1 ಕೊರಿಂಥದವರಿಗೆ 3 : 1 (ERVKN)
ಮನುಷ್ಯರನ್ನು ಅನುಸರಿಸುವುದು ತಪ್ಪು ಸಹೋದರ ಸಹೋದರಿಯರೇ, ನಾನು ಆತ್ಮಿಕ ಜನರೊಂದಿಗೆ ಮಾತಾಡುವಂತೆ ಮೊದಲು ನಿಮ್ಮೊಂದಿಗೆ ಮಾತಾಡಲಾಗಲಿಲ್ಲ. ಪ್ರಾಪಂಚಿಕರೂ ಕ್ರಿಸ್ತನಲ್ಲಿ ಎಳೆಕೂಸುಗಳೂ ಆಗಿರುವಂಥವರೊಂದಿಗೆ ಮಾತಾಡುವಂತೆ ನಾನು ನಿಮ್ಮೊಂದಿಗೆ ಮಾತಾಡಬೇಕಾಯಿತು.
1 ಕೊರಿಂಥದವರಿಗೆ 3 : 2 (ERVKN)
ನಾನು ನಿಮಗೆ ಮಾಡಿದ ಉಪದೇಶವು ಗಟ್ಟಿಯಾದ ಆಹಾರದಂತಿರದೆ ಹಾಲಿನಂತಿತ್ತು; ಏಕೆಂದರೆ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವಿನ್ನೂ ಸಿದ್ಧರಾಗಿರಲಿಲ್ಲ. ಈಗಲೂ ಸಹ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವು ಸಿದ್ಧರಾಗಿಲ್ಲ.
1 ಕೊರಿಂಥದವರಿಗೆ 3 : 3 (ERVKN)
ನೀವಿನ್ನೂ ಆತ್ಮಿಕರಾಗಿಲ್ಲ. ನಿಮ್ಮ ನಡುವೆ ಹೊಟ್ಟೆಕಿಚ್ಚಿದೆ; ವಾಗ್ವಾದಗಳಿವೆ; ಜಗಳಗಳಿವೆ. ನೀವು ಆತ್ಮಿಕರಲ್ಲವೆಂಬುದನ್ನು ಇವು ಸೂಚಿಸುತ್ತವೆ. ನೀವು ಲೋಕದ ಜನರಂತೆಯೇ ವರ್ತಿಸುತ್ತಿದ್ದೀರಿ.
1 ಕೊರಿಂಥದವರಿಗೆ 3 : 4 (ERVKN)
ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ಮತ್ತೊಬ್ಬನು “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ನೀವು ಹೀಗೆ ವಾಗ್ವಾದ ಮಾಡುವಾಗ ಲೋಕದ ಜನರಂತೆಯೇ ವರ್ತಿಸುವವರಾಗಿದ್ದೀರಿ.
1 ಕೊರಿಂಥದವರಿಗೆ 3 : 5 (ERVKN)
ಅಪೊಲ್ಲೋಸನು ಮುಖ್ಯವಾದವನೇ? ಇಲ್ಲ! ಪೌಲನು ಮುಖ್ಯವಾದವನೇ? ಇಲ್ಲ! ನೀವು ನಂಬಿಕೊಳ್ಳಲು ಸಹಾಯ ಮಾಡುವ ನಾವು ಕೇವಲ ದೇವರ ಸೇವಕರಾಗಿದ್ದೇವೆ. ದೇವರು ನಮಗೆ ಕೊಟ್ಟ ಕೆಲಸವನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಿದೆವು.
1 ಕೊರಿಂಥದವರಿಗೆ 3 : 6 (ERVKN)
ನಾನು ಬೀಜವನ್ನು ಬಿತ್ತಿದೆನು; ಅಪೊಲ್ಲೋಸನು ನೀರನ್ನು ಹಾಕಿದನು. ಆದರೆ ಬೀಜವನ್ನು ಬೆಳೆಯಿಸಿದವನು ದೇವರೇ.
