Kannada ಬೈಬಲ್
ವಿಮೋಚನಕಾಂಡ ಒಟ್ಟು 40 ಅಧ್ಯಾಯಗಳು
ವಿಮೋಚನಕಾಂಡ
ವಿಮೋಚನಕಾಂಡ ಅಧ್ಯಾಯ 5
ವಿಮೋಚನಕಾಂಡ ಅಧ್ಯಾಯ 5
ಫರೋಹನ ಮಂದೆ ಮೋಶೆ ಮತ್ತು ಆರೋನರು 1 ಬಳಿಕ ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಹೋಗಿ, “ಇಸ್ರಾಯೇಲರ ದೇವರಾದ ಯೆಹೋವನು, ನನ್ನ ಜನರು ನನಗಾಗಿ ಅರಣ್ಯದೊಳಗೆ ಜಾತ್ರೆ ನಡೆಸುವಂತೆ ಅವರಿಗೆ ಅಪ್ಪಣೆ ಕೊಡಬೇಕು ಎಂದು ಹೇಳಿದ್ದಾನೆ” ಅಂದರು.
2 ಅದಕ್ಕೆ ಫರೋಹನು, “ಯೆಹೋವನೆಂಬುವವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲರನ್ನು ಹೋಗಗೊಡಿಸುವುದೇತಕ್ಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ, ಇಸ್ರಾಯೇಲರನ್ನು ಹೋಗಲು ನಾನು ಬಿಡುವುದೇ ಇಲ್ಲ” ಅಂದನು.
ವಿಮೋಚನಕಾಂಡ ಅಧ್ಯಾಯ 5
3 ಆಗ ಅವರು, “ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡನು. ಅಪ್ಪಣೆಯಾದರೆ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣಮಾಡಿ, ನಮ್ಮ ದೇವರಾದ ಯೆಹೋವನಿಗೋಸ್ಕರ ಯಜ್ಞಮಾಡಿ ಬರುವೆವು. ಇಲ್ಲವಾದರೆ ಆತನು ನಮ್ಮನ್ನು ವ್ಯಾಧಿಯಿಂದಾದರೂ, ಕತ್ತಿಯಿಂದಾದರೂ ಸಂಹಾರಮಾಡುವನು” ಎಂದು ಹೇಳಿದರು.
4 ಐಗುಪ್ತರ ಅರಸನು ಅವರಿಗೆ, “ಮೋಶೆ ಮತ್ತು ಆರೋನರೇ, ಈ ಜನರು ತಮ್ಮ ಕೆಲಸವನ್ನು ಮಾಡದಂತೆ ಯಾಕೆ ಅಡ್ಡಿ ಮಾಡುತ್ತೀರಿ? ನಿಮ್ಮ ಬಿಟ್ಟೀ ಕೆಲಸಕ್ಕೆ ಹೋಗಿರಿ” ಎಂದು ಹೇಳಿದನು.
ವಿಮೋಚನಕಾಂಡ ಅಧ್ಯಾಯ 5
5 ಫರೋಹನು, “ಇಬ್ರಿಯರು ದೇಶದಲ್ಲಿ ಹೆಚ್ಚಾಗಿದ್ದಾರೆ. ಅವರು ತಮ್ಮ ಬಿಟ್ಟೀ ಕೆಲಸಗಳನ್ನು ಮಾಡದಂತೆ ನಿಲ್ಲಿಸಿ ಬಿಡುತ್ತಿದ್ದೀರಲ್ಲಾ?” ಎಂದನು.
6 ಆ ದಿನದಲ್ಲಿ ಫರೋಹನು ಬಿಟ್ಟೀಮಾಡಿಸುವವರನ್ನು ಮತ್ತು ಅವರ ಅಧಿಕಾರಿಗಳನ್ನು ಕರೆಯಿಸಿ,
7 “ಇನ್ನು ಮೇಲೆ ನೀವು ಆ ಜನರಿಗೆ ಇಟ್ಟಿಗೆ ಮಾಡುವುದಕ್ಕೆ ಹುಲ್ಲನ್ನು ಕೊಡಬಾರದು. ಅವರೇ ಹೋಗಿ ಹುಲ್ಲನ್ನು ಶೇಖರಿಸಿಕೊಳ್ಳಲಿ,
8 ಆದರೂ ಅವರು ಈವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆಯಾಗಬಾರದು ಎಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ, ಆದುದರಿಂದಲೇ ಅವರು, ‘ನಾವು ಹೋಗಿ ನಮ್ಮ ದೇವರಿಗೆ ಯಜ್ಞಮಾಡಿ ಬರುವುದಕ್ಕೆ ಅಪ್ಪಣೆಯಾಗಬೇಕು’ ಎಂದು ಕೂಗಿಕೊಳ್ಳುತ್ತಿದ್ದಾರೆ.
