1 ಕೊರಿಂಥದವರಿಗೆ 14 : 1 (ERVKN)
ಸಭೆಯ ಸಹಾಯಕ್ಕಾಗಿ ಆತ್ಮಿಕ ವರಗಳನ್ನು ಉಪಯೋಗಿಸಿರಿ ಪ್ರೀತಿಯೇ ನಿಮ್ಮ ಗುರಿಯಾಗಿರಲಿ. ಅಲ್ಲದೆ ಪವಿತ್ರಾತ್ಮನ ವರಗಳನ್ನು ಹೊಂದಿಕೊಳ್ಳಲು ವಿಶೇಷವಾಗಿ ಪ್ರವಾದಿಸುವ ವರವನ್ನು ಬಹಳವಾಗಿ ಅಪೇಕ್ಷಿಸಬೇಕು.
1 ಕೊರಿಂಥದವರಿಗೆ 14 : 2 (ERVKN)
ಅದಕ್ಕೆ ಕಾರಣವೇನೆಂದರೆ: ಪರಭಾಷೆಯಲ್ಲಿ ಮಾತಾಡುವ ವರವನ್ನು ಹೊಂದಿರುವವನು ಜನರೊಂದಿಗೆ ಮಾತಾಡುವುದಿಲ್ಲ. ಅವನು ದೇವರೊಂದಿಗೆ ಮಾತಾಡುತ್ತಾನೆ. ಯಾರೂ ಅವನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಪವಿತ್ರಾತ್ಮನ ಮೂಲಕವಾಗಿ ರಹಸ್ಯ ಸಂಗತಿಗಳನ್ನು ಮಾತಾಡುತ್ತಿರುತ್ತಾನೆ.
1 ಕೊರಿಂಥದವರಿಗೆ 14 : 3 (ERVKN)
ಆದರೆ ಪ್ರವಾದಿಸುವವನು ಜನರೊಂದಿಗೆ ಮಾತಾಡುತ್ತಾನೆ. ಅವನು ಜನರಿಗೆ ಶಕ್ತಿಯನ್ನು, ಪ್ರೋತ್ಸಾಹವನ್ನು ಮತ್ತು ಆದರಣೆಯನ್ನು ಕೊಡುತ್ತಾನೆ.
1 ಕೊರಿಂಥದವರಿಗೆ 14 : 4 (ERVKN)
ಪರಭಾಷೆಯಲ್ಲಿ ಮಾತಾಡುವ ವ್ಯಕ್ತಿಯು ತನಗೆ ಮಾತ್ರ ಸಹಾಯ ಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಇಡೀ ಸಭೆಗೆ ಸಹಾಯ ಮಾಡುತ್ತಾನೆ.
1 ಕೊರಿಂಥದವರಿಗೆ 14 : 5 (ERVKN)
ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ನೀವೆಲ್ಲರೂ ಹೊಂದಿರಬೇಕೆಂದು ನನ್ನ ಅಪೇಕ್ಷೆಯಾಗಿದೆ. ಆದರೆ ನೀವು ಪ್ರವಾದಿಸಬೇಕೆಂದು ನಾನು ಇನ್ನೂ ಹೆಚ್ಚಾಗಿ ಅಪೇಕ್ಷಿಸುತ್ತೇನೆ. ಕೇವಲ ವಿವಿಧ ಭಾಷೆಗಳನ್ನು ಮಾತನಾಡುವವನಿಗಿಂತಲೂ ಪ್ರವಾದಿಸುವವನು ಹೆಚ್ಚು ಶ್ರೇಷ್ಠನಾಗಿದ್ದಾನೆ. ಆದರೆ ವಿವಿಧ ಭಾಷೆಗಳಲ್ಲಿ ಮಾತಾಡುವವನು ಆ ಭಾಷೆಗಳನ್ನು ಅನುವಾದಿಸಬಲ್ಲವನಾಗಿದ್ದರೆ, ಅವನು ಪ್ರವಾದಿಸುವವನಷ್ಟೇ ಶ್ರೇಷ್ಠನಾಗುತ್ತಾನೆ. ಆಗ ಅವನು ಹೇಳುವ ಸಂಗತಿಗಳ ಮೂಲಕ ಸಭೆಗೆ ಸಹಾಯವಾಗುವುದು.
