Kannada ಬೈಬಲ್

ಯಾಜಕಕಾಂಡ ಒಟ್ಟು 27 ಅಧ್ಯಾಯಗಳು

ಯಾಜಕಕಾಂಡ

ಯಾಜಕಕಾಂಡ ಅಧ್ಯಾಯ 9
ಯಾಜಕಕಾಂಡ ಅಧ್ಯಾಯ 9

ಆರೋನನು ಪ್ರಥಮಯಜ್ಞವನ್ನು ಸಮರ್ಪಿಸಿದ್ದು 1 ಎಂಟನೆಯ ದಿನದಲ್ಲಿ ಮೋಶೆ ಆರೋನನನ್ನು, ಅವನ ಮಕ್ಕಳನ್ನು ಮತ್ತು ಇಸ್ರಾಯೇಲರ ಹಿರಿಯರನ್ನು ಕರೆದನು.

2 ಅವನು ಆರೋನನಿಗೆ, “ನೀನು ದೋಷಪರಿಹಾರ ಯಜ್ಞಕ್ಕಾಗಿ ಪೂರ್ಣಾಂಗವಾದ ಹೋರಿಕರುವನ್ನು ಮತ್ತು ಸರ್ವಾಂಗಹೋಮಕ್ಕಾಗಿ ಪೂರ್ಣಾಂಗವಾದ ಟಗರನ್ನು ನಿನಗೋಸ್ಕರ ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು.

3 ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ, ‘ಈ ಹೊತ್ತು ಯೆಹೋವನು ಪ್ರತ್ಯಕ್ಷನಾಗುತ್ತಾನೆ, ಆದುದರಿಂದ ನೀವು ಆತನ ಸನ್ನಿಧಿಯಲ್ಲಿ ದೋಷಪರಿಹಾರಕ್ಕಾಗಿ ಸಮರ್ಪಿಸಲು ಒಂದು ಹೋತವನ್ನು, ಸರ್ವಾಂಗಹೋಮಕ್ಕಾಗಿ ಒಂದು ವರ್ಷದ ಪೂರ್ಣಾಂಗವಾದ ಕರುವನ್ನು,

ಯಾಜಕಕಾಂಡ ಅಧ್ಯಾಯ 9

4 ಕುರಿಯನ್ನು ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನು, ಟಗರನ್ನು ಧಾನ್ಯನೈವೇದ್ಯಕ್ಕಾಗಿ ಎಣ್ಣೆಮಿಶ್ರವಾದ ಪದಾರ್ಥವನ್ನು ತೆಗೆದುಕೊಂಡು ಯೆಹೋವನ ಮುಂದೆ ಬರಬೇಕೆಂದು ಆಜ್ಞಾಪಿಸು’ ” ಅಂದನು.

5 ಮೋಶೆ ಆಜ್ಞಾಪಿಸಿದ ಮೇರೆಗೆ ಅವರು ಅವುಗಳನ್ನೆಲ್ಲಾ ದೇವದರ್ಶನ ಗುಡಾರದ ಹತ್ತಿರಕ್ಕೆ ತಂದರು. ಸರ್ವಸಮೂಹದವರೆಲ್ಲರೂ ಹತ್ತಿರಕ್ಕೆ ಬಂದು ಯೆಹೋವನ ಸನ್ನಿಧಿಯಲ್ಲಿ ನಿಂತರು.

6 ಆಗ ಮೋಶೆ ಅವರಿಗೆ, “ನೀವು ಏನು ಮಾಡಬೇಕೆಂದು ಯೆಹೋವನು ಆಜ್ಞಾಪಿಸಿದ್ದು ಇದೇ; ಅದರಂತೆ ನಡೆದರೆ ಯೆಹೋವನ ಮಹಿಮೆ ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.

ಯಾಜಕಕಾಂಡ ಅಧ್ಯಾಯ 9

7 ಆಗ ಮೋಶೆ ಆರೋನನಿಗೆ, “ಯಜ್ಞವೇದಿಯ ಹತ್ತಿರಕ್ಕೆ ಬಂದು ನೀನು ಮಾಡಬೇಕಾದ ದೋಷಪರಿಹಾರಕ ಯಜ್ಞವನ್ನು, ಸರ್ವಾಂಗಹೋಮವನ್ನು ಸಮರ್ಪಿಸಿ ನಿನಗೋಸ್ಕರವೂ ಮತ್ತು ನಿನ್ನ ಜನರಿಗೋಸ್ಕರವೂ ದೋಷವನ್ನು ಪರಿಹರಿಸು; ಜನರು ತಂದದ್ದನ್ನು ಸಮರ್ಪಿಸಿ ಯೆಹೋವನ ಆಜ್ಞೆಯಂತೆ ಅವರಿಗಾಗಿ ದೋಷಪರಿಹಾರವನ್ನು ಮಾಡು” ಎಂದು ಹೇಳಿದನು.

8 ಆರೋನನು ಯಜ್ಞವೇದಿಯ ಹತ್ತಿರಕ್ಕೆ ಹೋಗಿ ತನಗೋಸ್ಕರ ದೋಷಪರಿಹಾರಕ ಯಜ್ಞದ ಹೋರಿಯನ್ನು ವಧಿಸಿದನು.

9 ಆರೋನನ ಮಕ್ಕಳು ಅದರ ರಕ್ತವನ್ನು ಅವನಿಗೆ ಒಪ್ಪಿಸಿದಾಗ ಅವನು ಅದರಲ್ಲಿ ತನ್ನ ಬೆರಳನ್ನು ಅದ್ದಿ, ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಹೊಯ್ದುಬಿಟ್ಟನು.