ವಿಮೋಚನಕಾಂಡ ಅಧ್ಯಾಯ 5
9 ಈ ಜನರು ವ್ಯರ್ಥವಾದ ಮಾತುಗಳಿಗೆ ಗಮನ ಕೊಡದಂತೆ ನೀವು ಅವರ ಮೇಲೆ ಹೆಚ್ಚು ಕೆಲಸವನ್ನು ಹೊರಿಸಿರಿ. ಅವರು ದುಡಿಯಲಿ” ಎಂದು ಆಜ್ಞಾಪಿಸಿದನು.
ಐಗುಪ್ತ್ಯರು ಇಸ್ರಾಯೇಲರನ್ನು ಹೆಚ್ಚಾಗಿ ಬಾಧಿಸಿದ್ದು 10 ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಮತ್ತು ಅಧಿಕಾರಿಗಳೂ ಹೊರಗೆ ಹೋಗಿ ಆ ಜನರಿಗೆ, “ನಿಮಗೆ ಹುಲ್ಲನ್ನು ಕೊಡಬಾರದೆಂದು ಫರೋಹನ ಅಪ್ಪಣೆಯಾಗಿದೆ.
11 ನಿಮಗೆ ಹುಲ್ಲು ಎಲ್ಲಿ ದೊರಕುವುದೋ ಅಲ್ಲಿಗೆ ನೀವೇ ಹೋಗಿ ತೆಗೆದುಕೊಳ್ಳಿರಿ. ಆದರೂ ನೀವು ಮಾಡಬೇಕಾದ ಕೆಲಸದಲ್ಲಿ ಸ್ವಲ್ಪವೂ ಕಡಿಮೆಯಾಗಬಾರದು” ಎಂದು ಹೇಳಿದರು.
ವಿಮೋಚನಕಾಂಡ ಅಧ್ಯಾಯ 5
12 ಹೀಗಿರಲಾಗಿ ಜನರು ಹುಲ್ಲನ್ನು ಕೂಡಿಸಿಕೊಳ್ಳುವುದಕ್ಕಾಗಿ ಐಗುಪ್ತ ದೇಶದಲ್ಲೆಲ್ಲಾ ಚದರಿಹೋಗಿ ಹುಡುಕತೊಡಗಿದರು.
13 ಇದಲ್ಲದೆ ಬಿಟ್ಟೀ ಕೆಲಸ ಮಾಡಿಸುವವರು, “ನಿಮಗೆ ಹುಲ್ಲು ಇದ್ದಾಗ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಅದೇ ದಿನದಲ್ಲೇ ಮುಗಿಸಬೇಕು” ಎಂದು ಹೇಳಿ ಅವರನ್ನು ಅವಸರ ಪಡಿಸಿದರು.
14 ಫರೋಹನ ಅಧಿಕಾರಿಗಳು ತಾವೇ ನೇಮಿಸಿದ ಇಸ್ರಾಯೇಲರ ಮೇಲ್ವಿಚಾರಕರಿಗೆ, “ನೀವು ಮೊದಲು ಇಟ್ಟಿಗೆಗಳ ಲೆಕ್ಕ ಒಪ್ಪಿಸುತ್ತಿದ್ದಂತೆ ನಿನ್ನೆ ಹಾಗೂ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ” ಎಂದು ಹೇಳಿ ಅವರನ್ನು ಹೊಡೆದರು.
ವಿಮೋಚನಕಾಂಡ ಅಧ್ಯಾಯ 5
15 ಹೀಗಿರಲು ಇಸ್ರಾಯೇಲರ ಮೇಲ್ವಿಚಾರಕರು ಫರೋಹನ ಬಳಿಗೆ ಹೋಗಿ, “ಏಕೆ ನಿನ್ನ ದಾಸರಿಗೆ ಹೀಗೆ ಮಾಡುತ್ತಿರುವಿರಿ ಸ್ವಾಮೀ?
