1 ಅರಸುಗಳು 11 : 1 (ERVKN)
ಸೊಲೊಮೋನನು ಮತ್ತು ಅವನ ಅನೇಕ ಪತ್ನಿಯರು ರಾಜನಾದ ಸೊಲೊಮೋನನು ಸ್ತ್ರೀಯರನ್ನು ಪ್ರೀತಿಸಿದನು! ಅವನು ಇಸ್ರೇಲರಲ್ಲದ ಅನೇಕ ಸ್ತ್ರೀಯರನ್ನು ಪ್ರೀತಿಸಿದನು. ಇವರಲ್ಲಿ ಫರೋಹನ ಮಗಳು, ಮೋವಾಬ್ಯ, ಅಮ್ಮೋನಿಯ, ಎದೋಮ್ಯ ಚೀದೋನ್ಯ ಮತ್ತು ಹಿತ್ತಿಯ ಸ್ತ್ರೀಯರು ಸೇರಿದ್ದರು.
1 ಅರಸುಗಳು 11 : 2 (ERVKN)
ಯೆಹೋವನು ಮೊದಲೇ ಇಸ್ರೇಲಿನ ಜನರಿಗೆ, “ಅನ್ಯದೇಶದ ಸ್ತ್ರೀಯರನ್ನು ನೀವು ಮದುವೆಯಾಗಲೇಬಾರದು. ನೀವು ಅವರನ್ನು ಮದುವೆಯಾದರೆ, ತಮ್ಮ ದೇವರುಗಳನ್ನು ಅನುಸರಿಸುವಂತೆ ಅವರು ನಿಮ್ಮನ್ನು ಪ್ರೇರೇಪಿಸುತ್ತಾರೆ” ಎಂದು ಹೇಳಿದ್ದನು. ಆದರೆ ಸೊಲೊಮೋನನು ಈ ಸ್ತ್ರೀಯರನ್ನು ಪ್ರೀತಿಸತೊಡಗಿದನು.
1 ಅರಸುಗಳು 11 : 3 (ERVKN)
ಸೊಲೊಮೋನನಿಗೆ ಏಳುನೂರು ಮಂದಿ ಪತ್ನಿಯರಿದ್ದರು. (ಈ ಸ್ತ್ರೀಯರು ಅನ್ಯದೇಶಗಳ ನಾಯಕರ ಹೆಣ್ಣುಮಕ್ಕಳು) ಅವನಿಗೆ ಪತ್ನಿಯರಂತಿರುವ ಮುನ್ನೂರು ಮಂದಿ ಉಪಪತ್ನಿಯರೂ ಇದ್ದರು. ಅವನ ಪತ್ನಿಯರು ಅವನನ್ನು ದೇವರಿಗೆ ವಿಮುಖನನ್ನಾಗಿ ಮಾಡಿದರು.
1 ಅರಸುಗಳು 11 : 4 (ERVKN)
ಸೊಲೊಮೋನನು ವೃದ್ಧನಾದಾಗ, ತನ್ನ ಪತ್ನಿಯರ ದೆಸೆಯಿಂದಾಗಿ ಅನ್ಯದೇವತೆಗಳನ್ನು ಅನುಸರಿಸಿದನು. ತನ್ನ ತಂದೆಯಾದ ದಾವೀದನು ಯೆಹೋವನನ್ನು ಅನುಸರಿಸಿದಂತೆ ಸೊಲೊಮೋನನು ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಲಿಲ್ಲ.
1 ಅರಸುಗಳು 11 : 5 (ERVKN)
ಸೊಲೊಮೋನನು ಅಷ್ಟೋರೆತ್ ದೇವತೆಯನ್ನು ಪೂಜಿಸಿದನು. ಇದು ಚೀದೋನ್ಯರ ದೇವತೆ. ಸೊಲೊಮೋನನು ಮಿಲ್ಕೋಮನನ್ನು ಆರಾಧಿಸಿದನು. ಇದು ಅಮ್ಮೋನಿಯರ ಭಯಂಕರ ವಿಗ್ರಹ.