ಯಾಜಕಕಾಂಡ ಅಧ್ಯಾಯ 9

10 ಆ ದೋಷಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದಂತೆ ಯಜ್ಞವೇದಿಯ ಮೇಲೆ ಹೋಮಮಾಡಿದನು.

11 ಅದರ ಮಾಂಸವನ್ನು ಮತ್ತು ಚರ್ಮವನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಡಿಸಿಬಿಟ್ಟನು.

12 ತರುವಾಯ ಸರ್ವಾಂಗಹೋಮ ಪಶುವನ್ನು ವಧಿಸಿದನು. ಆರೋನನ ಮಕ್ಕಳು ಅದರ ರಕ್ತವನ್ನು ಅವನಿಗೆ ತಂದು ಒಪ್ಪಿಸಿದಾಗ ಅವನು ಅದನ್ನು ಯಜ್ಞವೇದಿಯ ಸುತ್ತಲೂ ಎರಚಿದನು.

ಯಾಜಕಕಾಂಡ ಅಧ್ಯಾಯ 9

13 ಅವರು ಆ ಪಶುವಿನ ಮಾಂಸಭಾಗಗಳನ್ನು ಮತ್ತು ತಲೆಯನ್ನು ಒಂದೊಂದಾಗಿ ಒಪ್ಪಿಸಿದಾಗ ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.

14 ಅದರ ಕರುಳುಗಳನ್ನು ಮತ್ತು ಕಾಲುಗಳನ್ನು ತೊಳೆದು ಯಜ್ಞವೇದಿಯಲ್ಲಿ ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಹೋಮಮಾಡಿದನು.

15 ತರುವಾಯ ಜನಸಮೂಹವು ಸಮರ್ಪಿಸುವ ಪಶುಗಳನ್ನು ಆರೋನನು ತರಿಸಿ ಅವುಗಳಲ್ಲಿ ದೋಷಪರಿಹಾರಕ ಹೋತವನ್ನು ಮೊದಲನೆಯ ಪಶುವಿನಂತೆ ವಧಿಸಿ ಅವರಿಗೋಸ್ಕರ ದೋಷಪರಿಹಾರಕ್ಕಾಗಿ ಅದನ್ನು ಸಮರ್ಪಿಸಿದನು.

ಯಾಜಕಕಾಂಡ ಅಧ್ಯಾಯ 9

16 ಸರ್ವಾಂಗಹೋಮ ಪಶುವನ್ನು ಯಥಾವಿಧಿಯಾಗಿ ಸಮರ್ಪಿಸಿದನು.

17 ಅವರು ತಂದ ಧಾನ್ಯನೈವೇದ್ಯ ದ್ರವ್ಯಗಳಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು, ಹೊತ್ತಾರೆಯ ಸರ್ವಾಂಗಹೋಮದ ಸಂಗಡ ಅದನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.

18 ಬಳಿಕ ಜನರಿಗೋಸ್ಕರ ಸಮಾಧಾನಯಜ್ಞಕ್ಕಾಗಿ ನೇಮಕವಾದ ಹೋರಿಯನ್ನು ಮತ್ತು ಟಗರನ್ನು ವಧಿಸಿದನು. ಆರೋನನ ಮಕ್ಕಳು ಅವುಗಳ ರಕ್ತವನ್ನು ಒಪ್ಪಿಸಲಾಗಿ ಅವನು ಅದನ್ನು ಯಜ್ಞವೇದಿಯ ಸುತ್ತಲೂ ಎರಚಿದನು.

ಯಾಜಕಕಾಂಡ ಅಧ್ಯಾಯ 9

19 ಅವರು ಹೋರಿಯ ಕೊಬ್ಬನ್ನು, ಟಗರಿನ ಬಾಲದ ಕೊಬ್ಬನ್ನು, ಅಂಗಾಂಶದ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಳಿಜದ ಹತ್ತಿರವಿರುವ ಕೊಬ್ಬನ್ನು,

20 ಎದೆಯ ಭಾಗಗಳ ಮೇಲೆ ಇಟ್ಟು ಒಪ್ಪಿಸಲಾಗಿ ಅವನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಿದನು.

21 ಮೋಶೆಯು ಆಜ್ಞಾಪಿಸಿದಂತೆ ಆರೋನನು ಅವುಗಳ ಎದೆಯ ಭಾಗಗಳನ್ನು ಮತ್ತು ಬಲತೊಡೆಯನ್ನು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು.

22 ಆರೋನನು ಆ ದೋಷಪರಿಹಾರಕ ಯಜ್ಞವನ್ನು, ಸರ್ವಾಂಗಹೋಮವನ್ನು ಮತ್ತು ಸಮಾಧಾನಯಜ್ಞಗಳನ್ನು ಸಮರ್ಪಿಸಿದ ನಂತರ ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿ ಇಳಿದು ಬಂದನು.

ಯಾಜಕಕಾಂಡ ಅಧ್ಯಾಯ 9

23 ತರುವಾಯ ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಅಲ್ಲಿಂದ ಹೊರಗೆ ಬಂದಾಗ ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು.

24 ಯೆಹೋವನ ಸನ್ನಿಧಿಯಿಂದ ಬೆಂಕಿಯು ಹೊರಟು ಯಜ್ಞವೇದಿಯ ಮೇಲಿದ್ದ ಸರ್ವಾಂಗಹೋಮದ್ರವ್ಯವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಉತ್ಸಾಹದಿಂದ ಆರ್ಭಟಿಸಿ, ಅಡ್ಡಬಿದ್ದು ನಮಸ್ಕರಿಸಿದರು.