1 ಕೊರಿಂಥದವರಿಗೆ 15 : 1 (ERVKN)
ಕ್ರಿಸ್ತನ ವಿಷಯವಾದ ಸುವಾರ್ತೆ ಸಹೋದರ ಸಹೋದರಿಯರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನೀವು ಜ್ಞಾಪಿಸಿಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿಕೊಂಡಿರಿ ಮತ್ತು ಅದರಲ್ಲಿ ದೃಢವಾಗಿದ್ದೀರಿ.
1 ಕೊರಿಂಥದವರಿಗೆ 15 : 2 (ERVKN)
ನೀವು ಆ ಸಂದೇಶದ ಮೂಲಕ ರಕ್ಷಣೆ ಹೊಂದಿದ್ದೀರಿ. ನಾನು ನಿಮಗೆ ತಿಳಿಸಿದ ಸಂದೇಶದಲ್ಲಿ ನಿಮಗೆ ದೃಢವಾದ ನಂಬಿಕೆ ಇರಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮ ನಂಬಿಕೆಯು ನಿರರ್ಥಕವಾಗುವುದು.
1 ಕೊರಿಂಥದವರಿಗೆ 15 : 3 (ERVKN)
ನಾನು ಸ್ವೀಕರಿಸಿಕೊಂಡ ಸಂದೇಶವನ್ನು ನಾನು ನಿಮಗೆ ತಿಳಿಸಿದೆನು. ಆ ಸಂಗತಿಗಳು ಬಹಳ ಮುಖ್ಯವಾದುವುಗಳಾಗಿವೆ. ಪವಿತ್ರ ಗ್ರಂಥವು ಹೇಳುವಂತೆ, ಕ್ರಿಸ್ತನು ನಮ್ಮ ಪಾಪಗಳಿಗೋಸ್ಕರವಾಗಿ ಸತ್ತು
1 ಕೊರಿಂಥದವರಿಗೆ 15 : 4 (ERVKN)
ಹೂಳಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬಂದನು.
1 ಕೊರಿಂಥದವರಿಗೆ 15 : 5 (ERVKN)
ಬಳಿಕ ಕ್ರಿಸ್ತನು ಪೇತ್ರನಿಗೆ ಕಾಣಿಸಿಕೊಂಡನು. ಅನಂತರ ಹನ್ನೆರಡು ಮಂದಿ ಅಪೊಸ್ತಲರಿಗೆ ಕಾಣಿಸಿಕೊಂಡನು.
1 ಕೊರಿಂಥದವರಿಗೆ 15 : 6 (ERVKN)
ತರುವಾಯ, ಒಂದೇ ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು. ಈ ಸಹೋದರರಲ್ಲಿ ಬಹುಮಂದಿ ಇಂದಿನವರೆಗೂ ಬದುಕಿದ್ದಾರೆ. ಆದರೆ ಕೆಲವರು ಸತ್ತುಹೋದರು.
1 ಕೊರಿಂಥದವರಿಗೆ 15 : 7 (ERVKN)
ಬಳಿಕ ಕ್ರಿಸ್ತನು ಯಾಕೋಬನಿಗೆ ಕಾಣಿಸಿಕೊಂಡನು. ಅನಂತರ ಮತ್ತೊಮ್ಮೆ ಎಲ್ಲಾ ಅಪೊಸ್ತಲರಿಗೆ ಕಾಣಿಸಿಕೊಂಡನು.
1 ಕೊರಿಂಥದವರಿಗೆ 15 : 8 (ERVKN)
ಕಟ್ಟಕಡೆಗೆ, ಕ್ರಿಸ್ತನು, ದಿನ ತುಂಬುವ ಮೊದಲೇ ಹುಟ್ಟಿದಂತಿದ್ದ ನನಗೆ ಕಾಣಿಸಿಕೊಂಡನು.
1 ಕೊರಿಂಥದವರಿಗೆ 15 : 9 (ERVKN)
ಉಳಿದೆಲ್ಲಾ ಅಪೊಸ್ತಲರು ನನಗಿಂತಲೂ ಶ್ರೇಷ್ಠರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ಆದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳುವುದಕ್ಕೂ ನಾನು ಯೋಗ್ಯನಲ್ಲ.
