Kannada ಬೈಬಲ್

ಆದಿಕಾಂಡ ಒಟ್ಟು 50 ಅಧ್ಯಾಯಗಳು

ಆದಿಕಾಂಡ

ಆದಿಕಾಂಡ ಅಧ್ಯಾಯ 2
ಆದಿಕಾಂಡ ಅಧ್ಯಾಯ 2

ಏಳನೆ ದಿನ — ವಿಶ್ರಾಂತಿ 1 ಹೀಗೆ ಭೂಮಿಯೂ ಆಕಾಶವೂ ಅವುಗಳಲ್ಲಿರುವ ಪ್ರತಿಯೊಂದೂ ನಿರ್ಮಿತವಾದವು.

2 ದೇವರು ತನ್ನ ಸೃಷ್ಟಿಕಾರ್ಯವನ್ನು ಮುಕ್ತಾಯಗೊಳಿಸಿ ಏಳನೆ ದಿನದಲ್ಲಿ ವಿಶ್ರಮಿಸಿಕೊಂಡನು.

3 ದೇವರು ತನ್ನ ಎಲ್ಲಾ ಸೃಷ್ಟಿಕಾರ್ಯಗಳನ್ನೆಲ್ಲಾ ಮುಗಿಸಿ ಏಳನೆ ದಿನದಲ್ಲಿ ವಿಶ್ರಮಿಸಿಕೊಂಡದ್ದರಿಂದ ಆ ದಿನವು “ಪರಿಶುದ್ಧ ದಿನವಾಗಿರಲಿ” ಎಂದು ಆಶೀರ್ವದಿಸಿದನು.

ಆದಿಕಾಂಡ ಅಧ್ಯಾಯ 2

ಮಾನವನ ಪ್ರಾರಂಭ 4 ಇದು ಆಕಾಶದ ಮತ್ತು ಭೂಮಿಯ ಚರಿತ್ರೆ. ದೇವರು ಭೂಮಿಯನ್ನು ಮತ್ತು ಆಕಾಶವನ್ನು ಸೃಷ್ಟಿಸಿದಾಗ ನಡೆದ ಸಂಗತಿಗಳೇ ಈ ಚರಿತ್ರೆ.

5 ಆಗ ಭೂಮಿಯ ಮೇಲೆ ಯಾವ ಮರಗಿಡಗಳೂ ಇರಲಿಲ್ಲ. ಭೂಮಿಯ ಮೇಲೆ ಯಾವ ಸಸಿಯೂ ಬೆಳೆಯುತ್ತಿರಲಿಲ್ಲ; ಯಾಕೆಂದರೆ ಯೆಹೋವನು ಭೂಮಿಯ ಮೇಲೆ ಇನ್ನೂ ಮಳೆಯನ್ನು ಸುರಿಸಿರಲಿಲ್ಲ; ಭೂಮಿಯನ್ನು ಬೇಸಾಯ ಮಾಡಲು ಯಾರೂ ಇರಲಿಲ್ಲ.

6 ಭೂಮಿಯಿಂದ ನೀರು* ನೀರು ಅಥವಾ “ಇಬ್ಬನಿ.” ಚಿಮ್ಮಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು.

ಆದಿಕಾಂಡ ಅಧ್ಯಾಯ 2

7 ಹೀಗಿರಲು ದೇವರಾದ ಯೆಹೋವನು ನೆಲದಿಂದ ಮಣ್ಣನ್ನು ತೆಗೆದುಕೊಂಡು ಮನುಷ್ಯನನ್ನು ರೂಪಿಸಿ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಸಜೀವಿಯಾದನು.

8 ದೇವರಾದ ಯೆಹೋವನು ಪೂರ್ವ ದಿಕ್ಕಿನಲ್ಲಿದ್ದ ಏದೆನ್ ಸೀಮೆಯಲ್ಲಿ ಒಂದು ತೋಟವನ್ನು ಮಾಡಿ ತಾನು ಸೃಷ್ಟಿಸಿದ ಮನುಷ್ಯನನ್ನು ಆ ತೋಟದಲ್ಲಿರಿಸಿದನು.

