Kannada ಬೈಬಲ್

ಅಪೊಸ್ತಲರ ಕೃತ್ಯಗ ಒಟ್ಟು 28 ಅಧ್ಯಾಯಗಳು

ಅಪೊಸ್ತಲರ ಕೃತ್ಯಗ

ಅಪೊಸ್ತಲರ ಕೃತ್ಯಗ ಅಧ್ಯಾಯ 19
ಅಪೊಸ್ತಲರ ಕೃತ್ಯಗ ಅಧ್ಯಾಯ 19

ಎಫೆಸದಲ್ಲಿ ಪೌಲನು 1 ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗಲೇ, ಕಾಲ್ನಡಿಗೆಯಾಗಿ ಪೌಲನು ಪ್ರಯಾಣಮಾಡಿ ಎಫೆಸ ಪಟ್ಟಣಕ್ಕೆ ಬಂದನು. ಅಲ್ಲಿ ಕೆಲವು ಶಿಷ್ಯರನ್ನು ಕಂಡು,

2 “ನೀವು ವಿಶ್ವಾಸವನ್ನಿಟ್ಟಾಗ ಪವಿತ್ರಾತ್ಮರನ್ನು ಪಡೆದುಕೊಂಡಿರೋ?” ಎಂದು ಪ್ರಶ್ನೆ ಮಾಡಿದನು.

3 ಅದಕ್ಕೆ ಅವರು, “ಇಲ್ಲ, ಪವಿತ್ರಾತ್ಮ ಇದ್ದಾರೆಂಬುದನ್ನು ನಾವು ಕೇಳಿಯೇ ಇಲ್ಲ,” ಎಂದರು.

ಅಪೊಸ್ತಲರ ಕೃತ್ಯಗ ಅಧ್ಯಾಯ 19

4 “ಹಾಗಾದರೆ ನೀವು ಯಾವ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದೀರಿ?” ಎಂದು ಪೌಲನು ಕೇಳಿದಾಗ ಅವರು, “ಯೋಹಾನನ ದೀಕ್ಷಾಸ್ನಾನವನ್ನು,” ಎಂದರು. ಅದಕ್ಕೆ ಪೌಲನು, “ಯೋಹಾನನ ದೀಕ್ಷಾಸ್ನಾನವು ಪಶ್ಚಾತ್ತಾಪದ ದೀಕ್ಷಾಸ್ನಾನವಾಗಿತ್ತು. ತನ್ನ ನಂತರ ಬರಲಿರುವ ಯೇಸುವಿನಲ್ಲಿ ವಿಶ್ವಾಸವನ್ನಿಡಬೇಕೆಂದು ಯೋಹಾನನು ಜನರಿಗೆ ಹೇಳಿದನು,” ಎಂದನು.

5 ಇದನ್ನು ಕೇಳಿದ ನಂತರ ಅವರು ಕರ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು.

ಅಪೊಸ್ತಲರ ಕೃತ್ಯಗ ಅಧ್ಯಾಯ 19

6 ಪೌಲನು ಅವರ ಮೇಲೆ ತನ್ನ ಕೈಗಳನ್ನಿಡಲು, ಅವರ ಮೇಲೆ ಪವಿತ್ರಾತ್ಮ ಬಂದರು. ಆಗ ಅವರು ಅನ್ಯಭಾಷೆಗಳಲ್ಲಿ ಮಾತನಾಡಿದರು ಹಾಗೂ ಪ್ರವಾದಿಸಿದರು.

7 ಅವರು ಸುಮಾರು ಹನ್ನೆರಡು ಜನ ಪುರುಷರಿದ್ದರು.

8 ಪೌಲನು ಸಭಾಮಂದಿರದೊಳಗೆ ಪ್ರವೇಶಿಸಿದನು. ಅಲ್ಲಿ ಮೂರು ತಿಂಗಳುಗಳ ಕಾಲ, ಧೈರ್ಯವಾಗಿ ಬೋಧನೆ ಮಾಡಿದನು. ದೇವರ ರಾಜ್ಯದ ಬಗ್ಗೆ ಅವರೊಡನೆ ಮನವೊಲಿಸುವಂತೆ ಚರ್ಚಿಸಿದನು.

9 ಆದರೆ ಅವರಲ್ಲಿ ಕೆಲವರು ಕಠಿಣ ಹೃದಯದವರಾಗಿ; ಒಡಂಬಡದೆ ಈ ಮಾರ್ಗವನ್ನು ಬಹಿರಂಗವಾಗಿ ದೂಷಿಸಿದರು. ಆದ್ದರಿಂದ ಪೌಲನು ಅವರನ್ನು ಬಿಟ್ಟು, ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ಅನುದಿನವೂ ತುರನ್ನನ ತರ್ಕಶಾಲೆಯಲ್ಲಿ ಅವರೊಂದಿಗೆ ಚರ್ಚಿಸುತ್ತಾ ಬಂದನು.