1 ಅರಸುಗಳು 11 : 6 (ERVKN)
ಹೀಗೆ ಸೊಲೊಮೋನನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದಾಗಿದ್ದ ಕಾರ್ಯಗಳನ್ನು ಮಾಡಿದನು; ತನ್ನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಿದಂತೆ ಅನುಸರಿಸಲಿಲ್ಲ.
1 ಅರಸುಗಳು 11 : 7 (ERVKN)
ಸೊಲೊಮೋನನು ಕೆಮೋಷನನ್ನು ಆರಾಧಿಸಲು ಒಂದು ಸ್ಥಳವನ್ನು ನಿರ್ಮಿಸಿದನು. ಮೋವಾಬ್ಯರ ಭಯಂಕರ ವಿಗ್ರಹವೇ ಕೆಮೋಷ್. ಜೆರುಸಲೇಮಿನ ಪಕ್ಕದಲ್ಲಿದ್ದ ಬೆಟ್ಟದ ಮೇಲೆ ಸೊಲೊಮೋನನು ಆರಾಧನೆಯ ಸ್ಥಳವನ್ನು ನಿರ್ಮಿಸಿದನು. ಆ ಬೆಟ್ಟದ ಮೇಲೆಯೇ ಸೊಲೊಮೋನನು ಮೋಲೆಕ್ ದೇವತೆಯ ಪೂಜಾಸ್ಥಳವನ್ನು ನಿರ್ಮಿಸಿದನು. ಅಮ್ಮೋನಿಯರ ಭಯಂಕರ ವಿಗ್ರಹವೇ ಮೋಲೆಕ್.
1 ಅರಸುಗಳು 11 : 8 (ERVKN)
ಸೊಲೊಮೋನನು ಅನ್ಯದೇಶಗಳ ತನ್ನ ಪತ್ನಿಯರಿಗೆಲ್ಲ ಇದೇ ರೀತಿ ಮಾಡಿದನು. ಅವನ ಪತ್ನಿಯರು ತಮ್ಮ ದೇವರುಗಳಿಗೆ ಧೂಪಹಾಕಿದರು ಮತ್ತು ಯಜ್ಞಗಳನ್ನು ಅರ್ಪಿಸಿದರು.
1 ಅರಸುಗಳು 11 : 9 (ERVKN)
ಸೊಲೊಮೋನನು ಇಸ್ರೇಲಿನ ದೇವರಾದ ಯೆಹೋವನನ್ನು ಅನುಸರಿಸದೆ ಬೇರೆ ಕಡೆಗೆ ತಿರುಗಿಕೊಂಡನು. ಆದ್ದರಿಂದ ಯೆಹೋವನು ಸೊಲೊಮೋನನ ಮೇಲೆ ಕೋಪಗೊಂಡನು. ಯೆಹೋವನು ಎರಡು ಸಲ ಸೊಲೊಮೋನನಿಗೆ ದರ್ಶನವನ್ನು ನೀಡಿದ್ದನು.
1 ಅರಸುಗಳು 11 : 10 (ERVKN)
ಅನ್ಯದೇವತೆಗಳನ್ನು ಅನುಸರಿಸಬಾರದೆಂದು ಯೆಹೋವನು ಸೊಲೊಮೋನನಿಗೆ ಹೇಳಿದನು. ಆದರೆ ಸೊಲೊಮೋನನು ಯೆಹೋವನ ಆಜ್ಞೆಯನ್ನು ಅನುಸರಿಸಲಿಲ್ಲ.
1 ಅರಸುಗಳು 11 : 11 (ERVKN)
ಆದ್ದರಿಂದ ಯೆಹೋವನು ಸೊಲೊಮೋನನಿಗೆ, “ನಮ್ಮಿಬ್ಬರ ನಡುವೆಯಿದ್ದ ಒಡಂಬಡಿಕೆಯನ್ನು ಮೀರಿಬಿಟ್ಟೆ. ನೀನು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ. ಆದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕರಲ್ಲಿ ಒಬ್ಬನಿಗೆ ಅದನ್ನು ಕೊಡುವುದಾಗಿ ನಾನು ಪ್ರಮಾಣ ಮಾಡುತ್ತೇನೆ.