1 ಕೊರಿಂಥದವರಿಗೆ 14 : 6 (ERVKN)
ಸಹೋದರ ಸಹೋದರಿಯರೇ, ನಾನು ವಿವಿಧ ಭಾಷೆಗಳನ್ನು ಮಾತಾಡುವವನಾಗಿ ನಿಮ್ಮ ಬಳಿಗೆ ಬಂದರೆ ಅದರಿಂದ ನಿಮಗೆ ಸಹಾಯವಾಗುವುದೇ? ಇಲ್ಲ! ನಾನು ನಿಮಗೆ ಹೊಸ ಸತ್ಯವನ್ನು, ಜ್ಞಾನವನ್ನು, ಪ್ರವಾದನೆಯನ್ನು ಮತ್ತು ಉಪದೇಶವನ್ನು ತಂದರೆ ಮಾತ್ರ ನಿಮಗೆ ಸಹಾಯವಾಗುತ್ತದೆ.
1 ಕೊರಿಂಥದವರಿಗೆ 14 : 7 (ERVKN)
ನಾದವನ್ನು ಹೊರಹೊಮ್ಮಿಸುವ ಕೊಳಲು ಅಥವಾ ವೀಣೆ ಮುಂತಾದ ನಿರ್ಜೀವ ವಸ್ತುಗಳಿಗೆ ಇದು ಸರಿಹೋಲುತ್ತದೆ. ವಿವಿಧ ಧ್ವನಿಗಳು ಸ್ಪಷ್ಟವಾಗಿಲ್ಲದಿದ್ದರೆ ಯಾವ ಹಾಡನ್ನು ನುಡಿಸಲಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಪ್ರತಿಯೊಂದು ಧ್ವನಿಯನ್ನು ಸ್ಪಷ್ಟವಾಗಿ ನುಡಿಸಿದಾಗ ಮಾತ್ರ ನೀವು ಸ್ವರವನ್ನು ಅರ್ಥಮಾಡಿಕೊಳ್ಳುವಿರಿ.
1 ಕೊರಿಂಥದವರಿಗೆ 14 : 8 (ERVKN)
ಇದಲ್ಲದೆ ಯುದ್ಧದಲ್ಲಿ ಕಹಳೆಯನ್ನು ಸ್ಪಷ್ಟವಾಗಿ ಊದದಿದ್ದರೆ, ಇದು ಯುದ್ಧಕ್ಕೆ ಸಿದ್ಧರಾಗುವ ಸಮಯವೆಂಬುದು ಸೈನಿಕರಿಗೆ ತಿಳಿಯುವುದಿಲ್ಲ.
1 ಕೊರಿಂಥದವರಿಗೆ 14 : 9 (ERVKN)
ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮ ನಾಲಿಗೆಯಿಂದ ಮಾತಾಡುವ ಪದಗಳು ಸ್ಪಷ್ಟವಾಗಿರಬೇಕು. ನೀವು ಸ್ಪಷ್ಟವಾಗಿ ಮಾತಾಡದಿದ್ದರೆ, ನೀವು ಏನು ಮಾತಾಡುತ್ತಿದ್ದೀರೆಂಬುದನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಗಾಳಿಯೊಂದಿಗೆ ಮಾತಾಡುತ್ತಿರುವಂತೆ ತೋರುವುದು.
1 ಕೊರಿಂಥದವರಿಗೆ 14 : 10 (ERVKN)
ಪ್ರಪಂಚದಲ್ಲಿ ಹಲವಾರು ಭಾಷೆಗಳಿರುವುದೇನೋ ಸತ್ಯ ಮತ್ತು ಆ ಭಾಷೆಗಳಿಗೆಲ್ಲಾ ಅರ್ಥವಿದೆ.