1 ಕೊರಿಂಥದವರಿಗೆ 15 : 10 (ERVKN)
ಆದರೆ, ದೇವರ ಕೃಪೆಯಿಂದ ನಾನು ಅಪೊಸ್ತಲನಾಗಿದ್ದೇನೆ. ಆತನು ನನಗೆ ತೋರಿದ ಕೃಪೆಯು ನಿಷ್ಛಲವಾಗಲಿಲ್ಲ. ಉಳಿದೆಲ್ಲ ಅಪೊಸ್ತಲರಿಗಿಂತ ನಾನು ಹೆಚ್ಚು ಕಷ್ಟಪಟ್ಟು ಸೇವೆ ಮಾಡಿದ್ದೇನೆ. (ಆದರೆ ಸೇವೆ ಮಾಡುತ್ತಿದ್ದವನು ನಿಜವಾಗಿಯೂ ನಾನಲ್ಲ ದೇವರ ಕೃಪೆಯೇ ನನ್ನೊಂದಿಗಿತ್ತು.)
1 ಕೊರಿಂಥದವರಿಗೆ 15 : 11 (ERVKN)
ಆದ್ದರಿಂದ ನಾನು ಬೋಧನೆ ಮಾಡಿದೆನೊ ಅಥವಾ ಇತರ ಅಪೊಸ್ತಲರು ಬೋಧನೆ ಮಾಡಿದರೊ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಒಂದೇ ಸಂದೇಶವನ್ನು ಬೋಧಿಸುತ್ತೇವೆ ಮತ್ತು ನೀವು ನಂಬಿರುವುದೂ ಅದನ್ನೇ.
1 ಕೊರಿಂಥದವರಿಗೆ 15 : 12 (ERVKN)
ನಾವು ಪುನರುತ್ಥಾನ ಹೊಂದುವೆವು ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ನಾವು ಬೋಧಿಸಿದ್ದೇವೆ. ಹೀಗಿರಲಾಗಿ, ಜನರಿಗೆ ಪುನರುತ್ಥಾನವಿಲ್ಲವೆಂದು ನಿಮ್ಮಲ್ಲಿ ಕೆಲವರು ಹೇಳುತ್ತಿರುವುದೇಕೆ?
1 ಕೊರಿಂಥದವರಿಗೆ 15 : 13 (ERVKN)
ಜನರಿಗೆ ಪುನರುತ್ಥಾನವಿಲ್ಲದಿದ್ದರೆ ಕ್ರಿಸ್ತನು ಸಹ ಸತ್ತವರೊಳಗಿಂದ ಎದ್ದೇಬಂದಿಲ್ಲ.
1 ಕೊರಿಂಥದವರಿಗೆ 15 : 14 (ERVKN)
ಕ್ರಿಸ್ತನು ಎದ್ದೇಬಂದಿಲ್ಲವಾದರೆ ನಮ್ಮ ಬೋಧನೆಗೂ ನಿಮ್ಮ ನಂಬಿಕೆಗೂ ಯಾವ ಬೆಲೆಯೂ ಇಲ್ಲ.
1 ಕೊರಿಂಥದವರಿಗೆ 15 : 15 (ERVKN)
ಅಲ್ಲದೆ, ದೇವರ ಬಗ್ಗೆ ನಾವು ಸುಳ್ಳುಸಾಕ್ಷಿ ಹೇಳಿದಂತಾಗುವುದು. ಏಕೆಂದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಿದನೆಂದು ನಾವು ದೇವರ ಬಗ್ಗೆ ಬೋಧಿಸಿದೆವು. ಜನರು ಜೀವಂತವಾಗಿ ಎದ್ದುಬರದಿದ್ದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಲೇ ಇಲ್ಲ.
