾಗಿ ಪ್ರಾರ್ಥಿಸು. ನನ್ನ ಕೈಯನ್ನು ಗುಣಪಡಿಸುವಂತೆ ಯೆಹೋವನಲ್ಲಿ ಪ್ರಾರ್ಥಿಸು” ಎಂದನು. ದೇವಮನುಷ್ಯನು ಯೆಹೋವನಿಗೆ ಪ್ರಾರ್ಥಿಸಿದನು. ಆಗ ರಾಜನ ಕೈ ಗುಣವಾಯಿತು. ಅದು ಮತ್ತೆ ಮೊದಲಿನಂತೆ ಆಯಿತು.
1 ಅರಸುಗಳು 13 : 7 (ERVKN)
ಆಗ ರಾಜನು ದೇವಮನುಷ್ಯನಿಗೆ, “ದಯವಿಟ್ಟು ನನ್ನೊಡನೆ ಮನೆಗೆ ಬಾ. ನನ್ನೊಡನೆ ಊಟಮಾಡು. ನಾನು ನಿನಗೆ ಒಂದು ಕಾಣಿಕೆಯನ್ನು ಕೊಡುತ್ತೇನೆ” ಎಂದು ಹೇಳಿದನು.
1 ಅರಸುಗಳು 13 : 8 (ERVKN)
ಆದರೆ ದೇವಮನುಷ್ಯನು ರಾಜನಿಗೆ, “ನಾನು ನಿನ್ನೊಡನೆ ಮನೆಗೆ ಬರುವುದಿಲ್ಲ! ನೀನು ನಿನ್ನ ಅರ್ಧರಾಜ್ಯವನ್ನು ಕೊಟ್ಟರೂ ನಾನು ಬರುವುದಿಲ್ಲ! ನಾನು ಈ ಸ್ಥಳದಲ್ಲಿ ಏನನ್ನೂ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ.
1 ಅರಸುಗಳು 13 : 9 (ERVKN)
ನಾನು ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದೆಂದು ಯೆಹೋವನು ನನಗೆ ಆಜ್ಞಾಪಿಸಿದ್ದಾನೆ. ನಾನು ಇಲ್ಲಿಗೆ ಬಂದ ರಸ್ತೆಯಲ್ಲಿ ಮತ್ತೆ ಹಿಂದಿರುಗಿ ಹೋಗಬಾರದೆಂದು ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.
1 ಅರಸುಗಳು 13 : 10 (ERVKN)
ಆದ್ದರಿಂದ ಅವನು ಬೇರೆ ರಸ್ತೆಯಲ್ಲಿ ಹೋದನು. ಅವನು ಬೇತೇಲಿಗೆ ಬಂದ ರಸ್ತೆಯಲ್ಲಿ ಮತ್ತೆ ಹಿಂದಿರುಗಿಹೋಗಲಿಲ್ಲ.
1 ಅರಸುಗಳು 13 : 11 (ERVKN)
ಬೇತೇಲಿನಲ್ಲಿ ಒಬ್ಬ ವಯಸ್ಸಾದ ಪ್ರವಾದಿಯು ನೆಲೆಸಿದ್ದನು. ಬೇತೇಲಿನಲ್ಲಿ ದೇವಮನುಷ್ಯನು ಮಾಡಿದ್ದನ್ನು ಅವನ ಮಕ್ಕಳು ಬಂದು ಅವನಿಗೆ ಹೇಳಿದರು. ದೇವಮನುಷ್ಯನು ರಾಜನಾದ ಯಾರೊಬ್ಬಾಮನಿಗೆ ಹೇಳಿದುದ್ದನ್ನು ಅವರು ತಮ್ಮ ತಂದೆಗೆ ಹೇಳಿದರು.
1 ಅರಸುಗಳು 13 : 12 (ERVKN)
ಆ ವಯಸ್ಸಾದ ಪ್ರವಾದಿಯು, “ಅವನು ಬಿಟ್ಟುಹೋಗುವಾಗ ಯಾವ ರಸ್ತೆಯಲ್ಲಿ ಹೋದನು?” ಎಂದು ಕೇಳಿದನು. ಯೆಹೂದ ದೇಶದವನಾದ ದೇವಮನುಷ್ಯನು ಯಾವ ರಸ್ತೆಯಲ್ಲಿ ಹಿಂದಿರುಗಿ ಹೋದನೆಂಬುದನ್ನು ಅವನ ಮಕ್ಕಳು ತಂದೆಗೆ ತೋರಿಸಿದರು.
