1 ಯೋಹಾನನು 4 : 1 (ERVKN)
ಸುಳ್ಳುಬೋಧಕರ ವಿರುದ್ಧ ಯೋಹಾನನ ಎಚ್ಚರಿಕೆ ನನ್ನ ಪ್ರಿಯ ಸ್ನೇಹಿತರೇ, ಈಗ ಲೋಕದಲ್ಲಿ ಅನೇಕ ಸುಳ್ಳುಪ್ರವಾದಿಗಳಿದ್ದಾರೆ. ಆದ್ದರಿಂದ ಪ್ರತಿಯೊಂದು ಆತ್ಮವನ್ನು ನಂಬಬೇಡಿ. ಆದರೆ ಆ ಆತ್ಮಗಳು ದೇವರಿಂದ ಬಂದವುಗಳೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.
1 ಯೋಹಾನನು 4 : 2 (ERVKN)
ದೇವರಾತ್ಮವನ್ನು ನೀವು ಇದೇ ರೀತಿ ತಿಳಿದುಕೊಳ್ಳಲು ಸಾಧ್ಯ. “ಈ ಲೋಕಕ್ಕೆ ಮನುಷ್ಯನಾಗಿ ಬಂದ ಯೇಸುವೇ ಕ್ರಿಸ್ತನೆಂದು ನಾನು ನಂಬುತ್ತೇನೆ” ಎಂದು ಹೇಳುವ ಆತ್ಮವು ದೇವರಿಂದ ಬಂದದ್ದಾಗಿದೆ.
1 ಯೋಹಾನನು 4 : 3 (ERVKN)
ಯೇಸುವಿನ ಬಗ್ಗೆ ಹೀಗೆ ಹೇಳದ ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮ. ಕ್ರಿಸ್ತವಿರೋಧಿಯು ಬರುತ್ತಾನೆ ಎಂಬುದನ್ನು ನೀವು ಕೇಳಿರುವಿರಿ. ಕ್ರಿಸ್ತವಿರೋಧಿಯು ಈಗಾಗಲೇ ಈ ಲೋಕದಲ್ಲಿದ್ದಾನೆ.
1 ಯೋಹಾನನು 4 : 4 (ERVKN)
ನನ್ನ ಪ್ರಿಯ ಮಕ್ಕಳೇ, ನೀವು ದೇವರಿಗೆ ಸೇರಿದವರು. ಆದ್ದರಿಂದ ನೀವು ಅವರನ್ನು (ಸುಳ್ಳುಬೋಧಕರು) ಸೋಲಿಸಿದ್ದೀರಿ. ಏಕೆಂದರೆ ನಿಮ್ಮಲ್ಲಿರುವಾತನು (ದೇವರು) ಈ ಲೋಕದ ಜನರಲ್ಲಿರುವವನಿಗಿಂತ (ಸೈತಾನ) ದೊಡ್ಡವನಾಗಿದ್ದಾನೆ.
1 ಯೋಹಾನನು 4 : 5 (ERVKN)
ಆ ಜನರು (ಸುಳ್ಳುಬೋಧಕರು) ಈ ಲೋಕಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಅವರು ಹೇಳುವುದೆಲ್ಲವೂ ಈ ಲೋಕಕ್ಕೆ ಸೇರಿವೆ. ಅವರು ಏನೇ ಹೇಳಿದರೂ ಲೋಕವು ಕೇಳುತ್ತದೆ.
1 ಯೋಹಾನನು 4 : 6 (ERVKN)
ನಾವಾದರೋ ದೇವರಿಂದ ಬಂದವರು. ಆದ್ದರಿಂದ ದೇವರನ್ನು ಬಲ್ಲ ಜನರು ನಮಗೆ ಕಿವಿಗೊಡುತ್ತಾರೆ, ಆದರೆ ದೇವರಿಂದ ಬಂದಿಲ್ಲದ ಜನರು ನಮ್ಮ ಮಾತುಗಳನ್ನು ಕೇಳುವುದಿಲ್ಲ. ಯಾವುದು ಸತ್ಯವನ್ನು ಬೋಧಿಸುವ ಆತ್ಮ, ಯಾವುದು ಸುಳ್ಳನ್ನು ಬೋಧಿಸುವ ಆತ್ಮ ಎಂಬುದನ್ನು ಹೀಗೆ ತಿಳಿದುಕೊಳ್ಳುತ್ತೇವೆ.