1 ಅರಸುಗಳು 11 : 12 (ERVKN)
ಆದರೆ ನಿನ್ನ ತಂದೆಯಾದ ದಾವೀದನನ್ನು ನಾನು ಪ್ರೀತಿಸಿದ್ದರಿಂದ ನೀನು ಜೀವಂತವಾಗಿರುವಾಗಲೇ ನಿನ್ನ ರಾಜ್ಯವನ್ನು ನಿನ್ನಿಂದ ನಾನು ತೆಗೆದುಕೊಳ್ಳುವುದಿಲ್ಲ. ನಿನ್ನ ಮಗನು ರಾಜನಾಗುವವರೆಗೆ ನಾನು ಕಾಯುತ್ತೇನೆ. ನಂತರ ನಾನು ಅದನ್ನು ಅವನಿಂದ ತೆಗೆದುಕೊಳ್ಳುತ್ತೇನೆ.
1 ಅರಸುಗಳು 11 : 13 (ERVKN)
ಆದರೂ ನಿನ್ನ ಮಗನಿಂದ ರಾಜ್ಯವನ್ನೆಲ್ಲ ನಾನು ಕಿತ್ತುಕೊಳ್ಳುವುದಿಲ್ಲ. ನಾನು ಅವನಿಗೆ ಒಂದು ಕುಲವನ್ನು ಆಳಲು ಬಿಡುತ್ತೇನೆ. ನಾನು ದಾವೀದನಿಗಾಗಿ ಹೀಗೆ ಮಾಡುತ್ತೇನೆ. ಅವನು ನನಗೆ ಒಬ್ಬ ಒಳ್ಳೆಯ ಸೇವಕನಾಗಿದ್ದನು. ನಾನು ಇದನ್ನು ಜೆರುಸಲೇಮಿನ ಏಳಿಗೆಗಾಗಿ ಮಾಡುತ್ತೇನೆ. ನಾನೇ ಆ ನಗರವನ್ನು ಆರಿಸಿಕೊಂಡೆನು” ಎಂದು ಹೇಳಿದನು.
1 ಅರಸುಗಳು 11 : 14 (ERVKN)
ಸೊಲೊಮೋನನ ಶತ್ರುಗಳು ಆ ಸಮಯದಲ್ಲಿ ಸೊಲೊಮೋನನಿಗೆ ಶತ್ರುವಾಗುವಂತೆ ಎದೋಮ್ಯನಾದ ಹದದನನ್ನು ಯೆಹೋವನು ಪ್ರೇರೇಪಿಸಿದನು. ಹದದನು ರಾಜನಾದ ಎದೋಮ್ಯನ ವಂಶದವನು.
1 ಅರಸುಗಳು 11 : 15 (ERVKN)
ಅದು ಹೀಗೆ ಸಂಭವಿಸಿತು: ದಾವೀದನು ಮೊದಲು ಎದೋಮ್ಯರನ್ನು ಸೋಲಿಸಿದ್ದನು, ದಾವೀದನ ಸೈನ್ಯಕ್ಕೆ ಯೋವಾಬನು ಸೇನಾಪತಿಯಾಗಿದ್ದನು. ಸತ್ತ ಜನರನ್ನು ಸಮಾಧಿ ಮಾಡಲು ಯೋವಾಬನು ಎದೋಮಿಗೆ ಹೋದನು. ಅಲ್ಲಿ ಇನ್ನೂ ವಾಸವಾಗಿದ್ದ ಗಂಡಸರನ್ನೆಲ್ಲ ಯೋವಾಬನು ಕೊಂದುಹಾಕಿದನು.
1 ಅರಸುಗಳು 11 : 16 (ERVKN)
ಯೋವಾಬನು ಮತ್ತು ಇಸ್ರೇಲರು ಎದೋಮಿನಲ್ಲಿ ಆರು ತಿಂಗಳ ಕಾಲ ನೆಲೆಸಿದ್ದರು. ಆ ಸಂದರ್ಭದಲ್ಲಿ ಅವರು ಎದೋಮಿನ ಗಂಡಸರನ್ನೆಲ್ಲ ಕೊಂದುಹಾಕಿದರು.