16 ನಿನ್ನ ದಾಸರಿಗೆ, ನೇಮಿಸಿದ ಅಧಿಕಾರಿಗಳು ಹುಲ್ಲನ್ನು ಕೊಡದೆ ‘ಇಟ್ಟಿಗೆಗಳನ್ನು ಮಾಡಿರಿ!’ ಎಂದು ಹೇಳುತ್ತಾ ನಮ್ಮನ್ನು ಹೊಡೆಯುತ್ತಿದ್ದಾರೆ. ಹೀಗೆ ನಿನ್ನ ಜನರು ಮಾಡುತ್ತಿರುವುದು ಪಾಪಕಾರ್ಯವಾಗಿದೆ” ಎಂದು ಗೋಳಾಡಿದರು.
17 ಅದಕ್ಕೆ ಅವನು, “ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ, ‘ನಾವು ಹೋಗಿ ಯೆಹೋವನಿಗೆ ಯಜ್ಞವನ್ನರ್ಪಿಸಿ ಬರಬೇಕು’ ಎಂದು ಹೇಳುತ್ತಿದ್ದೀರಿ.
ವಿಮೋಚನಕಾಂಡ ಅಧ್ಯಾಯ 5
18 ಆದ್ದರಿಂದ ಈಗ ಕೆಲಸಕ್ಕೆ ನಡೆಯಿರಿ ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೂ ನೇಮಿಸಿದ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಬೇಕು” ಅಂದನು.
19 ದಿನ ದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂಬ ಅಪ್ಪಣೆಯಾಗಿದ್ದರಿಂದ ಇಸ್ರಾಯೇಲರ ಮೇಲ್ವಿಚಾರಕರು ತಾವು ದುರವಸ್ಥೆಯಲ್ಲಿ ಸಿಕ್ಕಿಕೊಂಡಿವೆಂದು ತಿಳಿದುಕೊಂಡರು.
20 ಅವರು ಫರೋಹನ ಬಳಿಯಿಂದ ಹೊರಗೆ ಬಂದಾಗ ತಮ್ಮನ್ನು ಎದುರುಗೊಳ್ಳುವುದಕ್ಕೆ ನಿಂತಿದ್ದ ಮೋಶೆ ಮತ್ತು ಆರೋನರನ್ನು ನೋಡಿ
ವಿಮೋಚನಕಾಂಡ ಅಧ್ಯಾಯ 5
21 ಮೋಶೆ ಹಾಗು ಆರೋನರಿಗೆ, “ಯೆಹೋವನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ. ಏಕೆಂದರೆ ಫರೋಹನು ಮತ್ತು ಅವನ ಸೇವಕರೂ ನಮ್ಮನ್ನು ನೋಡಿ ಅಸಹ್ಯಪಡುವಂತೆ ನೀವು ಮಾಡಿರುವಿರಿ. ನಮ್ಮನ್ನು ಸಂಹಾರಮಾಡುವುದಕ್ಕೆ ಅವರ ಕೈಗೆ ಕತ್ತಿಯನ್ನು ಕೊಟ್ಟಿದ್ದೀರಿ” ಅಂದರು. “ಯೆಹೋವನು ನಿಮ್ಮ ತಪ್ಪನ್ನು ವಿಚಾರಿಸಿ ತಕ್ಕ ಶಿಕ್ಷೆಯನ್ನು ವಿಧಿಸಲಿ” ಎಂದು ಹೇಳಿದರು.
ದೇವರು ಮೋಶೆಯನ್ನು ಧೈರ್ಯಪಡಿಸಿದ್ದು 22 ಆಗ ಮೋಶೆಯು ಯೆಹೋವನ ಬಳಿಗೆ ಹಿಂತಿರುಗಿ ಬಂದು, “ಸ್ವಾಮೀ, ಈ ಜನರಿಗೆ ಕೇಡನ್ನು ಮಾಡಿದ್ದೀಯಲ್ಲಾ? ನನ್ನನ್ನು ಕಳುಹಿಸಿದ್ದು ಯಾಕೆ?
ವಿಮೋಚನಕಾಂಡ ಅಧ್ಯಾಯ 5
23 ನಾನು ಫರೋಹನ ಬಳಿಗೆ ಹೋಗಿ ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಿದ್ದಾನೆ. ನೀನು ನಿನ್ನ ಜನರನ್ನು ಎಷ್ಟು ಮಾತ್ರವೂ ತಪ್ಪಿಸಲಿಲ್ಲವಲ್ಲ” ಎಂದು ಹೇಳಿದನು.