1 ಕೊರಿಂಥದವರಿಗೆ 14 : 11 (ERVKN)
ಆದ್ದರಿಂದ, ಒಬ್ಬ ವ್ಯಕ್ತಿಯು ಮಾತಾಡುವ ಭಾಷೆಯನ್ನು ನಾನು ಅರ್ಥಮಾಡಿಕೊಳ್ಳದಿದ್ದರೆ ಅವನು ನನಗೆ ವಿದೇಶಿಯನಂತಿರುವನು; ನಾನೂ ಅವನಿಗೆ ವಿದೇಶಿಯನಂತಿರುವೆನು.
1 ಕೊರಿಂಥದವರಿಗೆ 14 : 12 (ERVKN)
ಇದು ನಿಮಗೂ ಅನ್ವಯಿಸುತ್ತದೆ. ನೀವು ಆತ್ಮಿಕ ವರಗಳನ್ನು ಬಹಳವಾಗಿ ಅಪೇಕ್ಷಿಸುತ್ತೀರಿ. ಆದ್ದರಿಂದ, ಸಭೆಯು ದೃಢವಾಗಿ ಬೆಳೆಯಲು ಸಹಾಯಕರವಾದ ವರಗಳನ್ನು ಹೊಂದಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿರಿ.
1 ಕೊರಿಂಥದವರಿಗೆ 14 : 13 (ERVKN)
ಪರಭಾಷೆಯಲ್ಲಿ ಮಾತಾಡುವ ವರವುಳ್ಳವನು ತಾನು ಹೇಳುವ ವಿಷಯಗಳನ್ನು ಅನುವಾದಿಸುವ ಸಾಮರ್ಥ್ಯಕ್ಕಾಗಿಯೂ ದೇವರಲ್ಲಿ ಪ್ರಾರ್ಥಿಸಲಿ.
1 ಕೊರಿಂಥದವರಿಗೆ 14 : 14 (ERVKN)
ನಾನು ಪರಭಾಷೆಯಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಮನಸ್ಸು ತಟಸ್ಥವಾಗಿರುವುದು.
1 ಕೊರಿಂಥದವರಿಗೆ 14 : 15 (ERVKN)
ಆದ್ದರಿಂದ ನಾನೇನು ಮಾಡಬೇಕು? ನಾನು ನನ್ನ ಆತ್ಮದಿಂದಲೂ ಮನಸ್ಸಿನಿಂದಲೂ ಪ್ರಾರ್ಥಿಸುವೆನು; ನನ್ನ ಜೀವಾತ್ಮದೊಂದಿಗೂ ಮನಸ್ಸಿನೊಂದಿಗೂ ಹಾಡುವೆನು.
1 ಕೊರಿಂಥದವರಿಗೆ 14 : 16 (ERVKN)
ನೀನು ನಿನ್ನ ಜೀವಾತ್ಮದಿಂದ ಸುತ್ತಿಸಬಹದು. ಆದರೆ ಅಲ್ಲಿರುವ ಒಬ್ಬನು ನಿನ್ನ ಕೃತಜ್ಞತಾಸ್ತುತಿಯನ್ನು ಅರ್ಥಮಾಡಿಕೊಳ್ಳದ ಹೊರತು “ಆಮೆನ್” ಎಂದು ಹೇಳಲಾರನು. ಏಕೆಂದರೆ ನೀನು ಹೇಳುತ್ತಿರುವುದು ಅವನಿಗೆ ತಿಳಿಯುವುದಿಲ್ಲ.
1 ಕೊರಿಂಥದವರಿಗೆ 14 : 17 (ERVKN)
ಸತ್ಯವಾಗಿ ಹೇಳುವುದಾದರೆ, ದೇವರಿಗೆ ಮಾಡುವ ಕೃತಜ್ಞತಾಸ್ತುತಿಯಿಂದ ಬೇರೊಬ್ಬನಿಗೆ ಸಹಾಯವಾಗುವುದಿಲ್ಲ.
