1 ಕೊರಿಂಥದವರಿಗೆ 13 : 1 (ERVKN)
ಪ್ರೀತಿ ನಾನು ಮನುಷ್ಯರ ಭಾಷೆಗಳನ್ನಲ್ಲದೆ ದೇವದೂತರ ಭಾಷೆಗಳನ್ನು ಮಾತಾಡಬಹುದು. ಆದರೆ ನನ್ನಲ್ಲಿ ಪ್ರೀತಿಯಿಲ್ಲದಿದ್ದರೆ, ನಾನು ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ತಾಳ.
1 ಕೊರಿಂಥದವರಿಗೆ 13 : 2 (ERVKN)
ಪ್ರವಾದಿಸುವ ವರ ನನಗಿರಬಹುದು; ದೇವರ ರಹಸ್ಯ ಸಂಗತಿಗಳನ್ನೆಲ್ಲಾ ಮತ್ತು ಜ್ಞಾನವನ್ನೆಲ್ಲಾ ನಾನು ಅರ್ಥಮಾಡಿಕೊಂಡಿರಬಹುದು ಮತ್ತು ಬೆಟ್ಟಗಳನ್ನು ಚಲಿಸಬಲ್ಲಂಥ ಮಹಾನಂಬಿಕೆ ನನಗಿರಬಹುದು. ಇವುಗಳೆಲ್ಲಾ ನನ್ನಲ್ಲಿ ಇದ್ದರೂ ಪ್ರೀತಿಯು ಇಲ್ಲದಿದ್ದರೆ, ನಾನು ನಿಷ್ಪ್ರಯೋಜಕನಾಗಿದ್ದೇನೆ.
1 ಕೊರಿಂಥದವರಿಗೆ 13 : 3 (ERVKN)
ನಾನು ನನ್ನಲ್ಲಿರುವ ಪ್ರತಿಯೊಂದನ್ನು ಜನರ ಊಟಕ್ಕಾಗಿ ಕೊಟ್ಟುಬಿಡಬಹುದು. ಹೆಮ್ಮೆಪಡುವುದಕ್ಕಾಗಿ ನಾನು ನನ್ನ ದೇಹವನ್ನೇ ಸಜೀವದಹನವನ್ನಾಗಿ ಒಪ್ಪಿಸಿಕೊಡಬಹುದು. ಆದರೆ ಈ ಕಾರ್ಯಗಳನ್ನೆಲ್ಲ ಮಾಡಿದರೂ ಪ್ರೀತಿಯು ಇಲ್ಲದಿದ್ದರೆ ನನಗೇನೂ ಪ್ರಯೋಜನವಿಲ್ಲ.
1 ಕೊರಿಂಥದವರಿಗೆ 13 : 4 (ERVKN)
ಪ್ರೀತಿಯು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಅಸೂಯೆಪಡುವುದಿಲ್ಲ; ಹೊಗಳಿಕೊಳ್ಳುವುದಿಲ್ಲ; ಗರ್ವಪಡುವುದಿಲ್ಲ.
1 ಕೊರಿಂಥದವರಿಗೆ 13 : 5 (ERVKN)
ಪ್ರೀತಿಯು ನಾಚಿಕೆಕರವಾದ ರೀತಿಯಲ್ಲಿ ವರ್ತಿಸುವುದಿಲ್ಲ; ಸ್ವಾರ್ಥಿಯಲ್ಲ ಮತ್ತು ಬೇಗನೆ ಕೋಪಗೊಳ್ಳುವುದಿಲ್ಲ; ತನಗಾದ ಅಪಕಾರಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.
1 ಕೊರಿಂಥದವರಿಗೆ 13 : 6 (ERVKN)
ಪ್ರೀತಿಯು ಕೆಟ್ಟದ್ದರ ಬಗ್ಗೆ ಸಂತೋಷಪಡದೆ ಸತ್ಯದ ಬಗ್ಗೆ ಸಂತೋಷಪಡುತ್ತದೆ.
