Kannada ಬೈಬಲ್

ಯೆಶಾಯ ಒಟ್ಟು 66 ಅಧ್ಯಾಯಗಳು

ಯೆಶಾಯ

ಯೆಶಾಯ ಅಧ್ಯಾಯ 65
ಯೆಶಾಯ ಅಧ್ಯಾಯ 65

ಜನರು ದೇವರ ಬಗ್ಗೆ ಜ್ಞಾನ ಹೊಂದುವರು 1 ಯೆಹೋವನು ಹೇಳುವುದೇನೆಂದರೆ, “ನನ್ನ ಆಲೋಚನೆಯನ್ನು ಕೇಳಲು ಬಾರದೆ ಹೋದ ಜನರಿಗೂ ನಾನು ಸಹಾಯ ಮಾಡಿದೆನು. ನನ್ನನ್ನು ಹುಡುಕದವರಿಗೂ ಸಿಕ್ಕಿದೆನು. ನನ್ನ ಹೆಸರನ್ನು ಧರಿಸದ ಜನಾಂಗದೊಡನೆ ನಾನು ಮಾತನಾಡಿದೆನು. ಅವರಿಗೆ, ‘ನಾನಿಲ್ಲಿದ್ದೇನೆ! ನಾನಿಲ್ಲಿದ್ದೇನೆ!’ ಅಂದೆನು.

2 “ನನಗೆ ವಿರುದ್ಧವಾಗಿ ಎದ್ದವರನ್ನು ಸ್ವೀಕರಿಸಲು ನಾನು ದಿನವೆಲ್ಲಾ ಸಿದ್ಧನಾಗಿ ನಿಂತೆನು. ಅವರು ನನ್ನ ಬಳಿಗೆ ಬರುತ್ತಾರೆಂದು ಕಾಯುತ್ತಾ ನಿಂತುಕೊಂಡೆನು. ಆದರೆ ಅವರು ಕೆಟ್ಟಜೀವಿತದಲ್ಲಿಯೇ ಮುಂದುವರಿದರು. ಅವರು ತಮಗೆ ಇಷ್ಟಬಂದ ಹಾಗೆ ನಡೆದರು.

ಯೆಶಾಯ ಅಧ್ಯಾಯ 65

3 ಅವರು ನನ್ನ ಮುಂದೆ ಯಾವಾಗಲೂ ಇದ್ದು ನನ್ನನ್ನು ರೋಷಗೊಳಿಸಿದರು. ಅವರು ತಮ್ಮ ವಿಶೇಷವಾದ ತೋಟಗಳಲ್ಲಿ ಧೂಪಹಾಕಿ ಬಲಿಯರ್ಪಿಸಿದರು.

4 ಅವರು ಸತ್ತವರಿಂದ ಸಂದೇಶ ಪಡೆಯಲು ಸಮಾಧಿಗಳ ನಡುವೆ ಕುಳಿತುಕೊಳ್ಳುವರು. ಅವರು ಹಂದಿ ಮಾಂಸವನ್ನು ತಿನ್ನುತ್ತಾರೆ. ಅವರು ತೆಗೆದುಕೊಳ್ಳುವ ಭಕ್ಷ್ಯಗಳು ಕೊಳೆತ ಮಾಂಸದಿಂದ ಮಲಿನವಾಗಿವೆ.

5 ಆದರೆ ಅವರು ಇತರರಿಗೆ, ‘ನನ್ನ ಬಳಿಗೆ ಬರಬೇಡ. ನೀನು ನಿನ್ನನ್ನು ಶುದ್ಧಮಾಡುವ ತನಕ ನನ್ನನ್ನು ಮುಟ್ಟದಿರು’ ಎಂದು ಹೇಳುವರು. ಅವರು ನನ್ನ ಕಣ್ಣಿನಲ್ಲಿ ಹೊಗೆಯಂತಿದ್ದಾರೆ; ಅವರ ಬೆಂಕಿಯು ಸದಾ ಉರಿಯುತ್ತಿರುವದು.”

