ಆದಿಕಾಂಡ 22 : 1 (KNV)
ಇವುಗಳಾದ ಮೇಲೆ ದೇವರು ಅಬ್ರಹಾಮನನ್ನು ಶೋಧಿಸುವದಕ್ಕಾಗಿ ಆತನು ಅವನಿಗೆ--ಅಬ್ರಹಾಮನೇ ಅಂದನು. ಅದಕ್ಕವನು --ಇಗೋ, ಇಲ್ಲಿದ್ದೇನೆ ಅಂದನು.
ಆದಿಕಾಂಡ 22 : 2 (KNV)
ಆಗ ಆತನು --ನೀನು ಪ್ರೀತಿಮಾಡುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಈಗ ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು ಅಂದನು.
ಆದಿಕಾಂಡ 22 : 3 (KNV)
ಅಬ್ರಹಾಮನು ಬೆಳಿಗ್ಗೆ ಎದ್ದು ತನ್ನ ಕತ್ತೆಗೆ ತಡಿಹಾಕಿಸಿ ತನ್ನ ಯುವಕರಲ್ಲಿ ಇಬ್ಬರನ್ನೂ ತನ್ನ ಮಗನಾದ ಇಸಾಕನನ್ನೂ ಕರೆದು ಕೊಂಡು ದಹನಬಲಿಗಾಗಿ ಕಟ್ಟಿಗೆಗಳನ್ನು ಒಡಿಸಿ ಎದ್ದು ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು.
ಆದಿಕಾಂಡ 22 : 4 (KNV)
ಮೂರನೆಯ ದಿನದಲ್ಲಿ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ಆ ಸ್ಥಳವನ್ನು ದೂರದಿಂದ ನೋಡಿದನು.
ಆದಿಕಾಂಡ 22 : 5 (KNV)
ಅಬ್ರಹಾಮನು ತನ್ನ ಯುವಕರಿಗೆ--ಕತ್ತೆಯ ಸಂಗಡ ಇಲ್ಲಿಯೇ ಇರ್ರಿ. ನಾನೂ ಹುಡುಗನೂ ಅಲ್ಲಿಗೆ ಹೋಗಿ ಆರಾಧನೆ ಮಾಡಿ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇವೆ ಅಂದನು.
ಆದಿಕಾಂಡ 22 : 6 (KNV)
ಅಬ್ರಹಾಮನು ದಹನಬಲಿಯ ಕಟ್ಟಿಗೆಗಳನ್ನು ತಕ್ಕೊಂಡು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ಬೆಂಕಿಯನ್ನೂ ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡು ಅವರಿಬ್ಬರೂ ಕೂಡಿಕೊಂಡು ಹೋದರು.
ಆದಿಕಾಂಡ 22 : 7 (KNV)
ಆಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ--ನನ್ನ ತಂದೆಯೇ ಅಂದನು. ಆಗ ಅವನು--ನನ್ನ ಮಗನೇ, ಇದ್ದೇನೆ ಅಂದನು. ಅವನು--ಇಗೋ, ಬೆಂಕಿಯೂ ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ ಅಂದನು.
ಆದಿಕಾಂಡ 22 : 8 (KNV)
ಅಬ್ರಹಾಮನು--ನನ್ನ ಮಗನೇ, ದೇವರು ತಾನೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿ ಸುವನು ಅಂದನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.
ಆದಿಕಾಂಡ 22 : 9 (KNV)
ದೇವರು ಹೇಳಿದ ಸ್ಥಳಕ್ಕೆ ಅವರು ಬಂದಾಗ ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ ತನ್ನ ಮಗನಾದ ಇಸಾಕನನ್ನು ಕಟ್ಟಿ ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು.
ಆದಿಕಾಂಡ 22 : 10 (KNV)
ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವದಕ್ಕೆ ಕತ್ತಿ ತೆಗೆದುಕೊಂಡನು.
ಆದಿಕಾಂಡ 22 : 11 (KNV)
ಆಗ ಕರ್ತನ ದೂತನು ಆಕಾಶದೊಳಗಿಂದ ಅವನನ್ನು ಕರೆದು--ಅಬ್ರಹಾಮನೇ, ಅಬ್ರಹಾಮನೇ ಅಂದಾಗ ಅವನು--ಇಲ್ಲಿ ಇದ್ದೇನೆ ಅಂದನು.
ಆದಿಕಾಂಡ 22 : 12 (KNV)
ಆಗ ಅವನು --ಹುಡಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ. ನೀನು ದೇವರಿಗೆ ಭಯ ಪಡುತ್ತೀಯೆಂದು ಈಗ ನಾನು ತಿಳಿದಿದ್ದೇನೆ. ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವದಕ್ಕೆ ಹಿಂತೆಗೆಯಲಿಲ್ಲ ಅಂದನು.
