Kannada ಬೈಬಲ್

ಎಸ್ತೇರಳು ಒಟ್ಟು 10 ಅಧ್ಯಾಯಗಳು

ಎಸ್ತೇರಳು

ಎಸ್ತೇರಳು ಅಧ್ಯಾಯ 6
ಎಸ್ತೇರಳು ಅಧ್ಯಾಯ 6

ಮೊರ್ದೆಕೈಯನ್ನು ಸನ್ಮಾನಿಸಿದ ಅರಸನು 1 ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆಬರಲಿಲ್ಲ; ಆದುದರಿಂದ ಅವನು ಪೂರ್ವ ಘಟನೆಗಳ ಗ್ರಂಥವನ್ನು ತರಲು ಸೇವಕರಿಗೆ ಅಪ್ಪಣೆಮಾಡಿ ಅದನ್ನು ಪಾರಾಯಣಮಾಡಿಸುತ್ತಿದ್ದನು.

2 ಅಹಷ್ವೇರೋಷ್ ರಾಜನನ್ನು ಕೊಲ್ಲಬೇಕೆಂದು ದ್ವಾರಪಾಲಕರಾದ ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರೂ ರಾಜಕಂಚುಕಿಗಳು ಒಳಸಂಚುಮಾಡಿದ ಸಂಗತಿಯೂ ಅದು ಮೊರ್ದೆಕೈ ಮುಖಾಂತರ ಬಯಲಿಗೆ ಬಂದ ಸಂಗತಿಯೂ ಅದರಲ್ಲಿ ಬರೆಯಲಾಗಿತ್ತು.

ಎಸ್ತೇರಳು ಅಧ್ಯಾಯ 6

3 ಆಗ ಅರಸನು, “ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವು?” ಎಂದು ವಿಚಾರಿಸಿದಾಗ ಅವನ ಸಾನ್ನಿಧ್ಯಸೇವಕರಾದ ಪರಿವಾರದವರು, “ಏನೂ ದೊರಕಲಿಲ್ಲ” ಎಂದು ಹೇಳಿದರು.

4 ಅರಸನು, “ಪ್ರಾಕಾರದಲ್ಲಿ ಯಾರಿದ್ದಾರೆ?” ಎಂದು ಕೇಳಿದನು. ಅಷ್ಟರಲ್ಲಿ ಹಾಮಾನನು ತಾನು ಸಿದ್ಧಮಾಡಿಸಿದ ಗಲ್ಲಿಗೆ ಮೊರ್ದೆಕೈಯನ್ನು ನೇತುಹಾಕಿಸುವುದಕ್ಕೆ ಅರಸನ ಅಪ್ಪಣೆ ಪಡೆದುಕೊಳ್ಳಬೇಕೆಂದು ಅರಮನೆಯ ಹೊರಗಣ ಪ್ರಾಕಾರದಲ್ಲಿ ಬಂದು ನಿಂತಿದ್ದನು.

5 ಆಗ ರಾಜಸೇವಕರು, “ಇಗೋ, ಪ್ರಾಕಾರದಲ್ಲಿ ಹಾಮಾನನಿರುತ್ತಾನೆ” ಎಂದು ಬಿನ್ನವಿಸಿದರು. ಆಗ ಅರಸನು, “ಅವನು ಒಳಗೆ ಬರಲಿ” ಅಂದನು.

ಎಸ್ತೇರಳು ಅಧ್ಯಾಯ 6

6 ಹಾಮಾನನು ಬಂದಾಗ, “ಅರಸನು ಯಾರನ್ನಾದರು ಸನ್ಮಾನಿಸಬೇಕೆಂದು ಇಷ್ಟವುಳ್ಳವನಾಗಿದ್ದರೆ ಅಂಥವನಿಗೆ ಮಾಡಬೇಕಾದದ್ದೇನು?” ಎಂದು ಅವನನ್ನು ಕೇಳಿದನು.

7 ಅದಕ್ಕೆ ಹಾಮಾನನು, “ಅರಸನು ನನ್ನನ್ನಲ್ಲದೆ ಇನ್ನಾರನ್ನು ಸನ್ಮಾನಿಸುವುದಕ್ಕೆ ಇಷ್ಟವುಳ್ಳವನಾಗಿರುವನು” ಅಂದುಕೊಂಡನು.

8 ಅವನು ಅರಸನಿಗೆ, “ಯಾರನ್ನಾದರೂ ಸನ್ಮಾನಿಸಬೇಕೆಂದು ಅರಸನಿಗೆ ಇಷ್ಟವಿದ್ದರೆ ತಾನು ಧರಿಸಿಕೊಳ್ಳುವ ರಾಜ ವಸ್ತ್ರಗಳನ್ನೂ ಮತ್ತು ಸವಾರಿಮಾಡುವ ಪಟ್ಟದ ಕುದುರೆಯನ್ನೂ ತರಿಸಬೇಕು.

