Kannada ಬೈಬಲ್

ಹಬಕ್ಕೂಕ್ಕ ಒಟ್ಟು 3 ಅಧ್ಯಾಯಗಳು

ಹಬಕ್ಕೂಕ್ಕ

ಹಬಕ್ಕೂಕ್ಕ ಅಧ್ಯಾಯ 2
ಹಬಕ್ಕೂಕ್ಕ ಅಧ್ಯಾಯ 2

1 “ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು. ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು.
ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.”

ಹಬಕ್ಕೂಕನಿಗೆ ದೇವರ ಉತ್ತರ 2 ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ.

ಹಬಕ್ಕೂಕ್ಕ ಅಧ್ಯಾಯ 2

3 ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ.

4 ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.”

ಹಬಕ್ಕೂಕ್ಕ ಅಧ್ಯಾಯ 2

5 ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು.

6 ಆದರೆ ಬೇಗನೇ ಅವರೆಲ್ಲಾ ಇವನನ್ನು ನೋಡಿ ನಗಾಡುವರು. ಅವನ ಸೋಲುವಿಕೆಯ ಕಥೆಗಳನ್ನು ವರ್ಣಿಸುವರು; ನಗಾಡುತ್ತಾ, ‘ಎಂಥಾ ದುಃಖಕರ ಸಂಗತಿ, ಅಷ್ಟೆಲ್ಲಾ ಸಂಪಾದಿಸಿದವನು ಅದನ್ನು ಇಟ್ಟುಕೊಳ್ಳಲಾಗಲಿಲ್ಲವಲ್ಲ. ಅವನು ಸಾಲಗಳನ್ನು ವಸೂಲಿ ಮಾಡಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಂಡನು.’

ಹಬಕ್ಕೂಕ್ಕ ಅಧ್ಯಾಯ 2

7 “ಬಲಶಾಲಿಯಾದ ಮನುಷ್ಯನೇ, ನೀನು ಜನರಿಂದ ಹಣವನ್ನು ಸುಲಿದುಕೊಂಡಿರುವೆ. ಒಂದು ದಿವಸ ಆ ಜನರು ಎಚ್ಚರವಾಗಿ ತಮಗೆ ಏನಾಯಿತೆಂದು ಅರಿತುಕೊಳ್ಳುವರು. ನಿನಗೆ ವಿರುದ್ಧವಾಗಿ ಏಳುವರು. ನಿನ್ನ ಕೈಯಿಂದ ಆ ವಸ್ತುಗಳನ್ನು ಕಿತ್ತುಕೊಳ್ಳುವರು. ಆಗ ನೀನು ಭಯಗ್ರಸ್ತನಾಗುವೆ.

8 ಎಷ್ಟೋ ಜನಾಂಗಗಳಿಂದ ನೀನು ವಸ್ತುಗಳನ್ನು ಅಪಹರಿಸಿರುವೆ. ಅವರು ನಿನ್ನಿಂದ ಇನ್ನೂ ಹೆಚ್ಚಾಗಿ ಅಪಹರಿಸುವರು. ನೀನು ಎಷ್ಟೋ ಮಂದಿಯನ್ನು ಕೊಂದಿರುವೆ; ದೇಶಗಳನ್ನೂ ನಗರಗಳನ್ನೂ ನಾಶಮಾಡಿರುವೆ. ಅಲ್ಲಿಯ ಎಷ್ಟೋ ಜನರನ್ನು ಸಂಹರಿಸಿರುವೆ.

ಹಬಕ್ಕೂಕ್ಕ ಅಧ್ಯಾಯ 2

9 “ಹೌದು, ಕೆಟ್ಟದ್ದನ್ನು ಮಾಡಿ ಧನಿಕನಾದವನಿಗೆ ಬಹಳ ಕೇಡಾಗುವುದು. ಆ ಮನುಷ್ಯನು ಒಂದು ಸುರಕ್ಷಿತವಾದ ಸ್ಥಳದಲ್ಲಿ ವಾಸಿಸಲು ಇದನ್ನೆಲ್ಲಾ ಮಾಡುತ್ತಾನೆ. ಹಾಗೆ ಮಾಡುವದರಿಂದ ಬೇರೆ ಜನರು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು ಅವನು ತಿಳಿಯುತ್ತಾನೆ. ಆದರೆ ಕೆಟ್ಟ ಸಂಗತಿಗಳು ಅವನಿಗೆ ಸಂಭವಿಸುವವು.