1 ಕೊರಿಂಥದವರಿಗೆ 15 : 16 (ERVKN)
ಸತ್ತುಹೋದ ಜನರು ಎಬ್ಬಿಸಲ್ಪಡದಿದ್ದರೆ, ಕ್ರಿಸ್ತನು ಸಹ ಎಬ್ಬಿಸಲ್ಪಡಲೇ ಇಲ್ಲ.
1 ಕೊರಿಂಥದವರಿಗೆ 15 : 17 (ERVKN)
ಕ್ರಿಸ್ತನು ಜೀವಂತವಾಗಿ ಎಬ್ಬಿಸಲ್ಪಟ್ಟಿಲ್ಲದಿದ್ದರೆ, ನಿಮ್ಮ ನಂಬಿಕೆಯು ನಿಷ್ಪ್ರಯೋಜಕವಾಗಿದೆ ಮತ್ತು ನೀವು ನಿಮ್ಮ ಪಾಪಗಳಿಂದ ಇನ್ನೂ ಅಪರಾಧಿಗಳಾಗಿದ್ದೀರಿ.
1 ಕೊರಿಂಥದವರಿಗೆ 15 : 18 (ERVKN)
ಇದಲ್ಲದೆ ಕ್ರಿಸ್ತನಲ್ಲಿದ್ದು ಸತ್ತುಹೋದವರು ನಾಶವಾಗಿದ್ದಾರೆ.
1 ಕೊರಿಂಥದವರಿಗೆ 15 : 19 (ERVKN)
ನಮಗೆ ಕ್ರಿಸ್ತನಲ್ಲಿರುವ ನಿರೀಕ್ಷೆಯು ಈ ಲೋಕಕ್ಕೆ ಮಾತ್ರ ಸೀಮಿತವಾಗಿದ್ದರೆ, ನಾವು ಬೇರೆಲ್ಲ ಜನರಿಗಿಂತಲೂ ದುಃಖಕ್ಕೆ ಪಾತ್ರರಾಗಿದ್ದೇವೆ.
1 ಕೊರಿಂಥದವರಿಗೆ 15 : 20 (ERVKN)
ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು.
1 ಕೊರಿಂಥದವರಿಗೆ 15 : 21 (ERVKN)
ಒಬ್ಬ ಮನುಷ್ಯನು (ಆದಾಮನು) ಮಾಡಿದ ಕಾರ್ಯದಿಂದಾಗಿ ಜನರು ಮರಣ ಹೊಂದುವಂತೆಯೇ ಒಬ್ಬ ಮನುಷ್ಯನ (ಕ್ರಿಸ್ತನ) ಮೂಲಕವಾಗಿಯೇ ಜನರು ಜೀವಂತವಾಗಿ ಎದ್ದುಬರುವರು.
1 ಕೊರಿಂಥದವರಿಗೆ 15 : 22 (ERVKN)
ಆದಾಮನ ಸಂಬಂಧದಿಂದ ಎಲ್ಲರೂ ಸಾಯುತ್ತಾರೆ. ಇದೇರೀತಿ ಕ್ರಿಸ್ತನ ಸಂಬಂಧದಿಂದ ನಾವೆಲ್ಲರೂ ಮತ್ತೆ ಜೀವಂತರಾಗುತ್ತೇವೆ.
1 ಕೊರಿಂಥದವರಿಗೆ 15 : 23 (ERVKN)
ಆದರೆ ಪ್ರತಿಯೊಬ್ಬನು ಕ್ರಮಬದ್ಧ ರೀತಿಯಲ್ಲಿ ಜೀವಂತವಾಗಿ ಎದ್ದುಬರುವನು. ಮೊಟ್ಟಮೊದಲನೆಯದಾಗಿ ಕ್ರಿಸ್ತನೇ ಎದ್ದುಬಂದನು. ಕ್ರಿಸ್ತನು ಮತ್ತೆ ಬರುವಾಗ ಕ್ರಿಸ್ತನಿಗೆ ಸೇರಿದ ಜನರು ಜೀವಂತವಾಗಿ ಎದ್ದುಬರುವರು.