ಅಪೊಸ್ತಲರ ಕೃತ್ಯಗ ಅಧ್ಯಾಯ 19

10 ಇದು ಎರಡು ವರ್ಷಗಳ ಕಾಲ ಮುಂದುವರಿಯಿತು. ಇದರಿಂದ ಏಷ್ಯಾ ಪ್ರಾಂತದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ ಗ್ರೀಕರೂ ಕರ್ತ ಯೇಸುವಿನ ವಾಕ್ಯವನ್ನು ಕೇಳಿದರು.

11 ದೇವರು ಪೌಲನ ಮುಖಾಂತರ ಅಸಾಧಾರಣ ಅದ್ಭುತಗಳನ್ನು ಮಾಡುತ್ತಿದ್ದರು.

12 ಹೀಗೆ ಪೌಲನನ್ನು ಮುಟ್ಟಿದ ಕೈವಸ್ತ್ರಗಳನ್ನೂ ಉಡುಪುಗಳನ್ನೂ ತೆಗೆದುಕೊಂಡುಹೋಗಿ ರೋಗಿಗಳಿಗೆ ಮುಟ್ಟಿಸಿದಾಗ ಅವರು ರೋಗಗಳಿಂದ ವಾಸಿಯಾಗುತ್ತಿದ್ದರು ಹಾಗೂ ಅವರಲ್ಲಿಯ ದುರಾತ್ಮಗಳು ಬಿಟ್ಟು ಹೋಗುತ್ತಿದ್ದವು.

ಅಪೊಸ್ತಲರ ಕೃತ್ಯಗ ಅಧ್ಯಾಯ 19

13 ಕೆಲವು ಯೆಹೂದ್ಯರು ದುರಾತ್ಮಗಳನ್ನು ಬಿಡಿಸಲು ಪ್ರಯತ್ನಿಸಿ, “ಪೌಲನು ಸಾರುತ್ತಿರುವ ಯೇಸುವಿನ ಹೆಸರಿನಲ್ಲಿ ನಾನು ನಿಮಗೆ ಆಜ್ಞಾಪಿಸುತ್ತೇನೆ,” ಎಂದು ಅವರು ಕರ್ತ ಯೇಸುವಿನ ಹೆಸರನ್ನು ಬಳಸಲು ಪ್ರಯತ್ನಿಸಿದರು.

14 ಯೆಹೂದ್ಯ ಮುಖ್ಯಯಾಜಕ ಸ್ಕೇವ ಎಂಬುವನ ಏಳು ಜನ ಗಂಡು ಮಕ್ಕಳು ಈ ರೀತಿ ಮಾಡುತ್ತಿದ್ದರು.

15 ದುರಾತ್ಮವು ಅವರಿಗೆ ಉತ್ತರವಾಗಿ, “ಯೇಸುವನ್ನು ನಾನು ಬಲ್ಲೆ, ಪೌಲನೂ ನನಗೆ ಗೊತ್ತು, ಆದರೆ ನೀವು ಯಾರು?” ಎಂದು ಕೇಳಿ,

ಅಪೊಸ್ತಲರ ಕೃತ್ಯಗ ಅಧ್ಯಾಯ 19

16 ದುರಾತ್ಮ ಪೀಡಿತ ಮನುಷ್ಯನು ಅವರ ಮೇಲೆ ಹಾರಿಬಿದ್ದು, ಅವರೆಲ್ಲರಿಗಿಂತಲೂ ಹೆಚ್ಚು ಬಲಗೊಂಡು ಅವರನ್ನು ಬಡಿದು ಗಾಯಗೊಳಿಸಲು, ಅವರು ನಗ್ನರಾಗಿಯೇ ಮನೆಬಿಟ್ಟು ಹೊರಗೆ ಓಡಿಹೋದರು.

17 ಎಫೆಸದಲ್ಲಿ ವಾಸಿಸುತ್ತಿದ್ದ ಯೆಹೂದ್ಯರಿಗೂ ಗ್ರೀಕರಿಗೂ ಈ ವಿಷಯ ತಿಳಿದಾಗ, ಅವರೆಲ್ಲರೂ ಬಹಳ ಭಯಗೊಂಡರು. ಹೀಗೆ ಕರ್ತ ಯೇಸುವಿನ ಹೆಸರಿಗೆ ಅತ್ಯಂತ ಮಹಿಮೆಯಾಯಿತು.