1 ಯೋಹಾನನು 4 : 7 (ERVKN)
ಪ್ರೀತಿಯು ದೇವರಿಂದ ಬರುತ್ತದೆ ಪ್ರಿಯ ಸ್ನೇಹಿತರೇ, ಪ್ರೀತಿಯು ದೇವರಿಂದ ಬಂದಿರುವುದರಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಪ್ರೀತಿಸುವವನು ದೇವರಿಂದ ಹೊಸದಾಗಿ ಹುಟ್ಟಿದವನಾಗಿದ್ದಾನೆ. ಆದ್ದರಿಂದ ಅವನು ದೇವರನ್ನು ಬಲ್ಲವನಾಗಿರುತ್ತಾನೆ.
1 ಯೋಹಾನನು 4 : 8 (ERVKN)
ಪ್ರೀತಿಸದಿರುವವನು ದೇವರನ್ನು ತಿಳಿದಿಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪಿ.
1 ಯೋಹಾನನು 4 : 9 (ERVKN)
ದೇವರು ತನ್ನ ಒಬ್ಬನೇ ಮಗನ ಮೂಲಕ ನಮಗೆ ಜೀವವನ್ನು ಕೊಡುವುದಕ್ಕಾಗಿ ಆತನನ್ನು ಈ ಲೋಕಕ್ಕೆ ಕಳುಹಿಸಿದನು. ಹೀಗೆ ದೇವರು ತನ್ನ ಪ್ರೀತಿಯನ್ನು ನಮಗೆ ತೋರಿಸಿದ್ದಾನೆ.
1 ಯೋಹಾನನು 4 : 10 (ERVKN)
ದೇವರಿಗೆ ನಮ್ಮ ಮೇಲಿರುವ ಪ್ರೀತಿಯೇ ನಿಜವಾದ ಪ್ರೀತಿ. ನಮಗೆ ದೇವರ ಮೇಲಿರುವ ಪ್ರೀತಿ ನಿಜವಾದ ಪ್ರೀತಿಯಲ್ಲ. ನಮ್ಮ ಪಾಪ ನಿವಾರಣೆಗಾಗಿ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು.
1 ಯೋಹಾನನು 4 : 11 (ERVKN)
ಪ್ರಿಯ ಸ್ನೇಹಿತರೇ, ಹೀಗೆ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ಆದ್ದರಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು.
1 ಯೋಹಾನನು 4 : 12 (ERVKN)
ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಸಿರುತ್ತಾನೆ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾದ ಮಟ್ಟವನ್ನು ತಲುಪುತ್ತದೆ.
1 ಯೋಹಾನನು 4 : 13 (ERVKN)
ನಾವು ದೇವರಲ್ಲಿ ನೆಲೆಸಿದ್ದೇವೆ ಮತ್ತು ದೇವರು ನಮ್ಮಲ್ಲಿ ನೆಲೆಸಿದ್ದಾನೆ ಎಂಬುದು ನಮಗೆ ತಿಳಿದದೆ. ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದ ಇದು ನಮಗೆ ತಿಳಿದಿದೆ.
1 ಯೋಹಾನನು 4 : 14 (ERVKN)
ದೇವರು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿದ್ದನ್ನು ನಾವು ನೋಡಿದ್ದೇವೆ. ನಾವು ಈಗ ಜನರಿಗೆ ಹೇಳುತ್ತಿರುವುದು ಅದನ್ನೇ.