10 ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ಮಾಡಿರುವೆ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳೆದುಕೊಳ್ಳುವೆ.

ಹಬಕ್ಕೂಕ್ಕ ಅಧ್ಯಾಯ 2

11 ಗೋಡೆಯ ಕಲ್ಲುಗಳು ನಿನಗೆ ವಿರುದ್ಧವಾಗಿ ಕೂಗುವವು. ನಿನ್ನ ಮನೆಯ ಮರದ ಜಂತೆಗಳು ಸಹ ನೀನು ಅಪರಾಧಿಯೆಂದು ಸಾಕ್ಷಿ ಹೇಳುವವು.

12 “ಪಟ್ಟಣ ಕಟ್ಟುವುದಕ್ಕಾಗಿ ಜನರನ್ನು ಕೊಲ್ಲುವವನಿಗೂ ಪಟ್ಟಣದ ಕೋಟೆಗಳನ್ನು ಭದ್ರಪಡಿಸಲು ದುಷ್ಕೃತ್ಯಗಳನ್ನು ಮಾಡುವವನಿಗೂ ಕೇಡಾಗುವದು.

13 ಆ ಜನರು ಕಟ್ಟುವ ಪ್ರತಿಯೊಂದನ್ನೂ ಸರ್ವಶಕ್ತನಾದ ಯೆಹೋವನು ಬೆಂಕಿಯಿಂದ ನಾಶಮಾಡುವ ತೀರ್ಮಾನವನ್ನು ಮಾಡಿರುತ್ತಾನೆ. ಅವರು ಮಾಡಿದ ಕೆಲಸವೆಲ್ಲವೂ ವ್ಯರ್ಥವಾಗುವದು.

ಹಬಕ್ಕೂಕ್ಕ ಅಧ್ಯಾಯ 2

14 ಆಗ ಎಲ್ಲಾ ಕಡೆಗಳಲ್ಲಿರುವ ಜನರು ಯೆಹೋವನ ಮಹಿಮೆಯನ್ನು ತಿಳಿದುಕೊಳ್ಳುವರು. ಹೇಗೆ ನೀರು ಸಮುದ್ರಕ್ಕೆ ಹರಿಯುತ್ತದೋ ಹಾಗೆ ಈ ವರ್ತಮಾನವು ಎಲ್ಲಾ ಕಡೆಗೆ ಹಬ್ಬುವದು.

15 ತಾನು ಸಿಟ್ಟುಗೊಂಡು ಇತರರು ಸಂಕಟಪಡುವಂತೆ ಮಾಡುವವನಿಗೆ ಬಹಳ ಕೇಡು ಉಂಟಾಗುವದು. ಸಿಟ್ಟಿನ ಭರದಲ್ಲಿ ಆ ಮನುಷ್ಯನು ಇತರ ಜನರನ್ನು ನೆಲಕ್ಕೆ ಅಪ್ಪಳಿಸಿಬಿಡುವನು. ಅವನು ಅವರನ್ನು ಅಮಲೇರಿದವರಂತೆಯೂ ಬೆತ್ತಲೆಯಾಗಿರುವವರಂತೆಯೂ ಪರಿಗಣಿಸುತ್ತಾನೆ.

ಹಬಕ್ಕೂಕ್ಕ ಅಧ್ಯಾಯ 2

16 “ಆದರೆ ಅವನು ಯೆಹೋವನ ಕೋಪವನ್ನು ತಿಳಿದುಕೊಳ್ಳುವನು. ಆ ಕೋಪವು ಯೆಹೋವನ ಬಲಗೈಯಲ್ಲಿರುವ ವಿಷದ ಪಾತ್ರೆಯಂತಿರುವುದು. ಆ ವ್ಯಕ್ತಿಯು ಆ ಕೋಪವನ್ನು ರುಚಿನೋಡುವನು ಮತ್ತು ಅಮಲೇರಿದವನಂತೆ ನೆಲದ ಮೇಲೆ ಕುಸಿದುಬೀಳುವನು. “ದುಷ್ಟ ಅಧಿಪತಿಯೇ, ನೀನು ಆ ಪಾತ್ರೆಯಿಂದ ಕುಡಿಯುವೆ. ನಿನಗೆ ಅವಮಾನವೇ ಹೊರತು, ಮಾನ ಸಿಗುವುದಿಲ್ಲ.