ಆದಿಕಾಂಡ 22 : 13 (KNV)
ಆಗ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ನೋಡಿದನು; ಇಗೋ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು.
ಆದಿಕಾಂಡ 22 : 14 (KNV)
ಅಬ್ರಹಾಮನು ಆ ಸ್ಥಳಕ್ಕೆ ಯೆಹೋವಯಾರೆ ಎಂದು ಹೆಸರನ್ನು ಇಟ್ಟದ್ದರಿಂದ ಕರ್ತನ ಪರ್ವತದಲ್ಲಿ ಅದು ಕಾಣಲ್ಪಡುವದು ಎಂದು ಇಂದಿನ ವರೆಗೂ ಹೇಳುತ್ತಾರೆ.
ಆದಿಕಾಂಡ 22 : 15 (KNV)
ಕರ್ತನ ದೂತನು ಆಕಾಶದೊಳಗಿಂದ ಎರಡ ನೆಯ ಸಾರಿ ಅಬ್ರಹಾಮನನ್ನು ಕರೆದನು.
ಆದಿಕಾಂಡ 22 : 16 (KNV)
ಅವನು ಹೇಳಿದ್ದೇನಂದರೆ--ನಾನು ನನ್ನ ಮೇಲೆ ನಾನೇ ಆಣೆಯಿಟ್ಟು ಕೊಂಡಿದ್ದೇನೆ ಎಂದು ಕರ್ತನು ಹೇಳು ತ್ತಾನೆ. ಯಾಕಂದರೆ ನೀನು ಈ ಕಾರ್ಯವನ್ನು ಮಾಡಿ ನಿನ್ನ ಒಬ್ಬನೇ ಮಗನನ್ನು ನನಗೆ ಕೊಡುವದಕ್ಕೆ ಹಿಂತೆಗೆಯದೆ ಇದ್ದದರಿಂದ
ಆದಿಕಾಂಡ 22 : 17 (KNV)
ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು.
ಆದಿಕಾಂಡ 22 : 18 (KNV)
ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ.
ಆದಿಕಾಂಡ 22 : 19 (KNV)
ತರುವಾಯ ಅಬ್ರಹಾಮನು ತನ್ನ ಯುವಕರ ಬಳಿಗೆ ಹಿಂತಿರುಗಿ ಬಂದನು. ಅವರು ಎದ್ದು ಅವ ರೊಂದಿಗೆ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು.
ಆದಿಕಾಂಡ 22 : 20 (KNV)
ಇವುಗಳಾದ ಮೇಲೆ ಅಬ್ರಹಾಮನಿಗೆ--ಇಗೋ, ಮಿಲ್ಕಳು ಸಹ ನಿನ್ನ ಸಹೋದರನಾದ ನಾಹೋರನಿಗೆ ಮಕ್ಕಳನ್ನು ಹೆತ್ತಿದ್ದಾಳೆ ಎಂದು ತಿಳಿಸಲ್ಪಟ್ಟಿತು.
ಆದಿಕಾಂಡ 22 : 21 (KNV)
ಅವರು ಯಾರಂದರೆ ಅವನ ಚೊಚ್ಚಲು ಮಗ ಊಚನು ಅವನ ಸಹೋದರನಾದ ಬೂಜನು, ಅರಾಮನ ತಂದೆಯಾದ ಕೆಮೂವೇಲನು,
ಆದಿಕಾಂಡ 22 : 22 (KNV)
ಕೆಸೆದನು ಹಜೋ ವನು ಪಿಲ್ದಾಷನು ಇದ್ಲಾಫನು ಬೆತೊವೇಲನು;
ಆದಿಕಾಂಡ 22 : 23 (KNV)
ಬೆತೊವೇಲನಿಂದ ರೆಬೆಕ್ಕಳು ಹುಟ್ಟಿದಳು. ಈ ಎಂಟು ಮಂದಿಯನ್ನು ಮಿಲ್ಕಳು ಅಬ್ರಹಾಮನ ಸಹೋದರನಾದ ನಾಹೋರನಿಗೆ ಹೆತ್ತಳು.
ಆದಿಕಾಂಡ 22 : 24 (KNV)
ಅವನ ಉಪಪತ್ನಿಯಾದ ರೂಮಳೆಂಬವಳು ಸಹ ಟೆಬಹನನ್ನೂ ಗಹಮನನ್ನೂ ತಹಷನನ್ನೂ ಮಾಕಾನನ್ನೂ ಹೆತ್ತಳು.
❮
❯