1 ಕೊರಿಂಥದವರಿಗೆ 3 : 7 (ERVKN)
ಆದ್ದರಿಂದ ಬೀಜ ಬಿತ್ತುವವನಾಗಲಿ ನೀರು ಹಾಕುವವನಾಗಲಿ ಮುಖ್ಯನಲ್ಲ. ದೇವರೊಬ್ಬನು ಮಾತ್ರ ಮುಖ್ಯವಾದವನು, ಏಕೆಂದರೆ ಬೀಜಗಳನ್ನು ಬೆಳೆಯಿಸುವವನು ಆತನೊಬ್ಬನೇ.
1 ಕೊರಿಂಥದವರಿಗೆ 3 : 8 (ERVKN)
ಬೀಜ ಬಿತ್ತುವವನ ಮತ್ತು ನೀರನ್ನು ಹಾಕುವವನ ಉದ್ದೇಶವು ಒಂದೇ ಆಗಿದೆ. ಮತ್ತು ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದು.
1 ಕೊರಿಂಥದವರಿಗೆ 3 : 9 (ERVKN)
ನಾವು ದೇವರ ಜೊತೆಕೆಲಸದವರಾಗಿದ್ದೇವೆ. ನೀವು ದೇವರ ಹೊಲವಾಗಿದ್ದೀರಿ. ಇದಲ್ಲದೆ ನೀವು ದೇವರ ಕಟ್ಟಡವಾಗಿದ್ದೀರಿ.
1 ಕೊರಿಂಥದವರಿಗೆ 3 : 10 (ERVKN)
ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು.
1 ಕೊರಿಂಥದವರಿಗೆ 3 : 11 (ERVKN)
ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು.
1 ಕೊರಿಂಥದವರಿಗೆ 3 : 12 (ERVKN)
ಒಬ್ಬ ವ್ಯಕ್ತಿಯು ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರ, ಹುಲ್ಲು ಮತ್ತು ಜೊಂಡುಗಳಿಂದ ಕಟ್ಟಬಹುದು.
1 ಕೊರಿಂಥದವರಿಗೆ 3 : 13 (ERVKN)
ಆದರೆ ಪ್ರತಿಯೊಬ್ಬನ ಕೆಲಸವು ಸ್ಪಷ್ಟವಾಗಿ ಕಾಣುವುದು; ಏಕೆಂದರೆ, ಕ್ರಿಸ್ತನು ಬರುವ ದಿನವು ಅದನ್ನು ಸ್ಪಷ್ಟಪಡಿಸುವುದು. ಆ ದಿನವು ಬೆಂಕಿಯೊಂದಿಗೆ ಉದಯಿಸುವುದು. ಆ ಬೆಂಕಿಯು ಪ್ರತಿಯೊಬ್ಬ ವ್ಯಕ್ತಿಯ ಕೆಲಸವನ್ನು ಪರೀಕ್ಷಿಸುವುದು.
1 ಕೊರಿಂಥದವರಿಗೆ 3 : 14 (ERVKN)
ಅಸ್ತಿವಾರದ ಮೇಲೆ ಕಟ್ಟಿದ ಕಟ್ಟಡವು ಸ್ಥಿರವಾಗಿದ್ದರೆ, ಕಟ್ಟಿದವನು ಪ್ರತಿಫಲವನ್ನು ಹೊಂದಿಕೊಳ್ಳುವನು.
1 ಕೊರಿಂಥದವರಿಗೆ 3 : 15 (ERVKN)
ಆದರೆ ಕಟ್ಟಡವು ಸುಟ್ಟುಹೋದರೆ, ಕಟ್ಟಿದವನಿಗೆ ನಷ್ಟವಾಗುವುದು. ಅವನು ರಕ್ಷಣೆ ಹೊಂದುವನು, ಆದರೆ ಅವನು ಬೆಂಕಿಯಿಂದ ತಪ್ಪಿಸಿಕೊಂಡವನಂತಿರುವನು.