1 ಅರಸುಗಳು 11 : 17 (ERVKN)
ಆದರೆ ಆ ಕಾಲಕ್ಕೆ ಹದದನಿನ್ನೂ ಚಿಕ್ಕ ಬಾಲಕನಾಗಿದ್ದನು. ಆದ್ದರಿಂದ ಹದದನು ಈಜಿಪ್ಟಿಗೆ ಓಡಿಹೋದನು. ಅವನ ತಂದೆಯ ಕೆಲವು ಜನ ಸೇವಕರೂ ಅವನೊಡನೆ ಹೋದರು.
1 ಅರಸುಗಳು 11 : 18 (ERVKN)
ಅವರು ಮಿದ್ಯಾನನ್ನು ಬಿಟ್ಟು ಪಾರಾನಿಗೆ ಹೋದರು. ಇತರ ಕೆಲವು ಜನರು ಪಾರಾನಿನಲ್ಲಿ ಅವರೊಂದಿಗೆ ಸೇರಿಕೊಂಡರು. ನಂತರ ಇವರೆಲ್ಲಾ ಒಟ್ಟಿಗೆ ಈಜಿಪ್ಟಿಗೆ ಹೋದರು. ಅವರು ಈಜಿಪ್ಟಿನ ರಾಜನಾದ ಫರೋಹನ ಬಳಿಗೆ ಹೋಗಿ, ಅವನ ಸಹಾಯವನ್ನು ಕೇಳಿದರು. ಫರೋಹನು ಹದದನಿಗೆ ಒಂದು ಮನೆಯನ್ನು ಮತ್ತು ಸ್ವಲ್ಪ ಭೂಮಿಯನ್ನು ಕೊಟ್ಟನು. ಫರೋಹನು ಅವನ ಊಟಕ್ಕಾಗಿ ಪ್ರತಿ ತಿಂಗಳು ಆಹಾರವನ್ನು ಕೊಟ್ಟನು.
1 ಅರಸುಗಳು 11 : 19 (ERVKN)
ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ನಾದಿನಿಯನ್ನೇ ಹದದನಿಗೆ ಪತ್ನಿಯನ್ನಾಗಿ ಕೊಟ್ಟನು. (ರಾಣಿಯಾದ ತಖ್ಪೆನೇಸಳು ಫರೋಹನ ಪತ್ನಿ.)
1 ಅರಸುಗಳು 11 : 20 (ERVKN)
ತಖ್ಪೆನೇಸಳ ಸೋದರಿಯನ್ನು ಹದದನು ಮದುವೆಯಾದನು. ಅವರಿಗೆ ಗೆನುಬತ್ ಎಂಬ ಹೆಸರಿನ ಮಗನಿದ್ದನು. ಫರೋಹನ ಮನೆಯಲ್ಲಿಯೇ ಅವನ ಮಕ್ಕಳೊಂದಿಗೆ ಗೆನುಬತನೂ ಬೆಳೆಯಲು ರಾಣಿಯಾದ ತಖ್ಪೆನೇಸಳು ಅವಕಾಶಮಾಡಿದಳು.
1 ಅರಸುಗಳು 11 : 21 (ERVKN)
ದಾವೀದನು ಸತ್ತುಹೋದನೆಂಬುದು ಹದದನಿಗೆ ಈಜಿಪ್ಟಿನಲ್ಲಿ ತಿಳಿಯಿತು. ಸೈನ್ಯದ ಸೇನಾಪತಿಯಾದ ಯೋವಾಬನು ಸತ್ತನೆಂಬುದೂ ಅವನಿಗೆ ತಿಳಿಯಿತು. ಆದ್ದರಿಂದ ಹದದನು ಫರೋಹನಿಗೆ, “ಸ್ವದೇಶದ ನನ್ನ ಮನೆಗೆ ನನಗೆ ಹೋಗಲು ಬಿಡು” ಎಂದು ಹೇಳಿದನು.