1 ಕೊರಿಂಥದವರಿಗೆ 14 : 18 (ERVKN)
ವಿವಿಧ ಭಾಷೆಗಳಲ್ಲಿ ಮಾತಾಡಲು ನಿಮ್ಮೆಲ್ಲರಿಗಿಂತಲೂ ಹೆಚ್ಚಿನ ವರವು ನನಗಿದೆ.
1 ಕೊರಿಂಥದವರಿಗೆ 14 : 19 (ERVKN)
ಆದರೆ ಸಭಾಕೂಟಗಳಲ್ಲಿ ಅರ್ಥವಾಗದಂಥ ಪರಭಾಷೆಯಲ್ಲಿ ಸಾವಿರಾರು ಮಾತುಗಳನ್ನು ಹೇಳುವುದಕ್ಕಿಂತ ಅರ್ಥವಾಗುವಂಥ ಕೆಲವೇ ಮಾತುಗಳನ್ನು ಹೇಳಲು ಇಷ್ಟಪಡುತ್ತೇನೆ. ಇತರರಿಗೆ ಉಪದೇಶ ಮಾಡುವುದಕ್ಕಾಗಿ ನಾನು ತಿಳುವಳಿಕೆಯಿಂದ ಮಾತಾಡುವೆನು.
1 ಕೊರಿಂಥದವರಿಗೆ 14 : 20 (ERVKN)
ಸಹೋದರ ಸಹೋದರಿಯರೇ, ಮಕ್ಕಳಂತೆ ಆಲೋಚಿಸಬೇಡಿ. ಕೆಟ್ಟ ವಿಷಯಗಳಲ್ಲಿ ಎಳೆಗೂಸುಗಳಂತಿರಿ. ಆದರೆ ನಿಮ್ಮ ಆಲೋಚನೆಗಳಲ್ಲಿ ಪ್ರಾಯಸ್ಥರಂತಿರಿ.
1 ಕೊರಿಂಥದವರಿಗೆ 14 : 21 (ERVKN)
ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ: “ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ ವಿದೇಶಿಯರ ನಾಲಿಗೆಯ ಮೂಲಕವೂ
ನಾನು ಈ ಜನರೊಂದಿಗೆ ಮಾತಾಡುವೆನು; ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.” ಯೆಶಾಯ 28:11-12 ಪ್ರಭುವು ಹೇಳುವುದು ಅದನ್ನೇ.
1 ಕೊರಿಂಥದವರಿಗೆ 14 : 22 (ERVKN)
ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ.
1 ಕೊರಿಂಥದವರಿಗೆ 14 : 23 (ERVKN)
ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು.
1 ಕೊರಿಂಥದವರಿಗೆ 14 : 24 (ERVKN)
ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು.
1 ಕೊರಿಂಥದವರಿಗೆ 14 : 25 (ERVKN)
ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.
1 ಕೊರಿಂಥದವರಿಗೆ 14 : 26 (ERVKN)
ನಿಮ್ಮ ಸಭಾಕೂಟಗಳು ಸಭೆಗೆ ಸಹಾಯಕವಾಗಿರಬೇಕು ಆದ್ದರಿಂದ ಸಹೋದರ ಸಹೋದರಿಯರೇ, ನೀವು ಮಾಡತಕ್ಕದ್ದೇನು? ನೀವು ಸಭೆಸೇರಿದಾಗ, ಒಬ್ಬನು ಹಾಡುತ್ತಾನೆ; ಒಬ್ಬನು ಉಪದೇಶ ಮಾಡುತ್ತಾನೆ; ಒಬ್ಬನು ದೇವರಿಂದ ಹೊಸ ಸತ್ಯವನ್ನು ತಿಳಿಸುತ್ತಾನೆ; ಒಬ್ಬನು ಪರಭಾಷೆಯಲ್ಲಿ ಮಾತಾಡುತ್ತಾನೆ; ಒಬ್ಬನು ಆ ಪರಭಾಷೆಯನ್ನು ಅನುವಾದಿಸುತ್ತಾನೆ. ಸಭೆಯು ದೃಢವಾಗಿ ಬೆಳೆಯಬೇಕೆಂಬುದೇ ಇವುಗಳ ಉದ್ದೇಶವಾಗಿರಬೇಕು.
