1 ಕೊರಿಂಥದವರಿಗೆ 11 : 1 (ERVKN)
ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ.
1 ಕೊರಿಂಥದವರಿಗೆ 11 : 2 (ERVKN)
ಅಧಿಕಾರಕ್ಕೆ ಅಧೀನರಾಗಿರಿ ನೀವು ಎಲ್ಲಾ ವಿಷಯಗಳಲ್ಲಿ ನನ್ನನ್ನು ಜ್ಞಾಪಿಸಿಕೊಳುವುದರಿಂದ ನಿಮ್ಮನ್ನು ಹೊಗಳುತ್ತೇನೆ. ನಾನು ನಿಮಗೆ ಕೊಟ್ಟ ಉಪದೇಶಗಳನ್ನು ನೀವು ಸೂಕ್ಷ್ಮವಾಗಿ ಅನುಸರಿಸುತ್ತಿದ್ದೀರಿ.
1 ಕೊರಿಂಥದವರಿಗೆ 11 : 3 (ERVKN)
ಆದರೆ ನೀವು ಈ ವಿಷಯವನ್ನೂ ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಆಸೆ. ಪ್ರತಿಯೊಬ್ಬ ಪುರುಷನಿಗೂ ಕ್ರಿಸ್ತನು ಶಿರಸ್ಸಾಗಿದ್ದಾನೆ; ಸ್ತ್ರೀಗೆ ಪುರುಷನು ಶಿರಸ್ಸಾಗಿದ್ದಾನೆ; ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾನೆ.
1 ಕೊರಿಂಥದವರಿಗೆ 11 : 4 (ERVKN)
ಪುರುಷನು ಪ್ರವಾದಿಸುವಾಗ ಅಥವಾ ಪ್ರಾರ್ಥಿಸುವಾಗ ತನ್ನ ತಲೆಯ ಮೇಲೆ ಮುಸುಕು ಹಾಕಿಕೊಂಡರೆ ಅದು ಅವನ ಶಿರಸ್ಸಾದ ಕ್ರಿಸ್ತನಿಗೆ ಅಪಮಾನಕರವಾಗಿದೆ.
1 ಕೊರಿಂಥದವರಿಗೆ 11 : 5 (ERVKN)
ಆದರೆ ಸ್ತ್ರೀಯು ಪ್ರಾರ್ಥಿಸುವಾಗ ಅಥವಾ ಪ್ರವಾದಿಸುವಾಗ ತನ್ನ ತಲೆಗೆ ಮುಸುಕನ್ನು ಹಾಕಿಕೊಂಡಿರಬೇಕು. ಆಕೆಯು ತನ್ನ ತಲೆಗೆ ಮುಸುಕು ಹಾಕಿಲ್ಲದಿದ್ದರೆ, ಅದು ಆಕೆಯ ಶಿರಸ್ಸಾದ ಪುರುಷನಿಗೆ ಅಪಮಾನಕರವಾಗಿದೆ. ಅವಳಿಗೂ ತಲೆಯನ್ನು ಬೋಳಿಸಿಕೊಂಡಿರುವ ಸ್ತ್ರೀಗೂ ಯಾವ ವ್ಯತ್ಯಾಸವಿಲ್ಲ.
1 ಕೊರಿಂಥದವರಿಗೆ 11 : 6 (ERVKN)
ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದಿದ್ದರೆ, ಆಕೆಯು ತನ್ನ ತಲೆಯನ್ನು ಬೋಳಿಸಿಕೊಳ್ಳಲಿ. ತಲೆಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಯನ್ನು ಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅಪಮಾನಕರವಾಗಿದೆ. ಆದ್ದರಿಂದ ಆಕೆ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.
1 ಕೊರಿಂಥದವರಿಗೆ 11 : 7 (ERVKN)
ಆದರೆ ಪುರುಷನು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬಾರದು. ಏಕೆಂದರೆ, ಪುರುಷನು ದೇವರ ಸ್ವರೂಪವಾಗಿದ್ದಾನೆ ಮತ್ತು ದೇವರ ಪ್ರಭಾವವಾಗಿದ್ದಾನೆ. ಆದರೆ ಸ್ತ್ರೀಯು ಪುರುಷನ ಪ್ರಭಾವವಾಗಿದ್ದಾಳೆ.