ಯೆಶಾಯ ಅಧ್ಯಾಯ 65

ಇಸ್ರೇಲ್ ಶಿಕ್ಷಿಸಲ್ಪಡಲೇಬೇಕು 6 “ಇಗೋ! ನೀವು ಪಾವತಿ ಮಾಡಬೇಕಾದ ರಸೀದಿ ಇಲ್ಲಿದೆ. ನೀವು ಅಪರಾಧಿಗಳೆಂದು ಈ ರಸೀದಿ ತೋರಿಸುತ್ತದೆ. ಈ ಚೀಟಿಯಲ್ಲಿ ಬರೆದ ಮೊತ್ತವನ್ನು ಕೊಡದೆ ಸುಮ್ಮನಿರಲಾರೆ. ನಿಮ್ಮನ್ನು ಶಿಕ್ಷಿಸುವದರ ಮೂಲಕ ಈ ಮೊತ್ತವನ್ನು ಕೊಟ್ಟು ಬಿಡುವೆನು.

7 ನಿಮ್ಮ ಪಾಪಗಳೂ ನಿಮ್ಮ ಪಿತೃಗಳ ಪಾಪಗಳೂ ಒಂದೇಯಾಗಿವೆ. ಇದು ಯೆಹೋವನ ನುಡಿ. ನಿಮ್ಮ ಪೂರ್ವಿಕರು ಬೆಟ್ಟಗಳ ಮೇಲೆ ಧೂಪಸುಟ್ಟು ಪಾಪಮಾಡಿದರು. ಅವರು ಆ ಬೆಟ್ಟಗಳ ಮೇಲೆ ನನ್ನನ್ನು ಅವಮಾನಪಡಿಸಿದರು. ಆದರೆ ನಾನು ಅವರನ್ನು ಮೊದಲು ಶಿಕ್ಷಿಸಿದೆನು. ಅವರಿಗೆ ತಕ್ಕ ಶಿಕ್ಷೆಯನ್ನು ಕೊಟ್ಟೆನು.”

ಯೆಶಾಯ ಅಧ್ಯಾಯ 65

8 ಯೆಹೋವನು ಹೇಳುವುದೇನೆಂದರೆ: “ದ್ರಾಕ್ಷಿಹಣ್ಣಿನಲ್ಲಿ ಹೊಸ ರಸವು ಇರುವಾಗ ಜನರು ಅದನ್ನು ಹಿಂಡಿ ರಸವನ್ನು ತೆಗೆಯುವರು. ಯಾಕೆಂದರೆ ಆ ಹಣ್ಣನ್ನು ಮತ್ತೆ ಉಪಯೋಗಿಸಬೇಕೆಂಬ ಉದ್ದೇಶದಿಂದ ಅದನ್ನು ಸಂಪೂರ್ಣವಾಗಿ ಹಾಳು ಮಾಡುವದಿಲ್ಲ. ಅದೇ ರೀತಿ ನಾನು ನನ್ನ ಸೇವಕರಿಗೂ ಮಾಡುವೆನು. ಅವರನ್ನು ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ.

9 ನಾನು ಯಾಕೋಬನ ಜನರಲ್ಲಿ ಕೆಲವರನ್ನು ಉಳಿಸುವೆನು. ಯೆಹೂದದ ಕೆಲವರು ನನ್ನ ಪರ್ವತವನ್ನು ಪಡೆದುಕೊಳ್ಳುವರು. ನನ್ನ ಸೇವಕರು ಅಲ್ಲಿ ವಾಸಿಸುವರು. ಅಲ್ಲಿ ವಾಸಿಸಬೇಕಾದವರನ್ನು ನಾನೇ ಆರಿಸಿಕೊಳ್ಳುವೆನು.

ಯೆಶಾಯ ಅಧ್ಯಾಯ 65

10 ಆಗ ಶಾರೋನಿನ ಕಣಿವೆಯು ಕುರಿಗಳು ಮೇಯುವ ಮೈದಾನವಾಗುವದು. ಆಕೋರಿನ ಕಣಿವೆಯು ದನಗಳು ಮಲಗುವ ಸ್ಥಳವಾಗುವದು. ಇವೆಲ್ಲವೂ ನನ್ನ ಜನರಿಗಾಗುವದು. ಇವರು ನನಗಾಗಿ ಹುಡುಕುತ್ತಿರುವರು.