1 ಅರಸುಗಳು 13 : 13 (ERVKN)
ಆ ಪ್ರವಾದಿಯು ತನ್ನ ಕತ್ತೆಯ ಮೇಲೆ ತಡಿಯೊಂದನ್ನು ಹಾಕಲು ಮಕ್ಕಳಿಗೆ ಹೇಳಿದನು. ಅವರು ಕತ್ತೆಯ ಮೇಲೆ ತಡಿಯನ್ನು ಹಾಕಿದರು. ಆಗ ಆ ಪ್ರವಾದಿಯು ತನ್ನ ಕತ್ತೆಯ ಮೇಲೆ ಹೋದನು.
1 ಅರಸುಗಳು 13 : 14 (ERVKN)
ಆ ಪ್ರವಾದಿಯು ದೇವಮನುಷ್ಯನನ್ನು ಹಿಂಬಾಲಿಸಿ ಹೋಗಿ ಓಕ್ ಮರದ ಕೆಳಗೆ ಕುಳಿತಿದ್ದ ಅವನನ್ನು ಕಂಡು, “ನೀನು ಯೆಹೂದದಿಂದ ಬಂದ ದೇವಮನುಷ್ಯನೋ?” ಎಂದು ಕೇಳಿದನು. ದೇವಮನುಷ್ಯನು, “ಹೌದು, ನಾನೇ” ಎಂದನು.
1 ಅರಸುಗಳು 13 : 15 (ERVKN)
ವಯಸ್ಸಾದ ಪ್ರವಾದಿಯು, “ದಯವಿಟ್ಟು ಮನೆಗೆ ಬಂದು ನನ್ನೊಂದಿಗೆ ಊಟಮಾಡು” ಎಂದನು.
1 ಅರಸುಗಳು 13 : 16 (ERVKN)
ಆದರೆ ದೇವಮನುಷ್ಯನು, “ನಾನು ನಿನ್ನ ಜೊತೆಯಲ್ಲಿ ಮನೆಗೆ ಬರಲು ಸಾಧ್ಯವಿಲ್ಲ. ನಾನು ಈ ಸ್ಥಳದಲ್ಲಿ ನಿನ್ನೊಂದಿಗೆ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ.
1 ಅರಸುಗಳು 13 : 17 (ERVKN)
ಯೆಹೋವನು ನನಗೆ, ‘ನೀನು ಆ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಕೂಡದು; ನೀನು ಅಲ್ಲಿಗೆ ಹೋದ ರಸ್ತೆಯಲ್ಲಿ ಮತ್ತೆ ಹಿಂದಿರುಗಬಾರದು’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಿಸಿದನು.
1 ಅರಸುಗಳು 13 : 18 (ERVKN)
ಆಗ ಆ ಪ್ರವಾದಿಯು, “ಆದರೆ ನಾನೂ ನಿನ್ನಂತೆಯೇ ಒಬ್ಬ ಪ್ರವಾದಿ” ಎಂದು ಹೇಳಿದನು. ನಂತರ ವಯಸ್ಸಾದ ಪ್ರವಾದಿಯು ಅವನಿಗೆ “ಯೆಹೋವನಿಂದ ಒಬ್ಬ ದೇವದೂತನು ನನ್ನ ಬಳಿಗೆ ಬಂದಿದ್ದನು. ಆ ದೂತನು ನಿನ್ನನ್ನು ನನ್ನ ಮನೆಗೆ ಕರೆತರಲು ನಿನ್ನೊಂದಿಗೆ ಅನ್ನಪಾನಗಳನ್ನು ತೆಗೆದುಕೊಳ್ಳಲು ನನಗೆ ತಿಳಿಸಿದನು” ಎಂದು ಸುಳ್ಳು ಹೇಳಿದನು.
1 ಅರಸುಗಳು 13 : 19 (ERVKN)
ಆದ್ದರಿಂದ ಆ ಪ್ರವಾದಿಯ ಮನೆಗೆ ದೇವಮನುಷ್ಯನು ಹೋಗಿ, ಅವನ ಸಂಗಡ ಅನ್ನಪಾನಗಳನ್ನು ತೆಗೆದುಕೊಂಡನು.
1 ಅರಸುಗಳು 13 : 20 (ERVKN)
ಅವರು ಮೇಜಿನ ಮುಂದೆ ಕುಳಿತಿದ್ದಾಗ, ಯೆಹೋವನು ಆ ಪ್ರವಾದಿಯೊಂದಿಗೆ ಮಾತನಾಡಿದನು.
1 ಅರಸುಗಳು 13 : 21 (ERVKN)
ಆ ಪ್ರವಾದಿಯು ಯೆಹೂದ ದೇಶದವನಾದ ದೇವಮನುಷ್ಯನಿಗೆ, “ಯೆಹೋವನು ಹೇಳುವುದೇನೆಂದರೆ, ನೀನು ಆತನಿಗೆ ವಿಧೇಯನಾಗಲಿಲ್ಲ. ಆತನ ಆಜ್ಞೆಯನ್ನು ನೀನು ಅನುಸರಿಸಲಿಲ್ಲ.