ಎಸ್ತೇರಳು ಅಧ್ಯಾಯ 6

9 ಆ ವಸ್ತ್ರಗಳನ್ನೂ ಕುದುರೆಯನ್ನೂ ಪ್ರಧಾನರಾದ ಅರಸನ ಸರದಾರರಲ್ಲೊಬ್ಬನ ವಶಕ್ಕೆ ಕೊಟ್ಟು, ಅರಸನು ಸನ್ಮಾನಿಸಬೇಕೆಂದಿರುವ ಪುರುಷನಿಗೆ ಆ ರಾಜವಸ್ತ್ರಗಳನ್ನು ಹಾಕಿಸಬೇಕು. ಅನಂತರ ಅವನನ್ನು ಆ ಕುದುರೆಯ ಮೇಲೆ ಕುಳ್ಳಿರಿಸಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ ಅವನ ಮುಂದೆ, ‘ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ’ ಎಂದು ಪ್ರಕಟಣೆ ಮಾಡಿಸಬೇಕು” ಎಂದು ಹೇಳಿದನು.

10 ಕೂಡಲೆ ಅರಸನು ಹಾಮಾನನಿಗೆ, “ನೀನು ಹೇಳಿದ ವಸ್ತ್ರಗಳನ್ನೂ ಮತ್ತು ಕುದುರೆಯನ್ನೂ ಬೇಗನೆ ತೆಗೆದುಕೊಂಡು ಬಂದು ಅರಮನೆಯ ಬಾಗಿಲಿನಲ್ಲಿ ಕುಳಿತುಕೊಂಡಿರುವ ಮೊರ್ದೆಕೈ ಎಂಬ ಯೆಹೂದ್ಯನಿಗೆ ಹಾಗೆಯೇ ಮಾಡು; ನೀನು ಹೇಳಿದವುಗಳಲ್ಲಿ ಒಂದನ್ನೂ ನೆರವೇರಿಸದೆ ಬಿಡಬೇಡ” ಎಂದು ಅಪ್ಪಣೆಮಾಡಿದನು.

ಎಸ್ತೇರಳು ಅಧ್ಯಾಯ 6

11 ಹಾಮಾನನು ಆ ವಸ್ತ್ರಗಳನ್ನೂ ಮತ್ತು ಕುದುರೆಯನ್ನೂ ತೆಗೆದುಕೊಂಡು ಬಂದು, ಮೊರ್ದೆಕೈಯನ್ನು ಭೂಷಿಸಿ, ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ಅವನ ಮುಂದೆ, “ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ” ಎಂದು ಪ್ರಕಟಣೆಮಾಡಿಸಿದನು.

12 ಮೊರ್ದೆಕೈಯು ಹಿಂತಿರುಗಿ ಅರಮನೆಯ ಬಾಗಿಲಿಗೆ ಹೋದನು. ಹಾಮಾನನಾದರೋ ದುಃಖದಿಂದ ಮುಖವನ್ನು ಮುಚ್ಚಿಕೊಂಡು ಶೀಘ್ರವಾಗಿ ಮನೆಗೆ ಹೋಗಿ ತನ್ನ ಹೆಂಡತಿಯಾದ ಜೆರೆಷಳ ಮತ್ತು ಎಲ್ಲಾ ಆಪ್ತರ ಮುಂದೆ ತನಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದನು.

ಎಸ್ತೇರಳು ಅಧ್ಯಾಯ 6

13 ಆಗ ಅವನ ಪಂಡಿತರೂ ಮತ್ತು ಹೆಂಡತಿಯೂ ಅವನಿಗೆ, “ಯಾವನ ಮುಂದೆ ನಿನ್ನ ಸೋಲು ಪ್ರಾರಂಭವಾಯಿತೋ ಆ ಮನುಷ್ಯನು ಯೆಹೂದ ಸಂತಾನದವನಾಗಿದ್ದರೆ ನೀನು ಗೆಲ್ಲಲಾರಿ, ಅವನ ಮುಂದೆ ಬಿದ್ದು ಹಾಳಾಗುವಿ” ಅಂದರು.

14 ಅವರು ಇನ್ನೂ ಅವನೊಡನೆ ಮಾತನಾಡುತ್ತಿರುವಾಗಲೇ ರಾಜಕಂಚುಕಿಗಳು ಬಂದು ಎಸ್ತೇರಳು ಮಾಡಿಸಿರುವ ಔತಣಕ್ಕೆ ಬೇಗ ಬರಬೇಕೆಂದು ಹಾಮಾನನನ್ನು ಕರೆದೊಯ್ದರು.