1 ಕೊರಿಂಥದವರಿಗೆ 15 : 24 (ERVKN)
ಅನಂತರ ಅಂತ್ಯ ಬರುವುದು. ಕ್ರಿಸ್ತನು ಎಲ್ಲಾ ಅಧಿಪತಿಗಳನ್ನು, ಅಧಿಕಾರಗಳನ್ನು ಮತ್ತು ಶಕ್ತಿಗಳನ್ನು ನಾಶಮಾಡುವನು. ಬಳಿಕ ಕ್ರಿಸ್ತನು ತಂದೆಯಾದ ದೇವರಿಗೆ ರಾಜ್ಯವನ್ನು ಕೊಡುವನು.
1 ಕೊರಿಂಥದವರಿಗೆ 15 : 25 (ERVKN)
ದೇವರು ಎಲ್ಲಾ ಶತ್ರುಗಳನ್ನು ಕ್ರಿಸ್ತನಿಗೆ ಅಧೀನಗೊಳಿಸುವ ತನಕ ಕ್ರಿಸ್ತನು ಆಳಲೇಬೇಕು.
1 ಕೊರಿಂಥದವರಿಗೆ 15 : 26 (ERVKN)
ನಾಶವಾಗುವ ಕಡೆಯ ಶತ್ರುವೆಂದರೆ ಮರಣವೇ.
1 ಕೊರಿಂಥದವರಿಗೆ 15 : 27 (ERVKN)
“ದೇವರು ಸಮಸ್ತವನ್ನು ಆತನಿಗೆ ಅಧೀನಗೊಳಿಸುತ್ತಾನೆ” ಉಲ್ಲೇಖನ: ಕೀರ್ತನೆ. 8:6. ಎಂದು ಪವಿತ್ರಗ್ರಂಥವು ಹೇಳುತ್ತದೆ. “ಸಮಸ್ತವನ್ನು” ಕ್ರಿಸ್ತನಿಗೆ ಅಧೀನಗೊಳಿಸುತ್ತಾನೆಂದು ಹೇಳುವಾಗ, ಅದು ದೇವರನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮಸ್ತವನ್ನು ಕ್ರಿಸ್ತನಿಗೆ ಅಧೀನಗೊಳಿಸಿದಾತನು ದೇವರೇ.
1 ಕೊರಿಂಥದವರಿಗೆ 15 : 28 (ERVKN)
ಸಮಸ್ತವು ತನ್ನ ಅಧೀನಕ್ಕೆ ಬಂದ ಮೇಲೆ, ಕ್ರಿಸ್ತನು ತನ್ನನ್ನೇ ದೇವರಿಗೆ ಅಧೀನಪಡಿಸಿಕೊಳ್ಳುವನು. ಸಮಸ್ತವನ್ನು ಕ್ರಿಸ್ತನಿಗೆ ಅಧೀನಪಡಿಸಿದಾತನು ದೇವರೇ. ಹೀಗೆ ದೇವರು ಸಮಸ್ತಕ್ಕೂ ಸರ್ವಾಧಿಪತಿಯಾಗುವನು.
1 ಕೊರಿಂಥದವರಿಗೆ 15 : 29 (ERVKN)
ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತುಹೋದವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಂಡ ಜನರು ಏನು ಮಾಡುವರು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಜನರು ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದೇಕೆ?
1 ಕೊರಿಂಥದವರಿಗೆ 15 : 30 (ERVKN)
ನಮ್ಮ ವಿಷಯವೇನು? ನಾವು ನಮ್ಮನ್ನು ಪ್ರತಿ ತಾಸಿನಲ್ಲಿಯೂ ಅಪಾಯಕ್ಕೆ ಒಡ್ಡುವುದು ಏಕೆ?
1 ಕೊರಿಂಥದವರಿಗೆ 15 : 31 (ERVKN)
ನಾನು ಪ್ರತಿದಿನವೂ ಸಾಯುತ್ತೇನೆ. ಸಹೋದರರೇ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ಬಗ್ಗೆ ಹೆಮ್ಮೆಪಡುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅದಾಗಿದೆ.