1 ಅರಸುಗಳು 13 : 22 (ERVKN)
ಈ ಸ್ಥಳದಲ್ಲಿ ನೀನು ಅನ್ನಪಾನಗಳನ್ನು ತೆಗೆದುಕೊಳ್ಳಕೂಡದೆಂದು ಯೆಹೋವನು ನಿನಗೆ ಆಜ್ಞಾಪಿಸಿದ್ದನು. ಆದರೆ ನೀನು ಹಿಂದಿರುಗಿಬಂದು ಅನ್ನಪಾನಗಳನ್ನು ತೆಗೆದುಕೊಂಡೆ. ಆದ್ದರಿಂದ ನಿನ್ನ ವಂಶದ ಸ್ಮಶಾನದಲ್ಲಿ ನಿನ್ನ ದೇಹವನ್ನು ಸಮಾಧಿಮಾಡಲಾಗುವುದಿಲ್ಲ ಎಂದು ಯೆಹೋವನು ಹೇಳುತ್ತಾನೆ” ಎಂದನು.
1 ಅರಸುಗಳು 13 : 23 (ERVKN)
ದೇವಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡ ನಂತರ ಆ ಪ್ರವಾದಿಯು ಅವನಿಗಾಗಿ ಕತ್ತೆಯ ಮೇಲೆ ತಡಿಯನ್ನು ಹಾಕಿದನು. ದೇವಮನುಷ್ಯನು ಅಲ್ಲಿಂದ ಹೊರಟನು.
1 ಅರಸುಗಳು 13 : 24 (ERVKN)
ಅವನು ತನ್ನ ಮನೆಗೆ ಹಿಂತಿರುಗಿ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಸಿಂಹವು ಅವನ ಮೇಲೆರಗಿ ಅವನನ್ನು ಕೊಂದುಹಾಕಿತು. ಪ್ರವಾದಿಯ ದೇಹವು ರಸ್ತೆಯ ಮೇಲೆ ಬಿದ್ದಿತ್ತು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ನಿಂತಿದ್ದವು.
1 ಅರಸುಗಳು 13 : 25 (ERVKN)
ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಲವರು ಆ ದೇಹವನ್ನೂ ಮತ್ತು ಆ ದೇಹದ ಬಳಿ ನಿಂತಿದ್ದ ಸಿಂಹವನ್ನೂ ನೋಡಿದರು. ಆ ಜನರು ಪ್ರವಾದಿಯು ವಾಸಿಸುತ್ತಿದ್ದ ನಗರಕ್ಕೆ ಬಂದು, ಅವರು ರಸ್ತೆಯ ಮೇಲೆ ಕಂಡದ್ದನ್ನು ಹೇಳಿದರು.
1 ಅರಸುಗಳು 13 : 26 (ERVKN)
ಆ ಪ್ರವಾದಿಯು ಆ ಮನುಷ್ಯನನ್ನು ಮೋಸದಿಂದ ಕರೆದು ತಂದಿದ್ದನು. ಅವನಿಗೆ ಸಂಭವಿಸಿದ್ದನ್ನು ಕೇಳಿದಾಗ ಅವನು, “ಯೆಹೋವನ ಆಜ್ಞೆಗಳನ್ನು ಅನುಸರಿಸದಿದ್ದ ದೇವಮನುಷ್ಯನೇ ಅವನಾಗಿರಬೇಕು. ಅವನನ್ನು ಕೊಲ್ಲಲು ಯೆಹೋವನು ಸಿಂಹವನ್ನು ಕಳುಹಿಸಿದನು. ಹೀಗೆ ಮಾಡುವುದಾಗಿ ಯೆಹೋವನೇ ಹೇಳಿದ್ದನು” ಎಂದನು.
1 ಅರಸುಗಳು 13 : 27 (ERVKN)
ನಂತರ ಆ ಪ್ರವಾದಿಯು ತನ್ನ ಮಕ್ಕಳಿಗೆ, “ನನ್ನ ಕತ್ತೆಯ ಮೇಲೆ ತಡಿಯೊಂದನ್ನು ಹಾಕಿ” ಎಂದು ಹೇಳಿದನು. ಆಗ ಅವನ ಮಕ್ಕಳು ಕತ್ತೆಯ ಮೇಲೆ ತಡಿಯನ್ನು ಹಾಕಿದರು.