18 ವಿಶ್ವಾಸವಿಟ್ಟವರಲ್ಲಿ ಅನೇಕರು ಅಲ್ಲಿಗೆ ಬಂದು ತಮ್ಮ ಕೃತ್ಯಗಳನ್ನು ಅರಿಕೆಮಾಡಿದರು.

ಅಪೊಸ್ತಲರ ಕೃತ್ಯಗ ಅಧ್ಯಾಯ 19

19 ಮಾಟಮಂತ್ರ ಮಾಡುತ್ತಿದ್ದವರು ತಮ್ಮ ಗ್ರಂಥಗಳನ್ನು ತೆಗೆದುಕೊಂಡು ಬಂದು ಎಲ್ಲರ ಮುಂದೆ ಸುಟ್ಟು ಹಾಕಿದರು. ಅವುಗಳ ಒಟ್ಟು ಮೌಲ್ಯ ಐವತ್ತು ಸಾವಿರ ಬೆಳ್ಳಿನಾಣ್ಯಗಳಷ್ಟಾಯಿತು.* ಒಂದು ದ್ರಹ್ಮ ನಾಣ್ಯದ ಮೌಲ್ಯವು ಒಂದು ದಿನದ ಕೂಲಿ

20 ಹೀಗೆ ಕರ್ತ ಯೇಸುವಿನ ವಾಕ್ಯವು ವಿಸ್ತಾರವಾಗಿ ಹರಡುತ್ತಾ ಪ್ರಬಲವಾಯಿತು.

21 ಇದೆಲ್ಲ ಸಂಭವಿಸಿದ ನಂತರ ಮಕೆದೋನ್ಯ ಮತ್ತು ಅಖಾಯ ಮಾರ್ಗವಾಗಿ ಯೆರೂಸಲೇಮಿಗೆ ಹೋಗಲು ಪೌಲನು ಮನಸ್ಸಿನಲ್ಲಿ ನಿರ್ಧರಿಸಿದನು. ಅವನು, “ಅಲ್ಲಿಗೆ ಹೋದ ನಂತರ ನಾನು ರೋಮ್ ಪಟ್ಟಣವನ್ನು ಸಂದರ್ಶಿಸಬೇಕು,” ಎಂದನು.

ಅಪೊಸ್ತಲರ ಕೃತ್ಯಗ ಅಧ್ಯಾಯ 19

22 ತನ್ನ ಇಬ್ಬರು ಸಹಾಯಕರಾದ ತಿಮೊಥೆ ಮತ್ತು ಎರಸ್ತನನ್ನು ಮಕೆದೋನ್ಯಕ್ಕೆ ಕಳುಹಿಸಿ ತಾನು ಇನ್ನೂ ಸ್ವಲ್ಪಕಾಲ ಏಷ್ಯಾ ಪ್ರಾಂತದಲ್ಲಿ ಇದ್ದನು.

ಎಫೆಸದಲ್ಲಿ ದಂಗೆ 23 ಕ್ರಿಸ್ತ ಯೇಸುವಿನ ಮಾರ್ಗದ ವಿಷಯವಾಗಿ ಆ ಸಮಯದಲ್ಲಿ ದೊಡ್ಡ ಗಲಭೆ ಉಂಟಾಯಿತು.

24 ಏಕೆಂದರೆ ದೇಮೇತ್ರಿಯ ಎಂಬ ಒಬ್ಬ ಅಕ್ಕಸಾಲಿಗನು ಅರ್ತೆಮೀ ದೇವಿಯ ಬೆಳ್ಳಿಯ ಮೂರ್ತಿಗಳನ್ನು ಮಾಡುವವನಾಗಿದ್ದು, ಆ ಶಿಲ್ಪಿಗಳ ಹಣ ಸಂಪಾದನೆಗೆ ಬಹಳ ವ್ಯಾಪಾರವನ್ನು ಒದಗಿಸುತ್ತಿದ್ದನು.

ಅಪೊಸ್ತಲರ ಕೃತ್ಯಗ ಅಧ್ಯಾಯ 19

25 ಅವನು ಶಿಲ್ಪಿಗಳನ್ನೂ ಆ ಕಸುಬಿಗೆ ಸಂಬಂಧಪಟ್ಟ ವ್ಯಾಪಾರಿಗಳನ್ನೂ ಒಟ್ಟಿಗೆ ಕೂಡಿಸಿ ಅವರಿಗೆ, “ಜನರೇ, ಈ ವೃತ್ತಿಯಿಂದ ನಮಗೆ ಉತ್ತಮ ಆದಾಯ ಬರುತ್ತಿದೆಯೆಂಬುದನ್ನು ನೀವು ತಿಳಿದಿರುವಿರಿ.