1 ಕೊರಿಂಥದವರಿಗೆ 13 : 7 (ERVKN)
ಪ್ರೀತಿಯು ಎಲ್ಲವನ್ನು ತಾಳ್ಮೆಯಿಂದ ಸ್ವೀಕರಿಸಿಕೊಳ್ಳುತ್ತದೆ; ಯಾವಾಗಲೂ ನಂಬುತ್ತದೆ; ಯಾವಾಗಲೂ ನಿರೀಕ್ಷಿಸುತ್ತದೆ; ಯಾವಾಗಲೂ ದೃಢವಾಗಿರುತ್ತದೆ.
1 ಕೊರಿಂಥದವರಿಗೆ 13 : 8 (ERVKN)
ಪ್ರೀತಿಯು ಎಂದಿಗೂ ಕೊನೆಗೊಳ್ಳುವುದಿಲ್ಲ. ಪ್ರವಾದಿಸುವ ವರಗಳಿವೆ, ಆದರೆ ಅವು ಕೊನೆಗೊಳ್ಳುತ್ತವೆ. ವಿವಿಧ ಭಾಷೆಗಳಲ್ಲಿ ಮಾತಾಡುವ ವರಗಳಿವೆ, ಆದರೆ ಆ ವರಗಳು ಕೊನೆಗೊಳ್ಳುತ್ತವೆ. ಜ್ಞಾನವೆಂಬ ವರವೂ ಇದೆ, ಆದರೆ ಅದೂ ಕೊನೆಗೊಳ್ಳುವುದು.
1 ಕೊರಿಂಥದವರಿಗೆ 13 : 9 (ERVKN)
ಏಕೆಂದರೆ ನಮಗಿರುವ ಈ ಜ್ಞಾನವು ಮತ್ತು ಈ ಪ್ರವಾದನೆಗಳು ಸಂಪೂರ್ಣವಾದುವುಗಳಲ್ಲ.
1 ಕೊರಿಂಥದವರಿಗೆ 13 : 10 (ERVKN)
ಆದರೆ ಸಂಪೂರ್ಣತೆಯು ಬಂದಾಗ ಸಂಪೂರ್ಣವಲ್ಲದವುಗಳು ಕೊನೆಗೊಳ್ಳುತ್ತವೆ.
1 ಕೊರಿಂಥದವರಿಗೆ 13 : 11 (ERVKN)
ನಾನು ಬಾಲಕನಾಗಿದ್ದಾಗ ಬಾಲಕನಂತೆ ಮಾತಾಡಿದೆನು, ಆಲೋಚಿಸಿದೆನು, ಯೋಜನೆಗಳನ್ನು ಮಾಡಿದೆನು. ಆದರೆ ನಾನು ಪ್ರಾಯಸ್ಥನಾದ ಮೇಲೆ ಬಾಲ್ಯದ ನಡವಳಿಕೆಯನ್ನು ಬಿಟ್ಟುಬಿಟ್ಟೆನು.
1 ಕೊರಿಂಥದವರಿಗೆ 13 : 12 (ERVKN)
ನಮಗೂ ಸಹ ಇದು ಅನ್ವಯಿಸುತ್ತದೆ. ಕನ್ನಡಿಯಲ್ಲಿ ಕೇವಲ ಪ್ರತಿಬಿಂಬ ಕಾಣುವಂತೆ ಈಗ ನಾವು ನೋಡುತ್ತಿದ್ದೇವೆ. ಆದರೆ ಮುಂದಿನ ಕಾಲದಲ್ಲಿ ನಾವು ಮುಖಾಮುಖಿಯಾಗಿ ಕಾಣುತ್ತೇವೆ. ಈಗ ನನಗೆ ತಿಳಿದಿರುವುದು ಕೇವಲ ಒಂದು ಭಾಗವಷ್ಟೆ, ಆದರೆ ಆ ಕಾಲದಲ್ಲಿ ದೇವರು ನನ್ನನ್ನು ತಿಳಿದಿರುವಂತೆ ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು.
1 ಕೊರಿಂಥದವರಿಗೆ 13 : 13 (ERVKN)
ಆದ್ದರಿಂದ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಶಾಶ್ವತವಾದವುಗಳಾಗಿವೆ. ಆದರೆ ಇವುಗಳಲ್ಲಿ ಅತ್ಯುನ್ನತವಾದದ್ದು ಪ್ರೀತಿಯೇ.

1 2 3 4 5 6 7 8 9 10 11 12 13