1 ಕೊರಿಂಥದವರಿಗೆ 15 : 32 (ERVKN)
ಕೇವಲ ನನ್ನ ಮಾನುಷ ಸ್ವಭಾವದಿಂದ ನಾನು ಎಫೆಸದಲ್ಲಿ ದುಷ್ಟಮೃಗಗಳೊಂದಿಗೆ ಹೋರಾಡಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, “ತಿನ್ನೋಣ, ಕುಡಿಯೋಣ, ಏಕೆಂದರೆ ನಾವು ನಾಳೆ ಸಾಯುತ್ತೇವೆ.”
1 ಕೊರಿಂಥದವರಿಗೆ 15 : 33 (ERVKN)
ಮೋಸ ಹೋಗಬೇಡಿರಿ. “ದುರ್ಜನರ ಸಹವಾಸ ಸದಾಚಾರದ ಭಂಗ.”
1 ಕೊರಿಂಥದವರಿಗೆ 15 : 34 (ERVKN)
ಸ್ವಸ್ಥಚಿತ್ತರಾಗಿರಿ ಮತ್ತು ಪಾಪಮಾಡುವುದನ್ನು ನಿಲ್ಲಿಸಿರಿ. ನಿಮ್ಮಲ್ಲಿ ಕೆಲವರು ದೇವರನ್ನು ಅರಿತುಕೊಂಡಿಲ್ಲ. ನಿಮಗೆ ನಾಚಿಕೆ ಆಗಲೆಂದು ಇದನ್ನು ಹೇಳುತ್ತಿದ್ದೇನೆ. ಯಾವ ಬಗೆಯ ದೇಹವನ್ನು ನಾವು ಹೊಂದಿಕೊಳ್ಳುವೆವು?
1 ಕೊರಿಂಥದವರಿಗೆ 15 : 35 (ERVKN)
“ಸತ್ತವರು ಹೇಗೆ ಎದ್ದುಬರುವರು? ಅವರಿಗೆ ಯಾವ ಬಗೆಯ ದೇಹವಿರುತ್ತದೆ?” ಎಂದು ಕೆಲವರು ಕೇಳಬಹುದು.
1 ಕೊರಿಂಥದವರಿಗೆ 15 : 36 (ERVKN)
ಅವು ಮೂಢ ಪ್ರಶ್ನೆಗಳು. ನೀವು ಬೀಜವನ್ನು ಬಿತ್ತಿದಾಗ, ಆ ಬೀಜವು ಜೀವ ಹೊಂದಿಕೊಂಡು ಬೆಳೆಯುವುದಕ್ಕಿಂತ ಮುಂಚೆ ಸಾಯಲೇಬೇಕು.
1 ಕೊರಿಂಥದವರಿಗೆ 15 : 37 (ERVKN)
ನೀವು ಬೀಜವನ್ನು ಬಿತ್ತುವಾಗ, ಆ ಬೀಜವು ಕೇವಲ ಕಾಳಾಗಿರುತ್ತದೆಯೇ ಹೊರತು ಮುಂದೆ ಹುಟ್ಟಿ ಬರಲಿರುವ ಗಿಡವಾಗಿರುವುದಿಲ್ಲ. ನೀವು ಬಿತ್ತುವ ಬೀಜವು ಕೇವಲ ಕಾಳಷ್ಟೆ. ಅದು ಗೋಧಿಯಾಗಿರಬಹುದು ಅಥವಾ ಬೇರೆ ಕಾಳಾಗಿರಬಹುದು.
1 ಕೊರಿಂಥದವರಿಗೆ 15 : 38 (ERVKN)
ಅದರೆ ದೇವರು ತನ್ನ ಯೋಜನೆಗನುಸಾರವಾಗಿ ಅದಕ್ಕೆ ದೇಹವನ್ನು ಕೊಡುತ್ತಾನೆ ಮತ್ತು ದೇವರು ಪ್ರತಿಯೊಂದು ಬಗೆಯ ಬೀಜಕ್ಕೆ ಅದರದೇ ಆದ ದೇಹವನ್ನು ಕೊಡುತ್ತಾನೆ.