1 ಕೊರಿಂಥದವರಿಗೆ 11 : 8 (ERVKN)
ಪುರುಷನು ಸ್ತ್ರೀಯಿಂದ ಬಂದಿಲ್ಲ: ಸ್ತ್ರೀಯು ಪುರುಷನಿಂದ ಬಂದಳು.
1 ಕೊರಿಂಥದವರಿಗೆ 11 : 9 (ERVKN)
ಪುರುಷನು ಸೃಷ್ಟಿಸಲ್ಪಟ್ಟದ್ದು ಸ್ತ್ರೀಗೋಸ್ಕರವಲ್ಲ. ಆದರೆ ಸ್ತ್ರೀಯು ಪುರುಷನಿಗೋಸ್ಕರ ಸೃಷ್ಟಿಸಲ್ಪಟ್ಟಳು.
1 ಕೊರಿಂಥದವರಿಗೆ 11 : 10 (ERVKN)
ಆದಕಾರಣವೇ, ಸ್ತ್ರೀಯು ತಾನು ಅಧಿಕಾರದ ಅಧೀನದಲ್ಲಿರುವುದನ್ನು ಸೂಚಿಸಲು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು. ದೇವದೂತರ ನಿಮಿತ್ತವಾಗಿಯೂ ಸ್ತ್ರೀ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.
1 ಕೊರಿಂಥದವರಿಗೆ 11 : 11 (ERVKN)
ಆದರೆ ಪ್ರಭುವಿನ ದೃಷ್ಟಿಯಲ್ಲಿ ಸ್ತ್ರೀಯು ಪುರುಷನಿಗೆ ಎಷ್ಟು ಮುಖ್ಯವೋ ಪುರುಷನೂ ಸ್ತ್ರೀಗೆ ಅಷ್ಟೇ ಮುಖ್ಯ.
1 ಕೊರಿಂಥದವರಿಗೆ 11 : 12 (ERVKN)
ಏಕೆಂದರೆ ಸ್ತ್ರೀಯು ಪುರುಷನಿಂದ ಬಂದದ್ದು ಸತ್ಯ. ಆದರೆ ಪುರುಷನು ಸಹ ಸ್ತ್ರೀಯ ಮೂಲಕವಾಗಿ ಹುಟ್ಟುತ್ತಾನೆ. ನಿಜವಾಗಿ ಸಮಸ್ತವೂ ದೇವರಿಂದಲೇ ಬರುತ್ತದೆ.
1 ಕೊರಿಂಥದವರಿಗೆ 11 : 13 (ERVKN)
ಹೀಗಿರಲಾಗಿ, ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥಿಸುವುದು ಸರಿಯೋ? ನೀವೇ ತೀರ್ಮಾನಿಸಿರಿ.
1 ಕೊರಿಂಥದವರಿಗೆ 11 : 14 (ERVKN)
ಮನುಷ್ಯನ ಸ್ವಭಾವವೇ ತಿಳಿಸುವಂತೆ ಉದ್ದನೆಯ ಕೂದಲನ್ನು ಹೊಂದಿರುವುದು ಪುರುಷನಿಗೆ ಅವಮಾನಕರವಾಗಿದೆ.
1 ಕೊರಿಂಥದವರಿಗೆ 11 : 15 (ERVKN)
ಆದರೆ ಉದ್ದನೆಯ ಕೂದಲನ್ನು ಹೊಂದಿರುವುದು ಸ್ತ್ರೀಗೆ ಗೌರವಯುತವಾಗಿದೆ. ಉದ್ದನೆಯ ಕೂದಲನ್ನು ಸ್ತ್ರೀಯ ತಲೆಗೆ ಮುಸುಕನ್ನಾಗಿ ಕೊಡಲಾಗಿದೆ.
1 ಕೊರಿಂಥದವರಿಗೆ 11 : 16 (ERVKN)
ಕೆಲವು ಜನರು ಇದರ ಬಗ್ಗೆ ಇನ್ನೂ ವಾದಮಾಡಬಯಸಬಹುದು. ಆದರೆ ಈ ಸಂಪ್ರದಾಯವು ನಮ್ಮಲ್ಲಾಗಲಿ ದೇವರ ಸಭೆಗಳಲ್ಲಾಗಲಿ ಇಲ್ಲ.
1 ಕೊರಿಂಥದವರಿಗೆ 11 : 17 (ERVKN)
ಪ್ರಭುವಿನ ರಾತ್ರಿಭೋಜನ ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ.