17 ಲೆಬನೋನಿನಲ್ಲಿ ಅನೇಕರನ್ನು ಗಾಯಗೊಳಿಸಿರುವೆ. ಅಲ್ಲಿ ಎಷ್ಟೋ ಪಶುಗಳನ್ನು ಅಪಹರಿಸಿರುವೆ. ಆ ದೇಶದಲ್ಲಿ ನೀನು ಮಾಡಿದ ದುಷ್ಕೃತ್ಯಗಳ ನಿಮಿತ್ತ, ಅದರಿಂದಾಗಿ ಅಲ್ಲಿ ಸತ್ತುಹೋದವರ ನಿಮಿತ್ತ ನೀನು ಭಯಗ್ರಸ್ತನಾಗಿರುವೆ. ಅಲ್ಲಿಯ ಪಟ್ಟಣಗಳಿಗೆ ನೀನು ಮಾಡಿದ ಹಾನಿ, ಜನರಿಗೆ ನೀನು ಕೊಟ್ಟ ಸಂಕಟದ ನಿಮಿತ್ತ ನಿನಗೆ ಹೆದರಿಕೆಯುಂಟಾಗಿದೆ.”

ಹಬಕ್ಕೂಕ್ಕ ಅಧ್ಯಾಯ 2

ವಿಗ್ರಹಗಳ ವಿಷಯವಾದ ಸಂದೇಶ 18 ಆ ಮನುಷ್ಯನ ಸುಳ್ಳು ದೇವರು ಅವನಿಗೆ ಸಹಾಯ ಮಾಡಲಾರದು. ಯಾಕೆಂದರೆ ಅದು ಒಬ್ಬನು ಲೋಹದಿಂದ ಮಾಡಿದ ಕೇವಲ ವಿಗ್ರಹವಷ್ಟೆ. ಅದು ಕೇವಲ ಜಡಮೂರ್ತಿ. ಅದನ್ನು ಮಾಡಿದವನು, ಅದು ಅವನಿಗೆ ಸಹಾಯ ಮಾಡುವದೆಂದು ಯೋಚಿಸುವದು ಶುದ್ಧ ಮೂರ್ಖತನ. ಆ ಮೂರ್ತಿಯು ಮಾತಾಡುವೂದೂ ಇಲ್ಲ.

19 ಆ ಮೂರ್ತಿಗೆ “ಎದ್ದೇಳು” ಎಂದು ಹೇಳುವವನಿಗೆ ಕೇಡಾಗುವುದು! ಮಾತಾಡಲಾಗದ ಒಂದು ಕಲ್ಲಿಗೆ “ಎಚ್ಚರವಾಗು” ಎಂದು ಹೇಳುವವನಿಗೆ ಕೇಡಾಗುವುದು! ಅವುಗಳು ಅವನಿಗೆ ಸಹಾಯ ಮಾಡುವದಿಲ್ಲ. ಮಾಡಲಿಕ್ಕಾಗುವದೂ ಇಲ್ಲ. ಆ ವಿಗ್ರಹಗಳನ್ನು ಬೆಳ್ಳಿಬಂಗಾರದಿಂದ ಹೊದಿಸಿದರೂ ಆ ವಿಗ್ರಹಗಳಲ್ಲಿ ಜೀವವಿಲ್ಲ.

ಹಬಕ್ಕೂಕ್ಕ ಅಧ್ಯಾಯ 2

20 ಆದರೆ ಯೆಹೋವನಾದರೋ ಹಾಗಲ್ಲ. ಆತನು ತನ್ನ ಪವಿತ್ರ ಆಲಯದಲ್ಲಿದ್ದಾನೆ. ಆದ್ದರಿಂದ ಎಲ್ಲಾ ಭೂನಿವಾಸಿಗಳು ಆತನ ಮುಂದೆ ಮೌನದಿಂದಿದ್ದು ಆತನನ್ನು ಗೌರವಿಸತಕ್ಕದ್ದು.