1 ಅರಸುಗಳು 11 : 22 (ERVKN)
ಆದರೆ ಫರೋಹನು “ನಿನಗೆ ಬೇಕಾದುದ್ದೆಲ್ಲವನ್ನು ನಾನು ಇಲ್ಲಿ ನಿನಗೆ ಕೊಟ್ಟಿದ್ದೇನೆ! ನೀನು ಸ್ವದೇಶಕ್ಕೆ ಹಿಂದಿರುಗಿ ಹೋಗಲು ಅಪೇಕ್ಷಿಸುತ್ತಿರುವುದಾದರೂ ಏಕೆ?” ಎಂದು ಕೇಳಿದನು. ಹದದನು, “ದಯವಿಟ್ಟು ನನ್ನ ಮನೆಗೆ ನಾನು ಹೋಗಲು ಬಿಡು” ಎಂದನು.
1 ಅರಸುಗಳು 11 : 23 (ERVKN)
ಸೊಲೊಮೋನನಿಗೆ ವಿರುದ್ಧವಾಗಿ ಶತ್ರುವಾಗುವಂತೆ ಇನ್ನೊಬ್ಬ ಮನುಷ್ಯನನ್ನೂ ದೇವರು ಪ್ರೇರೇಪಿಸಿದನು. ಈ ಮನುಷ್ಯನು ಎಲ್ಯಾದಾವನ ಮಗನಾದ ರೆಜೋನ್ ಎಂಬವನು. ರೆಜೋನನು ತನ್ನ ಒಡೆಯನ ಹತ್ತಿರದಿಂದ ಓಡಿಹೋಗಿದ್ದನು. ಚೋಬದ ರಾಜನಾದ ಹದದೆಜೆರನು ಅವನ ಒಡೆಯ.
1 ಅರಸುಗಳು 11 : 24 (ERVKN)
ದಾವೀದನು ಚೋಬದ ಸೈನ್ಯವನ್ನು ಸೋಲಿಸಿದ ಬಳಿಕ, ರೆಜೋನನು ಕೆಲವು ಜನರನ್ನು ಒಟ್ಟುಗೂಡಿಸಿಕೊಂಡು, ಆ ಕಿರುಸೇನೆಗೆ ತಾನೇ ನಾಯಕನಾದನು. ರೆಜೋನನು ದಮಸ್ಕಕ್ಕೆ ಹೋಗಿ ಅಲ್ಲಿಯೇ ನೆಲೆಸಿದನು. ರೆಜೋನನು ದಮಸ್ಕದ ರಾಜನಾದನು.
1 ಅರಸುಗಳು 11 : 25 (ERVKN)
ರೆಜೋನನು ಅರಾಮನ್ನು ಆಳಿದನು. ರೆಜೋನನು ಇಸ್ರೇಲಿನ ದ್ವೇಷಿಯಾದ್ದರಿಂದ, ಸೊಲೊಮೋನನ ಜೀವಮಾನದಲ್ಲೆಲ್ಲಾ ಅವನು ಇಸ್ರೇಲಿನ ಶತ್ರುವಾಗಿಯೇ ಮುಂದುವರಿದನು. ರೆಜೋನ್ ಮತ್ತು ಹದದನು ಇಸ್ರೇಲಿಗೆ ಹೆಚ್ಚು ತೊಂದರೆಯನ್ನು ಉಂಟುಮಾಡಿದರು.
1 ಅರಸುಗಳು 11 : 26 (ERVKN)
ಸೊಲೊಮೋನನ ಸೇವಕರಲ್ಲಿ ನೆಬಾಟನ ಮಗನಾದ ಯಾರೊಬ್ಬಾಮನೂ ಒಬ್ಬನಾಗಿದ್ದನು. ಯಾರೊಬ್ಬಾಮನು ಎಫ್ರಾಯೀಮ್ ಕುಲದವನು, ಅವನು ಚರೇದ ಪಟ್ಟಣದವನು. ಯಾರೊಬ್ಬಾಮನ ತಾಯಿಯ ಹೆಸರು ಜೆರೂಗ, ಆಕೆ ವಿಧವೆಯಾಗಿದ್ದಳು. ಯಾರೊಬ್ಬಾಮನು ರಾಜನ ವಿರುದ್ಧ ತಿರುಗಿಬಿದ್ದನು.