1 ಕೊರಿಂಥದವರಿಗೆ 3 : 16 (ERVKN)
ನೀವೇ ದೇವರ ಆಲಯವಾಗಿದ್ದೀರಿ. ಇದು ನಿಮಗೆ ಚೆನ್ನಾಗಿ ತಿಳಿದಿದೆ. ದೇವರಾತ್ಮನು ನಿಮ್ಮೊಳಗೆ ವಾಸವಾಗಿದ್ದಾನೆ.
1 ಕೊರಿಂಥದವರಿಗೆ 3 : 17 (ERVKN)
ಯಾವನಾದರೂ ದೇವರ ಆಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪರಿಶುದ್ಧವಾದದ್ದು. ನೀವೇ ದೇವರ ಆಲಯವಾಗಿದ್ದೀರಿ.
1 ಕೊರಿಂಥದವರಿಗೆ 3 : 18 (ERVKN)
ನಿಮಗೆ ನೀವೇ ಮೋಸಮಾಡಿಕೊಳ್ಳಬೇಡಿ. ನಿಮ್ಮಲ್ಲಿರುವ ಯಾವನಾದರೂ ತಾನು ಈ ಲೋಕದಲ್ಲಿ ಜ್ಞಾನಿಯೆಂದು ಆಲೋಚಿಸಿಕೊಂಡರೆ ಅವನು ಮೂಢನಾಗಲೇಬೇಕು. ಆಗ ಆ ವ್ಯಕ್ತಿಯು ನಿಜವಾಗಿಯೂ ಜ್ಞಾನಿಯಾಗಬಲ್ಲನು.
1 ಕೊರಿಂಥದವರಿಗೆ 3 : 19 (ERVKN)
ಏಕೆಂದರೆ ಈ ಲೋಕದ ಜ್ಞಾನವು ದೇವರಿಗೆ ಮೂರ್ಖತನವಾಗಿದೆ. “ದೇವರು ಜಾಣರನ್ನು ಅವರ ಕುತಂತ್ರದ ಮಾರ್ಗಗಳಲ್ಲೇ ಹಿಡಿದುಕೊಳ್ಳುವನು” ಉಲ್ಲೇಖನ: ಯೋಬ 5:13. ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ.
1 ಕೊರಿಂಥದವರಿಗೆ 3 : 20 (ERVKN)
“ಪ್ರಭುವು ಜ್ಞಾನಿಗಳ ಆಲೋಚನೆಗಳನ್ನು ತಿಳಿದಿದ್ದಾನೆ. ಅವರ ಆಲೋಚನೆಗಳು ನಿಷ್ಪ್ರಯೋಜಕವೆಂದು ಆತನಿಗೆ ಗೊತ್ತಿದೆ” ಉಲ್ಲೇಖನ: ಕೀರ್ತನೆ. 94:11. ಎಂದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ.
1 ಕೊರಿಂಥದವರಿಗೆ 3 : 21 (ERVKN)
ಆದ್ದರಿಂದ ನೀವು ಜನರ ಬಗ್ಗೆ ಹೆಚ್ಚಳಪಡಬಾರದು. ಸಮಸ್ತವೂ ನಿಮ್ಮದೇ.
1 ಕೊರಿಂಥದವರಿಗೆ 3 : 22 (ERVKN)
ಪೌಲ, ಅಪೊಲ್ಲೋಸ್ ಮತ್ತು ಕೇಫ ನಿಮ್ಮವರಾಗಿದ್ದಾರೆ. ಜಗತ್ತು, ಜೀವ, ಮರಣ ಮತ್ತು ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ಸಂಗತಿಗಳು ನಿಮ್ಮವೇ.
1 ಕೊರಿಂಥದವರಿಗೆ 3 : 23 (ERVKN)
ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ. ಕ್ರಿಸ್ತನು ದೇವರಿಗೆ ಸೇರಿದವನಾಗಿದ್ದಾನೆ.

1 2 3 4 5 6 7 8 9 10 11 12 13 14 15 16 17 18 19 20 21 22 23