26 ಪೌಲನೆಂಬ ಈ ಮನುಷ್ಯನು ಎಫೆಸದಲ್ಲಿಯೂ ಇಡೀ ಏಷ್ಯಾ ಪ್ರಾಂತದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮನವೊಲಿಸಿ, ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲ ಎಂದು ಹೇಳಿ, ಅವರನ್ನು ಮಾರ್ಪಡಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ಕೇಳಿದ್ದೀರಿ ಹಾಗೂ ಕಂಡಿದ್ದೀರಿ.

ಅಪೊಸ್ತಲರ ಕೃತ್ಯಗ ಅಧ್ಯಾಯ 19

27 ಇದರಿಂದ ಈಗ ನಮ್ಮ ವೃತ್ತಿಗೆ ಅಪಾಯ ಬಂದಿರುವುದಲ್ಲದೆ ಅರ್ತೆಮೀ ಮಹಾದೇವಿಯ ಗುಡಿಯ ಬಗ್ಗೆಯೂ ಯೋಚಿಸಬೇಕು. ಏಕೆಂದರೆ ಏಷ್ಯಾದಲ್ಲಿಯೂ ಇಡೀ ಜಗತ್ತಿನಲ್ಲೆಲ್ಲಾ ಪೂಜಿಸುತ್ತಿರುವ ದೇವಿಯ ಮಹತ್ವವು ಸಹ ಕುಂದಿಹೋಗುವಂತಿದೆ,” ಎಂದನು.

28 ಈ ಮಾತುಗಳನ್ನು ಕೇಳಿ ಅವರು ಉಗ್ರರಾಗಿ, “ಎಫೆಸದ ಅರ್ತೆಮೀ ದೇವಿಯೇ ಮಹಾದೇವಿ!” ಎಂದು ಆರ್ಭಟಿಸಿದರು.

29 ಕೂಡಲೇ ಇಡೀ ಪಟ್ಟಣದಲ್ಲೆಲ್ಲಾ ಕೋಲಾಹಲ ಉಂಟಾಯಿತು. ಜನರು ಗುಂಪಾಗಿ ಕೂಡಿಕೊಂಡು ಬಂದು ಮಕೆದೋನ್ಯದಿಂದ ಪೌಲನೊಂದಿಗೆ ಪ್ರಯಾಣಮಾಡಿ ಬಂದ, ಗಾಯ ಮತ್ತು ಅರಿಸ್ತಾರ್ಕರನ್ನು ಬಂಧಿಸಿ ಕ್ರೀಡಾಂಗಣದೊಳಗೆ ಎಳೆದುಕೊಂಡು ಬಂದರು.

ಅಪೊಸ್ತಲರ ಕೃತ್ಯಗ ಅಧ್ಯಾಯ 19

30 ಪೌಲನು ಜನರೆದುರಿಗೆ ಬರಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.

31 ಪೌಲನ ಸ್ನೇಹಿತರಾಗಿದ್ದ ಏಷ್ಯಾ ಸೀಮೆಯ ಕೆಲವು ಅಧಿಕಾರಿಗಳೂ ಈ ಕ್ರೀಡಾಂಗಣದೊಳಗೆ ಹೋಗುವ ಸಾಹಸ ಮಾಡಬಾರದೆಂದು ವಿನಂತಿಸಿ ಅವನಿಗೆ ಸಂದೇಶ ಕಳುಹಿಸಿದರು.

32 ಜನಸಮೂಹ ಗಲಿಬಿಲಿಗೊಂಡಿತ್ತು. ಕೆಲವರು ಒಂದು ರೀತಿಯಾಗಿಯೂ ಇನ್ನು ಕೆಲವರು ಬೇರೊಂದು ವಿಧವಾಗಿಯೂ ಕೂಗುತ್ತಿದ್ದರು. ಬಹು ಪಾಲು ಜನರಿಗೆ ತಾವೇಕೆ ಅಲ್ಲಿಗೆ ಬಂದಿದ್ದೇವೆಂಬುದರ ಬಗ್ಗೆ ತಿಳಿದಿರಲೇ ಇಲ್ಲ.