1 ಕೊರಿಂಥದವರಿಗೆ 15 : 39 (ERVKN)
ಎಲ್ಲಾ ಶರೀರಗಳು ಒಂದೇ ರೀತಿಯ ಮಾಂಸವನ್ನು ಹೊಂದಿರುವುದಿಲ್ಲ. ಜನರಿಗೆ ಒಂದು ಬಗೆಯ ಮಾಂಸವಿರುತ್ತದೆ; ಪ್ರಾಣಿಗಳಿಗೆ ಮತ್ತೊಂದು ಬಗೆಯ ಮಾಂಸವಿರುತ್ತದೆ; ಪಕ್ಷಿಗಳಿಗೆ ಇನ್ನೊಂದು ಬಗೆಯ ಮಾಂಸವಿರುತ್ತದೆ. ಮೀನುಗಳು ಬೇರೊಂದು ರೀತಿಯ ಮಾಂಸವನ್ನು ಹೊಂದಿರುತ್ತವೆ.
1 ಕೊರಿಂಥದವರಿಗೆ 15 : 40 (ERVKN)
ಇದಲ್ಲದೆ ಪರಲೋಕದ ಶರೀರಗಳಿವೆ ಮತ್ತು ಭೂಲೋಕದ ಶರೀರಗಳಿವೆ. ಪರಲೋಕದ ಶರೀರಗಳಿಗೆ ಒಂದು ಬಗೆಯ ಸೌಂದರ್ಯವಿರುತ್ತದೆ. ಭೂಲೋಕದ ಶರೀರಗಳಿಗೆ ಮತ್ತೊಂದು ಬಗೆಯ ಸೌಂದರ್ಯವಿರುತ್ತದೆ.
1 ಕೊರಿಂಥದವರಿಗೆ 15 : 41 (ERVKN)
ಸೂರ್ಯನಿಗೆ ಒಂದು ಬಗೆಯ ಸೌಂದರ್ಯವಿದೆ; ಚಂದ್ರನಿಗೆ ಮತ್ತೊಂದು ಬಗೆಯ ಸೌಂದರ್ಯವಿದೆ. ನಕ್ಷತ್ರಗಳಿಗೆ ಇನ್ನೊಂದು ಬಗೆಯ ಸೌಂದರ್ಯವಿದೆ. ಪ್ರತಿಯೊಂದು ನಕ್ಷತ್ರವು ತನ್ನದೇ ಆದ ಸೌಂದರ್ಯವನ್ನು ಹೊಂದಿದೆ.
1 ಕೊರಿಂಥದವರಿಗೆ 15 : 42 (ERVKN)
ಸತ್ತವರಿಗಾಗುವ ಪುನರುತ್ಥಾನವು ಅದೇ ರೀತಿಯಾಗಿರುವುದು. ಬಿತ್ತಲ್ಪಟ್ಟ ದೇಹವು ಹಾಳಾಗುವುದು ಮತ್ತು ಕೊಳೆತು ಹೋಗುವುದು. ಆದರೆ ಜೀವಂತವಾಗಿ ಎದ್ದುಬರುವ ಆ ದೇಹವನ್ನು ನಾಶಮಾಡಲು ಸಾಧ್ಯವೇ ಇಲ್ಲ.
1 ಕೊರಿಂಥದವರಿಗೆ 15 : 43 (ERVKN)
ದೇಹವು ಹೀನಾವಸ್ಥೆಯಲ್ಲಿ ಬಿತ್ತಲ್ಪಡುವುದು, ಆದರೆ ಮಹಿಮೆಯೊಡನೆ ಎದ್ದುಬರುವುದು. ದೇಹವು ಬಿತ್ತಲ್ಪಟ್ಟಾಗ, ಅದು ಬಲಹೀನವಾಗಿರುತ್ತದೆ. ಆದರೆ ಅದು ಎದ್ದುಬಂದಾಗ ಅದಕ್ಕೆ ಶಕ್ತಿಯಿರುತ್ತದೆ.