1 ಅರಸುಗಳು 11 : 27 (ERVKN)
ಯಾರೊಬ್ಬಾಮನು ರಾಜನ ವಿರುದ್ಧ ಏಕೆ ತಿರುಗಿ ಬಿದ್ದನೆಂಬ ಕಥೆಯು ಹೀಗಿದೆ: ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟುತ್ತಿದ್ದನು ಮತ್ತು ತನ್ನ ತಂದೆಯಾದ ದಾವೀದನ ನಗರದ ಗೋಡೆಯನ್ನು ಭದ್ರಪಡಿಸುತ್ತಿದ್ದನು.
1 ಅರಸುಗಳು 11 : 28 (ERVKN)
ಯಾರೊಬ್ಬಾಮನು ಸಮರ್ಥನಾದ ಮನುಷ್ಯನಾಗಿದ್ದನು. ಈ ಯುವಕನು ಒಳ್ಳೆಯ ಕೆಲಸಗಾರನೆಂಬುದು ಸೊಲೊಮೋನನಿಗೆ ತಿಳಿಯಿತು. ಆದ್ದರಿಂದ ಸೊಲೊಮೋನನು ಯೋಸೇಫ್ ಕುಲದ ಕೆಲಸಗಾರರೆಲ್ಲರಿಗೂ ಮೇಲ್ವಿಚಾರಕನನ್ನಾಗಿ ಅವನನ್ನು ನೇಮಿಸಿದನು.
1 ಅರಸುಗಳು 11 : 29 (ERVKN)
ಒಂದು ದಿನ ಯಾರೊಬ್ಬಾಮನು ಜೆರುಸಲೇಮಿನ ಹೊರಗೆ ಹೋಗುತ್ತಿದ್ದನು. ಶೀಲೋವಿನ ಪ್ರವಾದಿಯಾದ ಅಹೀಯನು ಅವನನ್ನು ರಸ್ತೆಯಲ್ಲಿ ಸಂಧಿಸಿದನು. ಅಹೀಯನು ಹೊಸ ಅಂಗಿಯನ್ನು ಧರಿಸಿದ್ದನು. ನಿರ್ಜನವಾಗಿದ್ದ ಆ ದೇಶದಲ್ಲಿ ಇವರಿಬ್ಬರೇ ಇದ್ದರು.
1 ಅರಸುಗಳು 11 : 30 (ERVKN)
ಅಹೀಯನು ತನ್ನ ಹೊಸ ಅಂಗಿಯನ್ನು ತೆಗೆದು, ಅದನ್ನು ಹನ್ನೆರಡು ತುಂಡುಗಳನ್ನಾಗಿ ಹರಿದನು.
1 ಅರಸುಗಳು 11 : 31 (ERVKN)
ಬಳಿಕ ಅಹೀಯನು ಯಾರೊಬ್ಬಾಮನಿಗೆ, “ಈ ಅಂಗಿಯ ಹತ್ತು ತುಂಡುಗಳನ್ನು ನಿನಗೋಸ್ಕರವಾಗಿ ತೆಗೆದುಕೋ. ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ಸೊಲೊಮೋನನ ರಾಜ್ಯವನ್ನು ನಾನು ಹರಿದು ತುಂಡುಗಳನ್ನಾಗಿ ಮಾಡುತ್ತೇನೆ. ನಾನು ಹತ್ತು ಕುಲಗಳನ್ನು ನಿನಗೆ ಒಪ್ಪಿಸುತ್ತೇನೆ.
1 ಅರಸುಗಳು 11 : 32 (ERVKN)
ಒಂದು ಕುಲವನ್ನು ಮಾತ್ರ ದಾವೀದನ ವಂಶದ ಅಧೀನದಲ್ಲಿ ಬಿಡುತ್ತೇನೆ. ಅವರು ಈ ಕುಲವನ್ನು ಉಳಿಸಿಕೊಳ್ಳಲು ನಾನು ಅವಕಾಶ ಮಾಡಿಕೊಡುತ್ತೇನೆ. ನನ್ನ ಸೇವಕನಾದ ದಾವೀದನಿಗಾಗಿ ಮತ್ತು ಜೆರುಸಲೇಮಿಗಾಗಿ ನಾನು ಇದನ್ನು ಮಾಡುತ್ತೇನೆ. ಇಸ್ರೇಲಿನ ಎಲ್ಲಾ ಕುಲಗಳಿಂದಲೂ ನಾನು ಜೆರುಸಲೇಮ್ ನಗರವನ್ನು ಆರಿಸಿಕೊಂಡಿದ್ದೇನೆ.