1 ಅರಸುಗಳು 13 : 28 (ERVKN)
ಪ್ರವಾದಿಯು ಹೋಗಿ ರಸ್ತೆಯ ಮೇಲೆ ಬಿದ್ದಿರುವ ದೇಹವನ್ನು ಕಂಡನು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ಇನ್ನೂ ನಿಂತಿದ್ದವು. ಸಿಂಹವು ಆ ದೇಹವನ್ನು ತಿಂದಿರಲಿಲ್ಲ ಮತ್ತು ಕತ್ತೆಗೆ ತೊಂದರೆಯನ್ನೂ ಮಾಡಿರಲಿಲ್ಲ.
1 ಅರಸುಗಳು 13 : 29 (ERVKN)
ಪ್ರವಾದಿಯು ಆ ದೇಹವನ್ನು ಕತ್ತೆಯ ಮೇಲೆ ಹಾಕಿದನು. ಸತ್ತವನಿಗಾಗಿ ರೋದಿಸಲು ಮತ್ತು ಅದನ್ನು ಸಮಾಧಿಮಾಡಲು ಆ ದೇಹವನ್ನು ನಗರಕ್ಕೆ ತಂದನು.
1 ಅರಸುಗಳು 13 : 30 (ERVKN)
ಪ್ರವಾದಿಯು ತನ್ನ ಕುಟುಂಬದ ಸ್ಮಶಾನದಲ್ಲಿ ಆ ಮನುಷ್ಯನ ದೇಹವನ್ನು ಸಮಾಧಿ ಮಾಡಿದನು. ಪ್ರವಾದಿಯು ಅವನಿಗಾಗಿ ಗೋಳಾಡುತ್ತಾ, “ಅಯ್ಯೋ, ನನ್ನ ಸೋದರನೇ!” ಎಂದು ಹೇಳಿದನು.
1 ಅರಸುಗಳು 13 : 31 (ERVKN)
ಹೀಗೆ ಪ್ರವಾದಿಯು ಆ ದೇಹವನ್ನು ಸಮಾಧಿ ಮಾಡಿದನು. ನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ, ನನ್ನನ್ನು ಅದೇ ಸ್ಮಶಾನದಲ್ಲಿ ಸಮಾಧಿಮಾಡಿ. ಅವನ ಪಕ್ಕದಲ್ಲೇ ನನ್ನ ಮೂಳೆಗಳನ್ನೂ ಹಾಕಿರಿ.
1 ಅರಸುಗಳು 13 : 32 (ERVKN)
ಅವನ ಮೂಲಕ ಯೆಹೋವನು ಹೇಳಿದ ಸಂಗತಿಗಳು ಖಂಡಿತವಾಗಿಯೂ ನಿಜವಾಗುತ್ತವೆ. ಬೇತೇಲಿನ ಯಜ್ಞವೇದಿಕೆಯ ವಿರುದ್ಧವಾಗಿಯೂ ಸಮಾರ್ಯದ ಇತರ ಪಟ್ಟಣಗಳಲ್ಲಿರುವ ಉನ್ನತಸ್ಥಳಗಳ ವಿರುದ್ಧವಾಗಿಯೂ ಯೆಹೋವನು ಅವನ ಮೂಲಕವಾಗಿ ಮಾತನಾಡಿದನು” ಎಂದು ಹೇಳಿದನು.
1 ಅರಸುಗಳು 13 : 33 (ERVKN)
ರಾಜನಾದ ಯಾರೊಬ್ಬಾಮನು ಬದಲಾವಣೆಯಾಗಲಿಲ್ಲ. ಅವನು ಕೆಟ್ಟಕಾರ್ಯಗಳನ್ನು ಮಾಡುತ್ತಲೇ ಇದ್ದನು. ಅವನು ಬೇರೆಬೇರೆ ಕುಲಗಳಿಂದ ಯಾಜಕರನ್ನು ಆರಿಸಿಕೊಳ್ಳುತ್ತಲೇ ಇದ್ದನು. ಆ ಯಾಜಕರು ಎತ್ತರದ ಸ್ಥಳಗಳಲ್ಲಿ ಸೇವೆಯನ್ನು ಮಾಡುತ್ತಿದ್ದರು. ಯಾಜಕನಾಗಬೇಕೆಂದು ಯಾವ ವ್ಯಕ್ತಿಯಾದರೂ ಇಚ್ಛಿಸಿದರೆ, ಯಾಜಕನಾಗಲು ಅವನಿಗೆ ಅವಕಾಶ ಕಲ್ಪಿಸುತ್ತಿದ್ದನು.
1 ಅರಸುಗಳು 13 : 34 (ERVKN)
ಅವನ ರಾಜ್ಯವು ವಿನಾಶಗೊಳ್ಳಲು ಮತ್ತು ಹಾಳಾಗಲು ಆ ಪಾಪವೇ ಕಾರಣವಾಯಿತು.
❮
❯