1 ಕೊರಿಂಥದವರಿಗೆ 15 : 44 (ERVKN)
ಬಿತ್ತಲ್ಪಟ್ಟ ದೇಹವು ಭೌತಿಕವಾದದ್ದು. ಆದರೆ ಅದು ಎದ್ದುಬಂದಾಗ, ಆತ್ಮಿಕ ದೇಹವಾಗಿರುತ್ತದೆ. ಭೌತಿಕ ದೇಹವಿದೆ. ಆದ್ದರಿಂದ ಆತ್ಮಿಕ ದೇಹವೂ ಇದೆ.
1 ಕೊರಿಂಥದವರಿಗೆ 15 : 45 (ERVKN)
“ಮೊದಲನೆ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು” ಉಲ್ಲೇಖನ: ಆದಿಕಾಂಡ 2:7. ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. ಆದರೆ ಕೊನೆಯ ಆದಾಮನು (ಕ್ರಿಸ್ತನು) ಜೀವಕೊಡುವ ಜೀವಾತ್ಮನಾದನು.
1 ಕೊರಿಂಥದವರಿಗೆ 15 : 46 (ERVKN)
ಮೊದಲು ಬಂದವನು ಆತ್ಮಿಕ ಮನುಷ್ಯನಲ್ಲ, ಅವನು ಪ್ರಾಕೃತ ಮನುಷ್ಯ. ಅನಂತರ ಆತ್ಮಿಕ ಮನುಷ್ಯನು ಬಂದನು.
1 ಕೊರಿಂಥದವರಿಗೆ 15 : 47 (ERVKN)
ಮೊದಲನೆಯ ಮನುಷ್ಯನು ಭೂಮಿಯ ಧೂಳಿನಿಂದ ಬಂದನು. ಆದರೆ ಎರಡನೆಯ ಮನುಷ್ಯನು (ಕ್ರಿಸ್ತನು) ಪರಲೋಕದಿಂದ ಬಂದನು.
1 ಕೊರಿಂಥದವರಿಗೆ 15 : 48 (ERVKN)
ಜನರು ಭೂಮಿಗೆ ಸಂಬಂಧಪಟ್ಟವರು. ಅವರು ಭೂಮಿಯ ಮೊದಲನೆ ಮನುಷ್ಯನಂತಿದ್ದಾರೆ. ಆದರೆ ಪರಲೋಕಕ್ಕೆ ಸಂಬಂಧಪಟ್ಟವರು ಪರಲೋಕದ ಮನುಷ್ಯನಂತಿದ್ದಾರೆ.
1 ಕೊರಿಂಥದವರಿಗೆ 15 : 49 (ERVKN)
ಭೂಮಿಯ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಂಡೆವು. ಆದ್ದರಿಂದ ಪರಲೋಕದ ಆ ಮನುಷ್ಯನಂತೆಯೇ ನಾವು ನಿರ್ಮಾಣಗೊಳ್ಳುವೆವು.
1 ಕೊರಿಂಥದವರಿಗೆ 15 : 50 (ERVKN)
ಸಹೋದರ ಸಹೋದರಿಯರೇ, ನಾನು ಹೇಳುವುದೇನೆಂದರೆ, ಮಾಂಸ ಮತ್ತು ರಕ್ತ (ಭೌತಿಕ ದೇಹ) ಪರಲೋಕ ರಾಜ್ಯದಲ್ಲಿ ಪಾಲುಹೊಂದಲು ಸಾಧ್ಯವಿಲ್ಲ. ನಾಶವಾಗುವಂಥದ್ದು ಎಂದಿಗೂ ನಾಶವಾಗದ ಒಂದರಲ್ಲಿ ಪಾಲುಹೊಂದಲು ಸಾಧ್ಯವಿಲ್ಲ.
1 ಕೊರಿಂಥದವರಿಗೆ 15 : 51 (ERVKN)
ಆದರೆ ಕೇಳಿರಿ, ನಾನು ನಿಮಗೆ ಈ ರಹಸ್ಯವೊಂದನ್ನು ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಆದರೆ ನಾವೆಲ್ಲರೂ ಮಾರ್ಪಾಟಾಗುವೆವು.