1 ಅರಸುಗಳು 11 : 33 (ERVKN)
ಸೊಲೊಮೋನನು ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿದ ಕಾರಣ ನಾನು ಅವನ ರಾಜ್ಯವನ್ನು ಅವನಿಂದ ತೆಗೆದುಕೊಳ್ಳುವೆನು. ಅವನು ಚೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ ಮೋವಾಬ್ಯರ ದೇವರಾದ ಕೆಮೋಷನನ್ನೂ ಅಮ್ಮೋನಿಯರ ದೇವರಾದ ಮಿಲ್ಕೋಮನನ್ನೂ ಪೂಜಿಸಿದನು. ಸೊಲೊಮೋನನು ತಾನು ಮಾಡುತ್ತಿದ್ದ ಸರಿಯಾದ ಮತ್ತು ಉತ್ತಮವಾದ ಕಾರ್ಯಗಳನ್ನು ನಿಲ್ಲಿಸಿದನು. ಅವನು ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಲಿಲ್ಲ. ತನ್ನ ತಂದೆಯಾದ ದಾವೀದನು ಜೀವಿಸಿದಂತೆ ಅವನು ಜೀವಿಸುತ್ತಿಲ್ಲ.
1 ಅರಸುಗಳು 11 : 34 (ERVKN)
ಆದ್ದರಿಂದ ನಾನು ಸೊಲೊಮೋನನ ಕುಟುಂಬದಿಂದ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ. ಆದರೆ ಸೊಲೊಮೋನನು ತನ್ನ ಜೀವಮಾನವೆಲ್ಲಾ ಆಳುವಂತೆ ನಾನು ಅವನಿಗೆ ಅವಕಾಶ ಕೊಡುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗಾಗಿ ಇದನ್ನು ಮಾಡುತ್ತೇನೆ. ನಾನು ದಾವೀದನನ್ನು ಆರಿಸಿಕೊಂಡೆನು; ಏಕೆಂದರೆ ಅವನು ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಅನುಸರಿಸಿದನು.
1 ಅರಸುಗಳು 11 : 35 (ERVKN)
ಆದರೆ ನಾನು ರಾಜ್ಯವನ್ನು ಅವನ ಮಗನಿಂದ ಕಿತ್ತುಕೊಂಡು ನಿನಗೆ ಹತ್ತು ಕುಲಗಳನ್ನು ಕೊಡುತ್ತೇನೆ.
1 ಅರಸುಗಳು 11 : 36 (ERVKN)
ಸೊಲೊಮೋನನ ಮಗನಿಗೆ ಒಂದು ಕುಲವನ್ನು ಮಾತ್ರ ಕೊಡುತ್ತೇನೆ. ಜೆರುಸಲೇಮಿನ ನನ್ನ ಸನ್ನಿಧಿಯಲ್ಲಿ ಆಳಲು ನನ್ನ ಸೇವಕನಾದ ದಾವೀದನು ಯಾವಾಗಲೂ ತನ್ನ ಸಂತತಿಯವರಲ್ಲಿ ಒಬ್ಬನನ್ನು ಹೊಂದಿರಲೆಂದು ನಾನು ಇದನ್ನು ಮಾಡುತ್ತೇನೆ. ಜೆರುಸಲೇಮ್ ನಗರವನ್ನು ನಾನು ನನ್ನ ಸ್ವಂತದ್ದೆಂದು ಆರಿಸಿಕೊಂಡೆನು.
1 ಅರಸುಗಳು 11 : 37 (ERVKN)
ನಾನು ನಿನ್ನನ್ನು ಇಡೀ ಇಸ್ರೇಲಿಗೆ ರಾಜನನ್ನಾಗಿ ಮಾಡುತ್ತೇನೆ. ನೀನು ನಿನ್ನ ಇಷ್ಟಾನುಸಾರವಾಗಿ ಪ್ರತಿಯೊಂದರ ಮೇಲೆ ದೊರೆತನ ಮಾಡುವಂತೆ ಮಾಡುತ್ತೇನೆ.