9 ದೇವರಾದ ಯೆಹೋವನು ಆ ತೋಟದಲ್ಲಿ ಸುಂದರವಾದ ಪ್ರತಿಯೊಂದು ಮರವನ್ನು ಮತ್ತು ಊಟಕ್ಕೆ ಬೇಕಾದ ಒಳ್ಳೆಯ ಹಣ್ಣುಗಳನ್ನು ಬಿಡುವ ಪ್ರತಿಯೊಂದು ಮರವನ್ನು ಬೆಳೆಸಿದನು. ಇದಲ್ಲದೆ ತೋಟದ ಮಧ್ಯಭಾಗದಲ್ಲಿ ಜೀವದಾಯಕ ಮರವನ್ನೂ ಅಲ್ಲದೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರವನ್ನೂ ಬೆಳೆಸಿದನು.

ಆದಿಕಾಂಡ ಅಧ್ಯಾಯ 2

10 ಏದೆನಿನಿಂದ ಹರಿದುಬರುತ್ತಿದ್ದ ನದಿಯು ತೋಟಕ್ಕೆ ಬೇಕಾದ ನೀರನ್ನು ಒದಗಿಸುತ್ತಿತ್ತು. ಬಳಿಕ ಅದೇ ನದಿಯು ಶಾಖೆಗಳಾಗಿ ಒಡೆದು ನಾಲ್ಕು ಉಪನದಿಗಳಾಯಿತು.

11 ಮೊದಲನೆ ನದಿಯ ಹೆಸರು ಪೀಶೋನ್. ಹವೀಲ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ.

12 ಈ ದೇಶದಲ್ಲಿ ಒಳ್ಳೆಯ ಬಂಗಾರ ದೊರೆಯುತ್ತಿತ್ತು. ಅಲ್ಲದೆ ಗುಗ್ಗುಲ ಗೋಮೇಧಿಕ ರತ್ನವೂ ದೊರಕುತ್ತಿದ್ದವು.

13 ಎರಡನೆ ನದಿಯ ಹೆಸರು ಗೀಹೋನ್. ಇಥಿಯೋಪಿಯ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ.

ಆದಿಕಾಂಡ ಅಧ್ಯಾಯ 2

14 ಮೂರನೆ ನದಿಯ ಹೆಸರು ಟೈಗ್ರಿಸ್. ದಕ್ಷಿಣ ಅಸ್ಸೀರಿಯ ದೇಶದಲ್ಲಿ ಹರಿಯುತ್ತಿದ್ದ ನದಿ ಇದೇ. ನಾಲ್ಕನೆ ನದಿಯ ಹೆಸರು ಯೂಫ್ರೇಟೀಸ್.

15 ದೇವರಾದ ಯೆಹೋವನು ಆ ಮನುಷ್ಯನನ್ನು ಏದೆನ್ ತೋಟಕ್ಕೆ ಕರೆದೊಯ್ದು ವ್ಯವಸಾಯ ಮಾಡುವುದಕ್ಕಾಗಿಯೂ ಅದನ್ನು ನೋಡಿಕೊಳ್ಳುವುದಕ್ಕೂ ಅದರಲ್ಲಿರಿಸಿದನು.

16 ದೇವರಾದ ಯೆಹೋವನು ಆ ಮನುಷ್ಯನಿಗೆ, “ತೋಟದಲ್ಲಿರುವ ಯಾವ ಮರದ ಹಣ್ಣನ್ನು ಬೇಕಾದರೂ ನೀನು ತಿನ್ನಬಹುದು.

ಆದಿಕಾಂಡ ಅಧ್ಯಾಯ 2

17 ಆದರೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರದ ಹಣ್ಣನ್ನು ಮಾತ್ರ ನೀನು ತಿನ್ನಕೂಡದು. ಒಂದುವೇಳೆ ಆ ಮರದ ಹಣ್ಣನ್ನು ತಿಂದರೆ ನೀನು ಸಾಯುವೆ!” ಎಂದು ಆಜ್ಞಾಪಿಸಿದನು.

