Kannada ಬೈಬಲ್
ಯೆಶಾಯ ಒಟ್ಟು 66 ಅಧ್ಯಾಯಗಳು
ಯೆಶಾಯ ಅಧ್ಯಾಯ 53
1 ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು? ಯೆಹೋವನ ದಂಡನೆಯನ್ನು ನಿಜವಾಗಿಯೂ ಸ್ವೀಕರಿಸಿಕೊಂಡವರು ಯಾರು?
2 ಒಂದು ಸಣ್ಣ ಸಸಿಯು ಬೆಳೆಯುವ ರೀತಿಯಲ್ಲಿ ಯೆಹೋವನ ಮುಂದೆ ಆತನು ಬೆಳೆದನು. ಆತನು ಒಣ ನೆಲದಿಂದ ಚಿಗುರುವ ಬೇರಿನಂತಿದ್ದನು. ಆತನು ಒಬ್ಬ ವಿಶೇಷ ಪುರುಷನಂತೆ ತೋರಲಿಲ್ಲ. ಅಂಥ ಲಕ್ಷಣಗಳೇನೂ ಆತನಲ್ಲಿರಲಿಲ್ಲ. ನಾವು ಆತನನ್ನು ನೋಡಿದಾಗ ಆತನಲ್ಲಿ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ.
3 ಜನರು ಆತನನ್ನು ಪರಿಹಾಸ್ಯ ಮಾಡಿದರು. ಆತನ ಸ್ನೇಹಿತರು ಆತನನ್ನು ತೊರೆದರು. ಆತನು ನೋವಿನಿಂದ ಬಳಲಿದನು. ಆತನು ಕಾಯಿಲೆಯಿಂದ ಬಾಧಿತನಾಗಿದ್ದನು. ಜನರು ಆತನ ಕಡೆಗೆ ನೋಡಲೂ ಇಲ್ಲ. ನಾವು ಆತನನ್ನು ಗಮನಕ್ಕೆ ತರಲೇ ಇಲ್ಲ.
ಯೆಶಾಯ ಅಧ್ಯಾಯ 53
4 ಆದರೆ ಆತನು ನಮ್ಮ ಸಂಕಷ್ಟಗಳನ್ನು ತನ್ನ ಮೇಲೆ ಹೊತ್ತುಕೊಂಡನು. ನಮ್ಮ ಬೇನೆಯನ್ನು ಆತನು ಅನುಭವಿಸಿದನು. ದೇವರು ಆತನನ್ನು ಶಿಕ್ಷಿಸಿದ್ದಾನೆ ಎಂದು ನಾವು ನೆನಸಿದೆವು. ಆತನು ಏನೋ ಮಾಡಿದ್ದಕ್ಕಾಗಿ ದೇವರು ಆತನಿಗೆ ಹೊಡೆದನೆಂದು ಭಾವಿಸಿಕೊಂಡೆವು.
5 ಆದರೆ ನಾವು ಮಾಡಿದ ದುಷ್ಟತನಕ್ಕಾಗಿಯೇ ಆತನು ಬಾಧಿತನಾದನು. ನಮ್ಮ ಅಪರಾಧಗಳ ನಿಮಿತ್ತ ಆತನು ಜಜ್ಜಲ್ಪಟ್ಟನು. ನಾವು ಹೊಂದಬೇಕಾಗಿದ್ದ ಶಿಕ್ಷೆಯನ್ನು ಆತನೇ ಅನುಭವಿಸಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು.
ಯೆಶಾಯ ಅಧ್ಯಾಯ 53
6 ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲಾಡಿದೆವು. ನಮ್ಮ ಸ್ವಂತ ದಾರಿಯಲ್ಲಿ ನಾವು ಹೋದೆವು. ನಮ್ಮ ಅಪರಾಧಗಳಿಂದ ನಾವು ವಿಮುಕ್ತರಾಗುವಂತೆ ಯೆಹೋವನು ನಮ್ಮ ಅಪರಾಧಗಳನ್ನು ಆತನ ಮೇಲೆ ಹಾಕಿದನು.
7 ಆತನು ಬಾಧೆಯನ್ನೂ ಹಿಂಸೆಯನ್ನೂ ಅನುಭವಿಸಿದನು. ಆದರೂ ಆತನು ಪ್ರತಿಭಟಿಸಲಿಲ್ಲ. ಕೊಯ್ಯಲು ಕೊಂಡೊಯ್ಯುವ ಕುರಿಮರಿಯಂತೆಯೂ ಉಣ್ಣೆಯನ್ನು ಕತ್ತರಿಸುವಾಗ ಮೌನವಾಗಿರುವ ಕುರಿಮರಿಯಂತೆಯೂ ಆತನು ಮೌನವಾಗಿದ್ದನು.