ಅಪೊಸ್ತಲರ ಕೃತ್ಯಗ ಅಧ್ಯಾಯ 19

33 ಆದರೆ ಯೆಹೂದ್ಯರು ಅಲೆಕ್ಸಾಂದ್ರ ಎಂಬುವನನ್ನು ಮುಂದಕ್ಕೆ ತಳ್ಳಿದರು. ಜನಸಮೂಹದಲ್ಲಿದ್ದ ಕೆಲವರು ಅವನಿಗೆ ವಿಷಯ ತಿಳಿಸಿದರು. ಆಗ ಅಲೆಕ್ಸಾಂದ್ರನು, ಜನರ ಎದುರಿನಲ್ಲಿ ವಾದಿಸಲಿಕ್ಕಾಗುವಂತೆ ಕೈಸನ್ನೆ ಮಾಡಿದನು.

34 ಆದರೆ ಅವನು ಯೆಹೂದ್ಯನೆಂದು ಜನರು ತಿಳಿದಾಗ, “ಎಫೆಸದ ಅರ್ತೆಮೀ ದೇವಿ ಮಹಾದೇವಿ!” ಎಂದು ಒಕ್ಕೊರಲಿನಿಂದ ಎರಡು ತಾಸುಗಳವರೆಗೆ ಆರ್ಭಟಿಸುತ್ತಲೇ ಇದ್ದರು.

35 ನಗರದ ಗುಮಾಸ್ತ ಜನಸಮೂಹವನ್ನು ಸುಮ್ಮನಿರಿಸಿ, “ಎಫೆಸದ ಜನರೇ, ಮಹಾ ಅರ್ತೆಮೀ ದೇವಿಯ ಮಂದಿರ ಹಾಗೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಯನ್ನು ಎಫೆಸ ಪಟ್ಟಣವು ಕಾಪಾಡುತ್ತಿದೆ ಎಂಬುದನ್ನು ತಿಳಿಯದಿರುವ ಮನುಷ್ಯನು ಇದ್ದಾನೆಯೇ?

ಅಪೊಸ್ತಲರ ಕೃತ್ಯಗ ಅಧ್ಯಾಯ 19

36 ಈ ಸಂಗತಿಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ನೀವು ಸುಮ್ಮನಿರಬೇಕು. ಅವಸರದಿಂದ ಏನನ್ನೂ ಮಾಡಲು ಹೋಗಬಾರದು.

37 ನೀವು ತಂದಿರುವ ಈ ಜನರು ನಮ್ಮ ಗುಡಿ ಕಳ್ಳರಲ್ಲ; ನಮ್ಮ ದೇವತೆಯ ದೂಷಕರೂ ಅಲ್ಲ.

38 ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಸಹ ಶಿಲ್ಪಿಗಳಿಗೂ ಯಾವುದೇ ವ್ಯಕ್ತಿಯ ವಿರುದ್ಧ ಏನಾದರೂ ಆಪಾದನೆಗಳಿದ್ದರೆ ಅವರಿಗಾಗಿ ನ್ಯಾಯಾಲಯಗಳು ತೆರೆದಿವೆ. ರಾಜ್ಯಪಾಲರು ಇದ್ದಾರೆ; ಅವರ ಮುಂದೆ ದೂರುಗಳನ್ನು ಸಲ್ಲಿಸಲಿ.

ಅಪೊಸ್ತಲರ ಕೃತ್ಯಗ ಅಧ್ಯಾಯ 19

39 ಆದರೆ ನೀವು ಇದಕ್ಕಿಂತ ಹೆಚ್ಚಾಗಿ ಬೇರೆ ಏನನ್ನಾದರೂ ತರುವುದಾದರೆ ಅದು ಕಾನೂನುಬದ್ಧ ಸಭೆಯಲ್ಲಿ ತೀರ್ಮಾನವಾಗಬೇಕು.

40 ಈಗ ಇದ್ದ ಪರಿಸ್ಥಿತಿಯಲ್ಲಿ ಇಂದಿನ ಘಟನೆಯಿಂದ ನಾವು ದಂಗೆಯೆದ್ದಿದ್ದೇವೆ ಎಂಬ ಅಪರಾಧ ನಮ್ಮ ಮೇಲೆ ಬರುವ ಆಸ್ಪದವಿದೆ. ಈ ಗಲಭೆಗೆ ಕಾರಣವೇನೆಂದು ವಿವರಿಸಲು ನಮಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಇದು ಕಾರಣವಿಲ್ಲದೇ ಎದ್ದ ದಂಗೆ,” ಎಂದನು.

41 ಇದನ್ನು ಹೇಳಿ ಅವನು ಜನಸಮೂಹವನ್ನು ಚದರಿಸಿಬಿಟ್ಟನು.