ಮೊದಲನೆ ಸ್ತ್ರೀ 18 ಬಳಿಕ ದೇವರಾದ ಯೆಹೋವನು, “ಮನುಷ್ಯನು ಒಬ್ಬಂಟಿಗನಾಗಿರುವುದು ಒಳ್ಳೆಯದಲ್ಲವೆಂದು ನನಗೆ ತೋರುತ್ತದೆ. ಅವನಿಗೆ ಸರಿಹೊಂದುವ ಸಹಕಾರಿಣಿಯನ್ನು ಉಂಟುಮಾಡುವೆನು” ಎಂದುಕೊಂಡನು.

ಆದಿಕಾಂಡ ಅಧ್ಯಾಯ 2

19 ದೇವರಾದ ಯೆಹೋವನು ನೆಲದ ಮಣ್ಣಿನಿಂದ ಭೂಮಿಯ ಮೇಲಿರುವ ಪ್ರತಿಯೊಂದು ಪಶುವನ್ನೂ ಆಕಾಶದಲ್ಲಿರುವ ಪ್ರತಿಯೊಂದು ಪಕ್ಷಿಯನ್ನೂ ನಿರ್ಮಿಸಿ ಮನುಷ್ಯನ ಬಳಿಗೆ ಬರಮಾಡಿದನು. ಅವುಗಳಿಗೆಲ್ಲಾ ಮನುಷ್ಯನು ಹೆಸರಿಟ್ಟನು.

20 ಭೂಮಿಯ ಮೇಲಿನ ಎಲ್ಲಾ ಪಶುಗಳಿಗೂ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೂ ಮತ್ತು ಕಾಡಿನಲ್ಲಿರುವ ಎಲ್ಲಾ ಕ್ರೂರಪ್ರಾಣಿಗಳಿಗೂ ಮನುಷ್ಯನು ಹೆಸರಿಟ್ಟನು. ಮನುಷ್ಯನು ಅನೇಕಾನೇಕ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ನೋಡಿದನು. ಆದರೆ ಅವುಗಳಲ್ಲಿ ತನಗೆ ಸರಿಹೊಂದುವ ಸಹಕಾರಿಣಿಯನ್ನು ಅವನು ಕಾಣಲಿಲ್ಲ.

ಆದಿಕಾಂಡ ಅಧ್ಯಾಯ 2

21 ಆದ್ದರಿಂದ ದೇವರಾದ ಯೆಹೋವನು ಮನುಷ್ಯನಿಗೆ ಗಾಢವಾದ ನಿದ್ರೆಯನ್ನು ಬರಮಾಡಿ ಅವನ ದೇಹದ ಪಕ್ಕೆಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಆ ಪಕ್ಕೆಲುಬಿನ ಸ್ಥಳವನ್ನು ಮಾಂಸದಿಂದ ಮುಚ್ಚಿದನು.

22 ಆತನು ಮನುಷ್ಯನ ಪಕ್ಕೆಲುಬಿನಿಂದ ಸ್ತ್ರೀಯನ್ನು ಸೃಷ್ಟಿಸಿ ಅವಳನ್ನು ಮನುಷ್ಯನ ಬಳಿಗೆ ಕರೆದುಕೊಂಡು ಬಂದನು.

23 ಆಗ ಅವನು ಆಕೆಯನ್ನು ನೋಡಿ, “ಈಗ ಸರಿ, ಈಕೆ ನನ್ನಂತೆಯೇ ಇದ್ದಾಳೆ. ಈಕೆಯ ಎಲುಬುಗಳು ನನ್ನ ಎಲುಬುಗಳಿಂದ ಬಂದಿವೆ. ಈಕೆಯ ದೇಹವು ನನ್ನ ದೇಹದಿಂದ ಬಂದಿದೆ. ಈಕೆ ಮನುಷ್ಯನಿಂದ ಉತ್ಪತ್ತಿಯಾದವಳು. ಆದ್ದರಿಂದ ಈಕೆಗೆ ನಾನು ‘ಸ್ತ್ರೀ’ ಎಂದು ಹೆಸರಿಡುವೆ” ಎಂದನು.

ಆದಿಕಾಂಡ ಅಧ್ಯಾಯ 2

24 ಆದ್ದರಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗುವರು.

25 ಆ ಪುರುಷನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.