1 ಅರಸುಗಳು 11 : 38 (ERVKN)
ನೀನು ಸರಿಯಾದ ಮಾರ್ಗದಲ್ಲಿ ಜೀವಿಸುತ್ತಾ, ನನ್ನ ಆಜ್ಞೆಗಳನ್ನು ಅನುಸರಿಸಿದರೆ, ನಾನು ಈ ಕಾರ್ಯಗಳೆನ್ನೆಲ್ಲ ನಿನಗೆ ಮಾಡುವೆನು. ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀನು ದಾವೀದನಂತೆ ಅನುಸರಿಸಿದರೆ ನಾನು ನಿನ್ನೊಂದಿಗೆ ಇರುತ್ತೇನೆ. ನಾನು ನಿನ್ನ ಕುಟುಂಬವನ್ನು ದಾವೀದನ ಕುಟುಂಬದಂತೆ ರಾಜರುಗಳ ಕುಟುಂಬವನ್ನಾಗಿ ಮಾಡುತ್ತೇನೆ. ನಾನು ನಿನಗೆ ಇಸ್ರೇಲನ್ನು ಕೊಡುತ್ತೇನೆ.
1 ಅರಸುಗಳು 11 : 39 (ERVKN)
ಸೊಲೊಮೋನನು ಮಾಡಿದ ಕಾರ್ಯಗಳ ನಿಮಿತ್ತ ನಾನು ದಾವೀದನ ಮಕ್ಕಳನ್ನು ದಂಡಿಸುತ್ತೇನೆ. ಆದರೆ ನನ್ನ ದಂಡನೆಯು ಅವರ ಮೇಲೆ ಶಾಶ್ವತವಾಗಿರುವುದಿಲ್ಲ” ಎಂದು ಹೇಳಿದನು.
1 ಅರಸುಗಳು 11 : 40 (ERVKN)
ಸೊಲೊಮೋನನ ಮರಣ ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಪ್ರಯತ್ನಿಸಿದನು. ಆದರೆ ಯಾರೊಬ್ಬಾಮನು ಈಜಿಪ್ಟಿಗೆ ಓಡಿಹೋದನು. ಅವನು ಈಜಿಪ್ಟಿನ ರಾಜನಾದ ಶೀಶಕನ ಬಳಿಗೆ ಹೋದನು. ಸೊಲೊಮೋನನು ಸಾಯುವವರೆಗೆ ಯಾರೊಬ್ಬಾಮನು ಅಲ್ಲಿಯೇ ನೆಲೆಸಿದನು.
1 ಅರಸುಗಳು 11 : 41 (ERVKN)
ಸೊಲೊಮೋನನು ತಾನು ಆಳುತ್ತಿದ್ದಾಗ ಅನೇಕ ಮಹಾಕಾರ್ಯಗಳನ್ನೂ ಜ್ಞಾನದ ಕಾರ್ಯಗಳನ್ನೂ ಮಾಡಿದನು. ಈ ಕಾರ್ಯಗಳನ್ನೆಲ್ಲ ಸೊಲೊಮೋನನ ಚರಿತ್ರೆ ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.
1 ಅರಸುಗಳು 11 : 42 (ERVKN)
ಸಮಸ್ತ ಇಸ್ರೇಲನ್ನು ಸೊಲೊಮೋನನು ಜೆರುಸಲೇಮಿನಲ್ಲಿ ನಲವತ್ತು ವರ್ಷಗಳ ಕಾಲ ಆಳಿದನು.
1 ಅರಸುಗಳು 11 : 43 (ERVKN)
ಬಳಿಕ ಸೊಲೊಮೋನನು ಸತ್ತನು. ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಅವನನ್ನು ಅವನ ತಂದೆಯಾದ ದಾವೀದ ನಗರದಲ್ಲಿ ಸಮಾಧಿಮಾಡಿದರು. ಸೊಲೊಮೋನನ ಮಗನಾದ ರೆಹಬ್ಬಾಮನು ಸೊಲೊಮೋನನ ಬಳಿಕ ರಾಜನಾದನು.
❮
❯