1 ಕೊರಿಂಥದವರಿಗೆ 11 : 18 (ERVKN)
ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ.
1 ಕೊರಿಂಥದವರಿಗೆ 11 : 19 (ERVKN)
(ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.)
1 ಕೊರಿಂಥದವರಿಗೆ 11 : 20 (ERVKN)
ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ.
1 ಕೊರಿಂಥದವರಿಗೆ 11 : 21 (ERVKN)
ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ.
1 ಕೊರಿಂಥದವರಿಗೆ 11 : 22 (ERVKN)
ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.
1 ಕೊರಿಂಥದವರಿಗೆ 11 : 23 (ERVKN)
ನಾನು ಪ್ರಭುವಿನಿಂದ ಹೊಂದಿಕೊಂಡದ್ದನ್ನೇ ನಿಮಗೆ ಉಪದೇಶಿಸಿದೆನು. ಅದೇನೆಂದರೆ: ಯೇಸುವನ್ನು ಕೊಲ್ಲುವುದಕ್ಕಾಗಿ ಒಪ್ಪಿಸಿಕೊಟ್ಟ ರಾತ್ರಿಯಲ್ಲಿ, ಆತನು ರೊಟ್ಟಿಯನ್ನು ತೆಗೆದುಕೊಂಡು,
1 ಕೊರಿಂಥದವರಿಗೆ 11 : 24 (ERVKN)
ಅದಕ್ಕಾಗಿ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ಇದು ನನ್ನ ದೇಹ; ಇದನ್ನು ನಿಮಗೋಸ್ಕರ ಕೊಡಲಾಗಿದೆ. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಎಂದು ಹೇಳಿದನು.
1 ಕೊರಿಂಥದವರಿಗೆ 11 : 25 (ERVKN)
ಅದೇ ರೀತಿಯಲ್ಲಿ ಅವರು ಊಟಮಾಡಿದ ಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಈ ದ್ರಾಕ್ಷಾರಸ ಸೂಚಿಸುತ್ತದೆ. ಈ ಹೊಸ ಒಡಂಬಡಿಕೆ ನನ್ನ ರಕ್ತದಿಂದ ಆರಂಭವಾಗುತ್ತದೆ. ನೀವು ಇದನ್ನು ಕುಡಿಯುವಾಗಲೆಲ್ಲಾ ನನ್ನನ್ನು ನೆನಸಿಕೊಳ್ಳವವರಾಗಿದ್ದೀರಿ” ಎಂದು ಹೇಳಿದನು.
1 ಕೊರಿಂಥದವರಿಗೆ 11 : 26 (ERVKN)
ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಕುಡಿಯುವಾಗಲೆಲ್ಲಾ ಪ್ರಭುವಿನ ಮರಣವನ್ನು ಆತನು ಬರುವ ತನಕ ಪ್ರಚುರಪಡಿಸುತ್ತೀರಿ.
1 ಕೊರಿಂಥದವರಿಗೆ 11 : 27 (ERVKN)
ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ.
1 ಕೊರಿಂಥದವರಿಗೆ 11 : 28 (ERVKN)
ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು.
1 ಕೊರಿಂಥದವರಿಗೆ 11 : 29 (ERVKN)
ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ.
1 ಕೊರಿಂಥದವರಿಗೆ 11 : 30 (ERVKN)
ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು.
1 ಕೊರಿಂಥದವರಿಗೆ 11 : 31 (ERVKN)
ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ.
1 ಕೊರಿಂಥದವರಿಗೆ 11 : 32 (ERVKN)
ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ.
1 ಕೊರಿಂಥದವರಿಗೆ 11 : 33 (ERVKN)
ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ.
1 ಕೊರಿಂಥದವರಿಗೆ 11 : 34 (ERVKN)
ಒಬ್ಬ ವ್ಯಕ್ತಿಯು ಹಸಿವೆಗೊಂಡಿದ್ದರೆ, ಅವನು ಮನೆಯಲ್ಲಿ ಊಟಮಾಡಲಿ. ನೀವು ಹೀಗೆ ಮಾಡಿದರೆ, ನಿಮ್ಮ ಸಭಾಕೂಟವು ನಿಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡುವುದಿಲ್ಲ. ಉಳಿದ ವಿಷಯಗಳ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ನಿಮ್ಮಲ್ಲಿಗೆ ಬಂದಾಗ ತಿಳಿಸಿಕೊಡುತ್ತೇನೆ.
❮
❯