1 ಯೋಹಾನನು 4 : 15 (ERVKN)
“ಯೇಸುವೇ ದೇವರ ಮಗನೆಂದು ನಾನು ನಂಬುತ್ತೇನೆ” ಎಂದು ಹೇಳುವವನಲ್ಲಿ ದೇವರು ನೆಲೆಸಿದ್ದಾನೆ ಮತ್ತು ಅವನು ದೇವರಲ್ಲಿ ನೆಲೆಸಿದ್ದಾನೆ.
1 ಯೋಹಾನನು 4 : 16 (ERVKN)
ಹೀಗಿರಲಾಗಿ ನಮ್ಮ ಮೇಲೆ ದೇವರಿಗಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ನಾವು ಆ ಪ್ರೀತಿಯಲ್ಲಿ ಭರವಸವಿಟ್ಟಿದ್ದೇವೆ. ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿದ್ದಾನೆ.
1 ಯೋಹಾನನು 4 : 17 (ERVKN)
ಹೀಗೆ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾಗುವುದರಿಂದ ದೇವರು ನಮಗೆ ತೀರ್ಪು ನೀಡುವ ದಿನದಂದು ನಾವು ನಿರ್ಭಯದಿಂದಿರುತ್ತೇವೆ. ಈ ಲೋಕದಲ್ಲಿ ನಾವು ಆತನಂತೆಯೇ (ಕ್ರಿಸ್ತನು ಅಥವಾ ದೇವರು) ಇರುವುದರಿಂದ ನಾವು ಧೈರ್ಯದಿಂದಿರುತ್ತೇವೆ.
1 ಯೋಹಾನನು 4 : 18 (ERVKN)
ದೇವರ ಪ್ರೀತಿಯು ಎಲ್ಲಿರುವುದೋ ಅಲ್ಲಿ ಭಯವಿರುವುದಿಲ್ಲ. ಏಕೆಂದರೆ ದೇವರ ಪರಿಪೂರ್ಣ ಪ್ರೀತಿಯು ಭಯವನ್ನು ತೆಗೆದುಹಾಕುತ್ತದೆ. ದೇವರ ದಂಡನೆಯೇ ಒಬ್ಬ ವ್ಯಕ್ತಿಯಲ್ಲಿ ಭಯವನ್ನು ಉಂಟುಮಾಡುವಂಥದ್ದು. ಆದ್ದರಿಂದ ಭಯವಿರುವವನಲ್ಲಿ ದೇವರ ಪ್ರೀತಿ ಪರಿಪೂರ್ಣವಾಗಿಲ್ಲ.
1 ಯೋಹಾನನು 4 : 19 (ERVKN)
ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ.
1 ಯೋಹಾನನು 4 : 20 (ERVKN)
“ನಾನು ದೇವರನ್ನು ಪ್ರೀತಿಸುತ್ತೇನೆ” ಎಂದು ಹೇಳಿಕೊಳ್ಳುವವನು ತನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ದ್ವೇಷಿಸಿದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನು ತನ್ನ ಸಹೋದರನನ್ನು ಕಣ್ಣಾರೆ ನೋಡುತ್ತಿದ್ದರೂ ಅವನನ್ನು ದ್ವೇಷಿಸುತ್ತಾನೆ. ಆದ್ದರಿಂದ ಅವನು ದೇವರನ್ನು ಪ್ರೀತಿಸಲಾಗುವುದಿಲ್ಲ. ಏಕೆಂದರೆ ಅವನು ದೇವರನ್ನು ಎಂದೂ ನೋಡಿಲ್ಲ!
1 ಯೋಹಾನನು 4 : 21 (ERVKN)
ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು ದೇವರು ನಮಗೆ ನೀಡಿರುವ ಆಜ್ಞೆಯಾಗಿದೆ.
❮
❯
1
2
3
4
5
6
7
8
9
10
11
12
13
14
15
16
17
18
19
20
21