1 ಕೊರಿಂಥದವರಿಗೆ 14 : 27 (ERVKN)
ನೀವು ಸಭೆಸೇರಿರುವಾಗ, ಯಾರಾದರೂ ಪರಭಾಷೆಯಲ್ಲಿ ಮಾತಾಡಲು ಬಯಸಿದರೆ, ಇಬ್ಬರು ಅಥವಾ ಮೂವರಿಗಿಂತಲೂ ಹೆಚ್ಚು ಜನರು ಪರಭಾಷೆಯಲ್ಲಿ ಮಾತಾಡಬಾರದು. ಅವರು ಹೇಳುವುದನ್ನು ಮತ್ತೊಬ್ಬ ವ್ಯಕ್ತಿಯು ಅನುವಾದಿಸಬೇಕು.
1 ಕೊರಿಂಥದವರಿಗೆ 14 : 28 (ERVKN)
ಆದರೆ ಅನುವಾದಕನು ಇಲ್ಲದಿದ್ದರೆ, ಪರಭಾಷೆಯಲ್ಲಿ ಮಾತಾಡುವವನು ಸಭೆಯಲ್ಲಿ ಮೌನವಾಗಿರಬೇಕು. ಆ ವ್ಯಕ್ತಿಯು ತನ್ನೊಂದಿಗೂ ದೇವರೊಂದಿಗೂ ಮಾತ್ರ ಮಾತಾಡಬೇಕು.
1 ಕೊರಿಂಥದವರಿಗೆ 14 : 29 (ERVKN)
ಇಬ್ಬರು ಅಥವಾ ಮೂವರು ಪ್ರವಾದಿಗಳು ಮಾತ್ರ ಮಾತಾಡಬೇಕು. ಅವರು ಹೇಳುವುದನ್ನು ಇತರರು ವಿವೇಚಿಸಬೇಕು.
1 ಕೊರಿಂಥದವರಿಗೆ 14 : 30 (ERVKN)
ಸಭೆಯಲ್ಲಿ ಕುಳಿತಿರುವ ಮತ್ತೊಬ್ಬ ವ್ಯಕ್ತಿಗೆ ದೇವರ ಸಂದೇಶವು ದೊರೆತರೆ, ಮೊದಲು ಮಾತಾಡುತ್ತಿರುವವನು ತನ್ನ ಮಾತನ್ನು ನಿಲ್ಲಿಸಲಿ.
1 ಕೊರಿಂಥದವರಿಗೆ 14 : 31 (ERVKN)
ನೀವೆಲ್ಲರೂ ಒಬ್ಬರಾದ ನಂತರ ಒಬ್ಬರು ಪ್ರವಾದಿಸಬಹುದು. ಈ ರೀತಿಯಲ್ಲಿ ಎಲ್ಲಾ ಜನರು ಕಲಿತುಕೊಳ್ಳುವರು ಮತ್ತು ಪ್ರೋತ್ಸಾಹಿತರಾಗುವರು.
1 ಕೊರಿಂಥದವರಿಗೆ 14 : 32 (ERVKN)
ಪ್ರವಾದಿಗಳ ಜೀವಾತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿಯೇ ಇರುತ್ತವೆ.
1 ಕೊರಿಂಥದವರಿಗೆ 14 : 33 (ERVKN)
ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.