11 “ಆದರೆ ನೀವು ಯೆಹೋವನನ್ನು ತೊರೆದಿರುವದರಿಂದ ಶಿಕ್ಷಿಸಲ್ಪಡುವಿರಿ. ನೀವು ನನ್ನ ಪವಿತ್ರ ಪರ್ವತವನ್ನು ಮರೆತುಬಿಟ್ಟಿದ್ದೀರಿ. ನೀವು ‘ಅದೃಷ್ಟ’ ಎಂಬ ಸುಳ್ಳುದೇವರನ್ನು ಪೂಜಿಸಲಾರಂಭಿಸಿದ್ದೀರಿ. ನೀವು ‘ಗತಿ’ ಎಂಬ ಸುಳ್ಳುದೇವರನ್ನು ಅವಲಂಭಿಸಿಕೊಂಡಿದ್ದೀರಿ.

ಯೆಶಾಯ ಅಧ್ಯಾಯ 65

12 ಆದರೆ ನಿಮ್ಮ ಭವಿಷ್ಯವನ್ನು ನಾನು ತೀರ್ಮಾನಿಸುವೆನು. ನೀವು ಖಡ್ಗದಿಂದ ಸಾಯುವಿರಿ ಎಂದು ನಾನು ತೀರ್ಮಾನಿಸಿದ್ದೇನೆ. ನೀವೆಲ್ಲರೂ ಕೊಲ್ಲಲ್ಪಡುವಿರಿ. ಯಾಕೆಂದರೆ ನಾನು ನಿಮ್ಮನ್ನು ಕರೆದಾಗ ನೀವು ಉತ್ತರ ಕೊಡಲಿಲ್ಲ. ನಾನು ಮಾತನಾಡಿದಾಗ ನೀವು ಆಲಿಸಲಿಲ್ಲ. ನಾನು ಕೆಟ್ಟದ್ದೆಂದು ಹೇಳಿದವುಗಳನ್ನು ನೀವು ಮಾಡಿದಿರಿ; ನನಗೆ ಇಷ್ಟವಿಲ್ಲದ್ದನ್ನು ನೀವು ಮಾಡುತ್ತಿರುವಿರಿ.”

13 ನನ್ನ ಒಡೆಯನಾದ ಯೆಹೋವನು ಈ ವಿಷಯಗಳನ್ನು ಹೇಳಿದನು:
“ನನ್ನ ಸೇವಕರು ಊಟಮಾಡುವರು. ಆದರೆ ದುಷ್ಟಜನರಾದ ನೀವು ಹಸಿದವರಾಗಿರುವಿರಿ.
ನನ್ನ ಸೇವಕರು ಕುಡಿಯುವರು. ಆದರೆ ದುಷ್ಟಜನರಾದ ನೀವು ಬಾಯಾರಿದ್ದೀರಿ.
ನನ್ನ ಸೇವಕರು ಸಂತೋಷದಲ್ಲಿರುವರು. ದುಷ್ಟಜನರಾದ ನೀವಾದರೋ ನಾಚಿಕೆಗೆ ಒಳಗಾಗುವಿರಿ.

ಯೆಶಾಯ ಅಧ್ಯಾಯ 65

14 ನನ್ನ ಸೇವಕರ ಹೃದಯಗಳಲ್ಲಿ ಒಳ್ಳೆಯತನವಿದೆ. ಆದ್ದರಿಂದ ಅವರು ಸಂತೋಷವಾಗಿದ್ದಾರೆ. ದುಷ್ಟಜನರಾದ ನೀವಾದರೋ ಹೃದಯದ ಬೇನೆಯಿಂದಾಗಿ ಅಳುವಿರಿ.
ನಿಮ್ಮ ಆತ್ಮವು ಕುಂದಿಹೋಗುವದು; ನೀವು ದುಃಖಕ್ರಾಂತರಾಗುವಿರಿ.

15 ನಿಮ್ಮ ಹೆಸರುಗಳು ನನ್ನ ಸೇವಕರಿಗೆ ಶಾಪವಾಗಿ ಉಪಯೋಗಿಸಲ್ಪಡುತ್ತವೆ.”
ನನ್ನ ಒಡೆಯನಾದ ಯೆಹೋವನು ನಿಮ್ಮನ್ನು ಸಾಯಿಸುವನು. ಆತನು ತನ್ನ ಸೇವಕರನ್ನು ಹೊಸ ಹೆಸರಿನಿಂದ ಕರೆಯುವನು.