8 ಜನರು ಬಲವಂತದಿಂದ ಆತನನ್ನು ಕೊಂಡೊಯ್ದರು; ಆತನಿಗೆ ಅನ್ಯಾಯವಾದ ತೀರ್ಪನ್ನು ನೀಡಿದರು; ಆತನನ್ನು ಜೀವಲೋಕದಿಂದಲೇ ತೆಗೆದುಹಾಕಿ ಆತನಿಗೆ ಸಂತಾನವೇ ಇಲ್ಲದಂತೆ ಮಾಡಿದರು. ನನ್ನ ಜನರ ಪಾಪಗಳಿಗಾಗಿ ಆತನು ದಂಡಿಸಲ್ಪಟ್ಟನು.
ಯೆಶಾಯ ಅಧ್ಯಾಯ 53
9 ಆತನು ಸತ್ತ ಬಳಿಕ ಧನಿಕರೊಂದಿಗೂ ದುಷ್ಟರೊಂದಿಗೂ ಹೂಳಲ್ಪಟ್ಟನು. ಆತನು ಯಾವ ಅಪರಾಧವನ್ನೂ ಮಾಡಲಿಲ್ಲ; ಸುಳ್ಳಾಡಲಿಲ್ಲ. ಆದರೂ ಇವೆಲ್ಲವೂ ಆತನಿಗೆ ಸಂಭವಿಸಿದವು.
10 ಆತನನ್ನು ಬಾಧೆಯಿಂದ ಜಜ್ಜಬೇಕೆಂಬುದು ಯೆಹೋವನ ನಿರ್ಧಾರವಾಗಿತ್ತು. ಆದ್ದರಿಂದ ಈ ಸೇವಕನು ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು. ಆದರೆ ಆತನು ತನ್ನ ಹೊಸ ಜೀವಿತದಲ್ಲಿ ಚಿರಂಜೀವಿಯಾಗುವನು. ಆತನು ತನ್ನ ಜನರನ್ನು ದೃಷ್ಟಿಸಿ ನೋಡುವನು. ಯೆಹೋವನ ಸಂಕಲ್ಪದ ಮೇರೆಗೆ ಎಲ್ಲವನ್ನೂ ಆತನು ಮಾಡುವನು.
ಯೆಶಾಯ ಅಧ್ಯಾಯ 53
11 ಆತನು ತನ್ನ ಆತ್ಮದಲ್ಲಿ ಬಹಳವಾಗಿ ಸಂಕಟಪಡುವನು. ಆದರೆ ಒಳ್ಳೆಯ ಕಾರ್ಯಗಳಾಗುವುದನ್ನು ಆತನು ನೋಡುವನು. ತಾನು ಕಲಿತ ವಿಷಯಗಳಲ್ಲಿ ಸಂತುಷ್ಟನಾಗುವನು. ಅನೇಕರು ತಮ್ಮ ಪಾಪಗಳಿಂದ ಬಿಡುಗಡೆ ಹೊಂದುವಂತೆ ನನ್ನ ಒಳ್ಳೇ ಸೇವಕನು ಮಾಡುವನು. ಅವರ ಪಾಪಗಳನ್ನು ಹೊತ್ತುಕೊಂಡು ಹೋಗುವನು.
12 ಈ ಕಾರಣಕ್ಕಾಗಿ ನಾನು ಆತನನ್ನು ಜನರ ಮಧ್ಯದಲ್ಲಿ ಪ್ರಸಿದ್ಧಿಪಡಿಸುವೆನು. ಆತನು ಬಲಿಷ್ಠರೊಂದಿಗೆ ಸಮಪಾಲನ್ನು ಹೊಂದುವನು. ಆತನು ಜನರಿಗಾಗಿ ತನ್ನ ಪ್ರಾಣವನ್ನು ಕೊಟ್ಟು ಸತ್ತದ್ದಕ್ಕಾಗಿ ನಾನು ಆತನಿಗೆ ಹೀಗೆ ಮಾಡುವೆನು. ಜನರು ಆತನನ್ನು ಅಪರಾಧಿ ಎಂದು ಹೇಳಿದರೂ ವಾಸ್ತವವಾಗಿ ಆತನು ಬಹುಜನರ ಪಾಪಗಳನ್ನು ಹೊತ್ತುಕೊಂಡು ಹೋದನು. ಈಗ ಆತನು ಪಾಪಮಾಡಿದ ಜನರಿಗಾಗಿ ಪ್ರಾರ್ಥನಾಪೂರ್ವಕವಾಗಿ ವಿಜ್ಞಾಪಿಸುವನು.