1 ಕೊರಿಂಥದವರಿಗೆ 15 : 52 (ERVKN)
ಇದಕ್ಕೆ ಕೇವಲ ಒಂದು ಕ್ಷಣಕಾಲ ಸಾಕು. ರೆಪ್ಪೆಬಡಿಯುವಷ್ಟು ವೇಗವಾಗಿ ನಾವು ಮಾರ್ಪಾಟಾಗುವೆವು. ಕಡೇ ತುತ್ತೂರಿಯನ್ನು ಊದಿದಾಗ ಇದು ಸಂಭವಿಸುವುದು. ತುತ್ತೂರಿಯನ್ನು ಊದಲಾಗುವುದು; ಆಗ ಸತ್ತುಹೋಗಿದ್ದ ವಿಶ್ವಾಸಿಗಳು ಸದಾಕಾಲ ಜೀವಿಸುವುದಕ್ಕಾಗಿ ಎಬ್ಬಿಸಲ್ಪಡುವರು ಮತ್ತು ನಾವು ಮಾರ್ಪಾಟಾಗುವೆವು.
1 ಕೊರಿಂಥದವರಿಗೆ 15 : 53 (ERVKN)
ಅಳಿದುಹೋಗುವ ಈ ದೇಹವು ಅಳಿದುಹೋಗದ್ದನ್ನು ಧರಿಸಿಕೊಳ್ಳುವುದು. ಮರಣಾಧೀನವಾದ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು.
1 ಕೊರಿಂಥದವರಿಗೆ 15 : 54 (ERVKN)
ಅಳಿದುಹೋಗುವ ಈ ದೇಹ ಅಮರತ್ವವನ್ನು ಧರಿಸಿಕೊಂಡಾಗ ಪವಿತ್ರಗ್ರಂಥದ ಈ ಮಾತುಗಳು ನೆರವೇರುತ್ತವೆ: “ಮರಣವು ಜಯದಲ್ಲಿ ನುಂಗಿಯೇಹೋಯಿತು.” ಯೆಶಾಯ 25:8]
1 ಕೊರಿಂಥದವರಿಗೆ 15 : 55 (ERVKN)
“ಮರಣವೇ, ನಿನ್ನ ಜಯವೆಲ್ಲಿ?
ಮರಣವೇ, ಕೇಡುಮಾಡುವ ನಿನ್ನ ಶಕ್ತಿ ಎಲ್ಲಿ?” ಹೋಶೇಯ 13:14
1 ಕೊರಿಂಥದವರಿಗೆ 15 : 56 (ERVKN)
ಕೇಡುಮಾಡಲು ಮರಣಕ್ಕಿರುವ ಶಕ್ತಿಯು ಪಾಪವೇ. ಪಾಪದ ಶಕ್ತಿಯು ಧರ್ಮಶಾಸ್ತ್ರವೇ.
1 ಕೊರಿಂಥದವರಿಗೆ 15 : 57 (ERVKN)
ಆದರೆ ನಾವು ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ಆತನು ನಮಗೆ ಜಯವನ್ನು ಕೊಡುತ್ತಾನೆ.
1 ಕೊರಿಂಥದವರಿಗೆ 15 : 58 (ERVKN)
ಆದ್ದರಿಂದ, ನನ್ನ ಪ್ರಿಯ ಸಹೋದರ ಸಹೋದರಿಯರೇ, ದೃಢವಾಗಿರಿ, ನಿಶ್ಚಲರಾಗಿರಿ. ಪ್ರಭುವಿನ ಸೇವೆಗಾಗಿ ನಿಮ್ಮನ್ನು ಯಾವಾಗಲೂ ಸಂಪೂರ್ಣವಾಗಿ ಪ್ರತಿಷ್ಠಿಸಿಕೊಳ್ಳಿರಿ. ನೀವು ಪ್ರಭುವಿಗಾಗಿ ಪಡುವ ಪ್ರಯಾಸವು ಎಂದಿಗೂ ವ್ಯರ್ಥವಾಗುವುದಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58