ಯೆಶಾಯ ಅಧ್ಯಾಯ 65

16 “ಈಗ ಜನರು ಭೂಮಿಯಿಂದ ಆಶೀರ್ವಾದ ಕೇಳುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಅವರು ನಂಬಿಗಸ್ತನಾದ ದೇವರಿಂದ ಆಶೀರ್ವಾದ ಕೇಳುವರು.
ಈಗ ಜನರು ವಾಗ್ದಾನ ಮಾಡುವಾಗ ಭೂಮಿಯ ಬಲದಲ್ಲಿ ಭರವಸವಿಡುವರು. ಆದರೆ ಮುಂದಿನ ದಿನಗಳಲ್ಲಿ ನಂಬಿಗಸ್ತನಾದ ದೇವರ ಮೇಲೆ ಭರವಸವಿಡುವರು.
ಯಾಕೆಂದರೆ ಗತಿಸಿದ ಸಂಕಟಗಳೆಲ್ಲವೂ ಮರೆತುಹೋಗುತ್ತವೆ. ಇವುಗಳು ನನ್ನ ಕಣ್ಣುಗಳಿಗೆ ಮರೆಯಾಗಿರುತ್ತವೆ.”

ಯೆಶಾಯ ಅಧ್ಯಾಯ 65

ಹೊಸ ಕಾಲ ಬರುತ್ತದೆ 17 “ನಾನು ಹೊಸ ಭೂಮ್ಯಾಕಾಶಗಳನ್ನು ಸೃಷ್ಟಿಸುವೆನು.
ಜನರು ಗತಿಸಿದ ದಿನಗಳನ್ನು ತಮ್ಮ ನೆನಪಿಗೆ ತರುವದಿಲ್ಲ. ಅವರು ಈ ಸಂಗತಿಗಳಲ್ಲಿ ಯಾವುದನ್ನೂ ಜ್ಞಾಪಿಸಿಕೊಳ್ಳುವದಿಲ್ಲ.

18 ನನ್ನ ಜನರು ಸಂತೋಷದಲ್ಲಿರುವರು. ಅವರು ನಿತ್ಯಕಾಲಕ್ಕೂ ಹರ್ಷಿಸುವರು.
ನಾನು ಜೆರುಸಲೇಮನ್ನು ಸಂತಸದಿಂದ ತುಂಬಿಸುವೆನು. ಅವರನ್ನು ಸಂತೋಷದ ಜನರನ್ನಾಗಿ ಮಾಡುವೆನು.

ಯೆಶಾಯ ಅಧ್ಯಾಯ 65

19 “ಆಗ ನಾನು ಜೆರುಸಲೇಮಿನ ವಿಷಯದಲ್ಲಿ ಸಂತೋಷದಿಂದಿರುವೆನು. ನನ್ನ ಜನರ ವಿಷಯದಲ್ಲಿಯೂ ಸಂತೋಷದಿಂದಿರುವೆನು.
ಆ ಪಟ್ಟಣದಲ್ಲಿ ಮತ್ತೆಂದಿಗೂ ರೋಧನವಿರದು, ದುಃಖವಿರದು.

20 ಆ ಪಟ್ಟಣದಲ್ಲಿ ಹುಟ್ಟಿದ ಶಿಶುಗಳೆಲ್ಲಾ ಜೀವಿಸುವವು. ಯಾವ ಮಗುವೇ ಆಗಲಿ ಹುಟ್ಟಿದ ಕೂಡಲೇ ಸಾಯುವದಿಲ್ಲ. ಆ ಪಟ್ಟಣದ ನಿವಾಸಿಗಳಲ್ಲಿ ಯಾರೂ ಕಡಿಮೆ ಆಯುಷ್ಯದಿಂದ ಸಾಯುವದಿಲ್ಲ.
ಪ್ರತಿಯೊಂದು ಮಗುವೂ ದೀರ್ಘಾಯುಷ್ಯವನ್ನು ಹೊಂದುವದು. ಪ್ರತಿಯೊಬ್ಬ ಯುವಕನೂ ಬಹಳ ಕಾಲ ಜೀವಿಸುವನು.
ಆಗ ನೂರು ವರ್ಷ ಪ್ರಾಯದವನು ಸಹ ಯೌವನಸ್ಥನೆಂದು ಕರೆಯಲ್ಪಡುವನು. ಒಬ್ಬನು ನೂರು ವರ್ಷವಾದರೂ ಬಾಳದಿದ್ದರೆ, ಜನರು ಅವನನ್ನು ಶಾಪ ಹೊಂದಿದವನೆಂದು ಹೇಳುವರು.