1 ಕೊರಿಂಥದವರಿಗೆ 14 : 34 (ERVKN)
ಸ್ತ್ರೀಯರು ಸಭಾಕೂಟಗಳಲ್ಲಿ ಮೌನವಾಗಿರಬೇಕು. ದೇವಮಕ್ಕಳ ಎಲ್ಲಾ ಸಭೆಗಳಲ್ಲಿಯೂ ಇದೇ ಪದ್ಧತಿ ರೂಢಿಯಲ್ಲಿದೆ. ಸ್ತ್ರೀಯರಿಗೆ ಮಾತಾಡಲು ಅನುಮತಿಯಿಲ್ಲ. ಅವರು ಅಧೀನರಾಗಿರಬೇಕು. ಮೋಶೆಯ ಧರ್ಮಶಾಸ್ತ್ರವು ಸಹ ಇದನ್ನೇ ಹೇಳುತ್ತದೆ.
1 ಕೊರಿಂಥದವರಿಗೆ 14 : 35 (ERVKN)
ಸ್ತ್ರೀಯರು ಏನಾದರು ತಿಳಿದುಕೊಳ್ಳಬೇಕೆಂದಿದ್ದರೆ, ತಮ್ಮ ಮನೆಗಳಲ್ಲಿ ತಮ್ಮ ಗಂಡಂದಿರನ್ನು ಕೇಳಬೇಕು. ಬಹಿರಂಗ ಕೂಟದಲ್ಲಿ ಸ್ತ್ರೀಯರು ಮಾತಾಡುವಂಥದ್ದು ನಾಚಿಕೆಕರವಾದದ್ದು.
1 ಕೊರಿಂಥದವರಿಗೆ 14 : 36 (ERVKN)
ದೇವರ ಉಪದೇಶವು ನಿಮ್ಮಿಂದ ಬರುತ್ತದೆಯೇ? ಇಲ್ಲ! ಆ ಉಪದೇಶವನ್ನು ಹೊಂದಿಕೊಂಡವರು ನೀವು ಮಾತ್ರವೋ? ಇಲ್ಲ!
1 ಕೊರಿಂಥದವರಿಗೆ 14 : 37 (ERVKN)
ಯಾವನಾದರೂ ತಾನು ಪ್ರವಾದಿಯೆಂದು ಅಥವಾ ತನ್ನಲ್ಲಿ ಆತ್ಮಿಕ ವರವಿದೆಯೆಂದು ಯೋಚಿಸುವುದಾದರೆ, ಇದು ಪ್ರಭುವಿನ ಆಜ್ಞೆಯೆಂದು ಅವನು ಅರ್ಥಮಾಡಿಕೊಳ್ಳಬೇಕು.
1 ಕೊರಿಂಥದವರಿಗೆ 14 : 38 (ERVKN)
ಯಾವನಾದರೂ ಇದನ್ನು ಒಪ್ಪಿಕೊಳ್ಳದಿದ್ದರೆ, ನೀವೂ ಅವನನ್ನು ಒಪ್ಪಿಕೊಳ್ಳಬಾರದು.
1 ಕೊರಿಂಥದವರಿಗೆ 14 : 39 (ERVKN)
ಆದ್ದರಿಂದ ಸಹೋದರ ಸಹೋದರಿಯರೇ, ನೀವು ಪ್ರವಾದನಾ ವರವನ್ನು ನಿಜವಾಗಿಯೂ ಬಯಸಿರಿ. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ಹೊಂದಿರುವವರು ತಮ್ಮ ವರವನ್ನು ಉಪಯೋಗಿಸಲಿ. ಅವರನ್ನು ತಡೆಯಬೇಡಿರಿ.
1 ಕೊರಿಂಥದವರಿಗೆ 14 : 40 (ERVKN)
ಆದರೆ ಪ್ರತಿಯೊಂದನ್ನೂ ಸರಿಯಾದ ರೀತಿಯಲ್ಲಿ ಮತ್ತು ಕ್ರಮಬದ್ಧವಾಗಿ ಮಾಡಿರಿ.
❮
❯