Kannada ಬೈಬಲ್
ಮಲಾಕಿಯ ಒಟ್ಟು 4 ಅಧ್ಯಾಯಗಳು
ಮಲಾಕಿಯ ಅಧ್ಯಾಯ 4
1 “ಆ ನ್ಯಾಯತೀರ್ಪಿನ ದಿನವು ಬರುತ್ತಿದೆ. ಅದು ಕುಲುಮೆಯಂತೆ ತೀಕ್ಷ್ಣವಾಗಿರುವದು. ಅಹಂಕಾರಿಗಳೆಲ್ಲಾ ಶಿಕ್ಷಿಸಲ್ಪಡುವರು. ದುಷ್ಟಜನರೆಲ್ಲಾ ಹುಲ್ಲಿನಂತೆ ಸುಡುವರು. ಆ ಸಮಯದಲ್ಲಿ ಒಂದು ಪೊದೆ ಬೆಂಕಿಯಲ್ಲಿ ಸುಡುವಂತೆ ಸುಡುವರು. ಆದರೆ ಕೊಂಬೆ ಅಥವಾ ಬೇರು ಯಾವದೂ ಉಳಿಯುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
2 “ನನ್ನನ್ನು ಹಿಂಬಾಲಿಸುವವರ ಮೇಲೆ ಸೂರ್ಯನ ಪ್ರಕಾಶದಂತೆ ಶುಭವು ಪ್ರಕಾಶಿಸುವದು. ಸೂರ್ಯನ ಕಿರಣಗಳಂತೆ ಅದು ಗುಣಪಡಿಸುವ ಶಕ್ತಿಯನ್ನು ಹೊಂದುವದು. ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಸ್ವತಂತ್ರರಾಗಿಯೂ ಸಂತೋಷವಾಗಿಯೂ ಇರುವಿರಿ.
ಮಲಾಕಿಯ ಅಧ್ಯಾಯ 4
3 ಆಗ ನೀವು ದುಷ್ಟಜನರ ಮೇಲೆ ನಡೆದುಕೊಂಡು ಹೋಗುವಿರಿ; ಅವರು ನಿಮ್ಮ ಕಾಲುಗಳ ಕೆಳಗೆ ಬೂದಿಯಂತಿರುವರು. ನ್ಯಾಯತೀರ್ಪಿನ ಸಮಯದಲ್ಲಿ ನಾನು ಹಾಗೆ ಮಾಡುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
4 “ನನ್ನ ಸೇವಕನಾದ ಮೋಶೆಯ ಕಟ್ಟಳೆಗಳನ್ನು ಅನುಸರಿಸಲು ಮರೆಯಬೇಡಿ. ಹೋರೇಬ್ ಬೆಟ್ಟದಲ್ಲಿ ನಾನು ಆ ನ್ಯಾಯವಿಧಿಗಳನ್ನು ಅವನಿಗೆ ಕೊಟ್ಟೆನು. ಆ ಕಟ್ಟಳೆಗಳೆಲ್ಲಾ ಇಸ್ರೇಲ್ ಜನರಿಗಾಗಿ ಇರುವದು.”
ಮಲಾಕಿಯ ಅಧ್ಯಾಯ 4
5 ಯೆಹೋವನು ಹೀಗೆನ್ನುತ್ತಾನೆ, “ನಾನು ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು. ಅವನು ಯೆಹೋವನಿಂದ ಪ್ರಾಪ್ತಿಯಾಗುವ ಭಯಂಕರವಾದ ಮಹಾ ನ್ಯಾಯತೀರ್ಪಿನ ಕಾಲದಲ್ಲಿ ಬರುವನು.
6 ತಂದೆತಾಯಿಗಳು ಮಕ್ಕಳಿಗೂ ಮಕ್ಕಳು ತಂದೆತಾಯಿಗಳಿಗೂ ನಿಕಟ ಸಂಬಂಧಿಗಳಾಗುವಂತೆ ಅವನು ಮಾಡುವನು. ಇದು ನೆರವೇರಲೇಬೇಕು, ಇಲ್ಲದಿದ್ದಲ್ಲಿ ನಾನು ಬಂದು ನಿಮ್ಮ ದೇಶವನ್ನು ಸಂಪೂರ್ಣವಾಗಿ ನಾಶಮಾಡುವೆನು.”