ಯೆಶಾಯ ಅಧ್ಯಾಯ 65

21 “ಆ ಪಟ್ಟಣದೊಳಗೆ ಒಬ್ಬನು ಮನೆಯನ್ನು ಕಟ್ಟಿದ್ದರೆ ಅದರಲ್ಲಿ ಅವನು ವಾಸಿಸುವನು. ಒಬ್ಬನು ದ್ರಾಕ್ಷಿತೋಟವನ್ನು ನೆಟ್ಟರೆ ಅವನು ಅದರ ಫಲಗಳನ್ನು ತಿನ್ನುವನು.

22 ಇನ್ನು ಮುಂದೆ ಯಾರಾದರೂ ಮನೆಯನ್ನು ಕಟ್ಟಿದರೆ, ಬೇರೆಯವರು ಅದನ್ನು ವಶಮಾಡಿಕೊಂಡು ಅದರಲ್ಲಿ ವಾಸಿಸುವದಿಲ್ಲ.
ಇನ್ನು ಮುಂದೆ ಯಾರಾದರೂ ದ್ರಾಕ್ಷಿತೋಟವನ್ನು ಮಾಡಿದರೆ ಅದರ ಫಲವನ್ನು ಇತರರು ತಿನ್ನುವದಿಲ್ಲ.
ಮರಗಳು ಎಷ್ಟು ಕಾಲ ಬೆಳೆಯುತ್ತವೋ ಅಷ್ಟುಕಾಲ ನನ್ನ ಜನರು ಜೀವಿಸುವರು.
ನಾನು ಆರಿಸಿಕೊಂಡ ಜನರು ತಾವು ಮಾಡಿದ ಕಾರ್ಯಗಳಲ್ಲಿ ಆನಂದಿಸುವರು.

ಯೆಶಾಯ ಅಧ್ಯಾಯ 65

23 ಇನ್ನು ಮುಂದೆ ಜನರು ಬಿಟ್ಟೀಕೆಲಸ ಮಾಡುವದಿಲ್ಲ. ಇನ್ನು ಮುಂದೆ ಮಕ್ಕಳನ್ನು ಹೆರುವಾಗ ಕೇಡಾಗುತ್ತದೆಯೆಂಬ ಭಯವಿರುವುದಿಲ್ಲ.
ನನ್ನ ಎಲ್ಲಾ ಜನರು ಮತ್ತು ಅವರ ಮಕ್ಕಳು ಯೆಹೋವನಿಂದ ಆಶೀರ್ವದಿಸಲ್ಪಡುವರು.

24 ಅವರು ಕೇಳುವ ಮೊದಲೇ ಅವರಿಗೆ ಏನುಬೇಕು ಎಂಬುದನ್ನು ಅರಿತುಕೊಳ್ಳುವೆನು. ಅವರ ಪ್ರಾರ್ಥನೆ ಮುಗಿಯುವ ಮೊದಲೇ ಅವರಿಗೆ ಸಹಾಯ ಮಾಡುವೆನು.

25 ತೋಳಗಳೂ ಕುರಿಮರಿಗಳೂ ಒಟ್ಟಾಗಿ ಮೇಯುವವು. ಸಿಂಹಗಳು ದನಕುರಿಗಳಂತೆ ಹುಲ್ಲನ್ನು ಮೇಯುತ್ತವೆ. ವಿಷದ ಹಾವುಗಳು ಕೇವಲ ಮಣ್ಣನ್ನೇ ತಿನ್ನುತ್ತವೆ.
ನನ್ನ ಪವಿತ್ರಪರ್ವತದಲ್ಲಿ ಅವು ಯಾರಿಗೂ ಕೇಡುಮಾಡುವುದಿಲ್ಲ; ಯಾರಿಗೂ ಭಯ ಹುಟ್ಟಿಸುವುದಿಲ್ಲ.”
ಇವು ಯೆಹೋವನ ನುಡಿಗಳು.